»   » ಗೆಲುವಿಗಾಗಿ ತಹತಹಿಸುತ್ತಿರುವ ಉಪ್ಪಿ-ರಾಮು

ಗೆಲುವಿಗಾಗಿ ತಹತಹಿಸುತ್ತಿರುವ ಉಪ್ಪಿ-ರಾಮು

Posted By: Staff
Subscribe to Filmibeat Kannada

ಕೋಟಿ ನಿರ್ಮಾಪಕ ರಾಮು ನಿರ್ಮಾಣದ ಹಾಗೂ ಉಪೇಂದ್ರ ಅಭಿನಯದ ಮಹತ್ವಾಕಾಂಕ್ಷೆಯ ಚಿತ್ರ 'ಹಾಲಿವುಡ್‌" ಶುಕ್ರವಾರ (ಡಿ.6) ತೆರೆ ಕಂಡಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಉಪೇಂದ್ರ 'ಹಾಲಿವುಡ್‌" ಮೂಲಕ ವಾದರೂ ಗೆಲ್ಲುವರಾ?

'ಹಾಲಿವುಡ್‌" ಗೆಲ್ಲುತ್ತದೋ ಇಲ್ಲವೋ, ಗೆಲುವಿಗಾಗಿ ರಾಮು ಅವರಂತೂ ಎಲ್ಲ ಪ್ರಯತ್ನಗಳನ್ನೂ ನಡೆಸಿದ್ದಾರೆ. ಉಪೇಂದ್ರರಿಗೆ ಮಾತ್ರವಲ್ಲ, ರಾಮುಗೆ ಕೂಡ 'ಹಾಲಿವುಡ್‌" ಜೀವನ್ಮರಣದ ಪ್ರಶ್ನೆ. ನಾಯಕಿ, ಚಿಂಪಾಂಜಿ, ನಿರ್ದೇಶಕರಾದಿಯಾಗಿ ನೂರೆಂಟು ಕಾರಣಗಳಿಂದಾಗಿ ಗಣೇಶನ ಮದುವೆಯಂತಾಗಿದ್ದ 'ಹಾಲಿವುಡ್‌" ನಿರ್ಮಾಣಕ್ಕೆ ವೆಚ್ಚವಾಗಿರುವುದು ಅಂದಾಜು ಏಳು ಕೋಟಿ ರುಪಾಯಿ. ಬಂಡವಾಳ ವಾಪಸ್ಸು ಬರದಿದ್ದರೆ ಚೇತರಿಸಿಕೊಳ್ಳುವುದು ಕಷ್ಟ ಅನ್ನುವುದು ರಾಮುಗೆ ಗೊತ್ತಿದೆ.

'ಹಾಲಿವುಡ್‌" ನೂರು ದಿನ ಓಡದಿದ್ದರೆ ಹಾಕಿದ ದುಡ್ಡು ವಾಪಸ್ಸಾಗುವುದು ಕಷ್ಟ. ಅದಕ್ಕಾಗಿಯೇ ತಮ್ಮ ಚಿತ್ರದ ಪ್ರಚಾರವನ್ನು ರಾಮು ಖುದ್ದು ವಹಿಸಿಕೊಂಡಿದ್ದಾರೆ. ಉಪೇಂದ್ರ ಅಭಿನಯದ ಚಿತ್ರಗಳೆಂದರೆ ಓಪನಿಂಗ್‌ ಚೆನ್ನಾಗಿರುತ್ತೆ . ಇದರ ಉಪಯೋಗವನ್ನು ಪಡೆದುಕೊಳ್ಳಲಿಕ್ಕಾಗಿ ಉಪೇಂದ್ರ ಸಿನಿಮಾಗಳು ಹೆಚ್ಚಿನ ಥಿಯೇಟರ್‌ನಲ್ಲಿ ಬಿಡುಗಡೆಯಾಗುವುದು ಮಾಮೂಲು. ಆದರೆ, ಇದೇ ಮೊದಲ ಬಾರಿಗೆ ಉಪೇಂದ್ರರ ಚಿತ್ರ ಕಡಿಮೆ ಥಿಯೇಟರ್‌ಗಳಲ್ಲಿ ತೆರೆ ಕಾಣುತ್ತಿದೆ. ಕಡಿಮೆ ಥಿಯೇಟರ್‌ಗಳಲ್ಲಿ ಹೆಚ್ಚು ದಿನ ಓಡಲಿ ಅನ್ನುವುದು ರಾಮು ಲೆಕ್ಕಾಚಾರ.

ಉಪೇಂದ್ರರ ಹಿಂದಿಕ್ಕಿದ ಕೋತಿ
ವಿಪರ್ಯಾಸ ಅನ್ನುವುದು ಇದೇ ನೋಡಿ. 'ಹಾಲಿವುಡ್‌" ಚಿತ್ರದಲ್ಲಿ ಉಪೇಂದ್ರ ನಾಯಕರಾದರೂ, ಪ್ರಚಾರದಲ್ಲಿ ಹೀರೋ ಆಗಿರುವುದು 'ಕೋತಿ"! ಮೇಲುಕೋಟೆಯ ಸೀನು ಎನ್ನುವ ನಾಮಧೇಯದ ಕೋತಿ 'ಹಾಲಿವುಡ್‌" ಸಿನಿಮಾದ ಪ್ರಮುಖ ಆಕರ್ಷಣೆ, ಕೋತಿಯ ನಂತರವಷ್ಟೇ ಉಪೇಂದ್ರ ಎಂದು ಗಾಂಧಿನಗರ ಕಿಸಕ್ಕೆನ್ನುತ್ತಿದೆ.

ನಿರ್ಮಾಪಕ ರಾಮು ಕೂಡ ಸೀನು ಕೋತಿಗೆ ಹೆಚ್ಚು ಪ್ರಚಾರ ಕೊಡುತ್ತಿದ್ದಾರೆ.

'ಹಾಲಿವುಡ್‌" ಪ್ರಚಾರಕ್ಕೆಂದು ಉದಯ ಟೀವಿಯಲ್ಲಿ ಏರ್ಪಾಡಾಗಿರುವ ವಿಶೇಷ ಕಾರ್ಯಕ್ರಮದಲ್ಲೂ ಕೋತಿ ಸೀನುವೇ ಹೈಲೈಟ್‌. 'ಉದಯ ಟೀವಿಯಲ್ಲಿ ಹಾಲಿವುಡ್‌ ಸೀನುವಿನ(ಕೋತಿ) ವಿಶೇಷ ಸಂದರ್ಶನವನ್ನು ನೋಡಲು ಮರೆಯದಿರಿ" ಎಂದು ರಾಮು ಜಾಹಿರಾತು ನೀಡಿದ್ದಾರೆ. ಉಪೇಂದ್ರ ಮುಸಿಮುಸಿ ಅಳುತ್ತಿದ್ದಾರೇನೊ?

English summary
Hollywood monkey takes over Upendra

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada