»   » ಜೀ ಕನ್ನಡ ಕುಣಿಯೋಣು ಬಾರಾ ಅಂತಿಮ ಸ್ಪರ್ಧೆ

ಜೀ ಕನ್ನಡ ಕುಣಿಯೋಣು ಬಾರಾ ಅಂತಿಮ ಸ್ಪರ್ಧೆ

Subscribe to Filmibeat Kannada

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ "ಕುಣಿಯೋಣು ಬಾರಾ" ಈಗ ರೋಚಕ ಘಟ್ಟ ತಲುಪಿದೆ. ಜೂನ್. 8 ರಂದು ನಡೆಯುವ ಅಂತಿಮ ಹಣಾಹಣಿಯಲ್ಲಿ ಅದ್ಭುತ ನೃತ್ಯ ಪ್ರದರ್ಶನ ಪ್ರೇಕ್ಷಕರ ಪಾಲಿಗೆ ದೊರೆಯಲಿದೆ.

ಟಾಟಾ ಇಂಡಿಕಾಂ ಪ್ರಾಯೋಜಕತ್ವದ ಕುಣಿಯೋಣು ಬಾರಾ ಸ್ಪರ್ಧೆಯ 3 ನೇ ಆವೃತ್ತಿ ಈಗಾಗಲೇ ವೀಕ್ಷಕರ ಮೆಚ್ಚುಗೆ ಗಳಿಸಿದೆ. ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಜೂನ್ 8 ರಂದು ನಡೆಯುವ ಅಮೋಘ ನೃತ್ಯ ವೈಭವದೊಂದಿಗೆ ಮುಕ್ತಾಯ ಹಾಡಲು ಸಜ್ಜಾಗಿದೆ. ಅಂದು 5:30 ರಿಂದ 9:30 ರವರೆಗೆ ನಡೆಯಲಿರುವ ಫೈನಲ್ ಸ್ಪರ್ಧೆಯಲ್ಲಿ 4ಜನ ಸ್ಪರ್ಧಿಗಳು ಕುಣಿದು ಜನ ಮನ ತಣಿಸಲಿದ್ದಾರೆ.

ಬಹುಮಾನ, ಅತಿಥಿಗಳು, ಸ್ಪರ್ಧಿಗಳು:
ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೈಸೂರು ರಸ್ತೆಯ ಬಳಿ 30 X 40 ವಿಸ್ತ್ರೀರ್ಣದ ನಿವೇಶನ ದೊರೆಯಲಿದೆ. ಮೊದಲ ರನ್ನರ್ ಅಪ್ ಗೆ 50, 000 ರು ನಗದು ಹಾಗೂ ಉಳಿದ ಇಬ್ಬರು ಸ್ಪರ್ಧಿಗಳಿಗೆ ತಲಾ 25,000 ರು ಲಭಿಸಲಿದೆ. ಮೂರು ಗಂಟೆಗಳ ಕಾಲ ನಡೆಯುವ ಸ್ಪರ್ಧೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಹಾಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅಂತಿಮ ಸುತ್ತು ತಲುಪಿರುವ ಶಿವಶಂಕರ್, ಆನೇಕಲ್ ನರಸಿಂಹ, ಮಮತಾಬಾಯಿ ಹಾಗೂ ನಾಗೇಂದ್ರ ಸಿದ್ಧರಾಗಿದ್ದಾರೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅನಿರುದ್ಧ್, ನೀತು, ಮನೋಮೂರ್ತಿ ಹಾಗೂ ಆದಿತ್ಯ ಬರಲಿದ್ದಾರೆ. ಮುಖ್ಯ ತೀರ್ಪುಗಾರರಾಗಿ ಮೂಗೂರು ಸುಂದರಂ(ನಟ ಪ್ರಭುದೇವ ಅವರ ತಂದೆ) ಆಗಮಿಸಲಿದ್ದಾರೆ ಎಂದು ಜೀ ವಾಹಿನಿಯ ವ್ಯವಹಾರಿಕ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಮಾಸ್ಟರ್ ಆನಂದ್, ಸ್ನೇಹಾ ಆಚಾರ್ಯ ಮಾಡಲಿದ್ದು, ತೀರ್ಪುಗಾರರಾಗಿ ನಾಗೇಂದ್ರ ಪ್ರಸಾದ್ ಹಾಗೂ ಛಾಯಾ ಸಿಂಗ್ ಎಂದಿನಂತೆ ಕಾಣಿಸಿಕೊಳ್ಳಲಿದ್ದಾರೆ.

ಜೀ ಕುಣಿತ ಬಾಲಿವುಡ್ ಸ್ಟೈಲ್ ನಲ್ಲಿ: ಬಾಲಿವುಡ್ ನ ವರ್ಣ ರಂಜಿತ ಕಾರ್ಯಕ್ರಮಗಳಿಗೆ ಸರಿಸಾಟಿ ನಿಲ್ಲಬಲ್ಲ ಕಾರ್ಯಕ್ರಮವನ್ನು ಆಯೋಜಿಸುವುದು ನಮ್ಮ ಗುರಿ. ಕನ್ನಡ ಕಿರುತೆರೆ ಮಾರುಕಟ್ಟೆ ವಿಸ್ತ್ರೀರ್ಣ ಹಾಗೂ ಹೊಸ ಪ್ರತಿಭೆಗಳಿಗೆ ಅದರಲ್ಲೂ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ನಮ್ಮದಾಗಿದೆ. ಕುಣಿಯೋಣ ಬಾರಾ ಸ್ಪರ್ಧೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ 26 ಸ್ಪರ್ಧಿಗಳು ಪ್ರಥಮ ಸುತ್ತಿನಲ್ಲಿ ಪಾಲ್ಗೊಂಡಿದ್ದರು. 13 ವಾರಗಳಲ್ಲಿ 11 ಕಠಿಣ ಸುತ್ತುಗಳನ್ನು ನಡೆಸಲಾಯಿತು. ಜನಪದ, ಸಿನಿಮಾ, ರಿಮೀಕ್ಸ್ ಗೀತೆ, ಥೀಮ್ ಸಂಗೀತಗಳಿಗೆ ಸ್ಪರ್ಧಿಗಳು ಕುಣಿದಿದ್ದಾರೆ. ವೇಷ ಭೂಷಣ, ಹಾವಭಾವ, ನೃತ್ಯ ಶೈಲಿ, ಸಮಯ ಸ್ಫೂರ್ತಿ, ರಚನಾತ್ಮಕ ನೃತ್ಯ ಹೀಗೆ ಅನೇಕ ವಿಷಯಗಳನ್ನು ಪರಿಗಣಿಸಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಚಂದ್ರಶೇಖರ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada