»   » ಪಾರ್ವತಕ್ಕ ಇಲ್ಲದಿದ್ದರೇ ಅಣ್ಣಾವ್ರು ಎಲ್ಲಿರ್ತಾಯಿದ್ದರು?

ಪಾರ್ವತಕ್ಕ ಇಲ್ಲದಿದ್ದರೇ ಅಣ್ಣಾವ್ರು ಎಲ್ಲಿರ್ತಾಯಿದ್ದರು?

Posted By:
Subscribe to Filmibeat Kannada


ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಈ ಮಾತು ಯಾರ ಬದುಕಿನಲ್ಲಿ ಎಷ್ಟು ಸತ್ಯವೋ, ವರನಟ ಡಾ.ರಾಜ್ ಬದುಕಿನಲ್ಲಿ ಮಾತ್ರ ನೂರಕ್ಕೆ ನೂರರಷ್ಟು ಸತ್ಯ. ಡಾ.ರಾಜ್ ಯಶಸ್ಸಿಗೆ ಅವರ ಪ್ರತಿಭೆ, ವಿನಯ, ಅದೃಷ್ಟ, ಪ್ರಯತ್ನ ಇವುಗಳ ಜೊತೆಗೆ ಪಾರ್ವತಮ್ಮ ಅವರ ಕೈವಾಡ ಇದ್ದೇ ಇದೆ. ಕನ್ನಡನಾಡಿಗೆ ಒಬ್ಬ ಒಳ್ಳೆ ನಟನನ್ನು ನೀಡಿದ ಪಾರ್ವತಮ್ಮ ಅವರಿಗೆ ಇಂದು(ಡಿ.6) ಹುಟ್ಟುಹಬ್ಬದ ಸಂಭ್ರಮ.

  • ಬಾಬು ಬಯಲುಸೀಮೆ

ಅಭಿಮಾನಿಗಳ ಪಾಲಿಗೆ ರಾಜ್ ಅಣ್ಣಾವ್ರು ಆದರೆ, ಪಾರ್ವತಮ್ಮ ಅಕ್ಕಾವ್ರು. ರಾಜ್ ನಿವಾಸ ಒಂದರ್ಥದಲ್ಲಿ ಶಕ್ತಿ ಸ್ಥಾನ. ಇವರು ಒಂದು ಕಾಲದಲ್ಲಿ ಗಾಂಧಿನಗರದ ಸಾಮ್ರಾಜ್ಞಿಯಂತೆ ಮೆರೆದವರು. ಒಂದೊಂದು ಸಲ ಪಾರ್ವತಮ್ಮ ಅವರದು ಸ್ವಲ್ಪ ಅತಿಯಾಯಿತು ಎಂದು ಗಾಂಧಿನಗರದಲ್ಲಿ ಕೆಲವರು ಗೊಣಗುತ್ತಾರೆ. ಚಿತ್ರ ನಿರ್ಮಾಣ ಸೇರಿದಂತೆ ಅನೇಕ ಮಹತ್ವದ ಹಣಕಾಸಿನ ಜವಾಬ್ದಾರಿಗಳನ್ನು ತಲೆ ಮೇಲೆ ಹಾಕಿಕೊಂಡಾಗ, ಸ್ವಲ್ಪ ಅತಿ ಇದ್ದದ್ದೇ. ಅದು ಸಹಜ.

ಮನೆ,ಮಕ್ಕಳು, ಸಂಸಾರ,ದುಡ್ಡುಕಾಸು ಮತ್ತಿತರ ತಾಪತ್ರಯಗಳನ್ನು ಪಾರ್ವತಮ್ಮ ಮಡಿಲಿಗೆ ಹಾಕಿಕೊಂಡರು. ರಾಜ್ ಸುತ್ತಲೂ ಕೋಟೆ ಕಟ್ಟಿ, ವೈರಿಗಳ ಆಕ್ರಮಣದಿಂದ ರಕ್ಷಿಸಿದರು. ಸಂಸಾರ ತಾಪತ್ರಯಗಳ ಬಂಧನದಿಂದ ಹೊರಬಂದ ರಾಜ್, ಚಿತ್ರರಂಗದಲ್ಲಿ ಸಾಧನೆ ಮೆಟ್ಟಿಲೇರಲು ಸುಲಭವಾಯಿತು. ನಂತರ ಅವರು ಸಾಧುವಾದದ್ದು, ಸಂತನಾದದ್ದು, ಬಂಗಾರದ ಮನುಷ್ಯನಾದದ್ದು, ಬೆವರ ಮನುಷ್ಯನಾದದ್ದು ಇವೆಲ್ಲವೂ ಕನ್ನಡಿಗರಿಗೆ ನೆನಪಿದೆ. ಸಾಧನೆಯ ಪ್ರತಿ ಮೆಟ್ಟಿಲಲ್ಲೂ ಜೊತೆಯಲ್ಲಿದ್ದವರು ಪಾರ್ವತಮ್ಮ. ರಾಜ್ ಉಸಿರಲ್ಲಿ ಉಸಿರಾಗಿದ್ದರು ಪಾರ್ವತಮ್ಮ.

1953ರ ಜೂನ್ 25ರಂದು ಪಾರ್ವತಮ್ಮನವರ ಮದುವೆಯಾಯಿತು. ಆ ಮೇಲೆ ಅವರು 5ಮಕ್ಕಳ ತಾಯಿಯಾದರು. ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ , ಪುನೀತ್ ರಾಜ್‍ಕುಮಾರ್ ಅಪ್ಪನ ಹಾದಿಯಲ್ಲಿ ಸಾಗುತ್ತಿದ್ದಾರೆ. ಹೆಣ್ಣು ಮಕ್ಕಳಾದ ಪೂರ್ಣಿಮಾ ಹಾಗು ಲಕ್ಷ್ಮಿ ಅವರದು ಸಂತಸದ ಕುಟುಂಬ. ಇನ್ನು ವಜ್ರೇಶ್ವರಿ, ನಿರುಪಮಾ ಕಂಬೈನ್ಸ್, ಪೂರ್ಣಿಮಾ ಎಂಟರ್ ಪ್ರೈಸಸ್ ಸಂಸ್ಥೆಯಡಿಯಲ್ಲಿ ಹಲವಾರು ಸದಭಿಯರುಚಿಯ ಕನ್ನಡ ಚಲನಚಿತ್ರಗಳನ್ನು ಪಾರ್ವತಮ್ಮ ನಿರ್ಮಾಣ ಮಾಡಿದ್ದಾರೆ.

ಪತಿದೇವರು ಇಲ್ಲ ಅನ್ನುವುದನ್ನು ಬಿಟ್ಟರೇ, ಈಗ ಒಂದರ್ಥದಲ್ಲಿಪಾರ್ವತಮ್ಮ ಅವರದು ತುಂಬಿದ ಬದುಕು. ಎಲ್ಲವೂ ಸರಿ. ಅಣ್ಣಾವ್ರ ಹೆಸರು ಉಳಿಸುವಂಥ ಕನ್ನಡ ಪರ ಸಾರ್ಥಕ ಮತ್ತು ಶಾಶ್ವತ ಕೆಲಸವನ್ನು ಪಾರ್ವತಮ್ಮ ಮಾಡಬೇಕಾಗಿದೆ. ಆ ಶಕ್ತಿ ಅವರಿಗಿದೆ. ಅದು ಅವರ ಹೆಗಲ ಮೇಲಿನ ಜವಾಬ್ದಾರಿಯಲ್ಲ, ರಾಜ್ ಮೇಲಿನ ಕನ್ನಡಿಗರ ಪ್ರೀತಿಗೆ ರಸೀದಿ ನೀಡುವಂತಹ ಕರ್ತವ್ಯ. ಆ ಕೆಲಸ ಆಗಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada