»   » ಜಗ್ಗೇಶ್‌ ಡೋಸು ; ಕಾಸು ಇದ್ದೋನೆ ಬಾಸು

ಜಗ್ಗೇಶ್‌ ಡೋಸು ; ಕಾಸು ಇದ್ದೋನೆ ಬಾಸು

Posted By: Super
Subscribe to Filmibeat Kannada

'ಮೇಕಪ್‌" ಮಕಾಡೆಯಾದ ನಂತರ ಜಗ್ಗೇಶ್‌ಗೆ ಕೃತಕ ಆಮ್ಲಜನಕ ಸಿಕ್ಕಿದ್ದು 'ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ" ಮೂಲಕ. ಈ ಚಿತ್ರದ ನಿರ್ಮಾಪಕ ಎನ್‌.ಕುಮಾರ್‌ಗೆ ಬಿ ಮತ್ತು ಸಿ ಸೆಂಟರ್‌ಗಳು ದುಡ್ಡು ತಂದುಕೊಟ್ಟಿರುವ ಕಾರಣ, ಆ ದುಡ್ಡನ್ನು ಅವರು ಮತ್ತೆ ಜಗ್ಗೇಶ್‌ ಮೇಲೆಯೇ ಹೂಡಲು ನಿರ್ಧರಿಸಿದ್ದಾರೆ. 'ಕಾಸು ಇದ್ದೋನೆ ಬಾಸು" ಅನ್ನೋದು ಖುದ್ದು ಜಗ್ಗೇಶ್‌ ಹೊಸ ಚಿತ್ರಕ್ಕೆ ಇಟ್ಟಿರುವ ಹೆಸರು.

'..ಎಲ್ಲಮ್ಮನ ಜಾತ್ರೆ" ನಿರ್ದೇಶಕ ಎ.ಆರ್‌.ಬಾಬುವೇ ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ. ಜಗ್ಗೇಶ್‌ ತಮಗೆ ಲಕ್ಕಿ ಅಂತ ನಿರ್ಮಾಪಕ ಕುಮಾರ್‌ ತೀರ್ಮಾನಿಸಿರುವುದರಿಂದ ಕತೆ ಹೆಣೆಯುವ ಜವಾಬ್ದಾರಿಯನ್ನೂ ಜಗ್ಗೇಶ್‌ ಮೇಲೆಯೇ ಹೊರಿಸಿದ್ದರು. ಬಾಬು ಜತೆ ಚರ್ಚಿಸಿ ಜಗ್ಗೇಶ್‌ ಕುಂತಲ್ಲೇ ಕತೆ ಹೊಸೆದರು. ಕಾಸಿದ್ರೆ ಕೈಲಾಸ ಎಂಬ ಧೋರಣೆಯ ನಾಯಕ ಕುರುಡು ಕಾಂಚಾಣದ ಬೆನ್ನತ್ತಿ ಪಡುವ ಪರಿ ಪಾಟಲಿನ ಕಚಗುಳಿಯೇ 'ಕಾಸು ಇದ್ದೋನು ಬಾಸು" ಚಿತ್ರದ ಹೈಲೈಟು.

ಚಿತ್ರಕ್ಕೆ ಈಗಾಗಲೇ ವಿ.ಮನೋಹರ್‌ ಮಟ್ಟು ಹಾಕಲು ಶುರುವಿಟ್ಟುಕೊಂಡಿದ್ದಾರೆ. ಚುರು ಚುರುಕಾಗಿ ಚಿತ್ರೀಕರಣ ಪೂರೈಸಿ, ಆಗಸ್ಟ್‌ ತಿಂಗಳಲ್ಲೇ ಚಿತ್ರವನ್ನು ತೆರೆಗೆ ತಂದು ಬಿಡಬೇಕೆಂಬುದು ಜಗ್ಗೇಶ್‌ ಠರಾವು. ಅದಕ್ಕೆ ಪೂರಕವಾಗಿ ಕುಮಾರ್‌ ದುಡ್ಡನ್ನು ಪಂಪ್‌ ಮಾಡುತ್ತಿದ್ದು, ಬಾಬು ಕೂಡ ಸಹಕರಿಸುತ್ತಿದ್ದಾರೆ. ಈ ಚಿತ್ರ ಮತ್ತೆ ತಮ್ಮನ್ನು ಗೆಲುವಿನ ಟ್ರ್ಯಾಕ್‌ ಮೇಲೆ ತಂದು ನಿಲ್ಲಿಸಲಿದೆ ಎಂಬುದು ಜಗ್ಗೇಶ್‌ ನಂಬುಗೆ.

ನಂಬಿ ಕೆಟ್ಟವರಿಲ್ಲವೋ ಜಗ್ಗೇಶಿಯ ಎಂದು ಕುಮಾರ್‌ ಜಪಿಸುತ್ತಿರುವುದನ್ನು ಇಡೀ ಉದ್ಯಮ ಅಚ್ಚರಿಯಿಂದ ನೋಡುತ್ತಿದೆ.

ಅಂದಹಾಗೆ, ಚಿತ್ರದ ತಾರಾಬಳಗದಲ್ಲಿ ರಾಧಿಕಾ ಚೌಧುರಿ, ದೊಡ್ಡಣ್ಣ, ವಿ.ಮನೋಹರ್‌, ಶ್ರೀದೇವಿ, ಚಿತ್ರಾ ಶೆಣೈ, ಬ್ಯಾಂಕ್‌ ಜನಾರ್ದನ್‌ ಮೊದಲಾದವರಿದ್ದಾರೆ.

English summary
Jaggesh is confident of getting back to the track with Kasu Iddone Basu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada