»   » ಪುಟಿದೇಳುವ ಕನಸುಗಳು ಈಗ ಮನನಕ್ಕೆ ಒಳಗಾಗುತ್ತಿವೆ.

ಪುಟಿದೇಳುವ ಕನಸುಗಳು ಈಗ ಮನನಕ್ಕೆ ಒಳಗಾಗುತ್ತಿವೆ.

Posted By: Super
Subscribe to Filmibeat Kannada

ಸೋತೋನು ನಾನೊಬ್ಬನೇ ಅಲ್ಲ, ಉಪ್ಪಿ, ರಜನಿಕಾಂತೂ ಇದ್ದಾರಲ್ಲ ! ಸೋಲಿನ ಕುರಿತು ಮಾತಿಗೆಳೆದರೆ ಕನಸುಗಾರ ರವಿಚಂದ್ರನ್‌ ತಮಗೆ ತಾವೇ ಸಮಾಧಾನ ಹೇಳಿಕೊಳ್ಳೋದು ಹೀಗೆ. ಹಾಗಂತ ರವಿ ಕನಸುಗಾರನ ಪಟ್ಟದಿಂದ ಕೆಳಗೇನೂ ಇಳಿದಿಲ್ಲ. ಈಗಲೂ ಅವರು ಹಿಡಿದು ನಿಂತಿರುವ ಏಣಿ ಆಕಾಶದತ್ತಲೇ ಮುಖ ಮಾಡಿದೆ. ತಾಳಿದವನು ಬಾಳಿಯಾನು ಅನ್ನುವುದು ಅವರ ಈಗಿನ ಮಂತ್ರ. ಕಾಣದ ಒಳ್ಳೆಯ ಕಥೆಗಾರ ಎಲ್ಲಿದ್ದಾನೆ ಅನ್ನುವುದು ಪ್ರಶ್ನೆ. ಮೂರು ತಿಂಗಳು ಚಿಂತನೆಗೇ ಮೀಸಲಿಟ್ಟಿರುವುದು ಬದಲಾಗಿರುವ ಅವರ ವರಸೆ.

ರಾಕೆಟ್‌ ವೇಗದ ಜಾಯಮಾನದ ರವಿಚಂದ್ರನ್‌ ಈಗ ದುಡುಕು ಬುದ್ಧಿಗೆ ಬಲಿಯಾಗಲು ಸಿದ್ಧರಿಲ್ಲ. ಆದರೂ ಏಕಾಂಗಿ ನೆನಪು ಕಾಡುವುದು ಬಿಡುತ್ತಿಲ್ಲ. ಕಂಠೀರವ ಸ್ಟುಡಿಯೋದಲ್ಲಿ ಒಂದು ದಿನ ಯಾರಿಗಾದರೂ ಬಾಡಿಗೆ ಕೊಡಲು 'ಏಕಾಂಗಿ" ಮನೆಯ ಸೆಟ್‌ ಕಾಯುತ್ತಿದೆ. ಆದರೆ ಬಾಡಿಗೆದಾರರಾರೂ ಇಲ್ಲ. 'ಶಕುನಿ" ಪೈಪ್‌ಲೈನಿನಲ್ಲಿದೆ. ಆದರೂ ಈಗಲೇ ತೊಡಗಿಕೊಳ್ಳುವ ಮನಸ್ಸಿಲ್ಲ. ಬಾಲಾಜಿಗೆ ಬೆಳಕು ತೋರಲು 'ಪ್ರೀತ್ಸೋಣ ಬಾ" ಶೂಟಿಂಗ್‌ ಶುರುಮಾಡಿದರೂ, ಆತ ಎಡವಟ್ಟು ಮಾಡಿಕೊಂಡು ಅದೂ ನೆನೆಗುದಿಗೆ ಬಿದ್ದಿದೆ. ಇದರ ನಾಯಕಿ ಆರತಿ ಛಾಬ್ರಿಯಾ ಕಾಲ್‌ಷೀಟು ಮತ್ತೆ ಸಿಗುವುದೂ ಸುಲಭವಲ್ಲ. ಯಾಕೆಂದರೆ, ಬಾಲಿವುಡ್‌ನಲ್ಲಿ ಅವಳಿಗೀಗ ಸಖತ್ತು ಆಫರ್‌.

ಇನ್ನು ಅದ್ಧೂರಿತನಕ್ಕೆ ನೀವು ಟಾಟಾ ಹೇಳುವಿರಾ ಅಂತ ರವಿಯನ್ನು ಕೆಣಕಿದರೆ,
'ಅದು ಸಾಧ್ಯಾನೇ ಇಲ್ಲ. ನಾನು ಬಿಳಿ ಆನೆ ಅಂತ ಅಪ್ಪಾಜಿ ಹೇಳ್ತಿದ್ದರು. ಬಾಬಾ, ದೇವದಾಸ್‌ನಂಥಾ ಚಿತ್ರ ಮಾಡಲು ನನಗೆ ಶಕ್ತಿಯಿಲ್ಲ ಅಂದ್ಕೋಬೇಡಿ. ಆದರೆ ಅಂಥ ಕಥೆ ಬೇಕು. ಕೊರತೆ ಇರೋದು ಸೊಗಸಾದ ಕಥೆಗಳಿಗೆ. 'ಪ್ರೇಮಲೋಕ" ಮಾಡೋ ಟೈಂನಲ್ಲಿ ಎನ್‌.ಎಸ್‌.ರಾವ್‌ ಅವರು ಹಂಸಲೇಖಾರನ್ನು ಪರಿಚಯಿಸಿದರು. ಕಥೆ- ಹಾಡು ಹಸನಾಗಿತ್ತು. ಚಿತ್ರ ಓಡಿತು. ಸಿನಿಮಾ ಕಥೆಗಾರರಿಗೆ ಫೀಸು ಜಾಸ್ತಿ ಕೊಡಬೇಕು. ಇಲ್ಲವಾದರೆ, ಅದೇ ಕಥೆಗಾರರು. ಕದ್ದು ತಂದ ಸರಕಿನ ಅವೇ ಜೊಳ್ಳು ಕಥೆಗಳು. ಒಳ್ಳೆಯ ಕಥೆಗಾರರು ಎಲ್ಲೋ ಇರ್ತಾರೆ..." ಇಷ್ಟು ಹೇಳಿ ರವಿ ಶೂನ್ಯವನ್ನು ದಿಟ್ಟಿಸುತ್ತಾ ನಿಲ್ಲುತ್ತಾರೆ.

ಇಷ್ಟಾಗಿಯೂ ಜನಮನ ಗೆಲ್ಲುವ ಅವರ ತಾಲೀಮು ತಾಚೊಂಡಿಲ್ಲ. 'ಪ್ರೀತ್ಸೋಣ ಬಾ" ಮುಗಿಸೋದು ಖರೆ. ಅದರಲ್ಲಿ ಮೂರು ರೀಲಲ್ಲಿ ತಾವು ಅಭಿನಯಿಸೋದು ದಿಟ. ಶ್ರದ್ಧೆಯಿಂದ 'ಶಕುನಿ"ಯನ್ನು ಹಸನಾಗಿಸೋದು ಕನಸು. ಇಷ್ಟಾಗಿಯೂ ಅದೇ 'ಏಕಾಂಗಿ" ಮನಸು. ಅದಕ್ಕೇ ರವಿ ಎಂದೆಂದೂ ಕನಸುಗಾರನೇ; ಆ ಕನಸುಗಳಿಗೆ ಸರಿಯಾದ ರೆಕ್ಕೆ ಪುಕ್ಕ ಚುಚ್ಚುವವರ ಕೊರತೆಯಿದೆ ಅಷ್ಟೆ !

English summary
Ravichandran to strike back again after 3 months short break !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada