»   » ‘ಜಯಾ’ ಮುಖವಾಣಿಯಾದಳೆ ಮಾಯಾಮೃಗಿ ಮಾಳವಿಕಾ?

‘ಜಯಾ’ ಮುಖವಾಣಿಯಾದಳೆ ಮಾಯಾಮೃಗಿ ಮಾಳವಿಕಾ?

Posted By: Super
Subscribe to Filmibeat Kannada

ಚೆನ್ನೈ ನಗರದಲ್ಲಿ 80 ಅಡಿ ಎತ್ತರದ ಮಾಳವಿಕಾ ಕಟೌಟ್‌ ಎದ್ದು ನಿಂತಿದೆ! ಏಕಾಏಕಿ ತಮಿಳರ ಕಣ್ಮಣಿಯಾಗಿ, ತಮಿಳು ಮಾಧ್ಯಮಗಳ ಕೇಂದ್ರವಾಗಿ ಕನ್ನಡತಿ ಮಾಳವಿಕಾ ರೂಪುಗೊಂಡಿದ್ದಾರೆ. ಅಭಿಮಾನಿಗಳು ಆಕೆಯ ಕಟೌಟ್‌ ನಿಲ್ಲಿಸಿದ್ದಾರೆ. ಬ್ಯಾನರ್‌ ಕಟ್ಟಿದ್ದಾರೆ. ಒಂದೇ ದಿನದಲ್ಲಿ ಮಾಳವಿಕಾ ಜನಪ್ರಿಯತೆಯ ಮಾಯಾಮೃಗವನ್ನು ವಶಪಡಿಸಿಕೊಂಡಿದ್ದಾರೆ. ಭಲೇ ಅದೃಷ್ಟವೋ ಅದೃಷ್ಟ !

ಇದೆಲ್ಲಾ ಸರಿ. ಕನ್ನಡತಿಯಾಬ್ಬಳು ತಮಿಳು ನೆಲದಲ್ಲಿ ಈ ಪಾಟಿ ಜನಪ್ರಿಯತೆ ಗಳಿಸಿರುವುದು ಸ್ವಾಗತಾರ್ಹವೇ. ಆದರೆ- ಜಯಾಟೀವಿಯ 'ಕೋಟೀಶ್ವರನ್‌" ಕಾರ್ಯಕ್ರಮದಲ್ಲಿ ಹತ್ತು ಲಕ್ಷ ರುಪಾಯಿ ಬಹುಮಾನ ಗೆದ್ದದ್ದು , ಬಹುಮಾನದ ಹಣವನ್ನು ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸುವ ಕಾರ್ಯಕ್ರಮ ಪೂರ್ವ ನಿಯೋಜಿತ- ಪ್ರಾಯೋಜಿತ ಆಟವೇ? ಹೂರಣ ಹೊರಬೀಳುತ್ತಿದೆ.

ಕೋಟೀಶ್ವರನ್‌ ಆಟದಲ್ಲಿ ಗೆದ್ದ 10 ಲಕ್ಷ ರುಪಾಯಿಗಳನ್ನು ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಿದ ಮಾಳವಿಕಾ ಅವರ ನಡವಳಿಕೆಯಲ್ಲೀಗ- ಚಾನಲ್‌ಗಳ ಸಮರ ಹಾಗೂ ತಮಿಳುನಾಡಿನ ರಾಜಕಾರಣದ ವಾಸನೆ ಬಡಿಯುತ್ತಿದೆ. ಈ ಪ್ರಕರಣದಿಂದಾಗಿ ತಮಿಳುನಾಡಿನಲ್ಲಿ ಜಯಾ, ಜಯಾ ಟೀವಿ ಹಾಗೂ ಮಾಳವಿಕಾ ಅವಧಿರ ಟೀಆರ್‌ಪಿ ರೇಟಿಂಗ್‌ ಏಕ್‌ದಂ ಹೆಚ್ಚಾಗಿದೆ. ಕೋಟೀಶ್ವರನ್‌ ಕಮಾಲಿನ ಬಗ್ಗೆ ಸಂಶಯ ಮೂಡುವುದೇ ಇಲ್ಲಿ.

ಮಾಳವಿಕಾ ಎಷ್ಟು ಪ್ರಾಮಾಣಿಕ ?
ಆಟದಲ್ಲಿ ಗೆದ್ದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ ಮಾಳವಿಕಾ ಔದಾರ್ಯದ ಬಗ್ಗೆ ಅಮಾಯಕ ಕನ್ನಡಿಗರು ಖುಷಿ ಪಡುತ್ತಿದ್ದಾರೆ. ಇಲ್ಲೊಂದು ವಿಷಯವನ್ನು ಗಮನಿಸಬೇಕು- ಮಾಳವಿಕಾ ಹಣ ನೀಡಿದ್ದು ತಮಿಳುನಾಡು ಸರ್ಕಾರಕ್ಕೆ , ಕರ್ನಾಟಕದ ಸರ್ಕಾರಕ್ಕಲ್ಲ . ಅಪ್ಪಟ ಕನ್ನಡತಿಯಾದ ಮಾಳವಿಕಾ, ಬಹುಮಾನ ಗೆದ್ದ ಸಂದರ್ಭದಲ್ಲಿ , ಸಹಜವಾಗಿ ಆಕೆ ಗೆದ್ದ ಹಣವನ್ನು ಕರ್ನಾಟಕದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಬೇಕಿತ್ತು . ಒಂದೆಡೆ ಪ್ರಕೃತಿ ಕ್ಷೋಭೆ, ಇನ್ನೊಂದೆಡೆ ವಿದ್ಯುತ್‌ ಕ್ಷಾಮಗಳಿಂದ ತಾಯ್ನಾಡು ಬಳಲುತ್ತಿರುವ ಸಂದರ್ಭದಲ್ಲಿ ಆಕೆಯ ನಡವಳಿಕೆ ಅರ್ಥಪೂರ್ಣವಾಗುತ್ತಿತ್ತು . ಮಾಳವಿಕಾ ಇಷ್ಟು ಮಾತ್ರದ ತಿಳಿವಳಿಕೆ ಇಲ್ಲದ ಹೆಣ್ಣೇನಲ್ಲ ?

ಮಾಳವಿಕಾ ಅವರನ್ನು ತಮಿಳುನಾಡಿನಲ್ಲಿ ಜನಪ್ರಿಯಗೊಳಿಸಲು ಜಯಾ/ ಜಯಾ ಟೀವಿ ಹೂಡಿದ ತಂತ್ರವಿದೆಂದು ಹೇಳಲಾಗುತ್ತಿದೆ. ಮಾಳವಿಕಾ ತಮಿಳುನಾಡಿನಲ್ಲಿ ಜನಪ್ರಿಯವಾಗುವುದರಿಂದ ಎರಡು ಲಾಭವಿದೆ : ಆಕೆ ಪ್ರಮುಖ ಭೂಮಿಕೆಯಲ್ಲಿರುವ 'ಅಣ್ಣಿ" ಧಾರಾವಾಹಿ (ನಿರ್ದೇಶಕರು- ಕೆ.ಬಾಲಚಂದರ್‌) ಜಯಾ ಟೀವಿಯಲ್ಲಿ ಪ್ರಸಾರವಾಗುತ್ತಿದ್ದು , ಮಾಳವಿಕಾ ಜನಪ್ರಿಯತೆಯಿಂದಾಗಿ ಧಾರಾವಾಹಿಯ ಟೀಆರ್‌ಪಿ ಹೆಚ್ಚುತ್ತದೆ. ಇದೇ ವೇಳೆಯಲ್ಲಿ ಕೋಟೀಶ್ವರನ್‌ ಆಕರ್ಷಣೆಯೂ ಹೆಚ್ಚುತ್ತದೆ.

ಮಾಳವಿಕಾ ಜನಪ್ರಿಯತೆ ಕೇವಲ ಟೀವಿ ರಾಜಕಾರಣದ್ದು ಮಾತ್ರವಲ್ಲ , ಆಕೆಯ ರಾಜಕೀಯ ಪ್ರವೇಶಕ್ಕೆ ಭೂಮಿಕೆಯನ್ನಾಗಿ ಕೋಟೀಶ್ವರನ್‌ ಕಮಾಲನ್ನು ಬಳಸಿಕೊಳ್ಳಲಾಗುತ್ತಿದೆ. ಸದ್ಯದಲ್ಲಿಯೇ ಮಾಳವಿಕಾ ಅಣ್ಣಾಡಿಎಂಕೆ ಸೇರುವ ನಿರೀಕ್ಷೆಯಿದೆ. ರಾಜಕೀಯ ಕ್ಷೇತ್ರದ ಕುರಿತು ಮಾಳವಿಕಾಗೆ ಒಲವಿರುವುದು ಗುಟ್ಟಿನ ವಿಷಯವೇನಲ್ಲ . ರಾಜಕೀಯ ನನ್ನ ಪ್ರೀತಿಯ ಕ್ಷೇತ್ರ. ಒಂದಲ್ಲಾ ಒಂದು ದಿನ ರಾಜಕಾರಣ ಪ್ರವೇಶಿಸುತ್ತೇನೆ, ಚುನಾವಣೆಗೂ ಸ್ಪರ್ಧಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ಮಾಳವಿಕಾ ಹೇಳಿದ್ದರು. ಆ ದಿನ ಹತ್ತಿರದಲ್ಲಿದೆಯೇ?

ಮಾಳವಿಕಾ ಯಾರು?
ಕಿರುತೆರೆ ಧಾರಾವಾಹಿಗಳ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಈ ಹೆಣ್ಣು ಮಗಳು ಮನೆ ಮನೆ ತಲುಪಿದ್ದು ಮಾಯಾಮೃಗದ ಮೂಲಕ. ತೆಳ್ಳಗಿದ್ದ ದಿನಗಳಲ್ಲಿ ರವಿತೇಜ ಎನ್ನುವ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರೂ, ಮಾಳವಿಕಾಗೆ ಬೆಳ್ಳಿತೆರೆ ಒಲಿದುಬರಲಿಲ್ಲ , ಕಿರುತೆರೆ ಕೈ ಬಿಡಲಿಲ್ಲ . ಇದೇ ದಿನಗಳಲ್ಲಿ ನಟ ಅವಿನಾಶ್‌ ಜೊತೆ ಪ್ರೇಮ, ಪರಿಣಯ. ದಂಪತಿಗಳಿಬ್ಬರೂ ಈಟೀವಿಯಲ್ಲಿ - ಒಲವೇ ನಮ್ಮ ಬದುಕು ಎಂಬ ಪರಮ ದರಿದ್ರದ ಕಾರ್ಯಕ್ರಮ ನಿರೂಪಿಸಿ ಸಂಸಾರಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದರು. ಎಚ್ಚೆತ್ತ ಈಟೀವಿ ಕಾರ್ಯಕ್ರಮ ನಿಲ್ಲಿಸಿತು.

ತೆರೆಮರೆಗೆ ಸರಿದಿದ್ದ ಮಾಳವಿಕಾಳ ಪ್ರೇಕ್ಷಕರಿಗೆ ಮನ್ವಂತರದ ಮೂಲಕ ಮತ್ತೆ ನೆನಪಿಸಿದ್ದು ಮಾಯಾಮೃಗದ ಟಿ.ಎನ್‌. ಸೀತಾರಾಂ. ದಿಟ್ಟ ಪತ್ರಕರ್ತೆಯ ಪಾತ್ರದಲ್ಲಿ ಮಾಳವಿಕಾ ಗಟ್ಟಿ ಅಭಿನಯ ನೀಡಿದ್ದರು. ಧಾರಾವಾಹಿ ಇನ್ನೂ ಪ್ರಸಾರವಾಗುತ್ತಿದೆ. ಮನ್ವಂತರ ಧಾರಾವಾಹಿಯ ಮಾಳವಿಕಾ (ಗಾರ್ಗಿ) ಪಾತ್ರ ಈಗ ಅಮೆರಿಕಾ ಪ್ರವಾಸದಲ್ಲಿದೆ. ಆದರೆ, ಆಕೆ ತಮಿಳಿನ ಧಾರಾವಾಹಿಯಲ್ಲಿ ಬಿಜಿಯಾಗಿರುವುದರಿಂದ ಮನ್ವಂತರದ ಶೂಟಿಂಗ್‌ಗೆ ಬರಲು ಸಾಧ್ಯವಾಗುತ್ತಿಲ್ಲ , ಆ ಕಾರಣದಿಂದಾಗಿ ಸೀತಾರಾಂ ಅಮೆರಿಕಾ ಕಥೆ ಹೇಳುತ್ತಿದ್ದಾರೆ ಎನ್ನುವುದು ವೀಕ್ಷಕರಿಗೆ ಗೊತ್ತಿಲ್ಲ !

ಕಾಮನಬಿಲ್ಲಿನ ಬಣ್ಣಗಳ್ಯಾರವು?
ಮಾಳವಿಕಾ- ಕೋಟೀಶ್ವರನ್‌ ಪ್ರಕರಣವನ್ನು ರಾಜಕಾರಣದ ನಾಟಕ ಮಾತ್ರವಲ್ಲದೆ, ನಮ್ಮ ಮಾಧ್ಯಮಗಳು ಅಮಾಯಕ ಜನರನ್ನು ವಂಚಿಸುತ್ತಿರುವ ಸಂಚಿನ ಉದಾಹರಣೆಯೂ ಹೌದು. ಇವತ್ತು ಜನರಿಗೆ ಸಹಜ ಆಶ್ಚರ್ಯವೆನ್ನುವುದೇ ಇಲ್ಲ . ಏನು ಬೇಕಾದರೂ ಇಲ್ಲಿ ನಡೆಯಬಹುದು. ಪ್ರತಿಯಾಂದೂ ನಿರೀಕ್ಷಿತ, ಪ್ರಾಯೋಜಿತ. ಮಾಧ್ಯಮ / ಪ್ರಾಯೋಜಿತರ ಕೈವಾಡವಿಲ್ಲದೆ ಇಲ್ಲಿ ಹುಲ್ಲು ಕಡ್ಡಿಯೂ ಅಲುಗುವುದಿಲ್ಲ .

ಜನರ ಆಶ್ಚರ್ಯಕ್ಕೊಳಗಾಗುವ ಶಕ್ತಿಯನ್ನು ಕೂಡ ಕಾಮನಬಿಲ್ಲನ್ನೂ ಮಾಧ್ಯಮ / ಪ್ರಾಯೋಜಿತರು ಅಪಹರಿಸಿದ್ದಾರೆ. ಆಕಾಶದ ಕಾಮನಬಿಲ್ಲು ಕೂಡ ಜನರಿಗೆ ರೋಮಾಂಚನ ಉಂಟುಮಾಡುವುದಿಲ್ಲ. ಮಳೆಬಿಲ್ಲಿನ ಬಣ್ಣಗಳನ್ನೂ ಯಾರಾದರೂ ಪ್ರಾಯೋಜಿಸಿದ್ದರೆ, ಅಥವಾ ಬಣ್ಣಗಳೇ ನಕಲಿಯಾಗಿದ್ದರೆ... ಉಹುಂ, ಯಾವುದನ್ನೂ ನಂಬುವಂತಿಲ್ಲ . ಅಂಥ ವ್ಯವಸ್ಥೆ ನಮ್ಮಲ್ಲಿದೆ!

English summary
Malavika is all set to become another Jaya !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada