ಬಾಕ್ಸಾಫೀಸಲ್ಲಿ ಕೋಟಿಗಟ್ಟಲೆ ಕೊಳ್ಳೆ ಹೊಡೆದ ಸೂಪರ್
ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ 'ಸೂಪರ್' [ಚಿತ್ರ ವಿಮರ್ಶೆ] ಚಿತ್ರ ಬಾಕ್ಸಾಫೀಸಲ್ಲಿ ಕೋಟಿಗಟ್ಟಲೆ ಕೊಳ್ಳೆ ಹೊಡೆದು ಹೊಸ ದಾಖಲೆ ನಿರ್ಮಿಸಿದೆ. ಹತ್ತು ವರ್ಷಗಳ ಬಳಿಕ ಆಕ್ಷನ್, ಕಟ್ ಹೇಳಿರುವ ಉಪ್ಪಿ ಅವರ ಮ್ಯಾಜಿಕ್ ಮತ್ತೊಮ್ಮೆ ಸಕ್ಸಸ್ ಆಗಿದೆ. ನಯನತಾರಾ ಮತ್ತು ಟುಲಿಪ್ ಜೋಷಿ ತಾರಾ ಜೋಡಿ 'ಸೂಪರ್' ಕಲೆಕ್ಷನ್‌ಗೆ ಸಾಥ್ ನೀಡಿದೆ.
ಮೂಲಗಳ ಪ್ರಕಾರ, ಮಲ್ಟಿಫೆಕ್ಸ್‌ಗಳಲ್ಲಿ 'ಸೂಪರ್' ಗಳಿಕೆ 'ಜಾಕಿ' ಗಳಿಕೆಯನ್ನು ಹಿಂದಿಕ್ಕಿದೆ. ಮಲ್ಟಿಫೆಕ್ಸ್‌ಗಳಲ್ಲಿ ತೆರೆಕಂಡಿರುವ ಹಿಂದಿ ಚಿತ್ರಗಳನ್ನು 'ಸೂಪರ್' ಬಾಕ್ಸಾಫೀಸಲ್ಲಿ ಬಗ್ಗುಬಡಿದಿದೆ. ಬಾಕ್ಸಾಫೀಸ್‌ನಲ್ಲಿ ಕಾಂಚಾಣ ಕುಣಿಯುತ್ತಿರುವುದನ್ನು ಕಂಡು ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್‌ಗೆ ಖುಷಿಯೋ ಖುಷಿ.
ರಾಜ್ಯದಾದ್ಯಂತ 85 ಚಿತ್ರಮಂದಿರಗಳಲ್ಲಿ ತುಂಬಿದ ಗೃಹಗಳಲ್ಲಿ 'ಸೂಪರ್' ಪ್ರದರ್ಶನ ಕಾಣುತ್ತಿದೆ. ಇದುವರೆಗಿನ ಚಿತ್ರದ ಒಟ್ಟಾರೆ ಗಳಿಕೆ ರು.30 ಕೋಟಿಗೂ ಹೆಚ್ಚು ಎನ್ನುತ್ತವೆ ಮೂಲಗಳು. ಕಳೆದ ವರ್ಷದ ಮತ್ತೆರಡು ಬಿಗ್ ಬಜೆಟ್ ಚಿತ್ರಗಳಾದ 'ಮೈಲಾರಿ' ಹಾಗೂ 'ಜಾಕಿ' ಕೂಡ ಬಾಕ್ಸಾಫೀಸ್ ಗಳಿಕೆಯಲ್ಲಿ ಮುಂದಿವೆ. ಪುನೀತ್ ರಾಜ್ ಕುಮಾರ್ 'ಜಾಕಿ' ಚಿತ್ರ ಯಶಸ್ವಿ 85ನೇ ದಿನಕ್ಕೆ ಅಡಿಯಿಟ್ಟಿದ್ದು ಶತಕ ಬಾರಿಸಲು ಸಿದ್ಧತೆ ನಡೆಸಿದೆ.
ಮೈಲಾರಿ ಹೊಸ ದಾಖಲೆ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಮೈಲಾರಿ' [ಚಿತ್ರ ವಿಮರ್ಶೆ] ಚಿತ್ರ ರಾಜ್ಯದಾದ್ಯಂತ 75 ಚಿತ್ರಮಂದಿರಗಳಲ್ಲಿಯಶಸ್ವಿ ಪ್ರದರ್ಶನ ಕಾಣುತ್ತಿದೆ. ಶಿವಣ್ಣ ಅಭಿನಯದ 99ನೇ ಚಿತ್ರ ಇದಾಗಿದ್ದು, ಬಿಡುಗಡೆಯಾದ ಮೊದಲ ದಿನವೇ ರು.1.7 ಕೋಟಿ ಬಾಚಿರುವುದು ವಿಶೇಷ. ಇದು 'ಸೂಪರ್' ಚಿತ್ರದ ಮೊದಲ ದಿನದ ಗಳಿಕೆಗೂ ಅಧಿಕ ಎನ್ನಲಾಗಿದೆ.
ಕಳೆದ ವರ್ಷ ತೆರೆಕಂಡ ಚಿತ್ರಗಳ ಮೊದಲ ದಿನದ ಕಲೆಕ್ಷನ್‌ಗಳು ಹೀಗಿವೆ; ಯೋಗರಾಜ್ ಭಟ್ ನಿರ್ದೇಶನದ 'ಪಂಚರಂಗಿ' ಚಿತ್ರ ಮೊದಲ ದಿನ ರು.1 ಕೋಟಿ ಗಳಿಸಿದರೆ 'ಜಾಕಿ' ಚಿತ್ರ ರು.1ಕೋಟಿಗೂ ಅಧಿಕ ಗಳಿಸುವ ಮೂಲಕ ಆ ದಾಖಲೆಯನ್ನು ಅಳಿಸಿ ಹಾಕಿತು. ಬಳಿಕ ತೆರೆಕಂಡ 'ಸೂಪರ್' ಚಿತ್ರ ಮೊದಲನ ದಿನ ರು.1.5 ಕೋಟಿ ಗಳಿಸಿದೆ. 'ಮೈಲಾರಿ' ಚಿತ್ರ ಮೊದಲ ದಿನ ರು.1.7 ಕೋಟಿ ಗಳಿಸುವ ಮೂಲಕ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿರುವುದು ಗಾಂಧಿನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. [ಮೈಲಾರಿ]


Click it and Unblock the Notifications











