»   » ಪುಟ್ಟಣ್ಣ ಕಣಗಾಲ್‌ಗೊಂದು ‘ಗೀತ ಗೌರವ’

ಪುಟ್ಟಣ್ಣ ಕಣಗಾಲ್‌ಗೊಂದು ‘ಗೀತ ಗೌರವ’

Posted By:
Subscribe to Filmibeat Kannada
ಬೆಂಗಳೂರು : ಕನ್ನಡ ಚಿತ್ರರಂಗದ ಧ್ರುವತಾರೆ, ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್‌ ಅವರ ನೆನಪನ್ನು ಹಾಡುಗಳ ಮೂಲಕ ಹಸಿರಾಗಿಡುವ ಪ್ರಯತ್ನ ನಗರದಲ್ಲಿ ಭಾನುವಾರ(ಜೂ.5) ಸಂಜೆ ನಡೆಯಿತು.

ಟೌನ್‌ಹಾಲ್‌ನಲ್ಲಿ ವಿನ್‌ ಮ್ಯೂಸಿಕಲ್‌ ಕ್ಲಬ್‌ ಆಯೋಜಿಸಿದ್ದ ಈ ಭಾವಪೂರ್ಣ ರಸಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಕಣ್ಣಲ್ಲಿ , ನೀರು ಬಂದದ್ದೂ ಸಹಜವಾಗಿಯೇ ಇತ್ತು! ಪುಟ್ಟಣ್ಣ ಅವರ ಚಿತ್ರಗಳಲ್ಲಿನ ಮನಮಿಡಿಯುವ, ಮನಕ್ಕೆ ಖುಷಿ ನೀಡುವ ಹಾಡುಗಳು ಎಲ್‌.ಎನ್‌.ಶಾಸ್ತ್ರಿ, ಸುಮಾ ಶಾಸ್ತ್ರೀ, ಎಂ.ಎಲ್‌.ಮುನಿಕೃಷ್ಣ, ಆರ್‌.ಶ್ರೀನಾಥ್‌, ಜಿಂಪೆಟ್ಸ್‌ ಮೋಹನ್‌ ಮತ್ತಿತರ ಗಾಯಕರ ಕಂಠದಲ್ಲಿ ಮರುಜೀವ ಪಡೆದಿದ್ದವು!

ಕಾರ್ಯಕ್ರಮ ಇನ್ನೇನು ಮುಗಿಯಿತು ಎಂಬಾಗಲೇ ಆಗಮಿಸಿದ ನಟ ವಿಷ್ಣು ವರ್ಧನ್‌ ಚುಟುಕಾಗಿ ಮಾತನಾಡಿ, ಕೆಲವರನ್ನು ಮನಸ್ಸಿನಲ್ಲಿಟ್ಟು ಪೂಜಿಸಬೇಕು. ಆ ಪಟ್ಟಿಯಲ್ಲಿ ಪುಟ್ಟಣ್ಣ ಅವರ ಹೆಸರು ಮೊದಲ ಸಾಲಲ್ಲಿದೆ. ನಾನು ಈ ಸ್ಥಿತಿಗೆ ಬರಲು, ಪುಟ್ಟಣ್ಣನವರ ಭಿಕ್ಷೆ ಮತ್ತು ಆಶೀರ್ವಾದವೇ ಕಾರಣ ಎಂದರು.

ನಂತರ ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ನಾಗರಹಾವು ಚಿತ್ರದ ‘ಬಾರೇ ಬಾರೇ ಚೆಂದದ ಚೆಲುವಿನ ತಾರೆ.. .’ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿದರು.

ನಟ ಶಿವರಾಂ ಕಾರ್ಯಕ್ರಮದಲ್ಲಿ ಲೀನರಾಗಿಬಿಟ್ಟಿದ್ದರು. ಕಣ್ಣಲ್ಲಿ ನೀರು ತುಂಬಿಕೊಂಡು ಪುಟ್ಟಣ್ಣ ಅವರನ್ನು ಅವರು ನೆನಪು ಮಾಡಿಕೊಂಡರು. ‘ಪುಟ್ಟಣ್ಣ ಧೀಮಂತ ವ್ಯಕ್ತಿ , ಇನ್ನೊಬ್ಬ ಪುಟ್ಟಣ್ಣ ಹುಟ್ಟಿಲ್ಲ , ಮುಂದೆಯೂ ಹುಟ್ಟಲ್ಲ... ಪುಟ್ಟಣ್ಣ ಬಿಟ್ಟುಹೋದ ಕಲಾಕುಸುಮಗಳು ಅವರನ್ನು ನೆನಪು ಮಾಡುತ್ತಿರುತ್ತವೆ. ಮೊನ್ನೆ ಟೀವಿಯಲ್ಲಿ ಪುಟ್ಟಣ್ಣ ಅವರ ‘ಗೆಜ್ಜೆ ಪೂಜೆ’ ಚಿತ್ರ ನೋಡಿದೆ. ಚಿತ್ರ ನೆನಪಾದರೇ ಈಗಲೂ ಕಣ್ಣಲ್ಲಿ ನೀರು ಬರುತ್ತದೆ’ ಎಂದರು.

ಅಶ್ಲೀಲವಾಗಿ ಬಿಂಬಿಸಲು ಅವಕಾಶವಿದ್ದ ‘ಎಡಕಲ್ಲು ಗುಡ್ಡದ ಮೇಲೆ ’ ಚಿತ್ರವನ್ನು ಆತೀ ಸಭ್ಯವಾಗಿ ಚಿತ್ರಿಸಿ, ಸಮಾಜಕ್ಕೆ ಹೇಳಬೇಕಾದ್ದನ್ನು ಹೇಳಿದ ಯಶಸ್ಸು ಪುಟ್ಟಣ್ಣ ಅವರದು. ಅವರು ಒಂದೊಂದು ಸಲ ಸ್ಕಿೃೕಪ್ಟ್‌ ಇಲ್ಲದೇ ಚಿತ್ರ ನಿರ್ದೇಶಿಸುತ್ತಿದ್ದರು. ಆದರೂ ಚಿತ್ರದ ಗುಣಮಟ್ಟ ಮಾತ್ರ ಕೆಡುತ್ತಿರಲಿಲ್ಲ. ಅಂತಹ ಪ್ರತಿಭೆ ಪುಟ್ಟಣ್ಣ ಅವರಿಗಿತ್ತು ಎಂದು ಶಿವರಾಂ ಹೇಳಿದರು.

ಕಲಾವಿದರಿಗೆ ಗೌರವ ನೀಡುವುದರಲ್ಲಿ ಮತ್ತು ಅತಿಥಿ ಸತ್ಕಾರದಲ್ಲಿ ಅವರಿಗೆ ಅವರೇ ಸಾಟಿ. ನಾಗರ ಹಾವು ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಒಂದು ಕೊಠಡಿಯಲ್ಲಿ ನಾನು, ವಿಷ್ಣು ಸೇರಿದಂತೆ ಐದು ಮಂದಿ ತಂಗಿದ್ದೆವು. ಅಲ್ಲಿ ವಿಷ್ಣು ಅವರಿಗೆ ಮಂಚವನ್ನು ಬಿಟ್ಟುಕೊಟ್ಟು ಅವರು ನೆಲದ ಮೇಲೆ ಮಲಗಿದ್ದರು. ಅಂತಹ ಸರಳತೆ ಪ್ರಸ್ತುತ ಯಾವ ನಿರ್ದೇಶಕರಲ್ಲಿದೆ ಎಂದು ಪ್ರಶ್ನಿಸಿದ ಶಿವರಾಂ, ಕರ್ನಾಟಕ ಪ್ರವಾಸಿ ತಾಣಗಳನ್ನು ತಮ್ಮ ಚಿತ್ರಗಳ ಮೂಲಕ ಪರಿಚಯಿಸಿದ್ದ ಪುಟ್ಟಣ್ಣ ಅವರ ಚಿತ್ರಗಳು ಬಿಡುಗಡೆಯಾದಾಗ, ರಾಜ್‌ಕಪೂರ್‌, ಸುನೀಲ್‌ ದತ್‌ರಂತಹ ನಟರು, ಚಿತ್ರ ವೀಕ್ಷಣೆಗೆ ಬೆಂಗಳೂರಿಗೆ ಆಗಮಿಸುತ್ತಿದ್ದರು ಎಂದು ನೆನಪುಗಳ ಸುರುಳಿ ಬಿಚ್ಚಿದರು.

ಪುಟ್ಟಣ್ಣ ಅವರ ‘ಪಡುವಾರಹಳ್ಳಿ ಪಾಂಡವರು’, ‘ನಾಗರಹಾವು’ ಸೇರಿದಂತೆ ಅನೇಕ ಚಿತ್ರಗಳು ಕನ್ನಡದಿಂದ ಹಿಂದಿಗೆ ರಿಮೇಕ್‌ ಆಗಿವೆ. ಅಂತಹ ತಾರಾಮೌಲ್ಯ ಪುಟ್ಟಣ್ಣ ಅವರ ಚಿತ್ರಗಳಿಗಿತ್ತು ಎಂದು ಶಿವರಾಂ ನುಡಿದರು.

ನ್ಯಾಯಮೂರ್ತಿ ಎ.ಜೆ. ಸದಾಶಿವ ಮಾತನಾಡಿ, ಪ್ರತಿಭೆ ಯಾವ ಮೂಲೆಯಿಂದ ಬೇಕಾದರೂ ಬರಬಹುದು. ಒಬ್ಬ ನಿರ್ದೇಶಕನ ಎಲ್ಲಾ ಚಿತ್ರಗಳು ಶ್ರೇಷ್ಠ ಎನ್ನಲಾಗದು. ಆದರೆ ಪುಟ್ಟಣ್ಣ ಈ ಮಾತಿಗೆ ಅಪವಾದ. ಅವರ ಚಿತ್ರಗಳಲ್ಲಿನ ಸಾಹಿತ್ಯ-ಸಂಗೀತ ಎಲ್ಲರ ಸೆಳೆಯುತ್ತದೆ ಎಂದರು.

ಚಿತ್ರ ಸಾಹಿತಿ ಆರ್‌.ಎನ್‌.ಜಯಗೋಪಾಲ್‌, ಪುಟ್ಟಣ್ಣ ಅವರನ್ನು ನೆನಪುಮಾಡಿಕೊಂಡು ವೇದಿಕೆಯ ಮೇಲೆಯೇ ಕಂಬನಿ ಸುರಿಸಿದರು. ಚಿ.ಉದಯಶಂಕರ್‌, ಉಪೇಂದ್ರ ಕುಮಾರ್‌, ಪುಟ್ಟಣ್ಣ ಕಣಗಾಲ್‌ ಸೇರಿದಂತೆ ನಮ್ಮ ಪೀಳಿಗೆಯೆಲ್ಲಾ ಖಾಲಿಯಾಗಿದೆ. ಈಗ ನಾನೊಬ್ಬ ಮಾತ್ರ ಉಳಿದಿದ್ದೇನೆ...ಎಂದು ಬಿಕ್ಕಿದರು.

ಪುಟ್ಟಣ್ಣ ಮತ್ತು ತಮ್ಮ ಬಡತನದ ದಿನಗಳನ್ನು ನೆನೆದ ಜಯಗೋಪಾಲ್‌, ಮದ್ರಾಸ್‌ ಬೀಚ್‌ಗಳಲ್ಲಿ ಹಸಿವಿನಿಂದ ಪಾರಾಗಲು ಕಡಲೆಕಾಯಿ ತಿನ್ನುತ್ತಿದ್ದ ಘಟನೆಯನ್ನು ಮೆಲುಕು ಹಾಕಿದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ವಿ.ಎನ್‌.ಸುಬ್ಬಾರಾವ್‌ ಮಾತನಾಡಿದರು. ಶ್ರೀಮತಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್‌ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ವಿನೂತನ ಮತ್ತು ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಿದ ವಿನ್‌ ಮ್ಯೂಸಿಕಲ್‌ ಕ್ಲಬ್‌ನ ಎಸ್‌.ಬಾಲಿ, ಜೆ.ಮನೋಹರ್‌, ಹೊಂಬಾಳೆ ಫಲ್ಗುಣ ಅವರಿಗೆ ಅಭಿನಂದನೆಗಳು.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada