»   » ಸಿನಿಕ್ರಿಕೆಟ್ಟು ಪ್ರಿಯರ ಒಮ್ಮೆಗೇ ತಬ್ಬಿಕೊಳ್ಳುವ ಕಾರ್ಯಕ್ರಮ.

ಸಿನಿಕ್ರಿಕೆಟ್ಟು ಪ್ರಿಯರ ಒಮ್ಮೆಗೇ ತಬ್ಬಿಕೊಳ್ಳುವ ಕಾರ್ಯಕ್ರಮ.

By: *ಶಾಮ್‌
Subscribe to Filmibeat Kannada

ಇದು ಸಿನಿಮಾ ದೃಶ್ಯವಲ್ಲ ಸ್ವಾಮಿ, ಕ್ರಿಕೆಟ್ಟು . ವಿಸ್ಡನ್‌ ಪ್ರಶಸ್ತಿ ವಿಜೇತ ಶತಮಾನದ ಶ್ರೇಷ್ಠ ಭಾರತೀಯ ಕ್ರಿಕೆಟಿಗ ಕಪಿಲ್‌ ಬೌಲಿಂಗ್‌ಗೆ ಸೆಡ್ಡು ಹೊಡೆದು ನಿಲ್ಲುವ ಸಿಂಹಾದ್ರಿಯ ಸಿಂಹ ವಿಷ್ಣುವರ್ಧನ್‌! ಚೆಂಡು ವಿಕೆಟ್‌ಗಾ ಅಥವಾ ಬೌಂಡರಿಗಾ ? ಉತ್ತರ ಆ.17 ರ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ.

'ಧೀರ' ರಾಕ್‌ಲೈನ್‌ ವೆಂಕಟೇಶ್‌ ಆಯೋಜಿಸಿರುವ 'ನಾಗರ ಹಾವು ಕಪ್‌'ಗೆ ಈಗ ವೇದಿಕೆ ಸಜ್ಜು. ಸಿನಿಮಾ-ಕ್ರಿಕೆಟ್ಟು ತಾರೆಗಳ ತಂಡಗಳೂ ಪ್ರಕಟ. ಕ್ರಿಕೆಟ್‌ ತಾರೆಗಳ ತಂಡಕ್ಕೆ ಕಪಿಲ್‌ ದೇವ್‌ ನಾಯಕ. ಸಿನಿಮಾ ತಾರೆಗಳ ತಂಡಕ್ಕೆ ವಿಷ್ಣುವರ್ಧನ್‌ ಸಾರಥ್ಯ. ಗೆದ್ದವರಿಗೆ ನಾಗರ ಹಾವು ಕಪ್‌. ಸೋತವರಿಗೂ ಉಂಟು ಬಹುಮಾನ, ಅದು ಡಕೋಟ ಎಕ್ಸ್‌ಪ್ರೆಸ್‌ ಕಪ್‌ ! ನಾಗರಹಾವು (1972) ನಮ್ಮ ತರಾಸು ಅವರ ಕಾದಂಬರಿ ಆಧರಿತ ಚಿತ್ರ. ವಿಷ್ಣು ಸಿನಿಮಾ ಬದುಕು ಆರಂಭವಾದದ್ದೂ ಆ ಚಿತ್ರದಿಂದಲೇ. ಆದರೆ ಕ್ರಿಕೆಟ್‌ ಪ್ರಶಸ್ತಿಯ ಹೆಸರು ಹೊತ್ತಿರುವ ಈ ನಾಗರಹಾವು, ರಾಕ್‌ಲೈನ್‌ ಅವರ ಹೊಸಚಿತ್ರ. ನಾಯಕ ಉಪೇಂದ್ರ, ನಾಯಕಿ ಜ್ಯೋತಿಕಾ. ಇನ್ನೇನು ಬಿಡುಗಡೆ ಆಗಬೇಕು.

ಇದು ಬರಿ ಕ್ರಿಕೆಟ್ಟು ಮಾತ್ರವಲ್ಲ ; ಸನ್ಮಾನ ಸಮಾರಂಭವೂ ಹೌದು. ಕಪಿಲ್‌ದೇವ್‌, ಗುಂಡಪ್ಪ ವಿಶ್ವನಾಥ್‌ ಹಾಗೂ ಬಿ.ಎಸ್‌.ಚಂದ್ರಶೇಖರ್‌ ಅವರಿಗೆ ಸಹೃದಯರ ಸಮ್ಮುಖದಲ್ಲಿ ಆತ್ಮೀಯ ಸನ್ಮಾನ. ಈ ಪಂದ್ಯ ಸಿನಿ ಪ್ರೇಮಿಗಳಿಗಷ್ಟೇ ಅಲ್ಲ , ಕ್ರಿಕೆಟ್‌ ಪ್ರೇಮಿಗಳಿಗೂ ರಸದೌತಣ.

ಕ್ರಿಕೆಟ್‌ ಆಡುವುದು ಯಾರ್ಯಾರು?
ಕಪಿಲ್‌ ನೇತೃತ್ವದ ಬಳಗದಲ್ಲಿ ವಿಶ್ವ ಶ್ರೇಷ್ಠ ಕ್ರಿಕೆಟಿಗರ ದಂಡೇ ಇದೆ. ಅವರೆಂದರೆ- ಜಿ.ಆರ್‌.ವಿಶ್ವನಾಥ್‌, ಬ್ರಿಜೇಶ್‌ ಪಟೇಲ್‌, ಬಿ.ಎಸ್‌.ಚಂದ್ರಶೇಖರ್‌, ಅರ್ಜುನ ರಣತುಂಗ, ಸಿದ್ಧಾರ್ಥ ವೆಟ್ಟಿಮುನಿ, ರೋಷನ್‌ ಮಹಾನಾಮ, ಹಸನ್‌ ತಿಲಕರತ್ನೆ, ಅಮರ ಡಿಸಿಲ್ವ, ಸಯ್ಯದ್‌ ಕಿರ್ಮಾನಿ, ರೋಜರ್‌ ಬಿನ್ನಿ ಹಾಗೂ ಜಾವಗಲ್‌ ಶ್ರೀನಾಥ್‌. ಆರು ಮಂದಿ ಕರ್ನಾಟಕದ ಕ್ರಿಕೆಟ್‌ ಸ್ಟಾರ್‌ಗಳು ತಂಡದಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಕುಂಬ್ಳೆ ಹಾಗೂ ದ್ರಾವಿಡ್‌ ಇಂಗ್ಲೆಂಡ್‌ ಪ್ರವಾಸದಲ್ಲಿದ್ದರೂ, ತಂಡದಲ್ಲಿ ಕರ್ನಾಟಕದ್ದೇ ಮೇಲುಗೈ.

ಸಿನಿತಾರೆಗಳ ತಂಡವೇನೂ ಕಡಿಮೆಯಿಲ್ಲ . ಸಿನಿಮಾ ಸೆಟ್ಟಲ್ಲೂ ಕ್ರಿಕೆಟ್‌ ಕಾಮೆಂಟರಿ ಕೇಳುವ, ಕ್ರಿಕೆಟ್ಟಲ್ಲೇ ಆಧ್ಯಾತ್ಮದ ನೆರಳು ಕಾಣುವ ವಿಷ್ಣುವರ್ಧನ್‌ ಈ ತಂಡಕ್ಕೆ ನಾಯಕ. ಉಳಿದಂತೆ- ಅಂಬರೀಷ್‌, ಪುನೀತ್‌, ಉಪೇಂದ್ರ, ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜಕುಮಾರ್‌, ಸುದೀಪ್‌, ರಮೇಶ್‌, ಅವಿನಾಶ್‌, ಸುಮಲತಾ, ಭಾರತಿ, ಪ್ರೇಮಾ ಹಾಗೂ ತಾರಾ ತಂಡದಲ್ಲಿದ್ದಾರೆ. (ಕೊನೆಯ ಕ್ಷಣದ ಬದಲಾವಣೆಗೆ ನಾವು ಜವಾಬ್ದಾರರಲ್ಲ ).

ಈಗ ಹೇಳಿ, ನಿಮ್ಮ ಓಟು ಯಾರಿಗೆ? ನಾಗರ ಹಾವು ಕಪ್‌ ಯಾರಿಗೆ ? ನಮ್ಮ ಓಟಂತೂ ಸಿನಿ ತಾರೆಗಳಿಗೆ. ನಮ್ಮ ನಿರ್ಧಾರ ರಿಸ್ಕ್‌ನಿಂದ ಕೂಡಿದೆ ಅನ್ನುವುದೂ, ಕ್ರಿಕೆಟ್‌ ಆಟಗಾರರದು ವೃತ್ತಿಪರ ತಂಡವೆನ್ನುವುದೂ ನಿಜ. ಆದರೆ ಇದು ಕ್ರಿಕೆಟ್ಟು . ನಮ್ಮ ಅಪ್ಪು , ಉಪ್ಪಿ , ಸುದೀಪ್‌ಗೂ ಕ್ರಿಕೆಟ್‌ ಗೊತ್ತು . ಅಂಬಿ ಹಾಗೂ ವಿಷ್ಣು ದಂಪತಿಗಳನ್ನು ಹೊರತುಪಡಿಸಿದರೆ ಹೆಚ್ಚೂಕಮ್ಮಿ ಬಿಸಿರಕ್ತದ ತಂಡ ಮೈದಾನಕ್ಕಿಳಿಯುತ್ತಿದೆ. ತಂಡದಲ್ಲಿ ಮಹಿಳಾಮಣಿಗಳಿರುವುದು ಕೂಡ ಗೆಲುವಿಗೆ ಅನುಕೂಲವಾಗಬಹುದು. ಪ್ರೇಮಾ, ತಾರಾ ಬ್ಯಾಟು ಹಿಡಿದಾಗ ಜೋರಾಗಿ ಬಾಲೆಸೆಯುವಷ್ಟು , ಅವರು ಹೊಡೆದ ಚೆಂಡನ್ನು ತಡೆಯುವಷ್ಟು ಕಲ್ಲು ಮನಸ್ಸಿನವರೇನು ನಮ್ಮ ಕ್ರಿಕೆಟಿಗರು :)

ಆಟದ ಫಲಿತಾಂಶ ಪಕ್ಕಕ್ಕಿಟ್ಟು , ಈ ರಾಕ್‌ಲೈನ್‌ ಉತ್ಸಾಹವನ್ನು ನೋಡಿ : ಸಿನಿಮಾ ಪ್ರಚಾರಕ್ಕಾಗಿ ಇಂಥದೊಂದು ಕ್ರಿಕೆಟ್‌ ಪಂದ್ಯ ನಡೆಯುತ್ತಿರುವುದು ಭಾರತೀಯ ಚಿತ್ರರಂಗದ ಮಟ್ಟಿಗೆ ಇದೇ ಮೊದಲು. ಕಪಿಲ್‌, ಚಂದ್ರಶೇಖರ್‌, ಬ್ರಿಜೇಶ್‌, ಜಿಆರ್ವಿ, ರಣತುಂಗ, ತಿಲಕರತ್ನ, ಮಹಾನಾಮರಂಥ ದಿಗ್ಗಜರನ್ನು - ಅವರಿಗೆದುರಾಗಿ ಕನ್ನಡ ಸಿನಿಮಾ ಸ್ಟಾರ್‌ಗಳನ್ನು ಮುಖಾಮುಖಿ ಆಗಿಸುವುದೆಂದರೇನು ತಮಾಷಿಯಾ? ಈ ಮಟ್ಟಿಗೆ ರಾಕ್‌ಲೈನ್‌ಗೊಂದು ಶಹಬ್ಭಾಸ್‌ಗಿರಿ.

ಈ ಪಂದ್ಯಕ್ಕೆ ಸಿನಿತಾರೆಯರ ಪರವಾಗಿ ವರನಟ ರಾಜ್‌ ಭಾಗವಹಿಸಿದ್ದರೆ ಹೇಗಿರುತ್ತಿತ್ತು ? ರಾಜ್‌ ಅಂದಕೂಡಲೇ ಯಾಕೋ ರಾಜ್ಯದಲ್ಲಿನ ಬರ ಕಣ್ಣೆದುರು ಬರುತ್ತಿದೆ. ಇದು ಸಿನಿಮಾ ಮಂಜರಿಯಾಯಿತು ಬಿಡಿ ; ಇಂಥದ್ದೇ ಒಂದು ಪಂದ್ಯವೋ ಅಥವಾ ರಸ ಮಂಜರಿಯೋ ಬರ ಪರಿಹಾರ ಕಾಮಗಾರಿಗಾಗಿ ನಡೆದಿದ್ದರೆ ಚೆನ್ನಾಗಿರುತ್ತಿತ್ತು , ಅಲ್ಲವಾ? ಇಂಥದೊಂದು ಕಾರ್ಯಕ್ರಮ ನಡೆದೀತೆ? ನಡೆದದ್ದೇ ಆದರೆ, ಆ ನಿಧಿ ಬಡವರಿಗೆ- ಬರ ಗ್ರಸ್ತರಿಗೆ ಸೋರಿಕೆಯಾಗದೆ ತಲುಪೀತೆ? ಯೋಚನೆಗಳು ಹೀಗೆ ಸಾಗುತ್ತವೆ..

English summary
Felicitation to Kapil, Vishi, Candru, brigesh Patel in KSCA bangalore on Aug 17, 2002. Festival cricket match between Kapil eleven and Vishnuvardhan eleven will be played. Winner gets Nagarahavu Cup, loosers get Dakota Express Cup !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada