»   » ಫಣಿ ಬಗ್ಗೆ ಹೆಮ್ಮೆಯಿದೆ ಅಂತ ಪ್ಲೇಟು ಬದಲಿಸಿರುವ ವಿಷ್ಣು , ಹೆಚ್ಚು ಕೆಣಕಿದರೆ ರಾಜಕೀಯ ಬೇಡ ಅಂತ ನುಣುಚಿಕೊಳ್ಳುತ್ತಾರೆ.

ಫಣಿ ಬಗ್ಗೆ ಹೆಮ್ಮೆಯಿದೆ ಅಂತ ಪ್ಲೇಟು ಬದಲಿಸಿರುವ ವಿಷ್ಣು , ಹೆಚ್ಚು ಕೆಣಕಿದರೆ ರಾಜಕೀಯ ಬೇಡ ಅಂತ ನುಣುಚಿಕೊಳ್ಳುತ್ತಾರೆ.

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

‘ರಾಜ ನರಸಿಂಹ’ನ ಘರ್ಜನೆ ವಿಳಂಬವಾಗುತ್ತಿದೆ. ಪಾಪ, ವಿಷ್ಣು ಚಿತ್ರಕ್ಕೂ ಥಿಯೇಟರ್‌ ಸಮಸ್ಯೆ ಬಂತಾ ಅಂತ ಪ್ರಶ್ನೆ ಹಾಕಿಕೊಂಡು ಹುಡುಕಿದರೆ, ಹೌದು ಎಂಬ ಉತ್ತರ ಸಿಗುತ್ತದೆ.

ಕಳೆದ ಒಂದು ತಿಂಗಳಿಂದ ‘ಮುಂದಿನ ಬದಲಾವಣೆ..’ ಅಂತ ಪತ್ರಿಕೆಗಳಲ್ಲಿ ರಾಜಾ ನರಸಿಂಹ ಚಿತ್ರದ ಜಾಹೀರಾತು ಪ್ರಕಟವಾಗುತ್ತಲೇ ಇದೆ. ಬೆಂಗಳೂರಿನ ಕೆಂಪೇಗೌಡ ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಅಂತಲೂ ನಮೂದಾಗುತ್ತಲೇ ಇದೆ. ತೆಲುಗು ಮೂಲದ ನಿರ್ದೇಶಕ ಮುತ್ಯಾಲ ಸುಬ್ಬಯ್ಯನವರಿಗೆ ಕನ್ನಡದವರೆಂದರೆ ಅಷ್ಟಕ್ಕಷ್ಟೇ ಎಂಬ ಭಾವನೆಯ ಈ ಕಾರಣಕ್ಕೇ ಬೇಸತ್ತ ವಿಷ್ಣು ಡಬ್ಬಿಂಗ್‌ಗೆ ಸೂಕ್ತ ಸಮಯದಲ್ಲಿ ಸಹಕರಿಸಲಿಲ್ಲ ಎಂಬ ಮಾತೂ ಇದೆ. ಈಗ ಡಬ್ಬಿಂಗ್‌ ಮುಗಿದರೂ, ಸಿನಿಮಾಗೆ ಥಿಯೇಟರಲ್ಲಿ ಜಾಗ ಇಲ್ಲ. ಅಂತಿಮವಾಗಿ ನರಸಿಂಹನ ದರ್ಶನ ಎಂದಾಗುತ್ತದೋ ಅಂತ ವಿಷ್ಣು ಅಭಿಮಾನಿ ಚಾತಕ ಪಕ್ಷಿಯಾಗಿರುವಾಗಲೇ ಅವರ ಇನ್ನೊಂದು ಸಿನಿಮಾ ಸೆಟ್ಟೇರಿದೆ.

ಮೈಸೂರಿನ ಜಯಲಕ್ಷ್ಮಿ ವಿಲಾಸ ಅರಮನೆಯಲ್ಲಿ ಫೆ.6ರಂದು ಸೆಟ್ಟೇರಿದ ವಿಷ್ಣು ನಾಯಕತ್ವದ ಹೊಸ ಸಿನಿಮಾ ಹೆಸರು ‘ಹೃದಯವಂತ’. ಕೊಬ್ಬರಿ ಮಂಜು ನಿರ್ಮಾಣದ ಈ ಚಿತ್ರದ ನಿರ್ದೇಶಕ ಪಿ.ವಾಸು. ಬಹು ವರ್ಷಗಳ ಬಿಡುವಿನ ನಂತರ ನಗ್ಮಾ ಮತ್ತೆ ನಾಯಕಿಯಾಗಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ.

ಮುಹೂರ್ತದ ಭರಾಟೆಯ ನಡುವೆಯೂ ವಿಷ್ಣು ಮಾತಿಗೆ ಮುಖಾಮುಖಿಯಾದರು-

ದರಿದ್ರ ಲಕ್ಷ್ಮಿಯರು ಸಾಹಸ ಲಕ್ಷ್ಮಿಯರಾದರಲ್ಲ. ಖುಷಿಯಾಯಿತೆ?
ನಾನು ಫಣಿ ಅವರಿಗೆ ಹೆಸರು ಬದಲಿಸುವಂತೆ ಸಲಹೆ ಕೊಟ್ಟಿದ್ದೆ ಅಷ್ಟೆ, ಅವರನ್ನು ತರಾಟೆಗೆ ತೆಗೆದುಕೊಂಡಿರಲಿಲ್ಲ. ಅವರ ಮೊದಲನೇ ಚಿತ್ರದಲ್ಲಿ ನಾನು ಅಭಿನಯಿಸಿದ್ದೇನೆ. ಅವರ ಕ್ರಿಯಾಶೀಲತೆ ಬಗ್ಗೆ ನನಗೆ ನಂಬಿಕೆಯಿದೆ. ದರಿದ್ರ ಲಕ್ಷ್ಮಿಯರು ಹೆಸರು ಬದಲಾಯಿಸಿರುವುದು ಖುಷಿಯ ಪ್ರಶ್ನೆಯಲ್ಲ. ಇದರಿಂದ ಅನೇಕರ ಮನಸ್ಸಿಗೆ ಸಮಾಧಾನವಾಗಿದೆ.

ದರಿದ್ರ ಲಕ್ಷ್ಮಿಯರು ಮೇಲೆ ಹರಿಹಾಯ್ದ ನೀವು, ನಿಮ್ಮ ಅಳಿಯ ಅನಿರುದ್ಧ ಜತ್ಕರ್‌ ಅಭಿನಯಿಸಿರುವ ‘ಲವ್ವ ಇಲ್ಲ ಡವ್ವ’ ಎಂಬ ಚಿತ್ರದ ಹೆಸರಿನ ಕುರಿತು ಮೌನ ವಹಿಸಿದ್ದು ಯಾಕೆ ಅನ್ನೋದು ಕೆಲವರ ಪ್ರಶ್ನೆ. ಇದಕ್ಕೆ ನಿಮ್ಮ ಬಳಿ ಉತ್ತರ ಇದೆಯಾ?
ಈ ವಿಷಯದಲ್ಲಿ ನಾನು ಹೆಚ್ಚು ಹೇಳೋಕೆ ಇಷ್ಟಪಡೋಲ್ಲ. ಸುಮ್ಮನೆ ಅದನ್ನೇ ಕೆದಕಿ ರಾಜಕೀಯ ಮಾಡೋದು ಬೇಡ. ಭಾವಾನಾತ್ಮಕ ಸಂಬಂಧ ಬೆಸೆದು, ಪರಸ್ಪರ ಅರ್ಥ ಮಾಡಿಕೊಂಡು ಬದುಕಿಸುವ ಅರಿವು ಮೂಡಿಸುವಂಥಾ ಮಾಧ್ಯಮ ಸಿನಿಮಾ. ವಿನಾಕಾರಣ ಇದನ್ನು ರಾಜಕೀಯವಾಗಿಸೋದು ಬೇಡ !

ಮೀಸೆ ಸಂಸ್ಕೃತಿ, ಪಂಚೆ ಪೈಜಾಮಕ್ಕೆ ನೀವು ಜೋತುಬಿದ್ದದ್ದು ಯಾಕೆ ?
ಎಲ್ಲಾ ಗ್ರಾಮೀಣ ಅಭಿಮಾನಿಗಳಿಗಾಗಿ. ಎಲ್ಲರೂ ಪಾಶ್ಚಾತ್ಯ ಉಡುಗೆ ತೊಟ್ಟು ಕುಣಿಯುವ ಈ ಹೊತ್ತಲ್ಲಿ ನಾನು ಪಂಚೆ- ಪೈಜಾಮ ತೊಟ್ಟರೆ ಜನ ಅದನ್ನು ಮೆಚ್ಚಿಕೋತಾರೆ. ಮೆಚ್ಚಿಕೊಂಡಿದ್ದಾರೆ ಅನ್ನೋದು ಪ್ರೂವ್‌ ಆಗಿದೆ. ಏನೇ ವೇಷ ಭೂಷಣ ತೊಟ್ಟರೂ, ಎಲ್ಲದರ ಹಿಂದೆ ಸಿನಿಮಾ ಗೆಲ್ಲಲಿ ಎಂಬ ಉದ್ದಿಶ್ಯವಿರುತ್ತದೆ ಅನ್ನೋದು ದಿಟ.

ಸಾಕಷ್ಟು ಕಾಲ ತಿದ್ದಿ ತೀಡಿದ ಎಷ್ಟೋ ಚಿತ್ರಗಳು ತೋಪಾಗಿರುವ ಉದಾಹರಣೆಗಳಿವೆಯಲ್ಲ. ಯಾಕೆ ಹೀಗೆ ?
ಯಾವುದೇ ಸಿನಿಮಾ ಶೂಟಿಂಗ್‌ ಶುರುವಾದ 128 ದಿನಗಳೊಳಗೆ ತೆರೆಗೆ ಬರಬೇಕು. ಆಗ ಮಾತ್ರ ಅದರ ಆಕರ್ಷಣೆ ಹಸುರಾಗಿದ್ದು, ಓಡುವ ಸಾಧ್ಯತೆ ಇರುತ್ತದೆ.

‘ಏಳು ಜನ್ಮಕ್ಕಾಗುವಷ್ಟು ಪ್ರಶಸ್ತಿಗಳು ಸಿಕ್ಕಿವೆ. ಇನ್ನು ನಂಗೆ ಪ್ರಶಸ್ತಿ ಕೊಡಬೇಡಿ’ ಅಂತ ಮೊನ್ನೆ ತಾನೆ ವಿಷ್ಣು ಅಪ್ಪಣೆ ಕೊಡಿಸಿದ್ದರು. ಹೀಗೆ ಹೇಳಿದ ಬಗಲಿಗೇ ಸೂರ್ಯೋದಯ ಪ್ರತಿಷ್ಠಾನ ‘ಜಮೀನ್ದಾರ್ರು’ ಚಿತ್ರದ ಅಭಿನಯಕ್ಕಾಗಿ ವಿಷ್ಣುಗೆ ಶ್ರೇಷ್ಠ ನಟ ಪ್ರಶಸ್ತಿ ಪ್ರಕಟಿಸಿದೆ. ಪಂಚೆ- ಪೈಜಾಮಕ್ಕೆ ಜಯವಾಗಲಿ. ವಿಷ್ಣು ಈ ಪ್ರಶಸ್ತಿಯನ್ನು ಪಡೆಯುತ್ತಾರೋ ಇಲ್ಲವೋ ಅನ್ನುವುದಷ್ಟೇ ಈಗ ಉಳಿದಿರುವ ಕುತೂಹಲ !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada