»   » ಕವಿತಾ ಲಂಕೇಶರ 'ಅವ್ವ' ವಯಸ್ಕರಿಗೆ ಮಾತ್ರ!

ಕವಿತಾ ಲಂಕೇಶರ 'ಅವ್ವ' ವಯಸ್ಕರಿಗೆ ಮಾತ್ರ!

Posted By:
Subscribe to Filmibeat Kannada

ಪಿ. ಲಂಕೇಶರ 'ಮುಸ್ಸಂಜೆಯ ಕಥಾ ಪ್ರಸಂಗ' ಕಾದಂಬರಿ ಆಧಾರಿತ ಅವ್ವ ಗ್ರಾಮೀಣ ಸೊಗಡಿನ ನೈಜ ಕಥಾಹಂದರವನ್ನು ಹೊಂದಿರುವ ಚಿತ್ರ. ಜಾತಿ ರಾಜಕಾರಣ ಹಾಗೂ ಭ್ರಷ್ಟಾಚಾರ ತುಂಬಿದ ಸಮಾಜದಲ್ಲಿ ಒಬ್ಬ ವಿಧವೆ ಹಾಗೂ ಆಕೆಯ ಮಗಳು ಸಾಮಾಜಿಕ ನ್ಯಾಯ ಮತ್ತು ಪ್ರೀತಿಗಾಗಿ ಹೋರಾಡುವುದೇ ಇದರ ಕಥಾವಸ್ತು.

ಇದು ಕಾದಂಬರಿ ಆಧಾರಿತ ಚಿತ್ರವಾದ ಕಾರಣ ಕಾದಂಬರಿಕಾರನ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಚಿತ್ರಕತೆಯನ್ನು ನಿರೂಪಿಸಿಲಾಗಿದೆ. ಚಿತ್ರ ಗ್ರಾಮೀಣ ನೇಪಥ್ಯದಲ್ಲಿ ಸಾಗುವುದರಿಂದ ಇಲ್ಲಿ ಭಾಷೆ ಮುಖ್ಯವಾಗುತ್ತದೆ ಎನ್ನುತ್ತಾರೆ ನಿರ್ದೇಶಕಿ ಕವಿತಾ ಲಂಕೇಶ್

ಹಳ್ಳಿಯಲ್ಲಿ ಬಡ್ಡಿ ವ್ಯವಹಾರ ನಡೆಸುವ ಗಯ್ಯಾಳಿ ಹೆಂಗಸು ರಂಗವ್ವನ ಒರಟು ಬೈಗುಳಗಳು, ಹಗಲೆಲ್ಲಾ ಲಡಾಸು ಮಿಷನ್ನು ಬಿಚ್ಚಿ ರಿಪೇರಿ ಮಾಡುವ ಭರ್ಮಣ್ಣ ಹಾಗೂ ಆತನ ಹೆಂಡತಿ ರಾಮಿಯ ವಿರಹ ವೇದನೆ. ಪಾಠ ಮಾಡುವುದನ್ನು ಬಿಟ್ಟು ಇಸ್ಪೀಟ್ ಆಡುವ ಶಾಲಾ ಮೇಷ್ಟ್ರು. ಅಕ್ರಮವಾಗಿ ಹಣ ಸಂಪಾದಿಸಲು ಹವಣಿಸುವ ಕುತಂತ್ರಿ ಹುಡುಗ ಕರಿಯ... ಇದೆಲ್ಲದರ ಮಧ್ಯೆ ಕದ್ದು ಪ್ರೇಮಿಸುವ ಬ್ಯಾಡ್ರ ಮಂಜ, ಸಾವಂತ್ರಿಯ ಲವ್ ಸ್ಟೋರಿ! ಅವ್ವ ಚಿತ್ರದಲ್ಲಿ ಅಭಿವ್ಯಕ್ತಗೊಂಡಿರುವ ಪಾತ್ರಗಳು.

ಹಳ್ಳಿ ಭಾಷೆಯಲ್ಲಿನ ಬೈಗುಳಗಳು ಹೆಚ್ಚಾಗಿರುವುದರಿಂದ ಹಾಗೂ ಒಂದೆರಡು ಚುಂಬನದ ದೃಶ್ಯಗಳು ಇರುವುದರಿಂದ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ 'ಎ" ಸರ್ಟಿಫಿಕೇಟ್ ನೀಡಿದೆ. ಇದರಿಂದ ಕವಿತಾ ಲಂಕೇಶ್‌ಗೆ ಬೇಸರವಾಗಿಲ್ಲವಂತೆ. ಏಕೆಂದರೆ ಕಾದಂಬರಿಗೆ ಚ್ಯುತಿ ಬಾರದಂತೆ ಚಿತ್ರವನ್ನು ನಿರ್ಮಿಸಬೇಕಿದ್ದರಿಂದ ಆ ಬೈಗುಳಗಳು, ಪ್ರೇಮದ ದೃಶ್ಯಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ ಎನ್ನುತ್ತಾರೆ ಕವಿತಾ ಲಂಕೇಶ್.

ಊರಲ್ಲಿ ಬದುಕನ್ನು ಉಳಿಸಿಕೊಳ್ಳಲು ಹೆಣಗುವ ತಾಯಿ, ತನ್ನಿಷ್ಟದಂತೆ ಬದುಕನ್ನು ಕಟ್ಟಿಕೊಳ್ಳಲು ಹಂಬಲಿಸುವ ಮಗಳು. ಈ ಎಲ್ಲಾ ಜಂಜಾಟಗಳ ನಡುವೆ ಹೊಟ್ಟೆ ಹುಣ್ಣಾಗುವಂತೆ ನಗಿಸುವ ತಿಳಿಹಾಸ್ಯ ಚಿತ್ರದ ಹೈಲೈಟ್ ಎಂದು ಹೇಳಲು ಮರೆಯುವುದಿಲ್ಲ ಕವಿತಾ ಲಂಕೇಶ್.

ಕವಿತಾ ಲಂಕೇಶ್‌ರ ಅವ್ವ ಚಿತ್ರಕ್ಕೆ ಉತ್ತಮ ಕಲಾವಿದರ ಬಳಗವೇ ಇದೆ. ಶೃತಿ, ವಿಜಯ್, ಸ್ಮಿತ, ರಂಗಾಯಣ ರಘು, ಏಣಗಿ ನಟರಾಜ್, ಸುಚೇಂದ್ರ ಪ್ರಸಾದ್, ಅಶ್ವಥ್(ನೀನಾಸಂ), ಅರುಂಧತಿ ಜತ್ಕರ್, ಹನುಮಕ್ಕ(ನೀನಾಸಂ), ನಟರಾಜ್ ಹೊನ್ನವಳ್ಳಿ ಮುಂತಾದವರು ರಂಗವ್ವ, ಭರ್ಮಣ್ಣ, ಬ್ಯಾಡ್ರ ಮಂಜ, ರಾಮಿ, ಶಾಲಾ ಮೇಷ್ಟ್ರ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅವ್ವ ಚಿತ್ರಕ್ಕೆ ಮಧು ಅಂಬಾಟ್‌ರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಒಂದೇ ಒಂದು ಜನಪದ ಶೈಲಿಯ ಹಾಡಿದೆ. ಐಸೆಕ್ ಸಂಗೀತ ಸಂಯೋಜಿಸಿದ್ದಾರೆ. ಪಿ. ಲಂಕೇಶ್ ಮತ್ತು 'ಬಯಲುಸೀಮೆ ಕಟ್ಟೆ ಪುರಾಣದ' ಬಿ. ಚಂದ್ರೇಗೌಡರ ಸಂಭಾಷಣೆ ಇದೆ. ಜನವರಿ ಕೊನೆಯ ವಾರದಲ್ಲಿ ರಾಜ್ಯದಾದ್ಯಂತ ಚಿತ್ರ ತೆರೆಕಾಣಲಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X