ದರ್ಶನ್ ಬಿಡುಗಡೆ ರೂವಾರಿ ನಿರ್ಮಾಪಕ ಬಿ. ಮಹಾದೇವ್!

ತಮ್ಮ ಮೆಚ್ಚಿನ ನಟನ ಆಗಮನಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ, ಅವರ ಅಭಿಮಾನಿಗಳು. ಹೂವು, ಹೂವಿನ ಹಾರ ಕೈಯಲ್ಲಿ ಹಿಡಿದು ಈಗಿನಿಂದಲೇ ಘೋಷಣೆ ಕೂಗತೊಡಗಿದ್ದಾರೆ, ಜೈಲಿನ ಸುತ್ತ ಜಮಾಯಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗೆ, ಸಂತೋಷಕ್ಕೆ ಮೂಲ ಕಾರಣಕರ್ತರು ಯಾರು ಎಂಬುದು ರಹಸ್ಯವಾಗಿಯೇ ಉಳಿದಿದೆ. ಜಾಮೀನಿಗೆ ಕೋರ್ಟ್ ಆದೇಶದ ಪ್ರಕಾರ ರು. 25,000 ಶ್ಯೂರಿಟಿ ಬಾಂಡ್ ಸಲ್ಲಿಸಿ, ಕಾನೂನಿನ ಸಂಪೂರ್ಣ ಜವಾಬ್ದಾರಿ ಹೊತ್ತು ದರ್ಶನ್ ನನ್ನು ಜೈಲಿನಿಂದ ಮುಕ್ತಿಗೊಳಿಸಿದವರು "ಚಿಂಗಾರಿ" ಸಿನಿಮಾದ ನಿರ್ಮಾಪಕರಾದ ಬಿ. ಮಹಾದೇವ್.
ಈಗಾಗಲೇ ಶೇ. 75 ರಷ್ಟು ಶೂಟಿಂಗ್ ಮುಗಿಸಿ ನಿರ್ಮಾಣ ಹಂತದಲ್ಲಿರುವ "ಚಿಂಗಾರಿ" ನಿರ್ಮಾಪಕರಲ್ಲೊಬ್ಬರು ಈ ಬಿ. ಮಹದೇವ್. ಇನ್ನೊಬ್ಬ ನಿರ್ಮಾಪಕರು ಅವರ ಮಗ ಮನು. ಇವರ ಶ್ಯೂರಿಟಿ, ದರ್ಶನ್ ಅವರನ್ನು ಜೈಲಿನಿಂದ ಮನೆಗೆ, ಮತ್ತೆ ಮರಳಿ ಚಿತ್ರರಂಗಕ್ಕೆ ಮರಳುವಂತೆ ಮಾಡಿದೆ ಎಂಬುದು ಸತ್ಯಸಂಗತಿ!
ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೂ ಪ್ರಚಲಿತದಲ್ಲಿರುವ ಒಂದು ಮಾತು " ನಿರ್ಮಾಪಕರೇ ಚಿತ್ರದ ಬೆನ್ನೆಲುಬು. ನಿರ್ಮಾಪಕರೇ ಚಿತ್ರರಂಗಕ್ಕೆ ಅನ್ನದಾತರು" ಈ ಮಾತನ್ನು ಮತ್ತೊಮ್ಮೆ ಈ ಮೂಲಕ ಸಾಬೀತುಪಡಿಸಿದ್ದಾರೆ ಮಹಾದೇವ್.
ಚಿತ್ರರಂಗದ ಅನಿವಾರ್ಯ ಅಂಗವಾದ ನಟನೊಬ್ಬ ಜೈಲುಪಾಲಾಗುವುದನ್ನು ತಪ್ಪಿಸಿ ಅವರ ಕುಟುಂಬಕ್ಕೂ, ಅಭಿಮಾನಿಗಳಿಗೂ ಹರ್ಷ ತಂದುಕೊಟ್ಟ ಮಹಾದೇವ್ ದರ್ಶನ್ ಪಾಲಿಗೆ "ಹೀರೋ" ಆಗಿದ್ದಾರೆಂದರೆ ಅತಿಶಯೋಕ್ತಿ ಅಲ್ಲ.., ದರ್ಶನ್ ಅಭಿಮಾನಿಗಳಿಗೂ ಕೂಡ!


Click it and Unblock the Notifications











