For Quick Alerts
  ALLOW NOTIFICATIONS  
  For Daily Alerts

  ‘ಮಣ್ಣಿನದೋಣಿ’ ಸುಧಕ್ಕನಿಗೆ ಕಾಗದದ ದೋಣಿಯಲ್ಲಿ ಪತ್ರ

  By Staff
  |

  ‘ಇಲ್ಲ ಕಣ್ರೀ. ಆ ಹುಡುಗಿಗೆ 14 ತುಂಬಿರಲಿಲ್ಲ . ಅಂಥ ಚಿಕ್ಕ ವಯಸ್ಸಲ್ಲೇ ಆಕೆ ಚಿತ್ರರಂಗಕ್ಕೆ ಬಂದಳು. ಮೊದಲ ಸಿನಿಮಾದಲ್ಲೇ ನಾಯಕಿ ಆಗಿಬಿಟ್ಲು . ಪುಟ್ಟ ಪುಟ್ಟ ಹೆಜ್ಜೆಯ ಈ ಪುಟಾಣಿ ಹುಡುಗಿ ನಾಯಕಿಯನ್ನ- ಇಡೀ ಚಿತ್ರರಂಗ ‘ಸುಧಾರಾಣೀ’ ಅಂತ ಕರೀತು. ಹತ್ತು ಜನರ ಅಭಿಮಾನ, ಇಪ್ಪತ್ತು ಜನರ ಹಿತನುಡಿ, ಅದೆಷ್ಟೋ ಸಾವಿರ ಜನರ ಹಾರೈಕೆ ಜತೆಯಾಯಿತಲ್ಲ .....

  ಆಮೇಲೆ ಸುಧಾರಾಣಿ ತಿರುಗಿ ನೋಡಲಿಲ್ಲ . ಅಭಿನಯ ಕಲೆ ಆಕೆಯ ಕೈ ಹಿಡೀತಲ್ಲ - ಆಕೆ ‘ಅರಗಿಣಿ’ಯಾದಳು. ‘ಮನ ಮೆಚ್ಚಿದ ಹುಡುಗಿ’ಯಾದಳು. ‘ಮೈಸೂರು ಮಲ್ಲಿಗೆ’ಯ ತೋಟದಲ್ಲಿ ಅಡ್ಡಾಡಿದಳು. ‘ಶ್ರೀಗಂಧ’ದ ನಾಡಿನಲ್ಲಿ ಹೆಸರಾದಳು. ಆಕೆಯ ಮುಗ್ಧ ನಗೆ. ಮುದ್ದು ಮಾತು, ಕಣ್ಣ ಮಿಂಚು, ಜರಿಯ ಅಂಚು ಕಂಡ ಜನ ಖುಷಿಯಾದರು. ‘ಹಾಡು ಮಗಳೇ ಹಾಡು’ ಎಂದರು. ಎಷ್ಟೇ ಆಗಲಿ, ಪಕ್ಕದ್ಮನೆ ಹುಡುಗಿ ಅಲ್ವೆ ? ಸುಧಾ ‘ಪಂಚಮವೇದ’ದಲ್ಲೇ ಹಾಡಿದಳು. ‘ಎಷ್ಟು ಚೆಂದಕ್ಕೆ ಹಾಡ್ತೀಯೇ ಸುಧಕ್ಕಾ? ಹೇಳಮ್ಮಾ, ನಿನ್‌ ಮದ್ವೆ ಯಾವಾಗ?’ ಎಂದು ಅವರಿವರು ಕೇಳುವ ಮೊದಲೇ ‘ಸಪ್ತಪದಿ’ ತುಳಿದೇ ಬಿಟ್ಲು. ಮದುವೆಗೆ ಬಂದವರೆದುರು ಇಷ್ಟಿಷ್ಟಿಷ್ಟಿಷ್ಟೇ ನಾಚುತ್ತ- ‘ಅವನೇ ನನ್ನ ಗಂಡ’ ಎಂದಳು. ತೀರಾ ಆಪ್ತರ ಮುಂದೆ ಅದೇ ನಾಚಿಕೆಯಿಂದ ನಮ್‌ ‘ಮನೇದೇವ್ರು’ ಅಂದಳು. ಇಂಥ ಸುಧಾರಾಣಿ ಈಗ ಅದೇ ಹಳೆಯ ಮುಗ್ಧತೆ, ಅದೇ ವಿನಯ, ಅದದೇ ಸಜ್ಜನಿಕೆ ಉಳಿಸಿಕೊಂಡಿದ್ದಾರೆ. ಚಿತ್ರರಂಗದ ‘ಮಣ್ಣಿನದೋಣಿ’ಯ ಬದಲು ಕಿರುತೆರೆಯ ಮರದ ದೋಣಿಯೇ ಚೆಂದ ಅತ ಭಾವಿಸಿದ್ದಾರೆ. ಗೊತ್ತಲ್ಲ - ಸುಧಾರಾಣಿ ಈಗ ‘ತುಳಸಿ’ಯಾಗಿ ಗೆದ್ದಿದ್ದಾರೆ. ‘ಮನಸೇ ಓ ಮನಸೇ’ ಧಾರಾವಾಹಿಯಲ್ಲಿ ಎಲ್ಲರ ಮನಸ್ಸು ತಟ್ಟಿದ್ದಾರೆ. ಎಲ್ಲರ ಮನ ಗೆದ್ದಿದ್ದಾರೆ!

  ಹೌದು ಸುಧಕ್ಕಾ, ‘ತುಳಸಿ’ ಸೀರಿಯಲ್‌ ನೋಡೋರೆಲ್ಲ ಹೇಳೋದೇ ಹೀಗೆ.

  *

  ಒಂದೇ ಮಾತಲ್ಲಿ ಹೇಳಿಬಿಡ್ಲಾ ಸುಧಕ್ಕಾ ? ಇವತ್ತು ಕೂಡ ‘ಆನಂದ್‌’ ಸಿನಿಮಾ ನೋಡಿದ್ರೆ ನಮ್ಗೆ ಬೆರಗಾಗುತ್ತೆ . ಆ ಸಿನಿಮಾದಲ್ಲಿ ನೀವು ಕಾನ್ವೆಂಟ್‌ ಹುಡ್ಗಿ ಥರಾನೇ ಕಾಣ್ತೀರಿ. ಅಂಥ ನಿಮ್ಮನ್ನ ಆ ಸಿನಿಮಾದಲ್ಲಿ ಹೀರೋಯಿನ್‌ ಅಂತ ಒಪ್ಪಿಕೊಳ್ಳಲಿಕ್ಕೆ ಇವತ್ತು ಕಷ್ಟ ಆಗುತ್ತೆ . ‘ಆನಂದ್‌’ ಸಿನಿಮಾದ ನಾಯಕಿಯಾದಾಗ ಇನ್ನೂ ಏಳನೇ ಕ್ಲಾಸಲ್ಲಿ ಇದ್ರಂತೆ ನೀವು! ಅಷ್ಟು ಚಿಕ್ಕ ವಯಸ್ಸಲ್ಲಿ ‘ನೀಲ ಮೇಘ ಗಾಳಿ ಬೀಸಿ ತಂಪಾದ ಹಾಗೆ, ಚಂದ್ರತಾರೆ ಕಂಪು ಕಾಂತಿ ಚೆಲ್ಲಾಡೋ ಹಾಗೆ...’ ಅನ್ನೋ ಹಾಡಿಗೆ ಡ್ಯಾನ್ಸು ಮಾಡಿದಿರಲ್ಲ . ಅದನ್ನ ನೆನಪು ಮಾಡಿಕೊಂಡ್ರೆ ಒಮ್ಮೆ ಬೆರಗಾಗುತ್ತೆ. ಇನ್ನೊಮ್ಮೆ ನಗುಬರುತ್ತೆ. ‘ಸ್ವೀಟ್‌ ಸಿಕ್ಸ್‌ಟೀನ್‌’ ಅನ್ನಿಸಿಕೊಳ್ಳೋಕೆ ಮುಂಚೆಯೇ ಡ್ಯುಯೆಟ್‌ ಸಾಂಗ್‌ಗೆ ಸಾಥ್‌ ನೀಡಿದಿರಲ್ಲ- ಹೇಳ್‌ ಸುಧಕ್ಕಾ, ಅದೇ ‘ಆನಂದ್‌’ ಸಿನಿಮಾನ, ಅದೇ ‘ನೀಲ ಮೇಘ...’ ಹಾಡನ್ನ ನೋಡಿದ್ರೆ ನಿನ್ಗೂ ನಗು ಬರುತ್ತಾ ? ಅರೆ, ನಾನೇನಾ ಹೀಗೆಲ್ಲ ಮಾಡಿದ್ದು ಅನ್ನಿಸಿ ಬೆರಗಾಗುತ್ತಾ ?

  ನಿಂಗೆ ಗೊತ್ತುಂಟಲ್ಲಾ ? ನಿನ್ನ ‘ಮಣ್ಣಿನದೋಣಿ’ನ ನಾವು ಮುಳುಗಿಸಲಿಲ್ಲ . ‘ಸಪ್ತಪದಿ’ಗೆ ಹೆಜ್ಜೆ ಇಟ್ಟಾಗ ಅಲ್ಲಿಗೂ ಬರಲಿಲ್ಲ . ‘ಅರಗಿಣಿ’ಯಾಗಿ ನೀನು ಹಾರಾಡಿದೆ. ನಾವು ಬೇಡ ಅನ್ನಲಿಲ್ಲ . ‘ಅನುರಾಗ ಸಂಗಮ’ದಲ್ಲಿ ಓಡಿದೆ. ಓಡುತ್ತಲೇ ಹಾಡಿದೆ. ಹಾಡುತ್ತ ಅಲೆದಾಡಿದೆ. ಅಲೆದಾಟದಲ್ಲೇ ಅಳು ತೇಲಿಸಿದೆ. ಹೇಳು ಸುಧಕ್ಕಾ? ಆಗೆಲ್ಲ ನಾವು ಜತೇಲೇ ಇದ್ವಿ ತಾನೆ ? ಅಷ್ಟು ಗೊತ್ತಿದ್ರೂ ನೀನು ‘ಮನೆದೇವ್ರು’ ಸಿನಿಮಾ ಒಪ್ಕೊಂಡು ಐದಾರೇಳೆಂಟು ಕೆಟ್‌ ಡ್ರೆಸ್ಸಲ್ಲಿ ಕಾಣಿಸ್ಕೊಂಡೇಬಿಟ್ಟೆ !

  ಸುಧಕ್ಕಾ , ಅದ್ಯಾಕೆ ಹಾಗೆ ಮಾಡ್ಬಿಟ್ಟೆ? ಥತ್‌, ಥತ್‌, ಹಳೇದನ್ನ ಯಾಕಪ್ಪಾ ನೆನಪು ಮಾಡ್ತೀಯ ಅಂತ ಮುಖ ಕಿವುಚಬೇಡ ಸುಧಕ್ಕಾ. ಉಳಿದೆಲ್ಲ ಸಿನಿಮಾ, ಆ ಸಿನಿಮಾಗಳ ಪಾತ್ರ, ಅವುಗಳ ಡೈಲಾಗು- ಜತೆಗಿದ್ದ ಡ್ಯುಯೆಟ್ಟು ಅತ್ಲಾಗಿರಲಿ. ‘ಪಂಚಮವೇದ’ದಲ್ಲಿ ಅಷ್ಟೊಂದು ತನ್ಮಯತೆಯಿಂದ, ರಮೇಶ್‌ರಂಥ ರಮೇಶ್‌ಗೇ ಸೈಡು ಹೊಡೆಯೇ ಹಾಗೆ ನಟಿಸಿದೆಯಲ್ಲ - ಅಂಥ ಅದ್ಭುತ ನಟನೆ ಹ್ಯಾಗಕ್ಕಾ ಸಾಧ್ಯವಾಯ್ತು ? ‘ಪಂಚಮವೇದ’ದಲ್ಲಿ ಮೊದ ಮೊದಲು ನೀನು ಹಾಡ್ತೀಯಲ್ಲಾ , ಹಾಡಿ ಕುಣೀತಿಯಲ್ಲ - ಆಗೆಲ್ಲ ನಾವೂ ಥಿಯೇಟರಿನಲ್ಲೇ ಕುಣಿದಿದ್ವಿ . ಅದೇ ಸಿನಿಮಾದ ಕಡೆಯಲ್ಲಿ - ‘ಕೇಡಿಗಳಿಂದ ಹಿಗ್ಗಾಮುಗ್ಗಾ ಒದೆ ತಿಂದ ರಮೇಶ್‌ರನ್ನ ಹರಿಗೋಲಿಗೆ ಹಾಕ್ಕೊಂಡು, ನದಿ ದಾಟಲು ಹೋಗಿ- ಅದು ಸಾಧ್ಯವಾಗದೇ ಹೋದಾಗ ಹರಿಗೋಲಿಗೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಕೊಂಬಿಡ್ತೀಯಲ್ಲ....’

  ಸಾರಿ ಸುಧಕ್ಕಾ , ನಂಗೆ ಕಣ್ತುಂಬಿ ಬರ್ತಿದೆ. ಹೇಳು, ಅಂತದೊಂದು ಪಾತ್ರ ಮಾಡಿದ ಮೇಲೆ ನಿಂಗೆ ಏನನ್ನಿಸ್ತು ? ಸಿನಿಮಾ ನೋಡ್ತಾ ನೋಡ್ತಾ ನೀನೂ ಕಣ್ತುಂಬಿಕೊಂಡ್ಯಾ ? ಪರವಾಗಿಲ್ವೇ, ನಾನು ಫೈನ್‌ ಅನ್ನೋ ಥರಾ ಅಭಿನಯಿಸಿದ್ದೀನಿ ಅಂತ ಖುಷಿಯಾದ್ಯಾ? ಅಥವಾ, ಇನ್ನಷ್ಟು ಚನ್ನಾಗಿ ಅಭಿನಯಿಸಬಹುದಿತ್ತು ಅತ ಪೇಚಾಡಿಕೊಂಡ್ಯಾ? ನಮ್ಮಲ್ಲಿ ಇಂಥವೇ ಪ್ರಶ್ನೆಗಳಿವೆ. ನೀನು ಇದೇ ಮಲ್ಲೇಶ್ವರದಲ್ಲಿ ಇದೀಯ. ಯಾರಿಗೂ ಸಿಗಲ್ಲ . ಶಾಪಿಂಗ್‌ ಮಾಡ್ತೀನಿ ಅಂತೀಯ. 8ನೇ ಕ್ರಾಸ್‌ಗೆ ಬರಲ್ಲ . ನಾನು ಭಯಂಕರ ತಿಂಡಿಪೋತಿ ಕಣ್ರೀ ಅಂತ ಸುಳ್‌ಸುಳ್ಳೇ ಹೇಳ್ತೀಯ. ಜನತಾ ಹೋಟೆಲಲ್ಲಿ ಕಾಣ್ಸಲ್ಲ ! ತೀರಾ ಅಪರೂಪಕ್ಕೆ ಫಂಕ್ಷನ್‌ಗೆ ಬರ್ತೀಯ ಸರಿ. ಯಾರೋ ಒಂದೆರಡು ಫೋಟೊ ತೆಗೆದ್ರೆ ಸಾಕು- ಎದ್ದು ಹೋಗೇ ಬಿಡ್ತೀಯ. ಹಿಂಗಾದ್ರೆ ಹ್ಯಂಗೆ ಸುಧಕ್ಕಾ ?

  ***

  ಹೇಳಿದ್ನಲ್ಲ ಸುಧಕ್ಕಾ , ನಿನ್‌ ಮೇಲೆ ತುಂಬ ಮಮತೆಯಿದೆ. ಪಕ್ಕದ್ಮನೇ ಅಕ್ಕ ಅನ್ನೋ ಸಲುಗೆಯಿದೆ. ನೀನೂ ಒಪ್ತೀ ತಾನೆ? ಪ್ರೀತಿ ಇದ್ದ ಕಡೇಲಿ ಸಲುಗೆ ಇರುತ್ತೆ . ಸಲುಗೆ ಇದ್ದ ಕಡೇಲಿ ಪ್ರಶ್ನೆ ಇರುತ್ತೆ . ವರ್ಷ ವರ್ಷದಿಂದಲೂ ಒಳಗೊಳಗೇ ಉಳಿದಿದ್ದ ಪ್ರಶ್ನೆಗಳನ್ನೆಲ್ಲ ಈಗ ಕೇಳಿಬಿಡ್ತಿದೀನಿ. ಇಷ್ಟವಾದ ಪ್ರಶ್ನೆಗೆ ಉತ್ತರ ಹೇಳಿ : 14ನೇ ವಯಸ್ಸಿನಲ್ಲೇ ಕ್ಯಾಮರಾ ಎದುರಿಸಿದಿರಲ್ಲ - ಆಗ ಭಯವಾಯ್ತ ? ದಶಕದ ಹಿಂದೆ ಸಿನಿಮಾಗಳಲ್ಲಿ ಮರ ಸುತ್ತುವಾಗ ಏನ್ನನಿಸಿತ್ತು ? ಈಗ ‘ತುಳಸೀ’ಕಟ್ಟೆ ಸುತ್ತುತ್ತೀಯಲ್ಲ - ಏನನ್ನಿಸ್ತಾ ಇದೆ ?

  ಒಮ್ಮೆ ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿದ್ದಾಕೆ, ಮುಂದೊಮ್ಮೆ ಅಂಬರೀಷರಂಥ ಹಿರಿಯ ನಟರಿಗೂ ನಾಯಕಿ ಆದೆಯಲ್ಲ , ಆಗ ‘ಪಿಚ್‌’ ಅನ್ನಿಸಲಿಲ್ಲವಾ ? ‘ದೇವತಾ ಮನುಷ್ಯ’ದಲ್ಲಿ ಒಮ್ಮೆ , ‘ಜೀವನಚೈತ್ರ’ದಲ್ಲಿ ಇನ್ನೊಮ್ಮೆ ರಾಜಣ್ಣನ ಜತೆ ಅಭಿನಯಿಸಿದೆಯಲ್ಲ - ಆಗ ಹೆದರಿಕೆ ಆಗಲಿಲ್ವಾ ? ‘ರಾಜ್ಯ ಪ್ರಶಸ್ತಿ’ ಸಿಕ್ಕಾಗ ತುಂಬ ಸಂತೋಷದಿಂದ ಅಳೂನೇ ಬಂದು ಬಿಡಲಿಲ್ವ ? ಆಮೇಲೆ- ಹಿರಿತೆರೆಯಲ್ಲೇ ಬೇಡಿಕೆ ಇದ್ದಾಗ ಸೀದಾ ಕಿರುತೆರೆಗೆ ಬಂದ್ಬಿಟ್ಯಲ್ಲ - ಯಾಕ್‌ ಸುಧಕ್ಕಾ ? ‘ಕಿರುತೆರೆ’ ನೆಪದಲ್ಲಿ ನನ್ನ ಮಗಳ ಜತೆ ಟೈಂ ಕಳೆಯೋಕೆ ಆಗಲ್ಲ ಅಂದ್ಯಂತೆ- ಮಗಳು ಅತ್ತಾಗ ಯಾವ ಹಾಡು ಹೇಳ್ತೀ ಸುಧಕ್ಕಾ ? ಮಗೂಗೆ ನಿನ್ನದೇ ಅಭಿನಯದ ಸಿನಿಮಾ ತೋರಿಸಿ- ಕಂದಾ, ಯಾರಪ್ಪಾ ಇದೂ ಅಂತ ಕೇಳಿ ನಗ್ತೀಯಾ ಸುಧಕ್ಕಾ? ಇದು ಕಡೆಯ ಪ್ರಶ್ನೆ, ಕುತೂಹಲದ ಪ್ರಶ್ನೆ. ಕೇಳಬಾರದ ಪ್ರಶ್ನೆ. ಆದ್ರೂ ಕೇಳ್ತಾ ಇದ್ದೀನಿ. ಸಿಹಿಯಾಗಬೇಕಿದ್ದ ಅಮೆರಿಕದ ಬದುಕು ನಿಂಗೂ ಕಹಿಯಾಗಿಬಿಡ್ತಲ್ಲ - ಯಾಕ್‌ ಸುಧಕ್ಕಾ ?

  ಪ್ರಶ್ನೆಗಳ ದೋಣಿಯನ್ನ ನಾನಂತೂ ಕಾಗದದಲ್ಲಿ ತೇಲಿಬಿಟ್ಟಿದೀನಿ. ‘ಮಣ್ಣಿನದೋಣಿ’ಯಲ್ಲಿ ವಿಹರಿಸಿದ ನೀನು, ಈ ಕಾಗದದ ದೋಣೀಲೂ ತೇಲಿ ತೇಲಿ ಹೋದ್ರೆ- ಅಕ್ಕರೆಯನ್ನೆಲ್ಲ ಅಕ್ಷರಗಳಲ್ಲಿ ತುಂಬಿ ಇನ್ನೊಂದು ಕಾಗದದ ದೋಣಿಯನ್ನ ಈ ಕಡೆ ಕಳಿಸಿದ್ರೆ....

  ನಿಮಗೆ ಸಾವಿರದ ಥ್ಯಾಂಕ್ಸ್‌ ....

  ಸಾಕಲ್ವಾ ?

  - ಎ.ಆರ್‌. ಮಣಿಕಾಂತ್‌
  armanikanth@yahoo.co.in

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X