»   » ಮುಕ್ತಿ ಕೊಡು ಹರಿಯೇ ಕನ್ನಡ ಚಿತ್ರರಂಗಕ್ಕೆ

ಮುಕ್ತಿ ಕೊಡು ಹರಿಯೇ ಕನ್ನಡ ಚಿತ್ರರಂಗಕ್ಕೆ

Subscribe to Filmibeat Kannada

ಯಂಡಮೂರಿ ವೀರೇಂದ್ರನಾಥರ ಐಡಿಯಾಗಳನ್ನು ನಕಲು ಮಾಡುವಂತೆ ಕಾಣುವ ಜನಾರ್ದನ ಮಹರ್ಷಿ ಎನ್ನುವ ತೆಲುಗು ಕಥೆಗಾರನಿಂದ ಕನ್ನಡ ಚಿತ್ರರಂಗಕ್ಕೆ ಸದ್ಯಕ್ಕಂತೂ ಮುಕ್ತಿ ದೊರಕುವ ಲಕ್ಷಣಗಳು ಕಾಣಿಸುತ್ತಿಲ್ಲ.

ಗಣೇಶ್ ನಾಯಕರಾಗಿ ನಟಿಸಿದ್ದ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಬೊಂಬಾಟ್' ಚಿತ್ರ ಇನ್ನಿಲ್ಲದಂತೆ ಮುಗ್ಗರಿಸಿದ್ದಾಯಿತು. ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿದ್ದ ಮೆರವಣಿಗೆ' ಹಿಮ್ಮುಖವಾಗಿ ನಡೆದದ್ದಾಯಿತು. ಪ್ರಸ್ತುತ 'ಪರಮೇಶ ಪಾನ್‌ವಾಲಾ' ಚಿತ್ರದ ಬರಕತ್ತೂ ನೆಟ್ಟಗಿರುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಮೂರೂ ಚಿತ್ರಗಳಿಗೆ ಮಹರ್ಷಿ ಅವರದ್ದೇ ಕಥೆ. ಕೊನೆಯ ಎರಡು ಚಿತ್ರಗಳ ನಿರ್ದೇಶಕ ಮಹೇಶ್‌ಬಾಬು.

ಮಹರ್ಷಿ ಕಂಡರೆ ಮಹೇಶ್‌ಬಾಬುಗೆ ಇನ್ನಿಲ್ಲದ ಅಕ್ಕರೆ. ಕನ್ನಡದಲ್ಲಿ ಕಥೆಗಾರರಿಲ್ಲ ಎಂದು ಬಾಬು ತೀರ್ಮಾನಿಸಿದಂತಿದೆ. ಈ ತಿಂಗಳ ಮೂರನೇ ವಾರದಲ್ಲಿ ಸೆಟ್ಟೇರಲಿರುವ ದರ್ಶನ್ ನಾಯಕತ್ವದ ಚಿತ್ರವೊಂದಕ್ಕೆ ಬಾಬು ನಿರ್ದೇಶಕರು. ಕಥೆ ಯಥಾಪ್ರಕಾರ ಮಹರ್ಷಿ ಅವರದ್ದೇ. ದರ್ಶನ್ ದೆಸೆಯಲ್ಲಿ ಯಾವ ಗ್ರಹ ವಕ್ಕರಿಸುವುದೋ?

ಮಹೇಶ್‌ಬಾಬು ಮಾತ್ರವಲ್ಲ. ಮತ್ತೊಂದಷ್ಟು ನಿರ್ಮಾಪಕ ನಿರ್ದೇಶಕರಿಗೆ ಮಹರ್ಷಿ ಕಂಡರೆ ಇನ್ನಿಲ್ಲದ ಪ್ರೀತಿ. ಇಷ್ಟಕ್ಕೂ ಮಹರ್ಷಿ ಮೋಡಿಯಾದರೂ ಎಂಥಾದ್ದು? ಅವರ ಮೊದಲ ಕ್ವಾಲಿಫಿಕೇಷನ್ ಯಶಸ್ವಿ ಚಿತ್ರಗಳ ಯಶಸ್ವಿ ಚಿತ್ರಗಳನ್ನು ಕದ್ದು ಅವುಗಳನ್ನು ತಮ್ಮದೇ ಕಲ್ಪನೆಯೆಂಬಂತೆ ಬಿಂಬಿಸುವುದು. ಮಹರ್ಷಿ ಕಥೆಯ ಯಾವುದೇ ಚಿತ್ರವನ್ನು ನೋಡಿ, ಅಲ್ಲಿ ಹಲವು ಚಿತ್ರಗಳ ನೆರಳು ಕಾಣಿಸುತ್ತದೆ. ಎರಡನೇ ಅರ್ಹತೆ, ಕೇಳುಗರು ದಂಗಾಗುವಂತೆ ಕಥೆ ಹೇಳುವ ಕಲೆ ಮಹರ್ಷಿಗೆ ಸಿದ್ಧಿಸಿರುವುದು.

ಅವರು ದೃಶ್ಯಗಳನ್ನು ವಿವರಿಸುತ್ತಿದ್ದರೆ ಈ ಚಿತ್ರ ಹಂಡ್ರೆಡ್ ಡೇಸ್ ಗ್ಯಾರಂಟಿ ಅನ್ನಿಸುತ್ತೆ. ಅಷ್ಟು ಚೆನ್ನಾಗಿ ಕಥೆ ಹೇಳುವವರನ್ನು ನಾನು ಈವರೆಗೆ ನೋಡಿಯೇ ಇಲ್ಲ ಎಂದೊಮ್ಮೆ ರಾಕ್‌ಲೈನ್ ಹೇಳಿದ್ದರು. ರಾಕ್‌ಲೈನ್‌ರಂಥ ಪಕ್ಕಾ ವ್ಯಾಪಾರಿಯೇ ಇಷ್ಟೊಂದು ಸಮ್ಮೋಹಿತರಾಗುವಾಗ ಉಳಿದವರ ಪಾಡೇನು?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada