»   » ಪ್ರಯೋಗಶೀಲ ಚಿತ್ರಗಳ ಜನಕ ಬಿ. ಪಟ್ಟಾಭಿರಾಮ ರೆಡ್ಡಿ ಇನ್ನಿಲ್ಲ

ಪ್ರಯೋಗಶೀಲ ಚಿತ್ರಗಳ ಜನಕ ಬಿ. ಪಟ್ಟಾಭಿರಾಮ ರೆಡ್ಡಿ ಇನ್ನಿಲ್ಲ

Subscribe to Filmibeat Kannada


‘ಸಂಸ್ಕಾರ’ ನಿರ್ದೇಶಕ, ನಿರ್ಮಾಪಕ ರೆಡ್ಡಿ, ‘ಸ್ವರ್ಣಕಮಲ’ ಗೆದ್ದಿದ್ದರು...

ಕನ್ನಡ ಚಿತ್ರರಂಗದಲ್ಲಿ ಹೊಸ ಆಯಾಮದ ಚಿತ್ರಗಳ ಜನಕರೆಂದೆ ಗುರ್ತಿಸಲ್ಪಟ್ಟಿದ್ದ ನಿರ್ಮಾಪಕ, ನಿರ್ದೇಶಕ ಟಿ.ಪಟ್ಟಾಭಿರಾಮ ರೆಡ್ಡಿ ಇನ್ನಿಲ್ಲ.

‘ಸಂಸ್ಕಾರ’ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ಪಟ್ಟಾಭಿರಾಮ ರೆಡ್ಡಿ, ಕನ್ನಡ ಚಿತ್ರಲೋಕದ ಪ್ರಯೋಗಶೀಲರಲ್ಲಿ ಅಗ್ರಗಣ್ಯರು. ಕನ್ನಡ ಮತ್ತು ತೆಲುಗು ಚಿತ್ರರಂಗದ ಹೆಸರಾಂತ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಅವರು, ಶನಿವಾರ ಬೆಳಗ್ಗೆ ನಿಧನರಾದರು. ಪುತ್ರ ಮತ್ತು ಪುತ್ರಿ ನಂದನಾ ರೆಡ್ಡಿಯನ್ನು ಬಿಟ್ಟು ಅವರು ಅಗಲಿದ್ದಾರೆ.

ತಮ್ಮ ಜೀವಿತಾವಧಿ ಸಾಧನೆಗಾಗಿ ಕರ್ನಾಟಕ ಸರ್ಕಾರದ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಯನ್ನು ಅವರು ಪಡೆದಿದ್ದರು. ಆಂಧ್ರ ಸರ್ಕಾರವೂ ಅವರನ್ನು ಪ್ರಶಸ್ತಿಗಳ ಮೂಲಕ ಪುರಸ್ಕರಿಸಿತ್ತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್‌.ಅನಂತಮೂರ್ತಿ ಅವರ ‘ಸಂಸ್ಕಾರ’ ಕಾದಂಬರಿಯನ್ನು 1970ರಲ್ಲಿ ಚಿತ್ರವಾಗಿಸಿ, ಹೊಸ ಅಲೆಯ ಚಿತ್ರಗಳನ್ನು ಕನ್ನಡದಲ್ಲಿ ರೆಡ್ಡಿ ಆರಂಭಿಸಿದ್ದರು. ರಾಷ್ಟ್ರೀಯ ಪುರಸ್ಕಾರ ‘ಸ್ವರ್ಣಕಮಲ’ ಪಡೆದ ಮೊದಲ ಚಿತ್ರ ಎಂಬ ಹೆಗ್ಗಳಿಕೆ ‘ಸಂಸ್ಕಾರ ’ ಚಿತ್ರಕ್ಕಿದೆ. ಗಿರೀಶ್‌ ಕಾರ್ನಾಡ್‌, ಪಿ.ಲಂಕೇಶ್‌ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರ, ಅಂತಾರಾಷ್ಟ್ರೀಯ ಮನ್ನಣೆಗೂ ಪಾತ್ರವಾಗಿತ್ತು.

ಕೇವಲ ಎರಡು ಪಾತ್ರಗಳನ್ನು ಒಳಗೊಂಡಿರುವ ‘ಶೃಂಗಾರ ಮಾಸ’ ರೆಡ್ಡಿಯವರ ಇನ್ನೊಂದು ಕೊಡುಗೆ. ಅವರ ‘ದೇವರಕಾಡು’ ಎನ್ನುವ ಚಿತ್ರ ಪರಿಸರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿತ್ತು. ರೆಡ್ಡಿ ಅವರ ‘ಚಂಡ ಮಾರುತ’ ಚಿತ್ರ ಆ ಕಾಲದಲ್ಲಿ ಮಹತ್ವದ ಚರ್ಚೆಗೆ ಗುರಿಯಾಗಿತ್ತು.

ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1919ರಲ್ಲಿ ಜನಿಸಿದ ರೆಡ್ಡಿ, ಕ್ರಾಂತಿಕಾರಕ ಕವಿ ಸಹಾ ಆಗಿದ್ದರು. ತೆಲುಗಿನಲ್ಲಿ ಮೂರು ಕವನ ಸಂಕಲನಗಳನ್ನು ಅವರು ಹೊರತಂದಿದ್ದಾರೆ. ಹೆಸರಾಂತ ರಂಗಕಲಾವಿದೆ ಸ್ನೇಹಲತಾ, ರೆಡ್ಡಿ ಅವರ ಪತ್ನಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada