»   » ಆಂಟಿಯರಾದ ನಾಯಕಿಯರು ಏನು ಮಾಡುತ್ತಾರೆ ?

ಆಂಟಿಯರಾದ ನಾಯಕಿಯರು ಏನು ಮಾಡುತ್ತಾರೆ ?

Posted By:
Subscribe to Filmibeat Kannada

*ವಿಶಾಖ ಎನ್‌.

ಮಿನುಗು ತಾರೆ ಮದುವೆಯಾದ ಮೇಲೆ ಏನಾಗುತಾರೆ ?
ತೆರೆಯಿಂದ ಮಟಾ ಮಾಯವಾಗುತ್ತಾರೆ ಅನ್ನುವ ಕಾಲ ಈಗ ಹಳೆಯದಾಯ್ತು. ಭಾರೀ ಅಭಿನಯ, ಭರಪೂರ ಪ್ರತಿಭೆ, ಗರಿಗರಿ ಗ್ಲ್ಯಾಮರ್‌- ಮದುವೆಯಾದ ಮೇಲೂ ಇವಿಷ್ಟನ್ನು ಮೇಂಟೇನ್‌ ಮಾಡಿದರೆ ನಿರ್ಮಾಪಕರು ಬಂದೇ ಬರ್ತಾರೆ ಸ್ವಾಮಿ ಅಂತಾರೆ ಇವತ್ತಿನ ನಾಯಕಿಯರು. ಇದಕ್ಕೆ ಪುಷ್ಟಿ ಕೊಡಲು ಮನೆ ಹುಡುಗಿ ಅನು ಪ್ರಭಾಕರ್‌ ಇದ್ದಾರೆ. ಮುಂಬಯಿಯತ್ತ ಇಣುಕಿ ನೋಡಿದರೆ ಮಾಧುರಿ ದೀಕ್ಷಿತ್‌ ಸಿಗುತ್ತಾರೆ. ‘ದ್ವೀಪ’ ಚಿತ್ರದ ಮೂಲಕ ಹೊಸ ಛಾಪೊತ್ತಿದ ಸೌಂದರ್ಯ, ಮದುವೆಯಾಗಿ ತಿಂಗಳಿಲ್ಲ ; ಆಗಲೇ ತೆಲುಗು ಸಿನಿಮಾ ಲೋಕದಲ್ಲಿ ಬಣ್ಣ ಹಚ್ಚಿ ನಿಂತಿದ್ದಾರೆ.

ಏನೇ ಹೇಳಿ, ಮದುವೆಯಾದ ಮೇಲೆ ಕೆರಿಯರ್ರು ಮಂಕಾಗೋದಂತೂ ಗ್ಯಾರಂಟಿ. ಮಾಲಾಶ್ರೀ ಕೈಲಿ ರಾಮು ಫೈಟಿಂಗ್‌ ಮಾಡಿಸಿದರೂ ಪ್ರಯೋಜನವಾಗಲಿಲ್ಲ. ಶೃತಿ ಕೈಲಿ ಮಹೇಂದರ್‌ ಕಾಮಿಡಿ ಮಾಡಿಸಿ ಸೋತದ್ದೂ ಉಂಟು. ಸುಧಾರಾಣಿ ಎರಡು ಮದುವೆಯಾದ ಮೇಲೆ ಏನಾದರು ಗೊತ್ತಲ್ಲ ! ಈಗ ಶ್ರೀಮತಿ ರಾಮು ಹಾಗೂ ಶ್ರೀಮತಿ ಮಹೇಂದರ್‌ ಗಂಡಂದಿರ ಕೆಲಸದ ನೊಗಕ್ಕೆ ಹೆಗಲು ಕೊಟ್ಟು ನಿಂತಿದ್ದಾರೆಯೇ ವಿನಃ ಬಣ್ಣದ ಲೋಕದ ಹೊಸ ಕನಸುಗಳನ್ನು ಕಾಣುತ್ತಿಲ್ಲ.

‘ತುಳಸಿ’ ಎಂಬ ಕೆಟ್ಟ ಮೂತಿಯ ಧಾರಾವಾಹಿಗೇ ಸುಧಾರಾಣಿ ತೃಪ್ತಿ ಪಟ್ಟುಕೊಳ್ಳಬೇಕಿದೆ. ಇಂಥಾ ವಿಷಯಗಳನ್ನು ಅನು ಅತ್ತೆ ಜಯಂತಿ ಮುಂದೆ ಹೇಳಿದಾಗ, ಅವರು ದೊಡ್ಡ ಭಾಷಣ ಹೊಡೆಯಲು ಶುರುವಿಟ್ಟುಕೊಂಡರು. ಆಗ ಚರ್ಚೆ ಸಿನಿಮಾ ಅಮ್ಮಂದಿರ ವಿಚಾರಕ್ಕೆ ವಿಷಯಂತರವಾಯಿತು...

ಅಮ್ಮ ತಾರೆಯರು, ಆಂಟಿ ತಾರೆಯರು

ಸುಮಲತಾ ಅಂಬರೀಶ್‌ ಇದಾರಲ್ಲ, ಅವರು ಮದುವೆಯಾದ ನಂತರ ಸಿನಿಮಾ ಸಹವಾಸ ಸಾಕು ಅಂತ ತೀರ್ಮಾನಿಸಿಬಿಟ್ಟಿದ್ದರು. ಆದರೆ, ನಾಗತಿಹಳ್ಳಿ ಅದು ಹೇಗೋ ಒಪ್ಪಿಸಿ ‘ಪ್ಯಾರಿಸ್‌ ಪ್ರಣಯ’ದಲ್ಲಿ ನಾಯಕನ ಅಮ್ಮನ ಪಾತ್ರ ಮಾಡಿಸಿದರು. ಈಗ ಸುಮಲತಾಗೆ ಆಫರುಗಳ ಕರೆ ಹರಿದು ಬರತೊಡಗಿದೆಯಂತೆ. ‘ಪ್ಯಾರಿಸ್‌ ಪ್ರಣಯ’ದ ನಾಯಕಿ ಮಿನಲ್‌ಗಿಂತ ಸುಮಲತಾನೇ ಚೆನ್ನಾಗಿದ್ದಾರೆ ಅಂತ ಗಾಂಧಿನಗರದ ಓಣಿಗಳಲ್ಲಿ ಮಾತು ಹರಿದಾಡಿದ್ದೇ ಇದಕ್ಕೆ ಕಾರಣವಾ? ಗೊತ್ತಿಲ್ಲ . ಸದ್ಯಕ್ಕೆ ಸುಮಲತಾ ‘ಎಕ್ಸ್‌ಕ್ಯೂಸ್‌ ಮಿ’ ಎಂಬ ಇನ್ನೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಂತೂ ನಿಜ. ಮಾರುಕಟ್ಟೆ ಕಳಕೊಂಡಿರುವ ನಟ, ರಾಜಕಾರಣಿಯೂ ಆದ ಅಂಬರೀಶ್‌, ಸುಮಲತಾ ರೀ-ಎಂಟ್ರಿಯಿಂದ ಆನಂದ ತುಂದಿಲರಾಗಿದ್ದಾರಂತೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಪೆಟ್ಟು ಕೊಡದ ತಮ್ಮ ಗಂಡನ ಮೇಲೆ ಸುಮಲತಾಗೆ ಭಾರೀ ಕಕ್ಕುಲತೆ.

ಇನ್ನು ಭಾರತಿ ವಿಷ್ಣುವರ್ಧನ್‌ ವಿಚಾರ. ಒಂದು ಕಾಲದಲ್ಲಿ ಅಣ್ಣಾವ್ರನ್ನೇ ಎತ್ತಿ ಕುಣಿದಾಡಿದ್ದ ಜಿಂಕೆ ಕಣ್ಣಿನ ಭಾರತಿ ತಮ್ಮ ಪತಿ ವಿಷ್ಣು ಪೀಕ್‌ನಲ್ಲಿದ್ದಾಗ ತೆರೆಯಿಂದ ಮಟಾ ಮಾಯವಾದರು. ಆಮೇಲೆ ಅವರು ‘ನಿಮ್ಮ ಕಂಪನಿ’ ಮತ್ತು ‘ಜನನಿ’ ಎಂಬ ಧಾರಾವಾಹಿಗಳಲ್ಲಿ ಗ್ಲ್ಯಾಮರಸ್‌ ಅಜ್ಜಿಯಾಗಿ ಕಂಡಾಗ, ಅಂಥಾ ಪಾತ್ರಗಳು ಹುಡುಕಿಕೊಂಡು ಬಂದವು. ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳದ ಭಾರತಿ ಮಲೆಯಾಳಿ ನಿರ್ಮಾಪಕರ ಕರೆಗೆ ಓಗೊಟ್ಟು ಹೋಗಿ, ಮಲೆಯಾಳಿ ಕಲಿತರು. ಅಲ್ಲಿ ಈಕೆ ಪ್ರಶಸ್ತಿಗಳನ್ನು ದೋಚಿಕೊಂಡು ಬಂದದ್ದು , ಅವರ ಪತಿ ವಿಷ್ಣು ರೀಮೇಕು ‘ಹುಲಿ’ಯಾಗಿ ಹಳೇ ಸ್ಟೈಲಲ್ಲೇ ಘರ್ಜಿಸುತ್ತಿರುವುದರಿಂದ ಬೋರಾದ ಬಹುತೇಕರಿಗೆ ಗೊತ್ತೇ ಆಗಲಿಲ್ಲ.

ಇವೆಲ್ಲವನ್ನೂ ಹೇಳುವ ಜಯಂತಿ ಖುದ್ದು ಕರೆ ಬಂದ ಕಡೆ ತೂರಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ‘ನಮಗೆ ವಯಸ್ಸಾಯ್ತಪ್ಪ , ಈಗ ಚೂಸಿ ಆಗಿದೀನಿ ಅಂತ ಹೇಳಿದರೆ ಜನ ಅಷ್ಟೇ ಅಲ್ಲ ನಿರ್ಮಾಪಕರೂ ನಗ್ತಾರೆ’ ಅನ್ನುವ ಜಯಂತಿ ಈಚೀಚೆಗೆ ಕನ್ನಡಕ್ಕಿಂತ ಪರಭಾಷೆಯ ಚಿತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಸೃಷ್ಟಿ’ ಎಂಬ ಕನ್ನಡದ ಧಾರಾವಾಹಿಯಲ್ಲಿ ಅಭಿನಯಿಸಿದ ನಂತರ ಈಕೆ ಕನ್ನಡದ ತೆರೆ ಮೇಲೆ ಕಂಡದ್ದು ತೀರಾ ಅಪರೂಪ. ಅದೇ ಪಕ್ಕದ ತೆಲುಗರನ್ನೋ, ತಮಿಳರನ್ನೋ ಕೇಳಿ ನೋಡಿ; ‘ಜಯಂತಿ ಇನ್ನೂ ಏನು ಗ್ಲ್ಯಾಮರ್‌ ಆಗಿದಾರೆ’ ಅಂತ ಹುಬ್ಬು ಕುಣಿಸುತ್ತಾರೆ !

ಏಕೆ ಹೀಗಾಯ್ತೋ...

ತೆಲುಗಿನಲ್ಲಿ ಅಮ್ಮನ ಪಾತ್ರ ಒಪ್ಪಿಕೊಂಡ ನಗ್ಮಾ ಕನ್ನಡದಲ್ಲಿ ಇವತ್ತೂ ನಾಯಕಿ. ದೇವಸ್ಥಾನ ಕಟ್ಟಿಸಿಕೊಳ್ಳುವಷ್ಟರ ಮಟ್ಟಿಗೆ ತಮಿಳಿನಲ್ಲಿ ಬೆಳೆದ ಖುಷ್ಬೂಗೆ ಅಲ್ಲೀಗ ನಿತ್ಯಪೂಜೆ ಖಂಡಿತ ನಡೆಯುತ್ತಿಲ್ಲ. ಧಾರಾವಾಹಿಗಳಲ್ಲಿ ಆಂಟಿಯರಾಗಿ ಮಿಂಚುತ್ತಿರುವ ಊರ್ವಶಿ, ಭಾನುಪ್ರಿಯಾ ಮೊದಲಾದವರನ್ನು ಕನ್ನಡದವರು ಹಿಡಕೊಂಡು ಬಂದು, ಕುಣಿಸುತ್ತಿದ್ದಾರೆ. ಅದೇ ಮದುವೆಯಾಗುವ ನಟಿಯರು ಇವರಿಗೆ ಕಷ್ಟ. ಮದುವೆಯಾಗದ ತಾರಾ ಕೂಡ ಪೋಷಕ ನಟನೆಗಷ್ಟೆ ಇಷ್ಟ. ಮಧ್ಯಮ ಹಾಗೂ ಪ್ರಾಯದ ವಯಸ್ಸಿನ ನಡುವೆ ನಿಂತ ಮಿನುಗು ತಾರೆಗಳಿಗೇ ಈ ಗತಿಯಾದರೆ, ಇನ್ನು ಅಮ್ಮಂದಿರನ್ನು ಕೇಳೋರು ಯಾರು. ಗ್ಲ್ಯಾಮರ್‌ಗೇ ಈ ಪಾಟಿ ಪ್ರಾಶಸ್ತ್ಯ ಸಿಕ್ಕರೆ ಹೇಗೆ ಸ್ವಾಮಿ?

ಕೊನೆ ಮಾತು- ಕನ್ನಡದಲ್ಲಿ ಟೇಕಾಫ್‌ ಪಡಕೊಂಡು ತಮಿಳು- ತೆಲುಗಿಗೆ ಹಾರುವ ಹಕ್ಕಿಗಳು ಹೆಚ್ಚಾಗುತ್ತಿವೆ. ತೀರಾ ಇತ್ತೀಚಿನ ಉದಾಹರಣೆಗೆ, ರಕ್ಷಿತಾ ಮತ್ತು ಶಿರಿನ್‌ ಇದ್ದಾರೆ. ಒಂದೇ ಥರ ನಕ್ಕಿ ಬೋರಾಗಿಸಿದ ಪ್ರೇಮಾ ಕೂಡ ಈಗ ಸವಕಲಾಗಿದ್ದಾರೆ. ಹಾಗಾದರೆ, ಪ್ರೇಮಾ ಜಾಗಕ್ಕೆ ಮುಂದೆ ಯಾರು ಬಂದಾರು?


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada