»   » ಮೀಮಾರಾ ಚಿತ್ರಕ್ಕಾಗಿ ರಾಘವನಿಗೆ ಪ್ರಶಂಸೆಯ ಸುರಿಮಳೆ

ಮೀಮಾರಾ ಚಿತ್ರಕ್ಕಾಗಿ ರಾಘವನಿಗೆ ಪ್ರಶಂಸೆಯ ಸುರಿಮಳೆ

Subscribe to Filmibeat Kannada


ರಾಘವ ಪಾತ್ರಕ್ಕಾಗಿ ತಿಲಕ್‌ಗೆ ಅಪಾರ ಸುರಿಮಳೆ ಬರುತ್ತಿದ್ದರೂ ಕಂಡಕಂಡ ಪಾತ್ರಗಳನ್ನು ಆಯ್ದುಕೊಳ್ಳದೇ ಉತ್ತಮ ಪಾತ್ರಗಳಿಗಾಗಿ ಕಾಯ್ದುಕುಳಿತಿರುವುದು ಅವರ ವೃತ್ತಿಪರತೆಗೆ ಹಿಡಿದ ಕನ್ನಡಿ.ಕನ್ನಡ ಚಿತ್ರರಂಗದಲ್ಲಿ ಈಗೇನಿದ್ದರೂ ಯುವ ಪ್ರತಿಭೆಗಳ ದುನಿಯಾ. ಮುಂಗಾರು ಮಳೆಯ ಗಣೇಶ್, ದುನಿಯಾದ ವಿಜಯ್, ಸವಿಸವಿ ನೆನಪಿನ ಪ್ರೇಮ್ ಮೊದಲಾದವರು ಸ್ಪರ್ಧೆಗೆ ನಿಂತವರಂತೆ ಅಭಿನಯಿಸುತ್ತಿದ್ದಾರೆ. ಈಗ ಹೊಸ ಸೇರ್ಪಡೆ ಮೀರಾ ಮಾಧವ ರಾಘವ ಚಿತ್ರದ ತಿಲಕ್.

ತಿಲಕ್ ಎಂದೊಡನೆ ನೆನಪಾಗುವುದು ಗಂಡ ಹೆಂಡತಿ ಚಿತ್ರದ ಪ್ರೀತಿಯನ್ನು ಬೆನ್ನತ್ತುವ ಒಬ್ಬ ಪ್ರೇಮಿ. ಮೀರಾ ಮಾಧವ ರಾಘವ ಚಿತ್ರದಲ್ಲೂ ಪ್ರೀತಿಯನ್ನು ಬೆನ್ನತ್ತುವ ಪ್ರೇಮಿಯೇ ಆದರೂ ಅಲ್ಲಿ ಕಳೆದುಕೊಂಡದ್ದನ್ನು ಇಲ್ಲಿ ಗಳಿಸಿದ್ದಾರೆ. ಇದರಲ್ಲಿ ನಟನಾಗಿ ತಿಲಕ್ ಗೆದ್ದಿದ್ದಾರೆ. ಅವರ ಅಭಿನಯ ಅಪಾರ ಮೆಚ್ಚುಗೆಗೆ ಒಳಗಾಗಿದೆ.

ಅಭಿನಂದಿಸಿ ಒಂದೇ ಸವನೆ ಬರುತ್ತಿರುವ ಎಸ್ಎಂಎಸ್ ಸಂದೇಶಗಳಿಗೆ, ಅವ್ಯಾಹತವಾಗಿ ಬರುತ್ತಿರುವ ಟೆಲಿಫೋನ್ ಕರೆಗಳಿಗೆ ಉತ್ತರಿಸಿ ಸುಸ್ತಾಗುತ್ತಿದ್ದರೂ ಸಂತೋಷ ದ್ವಿಗುಣವಾಗುತ್ತಿದೆ. ಚಿತ್ರದ ಅಭಿನಯಕ್ಕಾಗಿ ಪ್ರಶಂಸೆಗಳಿಂದಾಗಿ ರಾಘವ ಆಕಾಶದಲ್ಲಿ ತೇಲಾಡುತ್ತಿದ್ದರೂ ಕಾಲುಗಳು ಭದ್ರವಾಗಿ ನೆಲದಮೇಲಿವೆ.

ಗಂಡ ಹೆಂಡತಿಯಲ್ಲಿ ಕಿಸ್ಸರ್ ಬಾಯ್ ಆಗಿ ಕಳೆದುಹೋಗಬಹುದಾಗಿದ್ದ ಪ್ರತಿಭೆಯನ್ನು ಟಿ.ಎನ್.ಸೀತಾರಾಂ ಅವರು ರಾಘವನ ಪಾತ್ರದಲ್ಲಿ ಒರೆಗೆ ಹಚ್ಚಿದ್ದಾರೆ. ತೀಡಿದ ಗಂಧದಿಂದ ಪರಿಮಳ ತಾನಾಗಿಯೇ ಹೊರಹೊಮ್ಮಿದೆ. ನಾನು ರಾಘವ ಪಾತ್ರಕ್ಕೆ ಅತ್ಯಂತ ಸೂಕ್ತ ನಟನನ್ನೇ ಆಯ್ದುಕೊಂಡಿದ್ದೇನೆ ಅಂದು ಸೀತಾರಾಂ ಅವರು ಹೇಳಿರುವುದು ತಿಲಕ್ ಪ್ರತಿಭೆ ಹಿಡಿದ ಕನ್ನಡಿ.

ವಿಲನ್ ಛಾಯೆ ಇರುವ ಪಾತ್ರವನ್ನು ತಿಲಕ್ ಅತ್ಯಂತ ಶ್ರದ್ಧೆಯಿಂದ ಮಾಡಿದ್ದಾರೆ. ಈಗ ಹೊಗಳಿಕೆಯ ಬಿರುಮಳೆ ಸುರಿಯುತ್ತಿದ್ದರೂ ತಲೆ ಹೆಗಲಮೇಲೆ ಸ್ಥಿರವಾಗಿ ಕುಳಿತಿದೆ. ಮುಂದೆ ಆಯ್ದುಕೊಳ್ಳುವ ಪಾತ್ರ ನಿರೀಕ್ಷೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಚೆನ್ನಾಗಿ ಅರಿತಿದ್ದಾರೆ. ಆದ್ದರಿಂದಲೇ ಬರುತ್ತಿರುವ ಅವಕಾಶಗಳನ್ನು ಬದಿಗಿರಿಸಿ ಉತ್ತಮ ಪಾತ್ರಕ್ಕಾಗಿ ಕಾಯುತ್ತಾ ಮನೆಯಲ್ಲೇ ಕುಳಿತಿದ್ದಾರೆಂದರೆ ಅವರಿಗೆ ತಮ್ಮ ಭವಿಷ್ಯದ ಬಗೆಗಿರುವ ಕಾಳಜಿಯ ಅರಿವಾಗುತ್ತದೆ.

ಕೆಟ್ಟದಾಗಿರುವ ಪಾತ್ರಗಳನ್ನು ಆಯ್ದುಕೊಳ್ಳುವ ಬದಲು ಕಾಯ್ದು ನೋಡಿ ಉತ್ತಮ ಪಾತ್ರ ಆಯ್ದುಕೊಳ್ಳುವುದೇ ಉತ್ತಮ ಎಂಬ ನಿರ್ಣಯಕ್ಕೆ ಬಂದಿದ್ದಾರೆ.

ನನ್ನ ಯಶಸ್ಸಿಗೆ ಬಹುಪಾಲು ನಿರ್ದೇಶಕ ಸೀತಾರಾಂ ಅವರಿಗೇ ಸಲ್ಲಬೇಕು. ಇಂಥ ಸತ್ವಯುತ ಪಾತ್ರಕ್ಕಾಗಿ ನನ್ನನ್ನು ಆಯ್ದುಕೊಂಡಿದ್ದಕ್ಕೆ ಹೇಗೆ ಧನ್ಯವಾದ ಹೇಳಬೇಕೆಂದು ಗೊತ್ತಾಗುತ್ತಿಲ್ಲ. ರಮ್ಯ, ದಿಗಂತ್, ಸುಂದರ್ ರಾಜ್, ಸುಧಾ ಬೆಳವಾಡಿಯವರಂಥ ಪ್ರತಿಭಾನ್ವಿತ ನಟರು ಇರುವಾಗ ನನ್ನ ಪಾತ್ರ ಇಷ್ಟೊಂದು ಪ್ರಶಂಸೆಗೆ ಒಳಗಾಗುತ್ತದೆಂಬ ಅರಿವೂ ಇರಲಿಲ್ಲ ಎಂದು ವಿನಮ್ರವಾಗಿ ತಿಲಕ್ ಹೇಳಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada