»   » ಗಗನಸಖಿ ಯಾಕೆ ಬಣ್ಣದ ಲೋಕವೇ ಓಕೆ :ತೇಜು

ಗಗನಸಖಿ ಯಾಕೆ ಬಣ್ಣದ ಲೋಕವೇ ಓಕೆ :ತೇಜು

Subscribe to Filmibeat Kannada

ಈಕೆ ಬಂಧುಬಳಗ ಚಿತ್ರದ ಶಿವಣ್ಣನ ತಂಗಿ. ರಾಧಿಕಾ ನಂತರ ಸೆಂಟಿಮೆಂಟ್ ಚಿತ್ರಗಳ ತಂಗಿ ಪಾತ್ರದ ಉತ್ತರಾಧಿಕಾರಿ. ಪ್ರೇಮ್ ನಾಯಕನಾಗಿ ನಟಿಸಿದ ಸವಿಸವಿ ನೆನಪು ಚಿತ್ರದ ಸೆಕಂಡ್ ಹಿರೋಯಿನ್, ಛಾಯಾಗ್ರಾಹಕ ಅಶೋಕ್ ಕಶ್ಯಪ್ ನಿರ್ದೇಶನದ ಅಂಬುಟ್ಟು ಅಂಬುಟ್ಟು ಎಂಬ ತಮಿಳು ಸಿನಿಮಾದಲ್ಲಿ ನಟನೆ. ಆನಂತರ ಮಾತಾಡ್ ಮಾತಾಡ್ ಮಲ್ಲಿಗೆ, ಗಜ ಚಿತ್ರದಲ್ಲಿ ನಟನೆ. ಈಗ 'ಈ ಪ್ರೀತಿ ' ಚಿತ್ರದಲ್ಲಿ ನಾಯಕಿಯಾಗಿ ನಟನೆ. ಇವರ ತಾಯಿ ವಿನಯಾ ಧಾರವಾಹಿಯಲ್ಲಿ ನಟಿಸಿದವರು. ತಂದೆ ಪ್ರಕಾಶ ಖ್ಯಾತ ಸ್ಟಂಟ್ ಮಾಸ್ಟರ್. ಸಹೋದರ ಮಾವ ಒಬ್ಬ ನೃತ್ಯ ನಿರ್ದೇಶಕರು. ಇಂಥ ಕಲಾತ್ಮಕ ಹಿನ್ನಲೆಯಿಂದ ಬಂದಿರುವ ಈ ಮುದ್ದು ಮುಖದ ಚೆಲುವೆ, ಮಸಣದ ಮಕ್ಕಳು ಚಿತ್ರದ ಮೊದಲ ಬಾರಿಗೆ ಬಣ್ಣದಲೋಕಕ್ಕೆ ಕಾಲಿಟ್ಟರು. ಇದು ತೇಜಸ್ವಿನಿ ಅವರ ಸಿನಿಬಯೋಡಾಟ.

ಕನ್ನಡ ಚಿತ್ರರಂಗದಲ್ಲಿ ನಾಯಕ ನಾಯಕಿ ಬಿಟ್ಟರೆ ಅತೀ ಹೆಚ್ಚು ಬೇಡಿಕೆ ಇರುವುದು ತಂಗಿ ಪಾತ್ರಕ್ಕೆ. ನಟಿ ರಾಧಿಕಾ ಚಿತ್ರರಂಗದಿಂದ ದೂರ ಸರಿದಾಗ ಆ ಸ್ಥಾನ ಖಾಲಿಯಾಗಿತ್ತು. ಇದೀಗ ಆ ಸ್ಥಾನವನ್ನು ತೇಜಸ್ವಿನಿ ಸಮರ್ಥವಾಗಿ ತುಂಬುವ ಎಲ್ಲ ಲಕ್ಷಣಗಳು ಕಂಡು ಬಂದಿವೆ. ಬಂಧುಬಳಗ ಚಿತ್ರ ನೋಡಿ ಬಂದ ಅನೇಕರು ಈ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಕಲಾತ್ಮಕ ಮತ್ತು ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸುತ್ತಾ ಬಂದಿರುವ ಈಕೆ, ಇದೀಗ ಬಂಧು ಬಳಗ ಚಿತ್ರದಲ್ಲಿ ಶಿವರಾಜಕುಮಾರ್ ಅವರ ತಂಗಿಯಾಗಿ ನಟಿಸುವ ಮೂಲಕ ಎರಡು ಕೆಟಗರಿಗೆ ಸೈ ಎಂದಿದ್ದಾರೆ. ರಾಧಿಕಾ ತರ ತಂಗಿಯಾಗಿ ಹೆಸರು ಮಾಡುವುದು ಅವರ ಕನಸಾಗಿದೆ. ಶಾಶ್ವತವಾಗಿ ತಂಗಿ ಪಾತ್ರ ಯಾಕೇ ಎನ್ನುವ ಇವರು, ನಾಯಕಿ ಪಾತ್ರದಲ್ಲಿ ಮಿಂಚುವ ಅಭಿಲಾಷೆ. ಜನಮಾನಸದಲ್ಲಿ ಉಳಿಯುವಂತ ಚಿತ್ರದಲ್ಲಿ ನಟಿಸಬೇಕು ಎನ್ನುವ ಆಕಾಂಕ್ಷೆ.

ತೇಜು ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕ. ಗಗನಸಖಿಯಾಗಬೇಕೆಂದು ಆಸೆಯಿತ್ತು. ಆದರೆ ಚಿತ್ರರಂಗ ಕೈಬೀಸಿ ಕರೆಯಿತು. ಸಾಲುಸಾಲಾಗಿ ಅವಕಾಶಗಳು ಬರುತ್ತಿವೆ. ಗಗನಸಖಿಯಾಗುವ ಕನಸು ಕನಸಾಗಿ ಉಳಿದಿದೆ ಎನ್ನುತ್ತಾರೆ. ಈಕೆ ನಟಿಸಿದ ಮಸಣದ ಮಕ್ಕಳು ಚಿತ್ರಕ್ಕೆ 'ಸಿಕಾ ಪ್ರಶಸ್ತಿ 'ಲಭಿಸಿದೆ. ಈಗ ತೇಜು ತುಸು ಗಂಭೀರತೆಯನ್ನು ಮೈಗೂಡಿಸಿಕೊಂಡಿದ್ದು, ಚಿತ್ರರಂಗದ ವಿಷಯದಲ್ಲಿ ತುಂಬ ಸಿರಿಯಸ್ ಆಗಿದ್ದೇನೆ ಎನ್ನುವ ಮಟ್ಟಿಗೆ ಬೆಳೆದಿದ್ದಾರೆ.

ಸದ್ಯ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಬಿ.ಎ. ಓದುತ್ತಿರುವ ತೇಜಸ್ವಿನಿ ಗಗನಸಖಿ ಆಗುವ ಬಯಕೆಯನ್ನು ಪಕ್ಕಕ್ಕಿಟ್ಟಿದ್ದಾರೆ. ಈಗೇನಿದ್ದರೂ ಬಣ್ಣದ ಲೋಕದಲ್ಲಿ ಬೆಳಯುವ ಆಸೆ. ಎತ್ತರೆತ್ತರಕ್ಕೆ ಏರಬೇಕು. ಹಾರಬೇಕು ಎನಿಸುತ್ತದೆ. ಈ ಎಲ್ಲದರ ನಡುವೆ ಓದಬೇಕು. ಮನಶಾಸ್ತ್ರದಲ್ಲಿ ಸ್ತಾತಕೋತ್ತರ ಪದವಿ ಪಡೆಯಬೇಕು ಎನ್ನುವ ಇರಾದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಬ್ಯಾನರ್ ಗಳಲ್ಲಿ ನಟಿಸುವ ಆಸೆ. ಗ್ಲಾಮರ್ ಬೇಕು. ಆದರೆ ಗ್ಲಾಮರ್ ನೋಡುವುದಕ್ಕಾಗಿ ಯಾರೂ ಇಡೀ ಸಿನಿಮಾ ನೋಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಗ್ಲಾಮರ್ ಗಿಂತ ಹೆಚ್ಚು ಕತೆ ಮತ್ತು ಅಭಿನಯವನ್ನು ಇಷ್ಟಪಡುತ್ತಾರೆ ಎನ್ನುವುದು ತೇಜಸ್ವಿನಿಯ ಅಭಿಪ್ರಾಯ.

ಒಟ್ಟಿನಲ್ಲಿ ಕನ್ನಡದ ಹುಡುಗಿಯರು ಚಿತ್ರರಂಗದಲ್ಲಿ ಬೆಳೆಯಬೇಕು. ಹೆಸರು ಮಾಡಬೇಕು. ಪರಭಾಷೆ ಬೆಡಗಿಯರಿಗಿಂತ ಕನ್ನಡದ ಹುಡುಗಿಯರು ಕಡಿಮೆಯೇನಲ್ಲ ಎನ್ನುವುದನ್ನ ಸಾಬೀತುಪಡಿಸಲಿ. ಬೆಸ್ಟ್ ಆಫ್ ಲಕ್ ತೇಜು

(ದಟ್ಸ್ ಕನ್ನಡಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada