»   » ಬಾಲಣ್ಣನ ನೆನಪಿಗೆ ಸುದೀಪ್‌ ಕಾಯಕಲ್ಪ !

ಬಾಲಣ್ಣನ ನೆನಪಿಗೆ ಸುದೀಪ್‌ ಕಾಯಕಲ್ಪ !

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಕಮಲ ಹಾಸನ್‌ ಅಭಿನಯದ ‘ಸ್ವಾತಿ ಮುತ್ಯಂ’ ಚಿತ್ರದ ಹಕ್ಕನ್ನು ತಂದು, ಅದನ್ನು ಕನ್ನಡದಲ್ಲಿ ರೀಮೇಕ್‌ ಮಾಡಲು ನಿರ್ಧರಿಸಿದ ಸುದೀಪ್‌ ನೇರವಾಗಿ ಹೊರಟಿದ್ದು ದಿವಂಗತ ಹಾಸ್ಯನಟ ಬಾಲಣ್ಣನವರ ಕನಸಿನ ಕೂಸು ಅಭಿಮಾನ್‌ ಸ್ಟುಡಿಯೋಗೆ. ಆದರೆ ಅಲ್ಲಿನ ದುಸ್ಥಿತಿ ನೋಡಿದ ನಂತರ ಕ್ಷಣ ಕಾಲ ದಂಗಾದರು. ಅಲ್ಲಿ ಬಾಲಣ್ಣನವರ ಚಿತಾಭಸ್ಮ ಚದುರಿ ಬಿದ್ದಿತ್ತು. ಅವರ ಸಮಾಧಿ ಕಟ್ಟಿಸುವ ಗೊಡವೆಗೂ ಯಾರೂ ಹೋಗಿರಲಿಲ್ಲ. ಸ್ಟುಡಿಯೋವಂತೂ ಅಕ್ಷರಶಃ ಅನಾಥ ಮಗುವಿನಂತಾಗಿತ್ತು. ಸುದೀಪ್‌ ಮನೆಗೆ ಮರಳಿದರು.

ಮರುದಿನ ಮತ್ತೆ ಅದೇ ಜಾಗಕ್ಕೆ ತೆರಳಿದರು. ಬಾಲಣ್ಣನವರ ನೆನಪು ಕಾಡಿತು. ಅವರ ಮನೆ ಹಾಗೂ ಅಭಿಮಾನ್‌ ಸ್ಟುಡಿಯೋಗೆ ಏನಾದರೂ ಮಾಡಬೇಕು ಅಂತ ನಿರ್ಧರಿಸಿದರು. ಹಿಂದೂಮುಂದೂ ನೋಡದೆ ರಿಪೇರಿ ಕೆಲಸಕ್ಕೆ ಮುಂದಾದರು. ಒಂದು ಕಡೆ ‘ಸ್ವಾತಿ ಮುತ್ತು’ ಚಿತ್ರೀಕರಣ. ಇನ್ನೊಂದು ಕಡೆ ರಿಪೇರಿ ಕಾಮಗಾರಿ.

‘ಇದು ಬಾಲಣ್ಣನವರಿಗೆ ನನ್ನ ಕಿರಿಯ ಕಾಣಿಕೆ ಅಂತ ನಾನು ಭಾವಿಸಿದ್ದೇನೆ. ಅವರ ನೆನಪಿಗಾಗಿ ಒಂದು ಸಮಾಧಿ ಕಟ್ಟಿಸುವ ಕೆಲಸಕ್ಕೂ ಒಪ್ಪಿಸಿದ್ದೇನೆ. ಎಲ್ಲದರ ವೆಚ್ಚ ಸುಮಾರು ಒಂದು ಒಂದೂವರೆ ಲಕ್ಷ ರುಪಾಯಿ ಆಗಬಹುದು. ಆದರೆ ಇಂಥ ಕೆಲಸ ಕೊಡುವ ಸಂತೋಷ ಅಷ್ಟಿಷ್ಟಲ್ಲ. ಇದ್ದಬದ್ದದ್ದನ್ನೆಲ್ಲ ಸ್ಟುಡಿಯೋಗಾಗಿ ಖರ್ಚು ಮಾಡಿ, ಸೋತು ಸುಣ್ಣವಾಗಿದ್ದ ಬಾಲಣ್ಣನವರ ಕನಸು ಅವರೊಟ್ಟಿಗೆಯೇ ಸತ್ತು ಹೋಗಿದೆಯಾ ಅಂತ ಅನ್ನಿಸಿತು. ಏನೇ ಆಗಲಿ ಇದೇ ಜಾಗದಲ್ಲಿ ಶೂಟಿಂಗ್‌ ಮಾಡಬೇಕು ಅಂತ ನನಗೆ ನಾನೇ ಚಾಲೆಂಜ್‌ ಮಾಡಿಕೊಂಡೆ. ಹಾಗಾಗಿ ಅಭಿಮಾನ್‌ ಸ್ಟುಡಿಯೋಗೆ ಬಣ್ಣ ಕೊಡುವ ಕೆಲಸಕ್ಕೆ ಕೈ ಹಚ್ಚಿದೆ.’ ಎನ್ನುತ್ತಾ ಸುದೀಪ್‌ ಭಾವುಕರಾದರು.

ಒರಿಜಿನಲ್‌ ಸ್ವಾತಿ ಮುತ್ಯಂನಲ್ಲಿ ರಾಧಿಕಾ ಕೊಟ್ಟಿರುವ ಅಭಿನಯವನ್ನು ಗಂಭೀರವಾಗಿ ನೋಡಿರುವ ಮೀನಾ, ಕನ್ನಡ ಚಿತ್ರದಲ್ಲಿ ಅವರ ಮಟ್ಟಕ್ಕೆ ನಿಲ್ಲುವ ಯತ್ನ ಮಾಡುವುದಾಗಿ ಹೇಳಿದರು. ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ ಖುಷಿಯಲ್ಲಿದ್ದ ನಿರ್ದೇಶಕ ಡಿ.ರಾಜೇಂದ್ರ ಬಾಬು, ಸುದೀಪ್‌ ಖಂಡಿತ ಕಮಲ ಹಾಸನ್‌ ಮಟ್ಟಕ್ಕೆ ನಿಲ್ಲುತ್ತಾರೆ ಅಂತ ಸರ್ಟಿಫಿಕೇಟ್‌ ಕೊಟ್ಟರು.

ಚಿತ್ರದ ನಟನೆಯ ಬಗೆಗೆ ಮಾತಾಡಿದ ಸುದೀಪ್‌, ಕಮಲ್‌ ಅವರ ಮಟ್ಟ ಮುಟ್ಟುವುದು ಅಸಾಧ್ಯ ಅನ್ನಿಸುತ್ತದೆ. ಆದರೆ, ಈ ಚಿತ್ರದಲ್ಲಿ ನಾನು ಅನುಕರಣೆಗಿಂತ ಹೆಚ್ಚಾಗಿ ನನ್ನದೇ ಆದ ಮ್ಯಾನರಿಸಂನಲ್ಲಿ ನಟಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಅಭಿಮಾನ್‌ ಸ್ಟುಡಿಯೋದ ರಿಪೇರಿ ಕೆಲಸ ಮಾಡುತ್ತಿದ್ದ ಮಂದಿ ಶೂಟಿಂಗ್‌ ಕ್ಷಣಗಳನ್ನೂ ಕಣ್ತುಂಬಿಕೊಳ್ಳುತ್ತಿದ್ದರು.

Post your views

ಇದನ್ನೂ ಓದಿ-
ಸುದೀಪ್‌ ಅರ್ಪಣೆ-ಕನ್ನಡದ ಸ್ವಾತಿಮುತ್ಯಂ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada