ಗಣೇಶ್ , ರಾಧಿಕಾ ಪಂಡಿತ್ ಗೆ ಫಿಲಂಫೇರ್ ಪ್ರಶಸ್ತಿ
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ 'ಮೊಗ್ಗಿನ ಮನಸಿ'ನ ಹುಡುಗಿ ರಾಧಿಕಾ ಪಂಡಿತ್ ಕ್ರಮವಾಗಿ ಫಿಲಂಫೇರ್ ಶ್ರೇಷ್ಠ ನಟ ಮತ್ತು ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಳೆಯಲಿ ಜೊತೆಯಲಿ ಹಾಗೂ 'ಲವ್ ಗುರು' ಚಿತ್ರಗಳಲ್ಲಿನ ಅಮೋಘ ಅಭಿನಯಕ್ಕಾಗಿ ಗಣೇಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಈ ಪ್ರಶಸ್ತಿ ವರಿಸಿದೆ.
'ಎದ್ದೇಳು ಮಂಜುನಾಥ' ಚಿತ್ರದ ನಿರ್ದೇಶಕ ಗುರುಪ್ರಸಾದ್ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶನಿವಾರ(ಆ.7) ಸಂಜೆ ಚೆನ್ನೈನಲ್ಲಿ ನಡೆಯುವ '57ನೇ ಐಡಿಯಾ ಫಿಲಂಫೇರ್ ಪ್ರಶಸ್ತಿಗಳು 2009' ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಇಡೀ ಭಾರತೀಯ ಚಿತ್ರರಂಗವೇ ಕಾತುರದ ಕಣ್ಣುಗಳಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಎದುರು ನೋಡುತ್ತಿದೆ. ಕುತೂಹಲಕ್ಕೆ ತೆರೆಬೀಳಬೇಕಾದರೆ ಇಂದು ಸಂಜೆಯ ತನಕ ಕಾಯಲೇಬೇಕು. ಈಗಾಗಲೆ ರೆಬಲ್ ಸ್ಟಾರ್ ಅಂಬರೀಷ್ ಅವರು ಫಿಲಂಫೇರ್ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಫಿಲಂಫೇರ್ ಪ್ರಶಸ್ತಿಗೆ ಭಾಜನವಾದ ಕನ್ನಡ ಚಿತ್ರಗಳು:
ಅತ್ಯುತ್ತಮ ಚಿತ್ರ: ಮಳೆಯಲಿ ಜೊತೆಯಲಿ
ಅತ್ಯುತ್ತಮ ನಿರ್ದೇಶಕ: ಕೆ ಆರ್ ಗುರುಪ್ರಸಾದ್ (ಎದ್ದೇಳು ಮಂಜುನಾಥ)
ಅತ್ಯುತ್ತಮ ನಟ: ಗಣೇಶ್ (ಮಳೆಯಲಿ ಜೊತೆಯಲಿ)
ಅತ್ಯುತ್ತಮ ನಟಿ: ರಾಧಿಕಾ ಪಂಡಿತ್ (ಲವ್ ಗುರು)
ಅತ್ಯುತ್ತಮ ಪೋಷಕ ನಟ: ಅಚ್ಯುತ ಕುಮಾರ್ (ಜೋಶ್)
ಅತ್ಯುತ್ತಮ ಸಂಗೀತ ನಿರ್ದೇಶಕ: ವಿ ಹರಿಕೃಷ್ಣ (ರಾಜ್ ದಿ ಶೋಮ್ಯಾನ್)
ಅತ್ಯುತ್ತಮ ಸಾಹಿತ್ಯ: ಜಯಂತ್ ಕಾಯ್ಕಿಣಿ (ಮನಸಾರೆ, ಎಲ್ಲೋ ಮಳೆಯಾಗಿದೆ ಎಂದು...)
ಅತ್ಯುತ್ತಮ ಹಿನ್ನೆಲೆ ಗಾಯಕ: ಚೇತನ್ (ಅಂಬಾರಿ, ಯಾರೆ ನೀ ದೇವತೆಯ...)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಶಮಿತಾ ಮಲ್ನಾಡ್ (ಬಿರುಗಾಳಿ, ಮಧುರ ಪಿಸು ಮಾತಿಗೆ...)
ತೀರ್ಪುಗಾರರ ವಿಶೇಷ ಪ್ರಶಸ್ತಿ: ಶ್ರೀನಗರ ಕಿಟ್ಟಿ (ಸವಾರಿ) ಯಜ್ಞಾ ಶೆಟ್ಟಿ (ಎದ್ದೇಳು ಮಂಜುನಾಥ)
ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!


Click it and Unblock the Notifications











