»   » ಸ್ಲಂ ಬಾಲನ ಕನಸಲ್ಲಿ ರಾಷ್ಟ್ರಪ್ರಶಸ್ತಿ!

ಸ್ಲಂ ಬಾಲನ ಕನಸಲ್ಲಿ ರಾಷ್ಟ್ರಪ್ರಶಸ್ತಿ!

Subscribe to Filmibeat Kannada
Duniya vijay interview
ಸುಮನಾ ಕಿತ್ತೂರು ಚೊಚ್ಚಿಲು ನಿರ್ದೇಶನದ 'ಸ್ಲಂ ಬಾಲ" ತೆರೆಕಂಡಿದೆ. ಬಹುದಿನಗಳ ನಂತರ ತಮ್ಮ ಚಿತ್ರ ತೆರೆಕಂಡಿರುವ ಖುಷಿ ನಟ ವಿಜಯ್‌ಗೆ. ಅಭಿನಂದನೆ-ಶುಭಾಶಯಗಳ ಸುರಿಮಳೆಯ ನಡುವೆಯೂ ವಿಜಯ್ ದಟ್ಸ್‌ಕನ್ನಡದ ಪ್ರಶ್ನಾವಳಿಗೆ ಉತ್ತರದ ಕೊಡೆ ಹಿಡಿದರು.

*ಜಯಂತಿ

'ಸ್ಲಂ ಬಾಲ" ಮತ್ತೊಂದು ದುನಿಯಾ ಆಗುತ್ತಾ?
ವಿಜಯ್ ನಕ್ಕರು. ಗೆಲುವಿನ ಅಪಾರ ನಿರೀಕ್ಷೆಗಳು ಮೂಡಿಸಿದ್ದ 'ಯುಗ" ಕ್ಲಿಕ್ಕಾಗಲಿಲ್ಲ. 'ಚಂಡ" ಗೆಲುವಿನ ಚೆಂಡಮದ್ದಳೆ ಬಾರಿಸಲಿಲ್ಲ. ಕವಿತಾ ಲಂಕೇಶರ 'ಅವ್ವ" ವಿಜಯದ ಮಡಿಲಾಗಿ ಪರಿಣಮಿಸಲಿಲ್ಲ. ಹಾಗಾಗಿಯೇ ವಿಜಯ್ ಈಗ ಮಾತನಾಡುವಾಗ ಭಾರಿ ಹುಷಾರು. ಆದರೂ, 'ಸ್ಲಂ ಬಾಲ"ನಿಗೆ ಸಿಕ್ಕಿರುವ ಆರಂಭಿಕ ಪ್ರತಿಕ್ರಿಯೆ ಅವರಿಗೆ ಖುಷಿ ತಂದಿದೆ. ಆ ಖುಷಿಯಲ್ಲೇ ದಟ್ಸ್‌ಕನ್ನಡದೊಂದಿಗೆ ಮಾತನಾಡಿದ ವಿಜಯ್ ಈವರೆಗಿನ ದುನಿಯಾ ನೆನಪಿಸಿಕೊಂಡರು. ಸುಖದ ಹೊತ್ತಿನಲ್ಲಿ ಹಿಂತಿರುಗಿ ನೋಡುವುದೇ ಮನುಷ್ಯತ್ವ! ಅಲ್ಲವಾ?ವಿಜಯ್ ಅವರೊಂದಿಗಿನ ಮಾತುಕತೆಯ ಮುಖ್ಯಾಂಶಗಳು ಇಂತಿವೆ:

'ದುನಿಯಾ" ಗೆಲುವಿನ ಮುನ್ನಾ ದಿನಗಳ ವಿಜಯ್ ಬಗ್ಗೆ ಹೇಳಿ?
ಸೂರಿ ನಿರ್ದೇಶನದ 'ದುನಿಯಾ"ಗೆ ಮೊದಲು ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೆ. ಎಲ್ಲವೂ ಹೋದ ಪುಟ್ಟ ಬಂದ ಪುಟ್ಟ ಎನ್ನುವಂಥ ಪಾತ್ರಗಳು. ಕಿರುತೆರೆ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದೆ. ಯಾವ ಪಾತ್ರವೂ ಕೈಹಿಡಿಯಲಿಲ್ಲ. ನನ್ನ ಹಣೆಬರಹ ಬದಲಿಸಿದ್ದು ಸೂರಿ 'ದುನಿಯಾ". ನಂತರದ ದುನಿಯಾ ನಿಮಗೆ ಗೊತ್ತೇ ಇದೆ.

ವಿಜ್ಜಿ, ನಿಮ್ಮೂರು? ಅಪ್ಪ ಅವ್ವ?
ಆನೇಕಲ್ ಸಮೀಪದ ಕುಂಬಾರಳ್ಳಿ ನಮ್ಮೂರು. ರುದ್ರಪ್ಪ- ನಾರಾಯಣ್ಣಮ್ಮ ನನ್ನ ಹೆತ್ತೋರು. ಬಡತನದೊಂದಿಗೆ ನಂಟಸ್ತಿಕೆ ಹೊಂದಿದ್ದ ಕುಟುಂಬ ನನ್ನದು. ಹಾಗೂಹೀಗೂ ಡಿಗ್ರಿ ಮುಗಿಸಿಕೊಂಡೆ. ಹಳ್ಳಿಯಲ್ಲಿ ನಾಟಕಗಳಲ್ಲಿ ಅಭಿನಯಿಸ್ತಿದ್ದೆ. ಆ ಬಣ್ಣದ ಗೀಳು ನನ್ನನ್ನು ಇಲ್ಲೀವರೆಗೆ ಕರೆತಂದಿದೆ.

ಹೊಸ ಚಿತ್ರಗಳ ಬಗ್ಗೆ ಹೇಳಿ?
'ಪುಟ್ಟ", 'ಚಿರತೆ", 'ತಾಕತ್" ಚಿತ್ರಗಳು ಕೈಯಲ್ಲಿವೆ. ಸೂರಿ ಅವರ 'ಜಂಗ್ಲಿ" ಚಿತ್ರದಲ್ಲೂ ನಟಿಸುತ್ತಿದ್ದೇನೆ. ರವಿ ಬೆಳಗೆರೆ ನಿರ್ದೇಶನದ 'ಮುಖ್ಯಮಂತ್ರಿ ಐ ಲವ್ ಯು" ತೆರೆಕಾಣಬೇಕಾಗಿದೆ. ಎಲ್ಲವೂ ವಿಭಿನ್ನ ಪಾತ್ರಗಳು.

ವಿವಾದಗಳಿಗೂ ವಿಜಯ್‌ಗೆ ತುಂಬಾ ಗೆಳೆತನ ಇದ್ದಂತಿದೆ?
ಎಂಥದ್ದೂ ಇಲ್ಲ. ಅದೆಲ್ಲ ನನ್ನ ಹಣೆಬರಹ. ಇಷ್ಟಂತೂ ನಿಜ. ಈ ವಿವಾದಗಳೆಲ್ಲ ನನ್ನ ಆತ್ಮವಿಶ್ವಾಸ ಹೆಚ್ಚಿಸಿವೆ. ಚಲನಚಿತ್ರ ವಾಣಿಜ್ಯ ಮಂಡಳಿ ಬಾಗಿಲು ಎಡತಾಕಿ ಬಂದ ನಂತರ ನಾನು ಬಲಿಪಶು ಆಗುತ್ತಿದ್ದೇನೆ ಎನ್ನಿಸಿದ್ದುಂಟು. ಆದರೆ ಉದ್ಯಮ ನನ್ನ ಕೈಬಿಟ್ಟಿಲ್ಲ. ಧಿಮಾಕಿನ ಹುಡುಗ ನಾನಲ್ಲ. ಚಿತ್ರರಂಗದಲ್ಲಿ ಸಾಗಬೇಕಾದ ಮುಂದಿನ ಹಾದಿ ಸಾಕಷ್ಟಿದೆ. ಆ ಎಚ್ಚರದಲ್ಲೇ ಸಾಗುತ್ತೇನೆ.

ದುನಿಯಾ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿರಿ. ಮತ್ತೆ ಅಂಥ ಸಾಧನೆ?
ನಟನೆಯ ಬಗ್ಗೆ ನನಗೆ ತುಂಬಾ ಕನಸುಗಳಿವೆ. ರಾಜ್ಯ ಪ್ರಶಸ್ತಿ ಮಾತ್ರವಲ್ಲ, ಉತ್ತಮ ಕಲಾವಿದನಾಗಿ ರಾಷ್ಟ್ರ ಪ್ರಶಸ್ತಿ ಪಡೆಯಬೇಕು ಎನ್ನೋದು ನನ್ನಾಸೆ.

ಎಂಥ ಪಾತ್ರಗಳಿಗೆ ನಿಮ್ಮ ಆದ್ಯತೆ?
ಬದುಕಿಗೆ ಹತ್ತಿರವಾದ ಪಾತ್ರಗಳಲ್ಲಿ ನಟಿಸಲಿಕ್ಕೆ ಇಷ್ಟ. ಪೌರಾಣಿಕ, ಚಾರಿತ್ರಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲೂ ಬಯಸುತ್ತೇನೆ. ಅಂತೆಯೇ, ಸಿನಿಮಾಗೆ ಬಂಡವಾಳ ಹೂಡಿದ ನಿರ್ಮಾಪಕನ ಕಾಸು ವಾಪಸ್ ಬರಬೇಕು ಎನ್ನುವ ಎಚ್ಚರವೂ ನನಗಿದೆ. ನಿರ್ಮಾಪಕನ ಬಂಡವಾಳ ವಾಪಸ್ ಬಂದರೆ ಅದು ಮತ್ತೊಂದು ಚಿತ್ರ ಆರಂಭಗೊಳ್ಳಲು ಕಾರಣವಾಗುತ್ತದೆ.

ಇಷ್ಟು ಚೆಂದದ ದೇಹ ಇದೆಯಲ್ಲ? ಏನು ಮಾಡ್ತೀರಿ?

ಚೆನ್ನಾಗಿ ತಿನ್ನು, ಬೆವರು ಬಸಿ ಎನ್ನೋ ಸೂತ್ರ ನನ್ನದು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada