»   » ಶಿಲ್ಪಾ ಶೆಟ್ಟಿಗೆ ಮಲ್ಯ ಅಂದ್ರೆ ಇಷ್ಟ !

ಶಿಲ್ಪಾ ಶೆಟ್ಟಿಗೆ ಮಲ್ಯ ಅಂದ್ರೆ ಇಷ್ಟ !

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

‘ಒಂದಾಗೋಣ ಬಾ’ ಚಿತ್ರೀಕರಣದ ಭರಾಟೆಯ ನಡುವೆ ಶಿಲ್ಪ ಶೆಟ್ಟಿ ಸುದ್ದಿಗಾರರ ಕಣ್ಣುತಪ್ಪಿಸಿಕೊಂಡೇ ಓಡಾಡುತ್ತಿರುವುದಕ್ಕೆ ಆಕೆಯ ಅಪ್ಪ ಕೋರ್ಟು, ಜೈಲು ಸುತ್ತಿರುವುದೊಂದೇ ಕಾರಣವಲ್ಲ. ಈಗ ಶಿಲ್ಪ ಹಾಗೂ ವಿಜಯ್‌ ಮಲ್ಯ ಸುತ್ತಾಟದ ಸುದ್ದಿ ಗಾಳಿಯಲ್ಲಿ ತೇಲುತ್ತಿದೆ !

ಪ್ರಫುಲ್‌ ಸೀರೆ ಮಾಲೀಕ, ಶಿಲ್ಪ ಅಪ್ಪ ತನ್ನ ಮೇಲೆ ಭೂಗತ ಪಾತಕಿಗಳನ್ನು ಛೂ ಬಿಟ್ಟ ಅಂತ ದೂರು ಕೊಟ್ಟಿದ್ದು, ಆನಂತರ ಶಿಲ್ಪ ಅಪ್ಪ ಪೀಕಲಾಟಕ್ಕೆ ಸಿಕ್ಕಿದ್ದು, ಆ ಕಾರಣಕ್ಕೇ ಮಹಾರಾಷ್ಟ್ರದಿಂದ ಅಲ್ಪವಿರಾಮ ಪಡೆದು ಶಿಲ್ಪ ತವರು ನಾಡಿಗೆ ಬಂದಿದ್ದು - ಮೆಲುಕು ಹಾಕಿಸಿಕೊಳ್ಳುತ್ತಿರುವ ಘಟನಾವಳಿಗಳು. ಅದೇ ವೇಳೆಗೆ ಶಿಲ್ಪಾಗೆ ರಾಕ್‌ಲೈನ್‌ ನಿರ್ಮಾಣದ ರವಿಚಂದ್ರನ್‌ ನಾಯಕತ್ವದ ಚಿತ್ರ ‘ಒಂದಾಗೋಣ ಬಾ’ನಲ್ಲಿ ನಾಯಕಿಯಾಗಿ ನಟಿಸುವ ಆಫರ್‌ ಸಿಕ್ಕಿತು. ರೋಗಿ ಬಯಸಿದ್ದೂ ಹಾಲೂ ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎಂಬಂತಾಯಿತು. ಶಿಲ್ಪ ನಿಸೂರಾಗಿ ಆಫರಿಗೆ ಸಹಿ ಮಾಡಿದಳು.

ಪ್ರಫುಲ್‌ ಸೀರೆಯ ಸೆರಗು ಹಿಡಕೊಂಡೇ ಸುದ್ದಿಗಾರರು ತಲೆ ತಿಂತಾರೆ ಅಂತ ಇಲ್ಲಿಯವರೆಗೂ ದೂರುತ್ತಿದ್ದ ಶಿಲ್ಪ ಈಗ ಗಮನ ಸೆಳೆಯುತ್ತಿರುವುದು ಬೀರು ಕುದುರೆ ಮಲ್ಯ ಸಹವಾಸದ ಕಾರಣಕ್ಕೆ. ಒಂದಾಗೋಣ ಬಾ ಶೂಟಿಂಗಿನ ಬಿಡುವಿನ ವೇಳೆಯನ್ನು ಶಿಲ್ಪ ಹೆಚ್ಚಾಗಿ ಕಳೆಯುತ್ತಿರುವುದು ಮಲ್ಯ ಜೊತೆಯಲ್ಲಿ ಅಂತ ಪುಕಾರೆದ್ದಿದೆ.

ಇದಕ್ಕೆ ನೀವೇನಂತೀರಿ ಅಂತ ಶಿಲ್ಪ ಮುಂದೆ ನೇರವಾಗಿ ಕೇಳಲಾಗಿ, ಆಕೆ-‘ನಾನು- ಮಲ್ಯ ಒಳ್ಳೆಯ ಸ್ನೇಹಿತರು. ಒಳ್ಳೆಯವರನ್ನು ಕಂಡರೆ ನಂಗಿಷ್ಟ. ಅದಕ್ಕೆ ಉಪ್ಪು- ಖಾರ ಹಚ್ಚುವವರ ಕಂಡರೆ ಮೈಯೆಲ್ಲಾ ಖಾರವಾಗುತ್ತೆ’ ಅಂತ ಪ್ರತಿಕ್ರಿಯಿಸಿದಳು.

ಮಲ್ಯ ಚುನಾವಣೆಗೆ ಶಿಲ್ಪ ಶೆಟ್ಟಿ ಕ್ಯಾನ್‌ವಾಸ್‌ ಮಾಡ್ತಾಳಂತೆ ಅಂತ ಏನೇನೋ ಮಾತಾಡಿಕೊಳ್ಳುತ್ತಾ ಕಿಸಕಿಸ ನಗುವವರು ವಿಧಾನಸೌಧದ ಕಾರಿಡಾರಿನಲ್ಲಿ ಹೆಚ್ಚಾಗುತ್ತಿದ್ದಾರೆ. ಈ ವಿಷಯ ಕೇಳಿದರೆ ಮಲ್ಯ ಕೂಡ ಹುಳ್ಳಗೆ ನಗುತ್ತಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada