»   » ಮಲಯಾಳಂನ ಖ್ಯಾತ ನಿರ್ದೇಶಕ ಅಡೂರ್‌ಗೆ ಫಾಲ್ಕೆ

ಮಲಯಾಳಂನ ಖ್ಯಾತ ನಿರ್ದೇಶಕ ಅಡೂರ್‌ಗೆ ಫಾಲ್ಕೆ

Posted By:
Subscribe to Filmibeat Kannada

ನವದೆಹಲಿ : ಪ್ರಸಕ್ತ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಮಲಯಾಳಂನ ಹೆಸರಾಂತ ಚಿತ್ರನಿರ್ದೇಶಕ ಅಡೂರ್‌ ಗೋಪಾಲಕೃಷ್ಣನ್‌ ಆಯ್ಕೆಗೊಂಡಿದ್ದಾರೆ.

ಸೃಜನಾತ್ಮಕ ಚಲನಚಿತ್ರ ನಿರ್ಮಾಣದಲ್ಲಿ ಎತ್ತಿದ ಕೈ ಎಂದೇ ಗುರ್ತಿಸಲ್ಪಡುವ ಸುಮಾರು 64ವರ್ಷದ ಅಡೂರ್‌ ಗೋಪಾಲಕೃಷ್ಣನ್‌ ಅವರಿಗೆ, ಭಾರತೀಯ ಚಲನಚಿತ್ರರಂಗದ ಅತ್ಯುನ್ನತ ಪ್ರಶಸ್ತಿ ಸಂದಿದೆ. ಕೇಂದ್ರ ಸರ್ಕಾರದ ಈ ಪ್ರಶಸ್ತಿಯನ್ನು 52ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರಿಂದ ಅವರು ಸ್ವೀಕರಿಸುವರು.

ಪದ್ಮಶ್ರೀ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರಿಗೆ ಸಂದಿವೆ. ಪುಣೆಯ ಚಲನಚಿತ್ರ ಮತ್ತು ದೂರದರ್ಶನ ತರಬೇತಿ ಸಂಸ್ಥೆಯಲ್ಲಿ ಪದವಿ ಪಡೆದ ನಂತರ ಅಡೂರ್‌, ತಿರುವನಂತಪುರದಲ್ಲಿ ಚಿತ್ರಕಲಾ ಸಿನಿಮಾ ಸಹಕಾರ ಸಂಸ್ಥೆಯನ್ನು 1965ರಲ್ಲಿ ಆರಂಭಿಸಿದರು.

ತಮ್ಮ ಮೊದಲ ನಿರ್ದೇಶನದ ‘ಸ್ವಯಂವರ’ ಚಿತ್ರಕ್ಕೆ ಸ್ವರ್ಣ ಕಮಲ ಪ್ರಶಸ್ತಿಯನ್ನು ಅಡೂರ್‌ ಪಡೆದಿದ್ದರು. ನಿಜಲ್‌ಕುತ್ತು , ಮುಖಾಮುಖಂ, ಎಳಿಪ್ಪದಾಯಂ, ಕಥಾಪುರುಷಂ, ವಿಧೇಯನ್‌, ಮತಿಲುಕಲ್‌ ಮತ್ತಿತರ ಮನೋಜ್ಞ ಚಿತ್ರಗಳ ಮೂಲಕ ಭಾರತೀಯ ಚಲನಚಿತ್ರರಂಗಕ್ಕೆ ಗಣನೀಯ ಸೇವೆ ಸಲ್ಲಿಸಿರುವ ಅಡೂರ್‌, ಲೇಖಕರಾಗಿ ಸಹಾ ಪರಿಚಿತರು. ಅಲ್ಲದೇ ಅನೇಕ ಗಮನಾರ್ಹ ಸಾಕ್ಷ್ಯಚಿತ್ರಗಳ ನಿರ್ಮಾಪಕರೂ ಹೌದು.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada