»   » ಕ್ಯಾ ಕಹಾನಿ, ಅಭಿಗೆ ಸಲ್ಮಾನ್‌ನ ಉಡುಗೊರೆ ಸ್ಪೇಷಲ್‌ ಶೇರ್ವಾನಿ

ಕ್ಯಾ ಕಹಾನಿ, ಅಭಿಗೆ ಸಲ್ಮಾನ್‌ನ ಉಡುಗೊರೆ ಸ್ಪೇಷಲ್‌ ಶೇರ್ವಾನಿ

Posted By:
Subscribe to Filmibeat Kannada


ಐಶೂ ಮಾಜಿ ಹಾರ್ಟ್‌ಥ್ರೋಬ್‌ ಸಲ್ಮಾನ್‌ ಅಭಿ-ಐಶ್‌ ಮದುವೆಗೆ ಬರುತ್ತಿರುವುದು ಮಾತ್ರವಲ್ಲ ಅಭಿಗೆ ಶೇರ್ವಾನಿಯನ್ನೂ ಗಿಫ್ಟ್‌ ನೀಡುತ್ತಿದ್ದಾನೆ! ಇದಪ್ಪ ನಿಜವಾದ ಪ್ರೀತಿ.

  • ಮಹೇಶ್‌ ಮಲ್ನಾಡ್‌
ಭಗ್ನ ಪ್ರೇಮಿ, ಮಾಜಿ ಪ್ರೇಮಿಗಳ ದಂಡಿನ ನಾಯಕನಾಗಿ ಅಭಿ-ಐಶು ಮದುವೆಯಲ್ಲಿ ಸಲ್ಮಾನ್‌ ಕಾಣಿಸುವ ಸಾಧ್ಯತೆಗಳಿವೆ ಎಂದು ಬಾಲಿವುಡ್‌ನಲ್ಲಿ ಗುಸುಗುಸು ಶುರುವಾಗಿದೆ.

ಈ ತಾರಾ ಜೋಡಿಯ ಮದುವೆಗೆ ಸಲ್ಮಾನ್‌ಗೆ ಆಮಂತ್ರಣ ದೊರೆಯುವುದೇ ಇಲ್ಲ ಎನ್ನುತ್ತಿದ್ದವರು ಮೂಗಿನ ಮೇಲೆ ಬೆರಳಿಡುವಂತೆ ಮೊನ್ನೆ ಬಿಗ್‌ ಬಿ ಮಾಡಿದ್ದಾರೆ. ಸಲ್ಮಾನ್‌ ಅವರ ತಂದೆ ಸಲೀಂ ಖಾನ್‌ ಅವರನ್ನು ವೈಯಕ್ತಿಕ ವಾಗಿ ಬಿಗ್‌ ಬಿ ಭೇಟಿ ಮಾಡಿ, ಅವನ ಕುಟುಂಬದವರನ್ನು ಮದುವೆಯ ಆರತಕ್ಷಣೆಗೆ ಆಮಂತ್ರಣ ನೀಡಿದ್ದಾರಂತೆ. ಇದರಿಂದ ಖುಷಿಯಾದ ಸಲ್ಲು ಮಿಂಯಾ ಅಭಿಗಾಗಿ ವಿಶೇಷ ವಿನ್ಯಾಸದ ಶೇರ್‌ವಾನಿ ತಯಾರಿಸಲು ತನ್ನ ವಸ್ತ್ರ ವಿನ್ಯಾಸಕರಿಗೆ ಹೇಳಿದ್ದಾನಂತೆ.

ಇತ್ತ ಅಭಿಷೇಕ್‌ನ ಅಮ್ಮ ಜಯಾ ಬಚ್ಚನ್‌ ಕೂಡ ಕೋಲ್ಕತ್ತಾದ ವಿನ್ಯಾಸಗಾರ್ತಿಶರ್ಬಾನಿ ದತ್ತಾಗೆ ಹೇಳಿ ಮದುವೆ ದಿನದಂದು ವಿಶೇಷ ಕುರ್ತಾ ರೂಪಿಸುತ್ತಿದ್ದಾರಂತೆ. ಒಟ್ಟಿನಲ್ಲಿ ಅಭಿಗೆ ದಿರಿಸಿನ ಹಬ್ಬವಾಗಬಹುದು.

ಸಲ್ಮಾನ್‌ಗೆ ಆಮಂತ್ರಣ ದೊರೆತಂತೆ ಐಶ್‌ನ ಮಾಜಿ ಪ್ರೇಮಿ ವಿವೇಕ್‌ ಒಬೆರಾಯ್‌ಗೆ ಕೂಡ ಆಮಂತ್ರಣ ಸಿಕ್ಕಿದೆ ಎಂಬ ಸುದ್ದಿಯಿದೆ. ಆದರೆ ರೈ ಕುಟುಂಬದಿಂದ ಮಾತ್ರ ಇಬ್ಬರಿಗೂ ಆಹ್ವಾನ ದೊರೆತಂತೆ ತೋರುತ್ತಿಲ್ಲ. ಇಷ್ಟು ಐಶ್‌ ಪ್ರೇಮಿಗಳ ಕಥೆಯಾದರೆ, ಅಭಿಯ ಗೆಳತಿ ರಾಣಿ ಮುಖರ್ಜಿಗೂ ಕೂಡ ಆಹ್ವಾನ ಸಿಕ್ಕಿದೆಯಂತೆ. ಕರಿಷ್ಮಾ ಕಥೆ ಗೊತ್ತಿಲ್ಲ.

ಒಟ್ಟಿನಲ್ಲಿ ಮಾಜಿ ಪ್ರೇಮಿ, ಭಗ್ನ ಪ್ರೇಮಿ, ವಂಚಿತ ಪ್ರೇಮಿಗಳು ಐಶ್‌-ಅಭಿ ಆರತಕ್ಷತೆಯಲ್ಲಿ ಕಾಣಿಸಿಕೊಳ್ಳುವುದಂತೂ ಗ್ಯಾರಂಟಿಯಾಗಿದೆ.

ಯಾರಿಗೆ ಗೊತ್ತು, ಬಾಲಿವುಡ್‌ ಮಂದಿ ಐಶ್‌-ಅಭಿ ಮದುವೆ ಮೇಲೆ ಒಂದು ಚಿತ್ರ ನಿರ್ಮಿಸಿದರೂ ಅಚ್ಚರಿಪಡಬೇಕಾಗಿಲ್ಲ. ಏಕೆಂದರೆ ಇವರ ಮದುವೆ ಕಥೆ ಯಾವ ಸಿನೆಮಾ ಕಥೆಗಿಂತ ಕಮ್ಮಿ ಇದೆ ಹೇಳಿ. ‘ಕಭಿ ಅಲ್ವಿದ ನಾ ಕೆಹೆನಾ’ ರಿಮೇಕ್‌ ಆಗದಿದ್ದರೆ ಸಾಕು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada