»   » ಅಂದ-ಪ್ರತಿಭೆ ಇದ್ದರೂ ಗುಲಗಂಜಿಯಷ್ಟು ಅದೃಷ್ಟ ಕಡಿಮೆ

ಅಂದ-ಪ್ರತಿಭೆ ಇದ್ದರೂ ಗುಲಗಂಜಿಯಷ್ಟು ಅದೃಷ್ಟ ಕಡಿಮೆ

Posted By: Staff
Subscribe to Filmibeat Kannada

ಈ ಟೀವಿ, ಉದಯ, ಇಎಸ್‌ಪಿಎನ್‌ ಎಂದು ಚಾನಲ್ಲಿನ ಗುಂಡಿ ಒತ್ತುತ್ತ ಚಂದನಕ್ಕೆ ಬಂದಾಗ(ಡಿ.3 ರಂದು) ಆಶ್ಚರ್ಯ ಕಾದಿತ್ತು. ಅದು ಸಿನಿಮಾ. ದೃಶ್ಯ : ನಗರದಿಂದ ಬಂದ ಹೆಣ್ಣುಮಗಳೊಬ್ಬಳು ನಡೆಸುತ್ತಿದ್ದ ಲಂಬಾಣಿ ತಾಂಡಾದವರ ಮೀಟಿಂಗು.

'ಈ ನಾಯಕನ ನಂಬಿ ಎಷ್ಟು ಕಾಲ ಬದುಕುತ್ತೀರಿ. ಅವನದೆಲ್ಲ ಓಟಿನ ರಾಜಕೀಯ. ಇಷ್ಟು ದಿನ ಮೋಸ ಹೋಗಿದ್ದು ಸಾಕು. ಭೂಮಿ ತಾಯಿ ಬೆಳೆ ಬೆಳೀತಾಳೆ. ಆಕಾಶ ಮಳೆ ಸುರಿಸುತ್ತದೆ. ನಿಮ್ಮ ಪೂರ್ವಿಕರು ಮಾಡುತ್ತಿದ್ದಂತೆ ಬೇಸಾಯ ಮಾಡಿ. ಕೆರೆಗಳಲ್ಲಿ ನೀರು ಶೇಖರಿಸಿ. ನಾವೆಲ್ಲ ಬೆವರು ಸುರಿಸಿ ಭೂಮಿ ತಾಯಿಯನ್ನು ಹಸಿರುಮಾಡೋಣ.."

ನಗರದ ಹೆಣ್ಣು ಮಗಳು ಉದ್ದನೆಯ ಭಾಷಣವನ್ನು ತಪ್ಪಿಲ್ಲದೆ ಒಪ್ಪಿಸಿದಳು. ಲಂಬಾಣಿ ಹೆಣ್ಣುಮಕ್ಕಳೇನೊ ಆಕೆ ಹೇಳಿದ್ದನ್ನು ಒಪ್ಪಿಕೊಂಡರು. ನಾಯಕನ ಹೆಂಡತಿಯೂ ಹ್ಞೂಗುಟ್ಟಿದಳು. ಆದರೆ, ನಾಯಕನ ಚೇಲಾಗಳು ತಮ್ಮ ತಾಂಡಾದ ಜನರ ತಲೆ ಕೆಡಿಸಲು ಹೊರಟವಳನ್ನು ಚೆನ್ನಾಗಿ ತದಕಿದರು...

ಇನ್ನೇನು ಆಗಲೋ ಈಗಲೋ ಹೊರಡುವ ರೈಲು. ತಾಂಡದ ಗಂಡಸರಿಂದ ಪೆಟ್ಟು ತಿಂದ ಹುಡುಗಿ ರೈಲಿನ ಡಬ್ಬಿಯಲ್ಲಿ ಕುಳಿತಿದ್ದಾಳೆ. ಮುಖದಲ್ಲಿ ಮಡುಗಟ್ಟಿದ ವಿಷಾದ. ಇನ್ನೇನು ರೈಲು ಹೊರಡಬೇಕೆನ್ನುವಾಗ ಚಿಟಪಟ ಮಳೆಹನಿ. ಆವರೆಗೆ ಮೌನದ ಚಿಪ್ಪಿನಲ್ಲಿ ಹುದುಗಿದ್ದ ಹುಡುಗಿ ಮಳೆ ಹನಿ ಕಾಣುತ್ತಿದ್ದಂತೆ ಖುಷಿಯಾಗುತ್ತಾಳೆ. ಎರಡೂ ಕೈಗಳನ್ನು ಕಿಟಕಿಯಿಂದ ಹೊರ ಒಡ್ಡಿ, ಬೊಗಸೆ ತುಂಬಿದ ಮಳೆ ಹನಿಗಳನ್ನು ಪುಟ್ಟ ಹುಡುಗಿಯಂತೆ ಮುಖಕ್ಕೆ ಎರಚಿಕೊಳ್ಳುತ್ತಾಳೆ. ಅಲ್ಲಿಗೆ ಸಿನಿಮಾ ಮುಗಿಯುತ್ತದೆ.

ಇದು ಅಲೆಮಾರಿ ಸಿನಿಮಾದ ಕಥೆ. 'ದೇವೀರಿ" ಮೂಲಕ ಅಪಾರ ಭರವಸೆ ಹುಟ್ಟಿಸಿದ ಕವಿತಾ ಲಂಕೇಶ್‌ ನಿರ್ದೇಶನದ ಎರಡನೇ ಚಿತ್ರ. ಫಿಲಂ ಡಿವಿಜನ್‌ ನಿರ್ಮಿಸಿದ ಈ ಸಿನಿಮಾ ತೆರೆ ಕಂಡಿಲ್ಲ . ಅಲೆಮಾರಿಯನ್ನ ಫಿಲಂ ಡಿವಿಜನ್‌ ಕೊಲ್ಲುತ್ತಿದೆ ಎಂದು ಕವಿತಾ ಗೋಳಾಡಿ ತುಂಬಾ ದಿನಗಳಾಯಿತು. ಕವಿತಾ ಕೂಡ ಅಲೆಮಾರಿಯನ್ನು ಮರೆತಿರಬೇಕು. ಈ ಸಿನಿಮಾ ಮೊನ್ನೆ ಯಾರಿಗೂ ಗೊತ್ತಾಗದಂತೆ ಚಂದನ ವಾಹಿನಿಯಲ್ಲಿ ಪ್ರಸಾರವಾಯಿತು. ಯಾರೂ ನೋಡಬಾರದೆಂದು ಚಂದನ ವಾಹಿನಿ ಹಾಗೂ ಫಿಲಂ ಡಿವಿಜನ್‌ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದವು.

ಸಿನಿಮಾ ನಿರ್ಮಾಣದ ಕಥೆಯನ್ನು ಮರೆತು ನೋಡಿದರೆ ಅಲೆಮಾರಿ ಒಳ್ಳೆಯ ಸಿನಿಮಾ. ಆರ್ಟ್‌ ಸಿನಿಮಾದಂತೆ ಕಾಣುವ ಅಲೆಮಾರಿಯ ತಾರಾಗಣ ಯಾವ ಕಮರ್ಷಿಯಲ್‌ ಸಿನಿಮಾಗೂ ಕಡಿಮೆಯಿಲ್ಲ . ನಗರದ ಹುಡುಗಿಯಾಗಿ ಭಾವನಾ, ತಾಂಡಾದ ಪುಢಾರಿ ನಾಯಕನಾಗಿ ಪ್ರಕಾಶ್‌ ರೈ, ನಾಯಕನ ಹೆಂಡತಿಯಾಗಿ ಅನು ಪ್ರಭಾಕರ್‌, ಲಂಬಾಣಿ ಹಿರೀಕಳಾಗಿ ಬಿ.ಜಯಶ್ರೀ ನಟಿಸಿರುವ ಚಿತ್ರವಿದು. ಒಬ್ಬರಿಗಿಂತ ಒಬ್ಬರು ಚೆನ್ನಾಗಿ ನಟಿಸಿದ್ದಾರೆ. 'ಅಲೆಮಾರಿ" ಚಿತ್ರದಲ್ಲಿ ಭಾವನಾ ಬೇರೆಯೇ ಆಗಿ ಕಾಣುತ್ತಾಳೆ. ಇತ್ತೀಚಿನ ಸಿನಿಮಾಗಳಲ್ಲಿ ದೇಹವನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಭಾವನಾ- ಅಲೆಮಾರಿಯಲ್ಲಿ ಕಲಾವಿದೆ ಅನ್ನಿಸಿಕೊಂಡಿದ್ದಾಳೆ.

ಹಾಗೆ ನೋಡಿದರೆ ಭಾವನಾ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದೇ ಸದಭಿರುಚಿಯ ಚಿತ್ರಗಳ ಮೂಲಕ. 'ಮಾರಿಬಲೆ", ನಂತರದ 'ಚಂದ್ರಮುಖಿ ಪ್ರಾಣಸಖಿ" ಭಾವನಾಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದವು. ತಮಿಳು ತೆಲುಗಿಗೂ ಭಾವನಾ ಹೋಗಿಬಂದಳು. ಇದೇ ಹೊತ್ತಿನಲ್ಲಿ 'ದೇವೀರಿ"ಯಂಥ ಅಪರೂಪದ ಚಿತ್ರದಲ್ಲಿ ಸಿನಿಮಾದ ಕನಸು ಹೊತ್ತ ಸ್ಲಂ ಹುಡುಗಿಯ ಪಾತ್ರದಲ್ಲಿ ಭಾವನಾ ಮಿಂಚಿದ್ದರು.

ಅದೇಕೊ ಏನೊ ಒಳ್ಳೆಯ ಕಲಾವಿದೆ ಅನ್ನಿಸಿಕೊಂಡರೂ ಭಾವನಾಗೆ ಅವಕಾಶಗಳು ಹುಡುಕಿಕೊಂಡು ಬರಲಿಲ್ಲ. ಶ್ರುತಿ, ಸುಧಾರಾಣಿಗಿಂತ ಚೆಂದಿದ್ದರೂ, ಪ್ರತಿಭೆಯಲ್ಲಿ ಸಮಸಮ ಅನ್ನುವಂತಿದ್ದರೂ ಅವರ ಹತ್ತಿರಕ್ಕೂ ಹೋಗಲಾಗಲಿಲ್ಲ. ಇನ್ನೇನು ಭಾವನಾ ತೆರೆಮರೆಗೆ ಸರಿದಳು ಅನ್ನುವಾಗ್ಗೆ - ಆಕೆ ಎರಡನೇ ಇನಿಂಗ್ಸ್‌ ಆರಂಭಿಸಿದ್ದು 'ನಿನಗಾಗಿ" ಚಿತ್ರದ ಮೂಲಕ.

'ನಿನಗಾಗಿ" ಚಿತ್ರದ ರೋಚಕ ನೃತ್ಯದ ಹಾಡು ಭಾವನಾಗೆ ಮತ್ತೆ ಅವಕಾಶಗಳ ಬಾಗಿಲು ತೆರೆಯಿತು. ಭಾವನಾ ಎನ್ನುವ ಕಲಾವಿದೆ ರೋಚಕ ನೃತ್ಯಗಳ ಅತಿಥಿ ನಟಿಯಾಗಿ ಬದಲಾಗಿದ್ದು ನಿನಗಾಗಿ ಚಿತ್ರದ ಮೂಲಕವೆ.

'ಕುರಿಗಳು ಸಾರ್‌ ಕುರಿಗಳು", 'ಸೂಪರ್‌ ಪೊಲೀಸ್‌", 'ಹಲೋ", 'ರಾಂಗ್‌ ನಂಬರ್‌" ಚಿತ್ರಗಳು ಭಾವನಾಗೆ ರತಿ ವರ್ಚಸ್ಸಿನ ನಟಿಯ ಪಟ್ಟ ಕಟ್ಟಿದವು. ಇದೆಲ್ಲಾ ಏನು ಭಾವನಾ ಅನ್ನಿ- 'ನನಗೆ ಇದೆಲ್ಲಾ ಇಷ್ಟವಿಲ್ಲ ; ಆದರೂ ಮಾಡಿದೆ ಅಷ್ಟೇ" ಎಂದು ಭಾವನಾ ನಗುತ್ತಾರೆ. ನಗುವಿನ ಆಳ ಬಲ್ಲವರಾರು ?

ಭಾವನಾ ಏಳುಬೀಳುಗಳನ್ನು ಗಮನಿಸಿದಾಗ ನಟಿ ತಾರಾ ನೆನಪಾಗುತ್ತಾರೆ. ನಾಯಕಿಯಾಗಲು ಬಯಸಿ, ತಂಗಿ-ಗೆಳತಿ ಪಾತ್ರಗಳಲ್ಲಿಯೇ ಕೊರಗಿ, ಈವರೆಗೂ ನಾಯಕಿಯಾಗದ ದುರದೃಷ್ಟ ಪ್ರತಿಭಾವಂತೆ ತಾರಾ. ಅವಕಾಶಗಳಿಗಾಗಿ ಆಕೆಯೂ ಬಟ್ಟೆ ಬಿಚ್ಚಿದ್ದುಂಟು. ಯದ್ವಾತದ್ವಾ ಕುಣಿದುದುಂಟು. ಎಲ್ಲವೂ ವಿಫಲವಾಗಿ ಕೊನೆಗೆ ತಾರಾ ನೆಲೆ ನಿಂತದ್ದು - ಕಾನೂರು ಹೆಗ್ಗಡತಿ, ಮುನ್ನುಡಿ, ಮತದಾನಗಳಂಥ ಚಿತ್ರದಲ್ಲಿ.

ಭಾವನಾ ಈಗ ಬರಗೂರು ರಾಮಚಂದ್ರಪ್ಪನವರ 'ಕ್ಷಾಮ" ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬರಗೂರು ಅವರದೇ ಕಥೆಯನ್ನು ಆಧರಿಸಿದ ಚಿತ್ರವಿದು. ಕಥೆ ಚೆನ್ನಾಗಿದೆ, ಪ್ರಶಸ್ತಿ ಬಂದರೂ ಬರಬಹುದು ಎಂದು ಸ್ವತಃ ಭಾವನಾ ಹೇಳುತ್ತಿದ್ದಾರೆ. ಚಿತ್ರದಲ್ಲಿ ಭಾವನಾ ಪರ್‌ಫಾರ್ಮೆನ್ಸ್‌ ಚೆನ್ನಾಗಿದೆ ಎಂದು ಗಾಂಧಿ ನಗರ ಮಾತನಾಡುತ್ತಿದೆ. 'ಕ್ಷಾಮ"ದ ನಂತರವಾದರೂ ಭಾವನಾಗೆ ಸದಭಿರುಚಿಯ ಪಾತ್ರಗಳ ಕ್ಷಾಮ ನೀಗಿತೇ?

English summary
May prosperous opportunities come to you Bhavana

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada