»   » ಪಿ.ಶೇಷಾದ್ರಿ ಕಂಡಂತೆ ಬೆಂಗಳೂರು...

ಪಿ.ಶೇಷಾದ್ರಿ ಕಂಡಂತೆ ಬೆಂಗಳೂರು...

Posted By: Staff
Subscribe to Filmibeat Kannada

ನಾನು ಹುಟ್ಟಿದೂರು ದಂಡಿನ ಶಿವರಕ್ಕೂ ಬೆಂಗಳೂರಿಗೂ ಮೂರು ಗಂಟೆಯ ಪ್ರಯಾಣ. ಬೆಂಗಳೂರೆಂಬ ಬೆಡಗನ್ನು ಮೊದಲಿಗೆ ಕಂಡದ್ದು ನನ್ನ ಹನ್ನೊಂದನೇ ವಯಸ್ಸಿನಲ್ಲಿ.

ನಮ್ಮ ತಾಯಿ ಅನಾರೋಗ್ಯದ ಕಾರಣದಿಂದ ಇಲ್ಲಿನ ಆಸ್ಪತ್ರೆಯಾಂದರಲ್ಲಿ ಅಡ್ಮಿಟ್‌ ಆಗಿದ್ದರು. ಒಂದು ವಾರದಿಂದ ಅವಳನ್ನು ನೋಡಲಾಗದೆ ಕನವರಿಸಿಕೊಂಡೆನೆಂದು ತಂದೆ ರೈಲಿನಲ್ಲಿ ಕರೆ ತಂದಿದ್ದರು.

ಬೆಂಗಳೂರು ಆಸ್ಪತ್ರೆಗೆ ಕುತೂಹಲದ ಕಣ್ಣರಳಿಸಿ ನಡೆದೇ ಬಂದಿದ್ದೆ... ಸಂಜೆ ಬೆಂಗಳೂರು ಬಿಟ್ಟು ಹೊರಡಬೇಕಾದ ಗಳಿಗೆ ಬಂದಾಗ ಅಮ್ಮನನ್ನು ಬಿಟ್ಟು ಹೋಗುತ್ತೇನೆ ಎಂಬ ದುಃಖ ಒಂದುಕಡೆ, ಇನ್ನೊಂದೆಡೆ ಬೆಂಗಳೂರನ್ನು ಬಿಟ್ಟು ಹೋಗುತ್ತಿದ್ದೇನಲ್ಲ ಎಂದು ಕಣ್ಣೀರು ಹಾಕಿದ್ದೆ.

ಈಗ ನಾನು ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದೇನೆ. ಇಲ್ಲಿ ಬದುಕನ್ನು ಅರಸಿ ಬಂದು ಹದಿನೇಳು ವರ್ಷ ಕಳೆಯಿತು. ಬೆಂಗಳೂರು ನನಗೆ ಏನೆಲ್ಲಾ ಕೊಟ್ಟಿದೆ ಗೊತ್ತಾ..? ಸುಂದರವಾದ ಬದುಕನ್ನು ಕೊಟ್ಟಿದೆ, ಉದ್ಯೋಗ ಕೊಟ್ಟಿದೆ, ಗೆಳೆಯರನ್ನು ಕೊಟ್ಟಿದೆ, ಹೆಂಡತಿಯನ್ನು ಕೊಟ್ಟಿದೆ. ಇಂಥ ಬೆಂಗಳೂರನ್ನು ನಾನಂತೂ ಎಂದೂ ಬೈಯ್ಯುವುದಿಲ್ಲ.... ಬೆಂಗಳೂರು ಹಾಳಾಗಿ ಹೋಗಿದೆ... ಎಂದು ಕೆಲವರು ಬೈಯ್ಯುವುದು ಕೇಳಿದಾಗ ನಿಜಕ್ಕೂ ಬೇಸರವಾಗುತ್ತದೆ.

ನನಗೆ ಬೆಂಗಳೂರು ಬೇರೆ ಬೇರೆ ಕಾರಣಗಳಿಗಾಗಿ ಇಷ್ಟ. ಇಲ್ಲಿಯ ವಿಶಿಷ್ಟ ಊಟ-ತಿಂಡಿಯ ಜಾಗಗಳ ಬಗ್ಗೆ ನಿಮಗೂ ಗೊತ್ತಿರಬಹುದು. ಗೊತ್ತಿಲ್ಲದಿದ್ದಲ್ಲಿ ತಿಳಿದುಕೊಳ್ಳಿ. ಇಂದಿಗೂ ಎಂಟಿಆರ್‌ ಮೀರಿಸುವ ಭೂಪತಿ ಯಾರಿದ್ದಾರೆ ಹೇಳಿ? ವಿದ್ಯಾರ್ಥಿ ಭವನದ ಮಸಾಲೆ ದೋಸೆ ಖ್ಯಾತಿ ಕಡಿಮೆಯೇ ಆಗಿಲ್ಲ. ಬಸವನಗುಡಿಯ ದ್ವಾರಕ ಹೋಟೆಲ್‌ ಖಾಲಿ ದೋಸೆಯ ರುಚಿಯನ್ನು ನಾಲಗೆಗೆ ಇಳಿಸಿಕೊಂಡವರಿಗೆ ಬೇರೆ ಕಡೆಯ ದೋಸೆಯ ರುಚಿ ಹತ್ತುವುದೇ ಇಲ್ಲ.

ಏನೆಲ್ಲಾ ತಿಂದು ಹೊಟ್ಟೆ ಕೆಟ್ಟರೆ ಸಜ್ಜನ ರಾವ್‌ ಸರ್ಕಲ್‌ ಬಳಿಯ ಶಿವಣ್ಣನ ಅಂಗಡಿಯಲ್ಲಿ ಸೋಡಾಗೆ ಸ್ಪೆಷಲ್‌ ಮಸಾಲೆ ಹಾಕಿಸಿಕೊಂಡು ಕುಡಿದು ಡರ್‌ ಎಂದು ತೇಗಬಹುದು. ಅಲ್ಲಿ ಯಾವುದೇ ತಂಪು ಪಾನೀಯಕ್ಕೆ ಮಸಾಲೆ ಬೆರೆಸಿ ಕೊಡಲಾಗುತ್ತದೆ. ಆದರ ರುಚಿ ಕೋಕಾ ಕೋಲಾದವರಿಗೆ ತಿಳಿದರೆ, ಇದನ್ನೇ ಆಧರಿಸಿ ಇನ್ನೊಂದು ಬ್ರಾಂಡ್‌ ಮಾರ್ಕೆಟ್‌ಗೆ ಬಿಟ್ಟರೂ ಬಿಟ್ಟರೇ. ಇಷ್ಟೆಲ್ಲ ಕುಡಿದ ನಂತರ ಅಲ್ಲೇ ಬೆಣ್ಣೆ ಗುಲ್ಕನ್‌ ರುಚಿ ನೋಡದೇ ಬಂದರೆ ನಿಮಗೇ ನಷ್ಟ...

ಭಾನುವಾರದಂದು ಧರ್ಮರಾಯ ದೇವಸ್ಥಾನದ ಗಲ್ಲಿಗೆ ಹೋಗುವುದನ್ನು ಮರೆಯಬೇಡಿ. ದೊನ್ನೆ ಬಿರಿಯಾನಿ ಸಿಗುತ್ತದೆ. ವೆಜಿಟೇರಿಯನ್‌ಗಳಿಗೆ ಬೇಕಾದ್ದು ಇದೆ. ಅಲ್ಲಿ ತಿನ್ನುವುದು ಹೇಗಪ್ಪಾ ಎಂಬ ಸಂಕೋಚ ಇದ್ದರೆ ಮನೆಗೇ ಪಾರ್ಸೆಲ್‌ ತಂದು ಕಾಲುಚಾಚಿ ಕೂತು ರಜೆಯನ್ನ ಎಂಜಾಯ್‌ ಮಾಡಿ.

ಹಗಲಿನಲ್ಲಿ ಮಾತ್ರ ನೀವು ಬೆಂಗಳೂರನ್ನು ಕಂಡಿದ್ದರೆ, ತಪ್ಪದೆ ಒಮ್ಮೆ ಮಧ್ಯರಾತ್ರಿ ಎದ್ದು ಸುಮ್ಮನೆ ಒಂದು ರೌಂಡ್‌ ಹಾಕಿ ಬನ್ನಿ. ಆಗ ನಿಮ್ಮ ಕಣ್ಣಿಗೆ ಕಾಣುವುದು ವಿಸ್ತಾರವಾದ ರಸ್ತೆಗಳ, ವಿಶಾಲವಾದ ಫುಟ್‌ಬಾತ್‌ಗಳ, ಮುಗಿಯುವುದೇ ಇಲ್ಲವೇನೋ ಎನ್ನುವ ಬೀದಿಗಳ ಸುಂದರ ತಂಪಿನ ಬೆಡಗಿನ ಬೆಂಗಳೂರು..... ವಾಹ್‌ ! ಬೆಂಗಳೂರು.(ವಿಜಯ ಕರ್ನಾಟಕ)

English summary
Film Director Sheshadri loves Bangalore however it is
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada