»   » ಸಾಹಿತಿ ಜಿ.ಎಸ್‌.ಶಿವರುದ್ರಪ್ಪ ಅವರ ಸಿನಿಮಾ ಸಾಂಗತ್ಯ

ಸಾಹಿತಿ ಜಿ.ಎಸ್‌.ಶಿವರುದ್ರಪ್ಪ ಅವರ ಸಿನಿಮಾ ಸಾಂಗತ್ಯ

Subscribe to Filmibeat Kannada
 • ಮಹೇಶ್‌ ದೇವಶೆಟ್ಟಿ
ಬಾಲಕನಿಗೆ ಇನ್ನೂ ಹದಿಮೂರರ ವಯಸ್ಸು. ಮೂಕಿ ಚಿತ್ರಗಳ ಯುಗ ಮುಗಿದು ಟಾಕಿ ಚಿತ್ರಗಳು ಶುರುವಾಗುತ್ತಿದ್ದ ಸಮಯ. ಆತನಿಗೆ ಅದೇನೂ ಸಿನಿಮಾ ಹುಚ್ಚು. ಸಂಜೆ ಶಾಲೆ ಬಿಟ್ಟ ತಕ್ಷಣ ಹಾಸ್ಟೆಲ್‌ಗೆ ಹೋಗುತ್ತಿರಲಿಲ್ಲ. ಯಾಕೆಂದರೆ ಆತನಿಗಾಗಿ ಥೇಟರ್‌ಗಳು ಕಾಯುತ್ತಿದ್ದವು. ಅಲ್ಲಿದ್ದದ್ದು ಮೂರು ನಾಲ್ಕು ಥೇಟರ್‌. ವಿನೋದ, ವಸಂತಾ, ಮಹಾಲಕ್ಷ್ಮೀ... ಪ್ರತಿ ಚಿತ್ರಮಂದಿರದ ಎದುರು ನಿಲ್ಲುತ್ತಿದ್ದ. ಮೆಚ್ಚಿನ ನಟ ನಟಿಯರ ಚಿತ್ರ ಬಂದಿದೆಯಾ? ಇಂದು ಯಾವ ಚಿತ್ರ ನಡೆಯುತ್ತಿದೆ? ಮುಂದೆ ಬರೋದು ಯಾವುದು? ಅದರ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಹೀರೊ, ಹೀರೊಯಿನ್ನು... ಇತ್ಯಾದಿ ಇತ್ಯಾದಿ ವಿವರ ನೆನಪಲ್ಲಿಟ್ಟುಕೊಂಡು, ಬಾಯಿ ಚಪ್ಪರಿಸುತ್ತಾ ಹಾಸ್ಟೆಲ್‌ ಹಾದಿ ಹಿಡಿಯುತ್ತಿದ್ದ.

ಫಿಯರ್‌ ಲೆಸ್‌ ನಾಡಿಯಾ ಅಂದರೆ ಆತನಿಗೆ ಪಂಚಪ್ರಾಣ. ಆಕೆ ಕೈಯಲ್ಲಿ ಚಾಬೂಕು ಹಿಡಿದು ವಿಲನ್‌ಗಳನ್ನು ಧೂಳಿಪಟ ಮಾಡುವ ದೃಶ್ಯ ಬಂದರೆ ಸಾಕು ಆ ಹುಡುಗ ಕೇಕೆ ಹಾಕುತ್ತಿದ್ದ. ಮನೆಯಿಂದ ಮಹಡಿಗೆ, ನೆಲದಿಂದ ನೀರಿಗೆ ಹಾರುತ್ತಿದ್ದ ಆಕೆ ಸ್ಟೈಲ್‌ಗೆ ಬೆರಗಾಗುತ್ತಿದ್ದ. ಅಶೋಕ್‌ಕುಮಾರ್‌, ಮೀನಾಕುಮಾರಿ ಸಿನಿಮಾ ಬಂದರೆ ಗೆಳೆಯರ ಗುಂಪಿನೊಂದಿಗೆ ಶನಿವಾರ ಮಧ್ಯಾಹ್ನವೇ ಥೇಟರ್‌ ಮುಂದೆ ಹಾಜರ್‌. ಒಂದಾಣೆ ಕೊಟ್ಟು ಪರದೆ ಮುಂದೆಯೇ ನೆಲ ಸೀಟಿನಲ್ಲಿ ಜಮಾಯಿಸುತ್ತಿದ್ದ. ಕಾಸು ಇರೋದೆ ಕಡಿಮೆ, ಅದರಲ್ಲೇ ಕಳ್ಳೆಕಾಯಿ ಮೆಲ್ಲುತ್ತಾ ‘ಸೋಜಾ ರಾಜಕುಮಾರಿ...’ ಹಾಡಿಗೆ ಧ್ವನಿ ಸೇರಿಸುತ್ತಿದ್ದ.

*

ಆಕಸ್ಮಾತ್‌ ಯಾವುದಾದರೂ ಒಂದು ಚಿತ್ರವನ್ನು ಎಲ್ಲರಿಗಿಂತ ಮೊದಲು ನೋಡಿ ಬಂದರೆ ಮುಗೀತು. ಪರದೆ ಮೇಲೆ ಮೂಡಿದ ಮೊದಲ ಹೆಸರಿನಿಂದ ಶುಭಂವರೆಗೆ ಡಿಟೇಲಾಗಿ ಕತೆ ಗೆಳೆಯರಿಗೆ ತಲುಪುತ್ತಿತ್ತು. ಹಾಡು, ಹೊಡೆದಾಟದ ವಿವರಗಳು ಆ್ಯಕ್ಷನ್‌ ಸಹಿತ ಮುಟ್ಟುತ್ತಿದ್ದವು. ಬೇರೆಯವರು ಹೇಳಿದ ಕತೆ ಕೇಳಿ ಅವತ್ತೇ ಥೇಟರ್‌ಗೆ ನುಗ್ಗುತ್ತಿತ್ತು. ಈ ಗೆಳೆಯರ ತಂಡ. ಪರ ಊರಿಗೆ ಹೋದಾಗ ಊರಿನಲ್ಲಿ ನೋಡಿದ ಚಿತ್ರ ಬಂದಿದ್ದರೆ ಮತ್ತೊಮ್ಮೆ ನೋಡೋದೇ...

*

ಎಂಬತ್ತರ ಅಜ್ಜಯ್ಯ ಕಮ್‌ ಸಾಹಿತಿ ಜಿ.ಎಸ್‌.ಶಿವರುದ್ರಪ್ಪ ಬಾಲ್ಯದ ನೆನಪನ್ನು ಹೀಗೆ ಹೆಕ್ಕುತ್ತಿದ್ದರು. ಸಾಹಿತ್ಯ ಮತ್ತು ಸಿನಿಮಾಕ್ಕೆ ದಶಕಗಳ ಸಂಬಂಧವಿದೆ. ಕೆಲವು ಸಾಹಿತಿಗಳು ಎರಡರಲ್ಲೂ ತೊಡಗಿಸಿ ಕೊಂಡಿದ್ದಾರೆ. ಆದರೆ ಶಿವರುದ್ರಪ್ಪನವರು ಮಾತ್ರ ಅಕ್ಷರ ಪ್ರೀತಿಗೆ ಮಾತ್ರ ಕೊರತೆ ಮಾಡಲಿಲ್ಲ. ಬಾಲ್ಯದಿಂದ ಜೋಪಾನ ಮಾಡಿದ ಸಿನಿಮಾ ಹುಚ್ಚನ್ನೂ ಕಡಿಮೆ ಮಾಡಲಿಲ್ಲ. ಸುಬ್ಬಯ್ಯ ನಾಯ್ಡು ನಾಯಕರಾಗಿದ್ದ ಸತಿ ಸುಲೋಚನಾದಿಂದ ಇಂದಿನ ಶಿವಣ್ಣನ ‘ಜೋಗಿ’ಯವರೆಗೆ ಚಿತ್ರಗಳನ್ನು ನೋಡಿದ್ದಾರೆ, ನೋಡುತ್ತಿದ್ದಾರೆ, ಚೆನ್ನಾಗಿದೆ ಅಂತ ಸಲಹೆ ಬಂದರೆ ನೀಟಾಗಿ ಥೇಟರ್‌ಗೆ ಹೋಗುತ್ತಾನೆ. ನಾಗತಿಹಳ್ಳಿ, ಸೀತಾರಾಂ ಅವರಂಥ ಸ್ನೇಹಿತರು ಕರೆದಾಗ ಅವರ ಚಿತ್ರಗಳನ್ನೂ ವೀಕ್ಷಿಸುತ್ತಾರೆ. ಟಿವಿಯಲ್ಲಿ ಹಾಜರಾಗುವ ಚಿತ್ರಗಳಾದರೂ ಓಕೆ.

ಇಂದಿನ ಸಿನಿಮಾ ಪ್ರೀತಿಗೆ ಮೂಲ ಕಾರಣ ಬಾಲ್ಯದ ಸಿನಿಮಾ ಕ್ರೇಜು. ಆಗ ಎಲ್ಲರಂತೆ ಇವರಿಗೂ ಸಿನಿಮಾ ಮೋಡಿ ಮಾಡಿತ್ತು. ಇಂದು ‘ಪಥೇರ್‌ ಪಾಂಚಾಲಿ’ಯಂಥ ಚಿತ್ರಗಳನ್ನು ಇಷ್ಟ ಪಡುದ ಇವರು ಅಂದು ಸ್ಟಂಟ್‌ ಸಿನಿಮಾಗಳೆಂದರೆ ಆಹಾ ಅಂತಿದ್ದರು. ಮಾಟ ಮಂತ್ರದ ಕತೆ ಇದ್ದರಂತೂ ಪರದೆಯಿಂದ ಕಣ್ಣು ಕೀಳುತ್ತಿರಲಿಲ್ಲ. ಪೌರಾಣಿಕ ಚಿತ್ರಗಳೂ ಇವರಿಗೆ ಒಂಥರಾ ಸಂಸ್ಕಾರ ಕಲಿಸಿದವು. ಇದೆಲ್ಲ ಅನುಭವಿಸಿದ್ದು ದಾವಣಗೆರೆಯಲ್ಲಿ ಶಾಲೆ ಕಲಿಯುವಾಗ. ಹೊಸದುರ್ಗದ ಬೆಲಗೂರಿನಿಂದ ದಾವಣಗೆರೆಗೆ ಬಂದು ಜಯದೇವ ಹಾಸ್ಟೆಲ್‌ನಲ್ಲಿ ಇದ್ದರು.

ಕನ್ನಡಕ್ಕಿಂತ ತೆಲುಗು ಚಿತ್ರಗಳು ಆಗ ಹೆಚ್ಚು ತಯಾರಾಗುತ್ತಿದ್ದವು. ಹೀಗಾಗಿ ನಾಗಯ್ಯ, ಕಾಂಚನ ಮಾಲಾ, ಜಗ್ಗಯ್ಯ ನಟಿಸಿದ ಚಿತ್ರಗಳ ಹೆಸರು ಬಾಯಿಪಾಠ. ಅಶೋಕ್‌ ಕುಮಾರ್‌, ಮೀನಾ ಕುಮಾರಿ, ನರ್ಗಿಸ್‌ ಹೃದಯ ಬಡಿತ ಹೆಚ್ಚಿಸುತ್ತಿದ್ದರು.‘ಚಲ್‌ ಚಲ್‌ ರೇ ನೌ ಜವಾನ್‌...’ ಹಾಡಿಗೆ ರೋಮಾಂಚನವಾಗುತ್ತಿತ್ತು. ತೆಲುಗು ಚಿತ್ರಗಳ ಕಂದ ಪದ್ಯಗಳು ಅಚ್ಚರಿ ಮೂಡಿಸುತ್ತಿದ್ದವು.

ಡಾ.ರಾಜ್‌, ಭಾರತಿ, ಜಯಂತಿ, ವಿಷ್ಣುವರ್ಧನ್‌ ಚಿತ್ರಗಳು ಖುಷಿ ಕೊಡುತ್ತಿದ್ದವು. ಲಂಕೇಶ್‌ ತಮ್ಮ ಚಿತ್ರ ಮಾಡುವಾಗ ಶೂಟಿಂಗ್‌ ಹೇಗೆ ಮಾಡುತ್ತಾರೆಂದು ಸ್ಪಾಟ್‌ಗೆ ಹೋಗುವಷ್ಟು ಇವರನ್ನು ಸಿನಿಮಾ ಆವರಿಸಿಕೊಂಡಿತ್ತು.

ವಯಸ್ಸು ಮಾಗಿದಂತೆ ಅಭಿರುಚಿಯೂ ಬದಲಾಯಿತು. ಸ್ಟಂಟ್‌ ಸಿನಿಮಾಗಿಂತ ಸತ್ಯಜೀತ್‌ ರೇ ನಿರ್ದೇಶನದ ‘ಪಥೇರ್‌ ಪಾಂಚಾಲಿ’ಯಂಥ ಕತೆ ಚೆಂದ ಅನ್ನಿಸಿದವು. ವಾಸ್ತವಕ್ಕೆ ಬದ್ಧವಾಗಿದ್ದರೂ ಕಲಾತ್ಮಕತೆ ಕಳಕೊಳ್ಳದ ಅಂಥ ಚಿತ್ರಗಳಿಂದ ಸಾಹಿತ್ಯದಂತೆ ಸಂಸ್ಕಾರ ಪಡೆಯಬಹುದೆಂದು ಮನವರಿಕೆಯಾಯಿತು. ಚಿತ್ರಗಳಿಗೆ ಸಾಮಾಜಿಕ ಜವಾಬ್ದಾರಿ ಇರಲೇಬೇಕು ಎನ್ನುವುದು ಇವರ ನಿಲುವಾಯಿತು.

*

ಸಾಮಾನ್ಯವಾಗಿ ಸಾಹಿತಿಗಳನ್ನು ಸಾಹಿತ್ಯದ ಬಗ್ಗೆ ಮಾತ್ರ ಪ್ರಶ್ನೆ ಕೇಳಲಾಗುತ್ತದೆ. ಆದರೆ ಒಬ್ಬ ಸಾಹಿತಿಗೆ ಸಿನಿಮಾ ಕುರಿತು ಏನು ಅಭಿಪ್ರಾಯ?ಈ ಪ್ರಶ್ನೆ ಮುಂದಿಟ್ಟುಕೊಂಡು ಅವರ ಎದುರು ಕುಳಿತಾಗ ಪೂರ್ಣ ತಯಾರಿ ಮಾಡಿಕೊಂಡಿದ್ದರು. ವಿಷಯ ತಿಳಿಸಿದ್ದರಿಂದ ಪೇಪರ್‌ನಲ್ಲಿ ಚಿಕ್ಕದಾಗಿ ನೋಟ್ಸ್‌ ಮಾಡಿಟ್ಟುಕೊಂಡಿದ್ದರು. ಛಾಯಾಗ್ರಾಹಕರನ್ನು ನೋಡುತ್ತಲೇ ಮನೆ ಉಡುಪು ತೆಗೆದು ನವಿರುಬಣ್ಣದ ಅಂಗಿ ತೊಟ್ಟು ಮಾತಿಗೆ ಕುಳಿತರು. ಗಂಭೀರ ಪ್ರಶ್ನೆಗಳ ಬದಲು ತುಂಬಾ ಮಾಮೂಲಿ, ಆದರೆ ಲವಲವಿಕೆ ಮೂಡಿಸುವ ಅಕ್ಷರಗಳಿಗೆ ಧ್ವನಿ ನೀಡಿದಾಗ ಹೊರ ಬಂದ ವಿವರ ಇಲ್ಲಿವೆ.

 • ‘ಜೋಗಿ’ ತುಂಬಾ ಹಿಟ್‌ ಆಗಿದೆ. ಅದು ಹೇಗನ್ನಿಸಿತು?

 • ಹಿಂಸೆ ಜಾಸ್ತಿ ಅಂತನ್ನಿಸಿತು. ತಾಯಿ ಸೆಂಟಿಮೆಂಟ್‌ ಇದೆ ಅನ್ನೋದು ನಿಜ. ಅದಕ್ಕಿಂತ ಕ್ರೌರ್ಯವೇ ಮುಂಚೂಣಿಯಲ್ಲಿದೆ. ಇಂದಿನ ಬಹುತೇಕ ಚಿತ್ರಗಳು ಹಾಗೇ ಇವೆ. ಅಬ್ಬರ ಹೆಚ್ಚು. ಮೊದಲಿನಂತೆ ಮನೆ ಮಂದಿಯೆಲ್ಲಾ ಕುಳಿತು ನೋಡುವಂತೆ ಇರುವುದಿಲ್ಲ. ಹಾಡುಗಳಲ್ಲೂ ಅಬ್ಬರ.
 • ಇತ್ತೀಚೆಗೆ ನೋಡಿದ ಬೇರೆ ಚಿತ್ರಗಳ ಬಗ್ಗೆ ಹೇಳಿ?

 • ಅಮೃತಧಾರೆ ನೋಡಿದೆ. ಲವಲವಿಕೆ ಇದೆ. ಆದರೆ ಅಮೆರಿಕಾ ಅಮೆರಿಕಾದಂತೆ ಗಾಢವಾಗಿ ತಟ್ಟೋಲ್ಲ. ರಾಮ ಶಾಮ ಭಾಮ ನೋಡಿದೆ. ಒಳ್ಳೇ ಸಿನಿಮಾ. ಎಂಜಾಯ್‌ ಮಾಡಿದೆ. ರಮೇಶ್‌ ಎಷ್ಟು ಚನ್ನಾಗಿ ಮಾಡ್ತಾರೆ.ಅದ್ಭುತ ನಟ.
 • ಸಿನಿಮಾದಲ್ಲಿ ಆಸಕ್ತಿ ಇದ್ದರೂ ನೀವ್ಯಾಕೆ ಅದರಲ್ಲಿ ತೊಡಗಿಸಿಕೊಳ್ಳಲಿಲ್ಲ?

 • ಸಾಹಿತ್ಯವನ್ನು ಹಣಕ್ಕಾಗಿ ಮಾರೋದು ತಪ್ಪು. ಎಷ್ಟಾದರೂ ಅದೊಂದು ಉದ್ಯೋಗ. ಕವಿತೆ ಬರೆಯುವುದು ಸ್ವಂತ ಖುಷಿಗೆ. ಆದರೆ ಸಿನಿಮಾದಲ್ಲಿ ಸಾಂದರ್ಭಿಕವಾಗಿ ಬರೆಯಬೇಕು. ಅದು ಕಮರ್ಶಿಯಲ್‌. ಅದಕ್ಕೇ ಅದು ಮೂರನೇ ದರ್ಜೆ ಅನ್ನಿಸಿತು.
 • ನಿಮ್ಮ ಹಾಡನ್ನು ಸಿನಿಮಾದಲ್ಲಿ ಬಳಸಿದ್ದಾರಲ್ಲ...

 • ಅದು ಸಿನಿಮಾಕ್ಕಾಗಿಯೇ ಬರೆದಿದ್ದಲ್ಲ. ಮೊದಲು ಬರೆದದ್ದನ್ನು ಸೂಕ್ತವೆಂದು ಪಡೆದರು. ಮಾನಸ ಸರೋವರದಲ್ಲಿ ‘ವೇದಾಂತಿ ಹಾಡಿದನು’...ಮತ್ತು ‘ ಹಾಡು ಹಳೆಯದಾದರೇನು’...ಗೀತೆಗಳಿವೆ. ಎರಡೂ ಟ್ಯೂನ್‌ನ್ನು ಕೆಡಿಸಿದ್ದರು. ‘ಹಾಡು’ ... ಮೊದಲು ಟ್ಯೂನ್‌ ಮಾಡಿದಾಗ ಹಾರಿಬಲ್‌ ಆಗಿತ್ತು. ಅಶ್ವತ್ಥ ಅವರಿಗೆ ಹೇಳಿದೆ. ಕೊಂಚ ರಿಪೇರಿ ಮಾಡಿ ಪರವಾಗಿಲ್ಲ ಅನ್ನಿಸುವಂತೆ ಮಾಡಿದರು. ಆದರೆ ವೇದಾಂತಿ ಹೇಳಿದನು... ಮಾತ್ರ ಇಷ್ಟವಾಗಲಿಲ್ಲ.
 • ಕನ್ನಡದಲ್ಲಿ ಕತೆಗಳೇ ಇಲ್ಲ ಅಂತಾರೆ...

 • ಯಾಕಿಲ್ಲ? ಹುಡುಕುವ ಕೆಲಸ ಆಗಬೇಕು. ಹಿಂದೆಲ್ಲಾ ಪುಟ್ಟಣ್ಣ ಮಾಡಲಿಲ್ಲವೆ? ಅನ್ವೇಷಕ ಮನಸಿದ್ದರೆ ಬೇಕಾದಷ್ಟು ಕತೆಗಳು ಸಿಗುತ್ತವೆ. ನಿರ್ಮಾಪಕರು ಅದಕ್ಕೊಂದು ಸಲಹಾ ಸಮಿತಿ ನೇಮಿಸಿಕೊಳ್ಳಲಿ. ಕತೆಗಳ ಬಗ್ಗೆ ಮಾಹಿತಿ ಪಡೆಯಲಿ. ದ್ವೀಪ ಚಿತ್ರ ನೋಡಿದ ಮೇಲೆ ಡಿಸೋಜಾ ಎಂಥಾ ಕತೆ ಬರೆದಿದ್ದಾರೆ ಅಂತ ಗೊತ್ತಾಯಿತು. ಅದಕ್ಕಿಂತ ಒಳ್ಳೆಯ ಕತೆ ಬೇಕಾ?
 • ರಿಮೇಕ್‌ ಚಿತ್ರಗಳಿಗೆ ಸಬ್ಸಿಡಿ ಕೊಡಬೇಕಂತಾರಲ್ಲ...

 • ಹಾಗೆ ಮಾಡಬಾರದು. ಸ್ವಂತಿಕೆಗೆ ಬೆಲೆ ಕೊಡಬೇಕು. ಹಾಗಂತ ರಿಮೇಕ್‌ ಚಿತ್ರಗಳು ಕಳಪೆ ಅಂತಲ್ಲ, ಅದಕ್ಕಿಂತ ಹೆಚ್ಚಾಗಿ ನಮ್ಮ ಬದುಕು ಮತ್ತು ಸಮಾಜಕ್ಕೆ ಹತ್ತಿರವಾದ ಕತೆಗಳಿಗೆ ಸಬ್ಸಿಡಿ ನೀಡಬೇಕು.
 • ತುಂಬಾ ಆಸೆ ಪಟ್ಟು ಹೋದಾಗ ನಿರಾಸೆ ಮೂಡಿಸಿದ ಚಿತ್ರ ಯಾವುದಾದರೂ ಇದೆಯಾ?

 • (ತುಂಬಾ ಇಕ್ಕಟ್ಟಿನ ಪ್ರಶ್ನೆ ಎನ್ನುತ್ತಾ) ಕಾನೂರು ಹೆಗ್ಗಡತಿ ನೋಡಿದಾಗ ಹಾಗನ್ನಿಸಿತು. ಕಾದಂಬರಿ ವಿಸ್ತಾರ ದೊಡ್ಡದು. ಅದರ ಒಂದು ಮುಖ ಮಾತ್ರ ತೆರೆ ಮೇಲೆ ಕಾಣಿಸಿತು. ಇನ್ನಷ್ಟು ಚೆನ್ನಾಗಿ ಮಾಡಲು ಅವಕಾಶವಿತ್ತು.
 • ಒಂದು ಚಿತ್ರದಲ್ಲಿ ಏನಿರಬೇಕು?

 • ಕಲಾತ್ಮಕತೆ ಮತ್ತು ಸಾಮಾಜಿಕ ಜವಾಬ್ದಾರಿ. ಅದರೊಂದಿಗೆ ಮನರಂಜನೆಗೂ ಸ್ಥಾನವಿದೆ.
 • ಇತ್ತೀಚಿನ ನಟರಲ್ಲಿ ಪ್ರಬುದ್ಧ ಅನ್ನಿಸಿದ್ದು ಯಾರು?

 • ಮೊದಲಾದರೆ ರಾಜ್‌, ವಿಷ್ಣು ಇದ್ದರು. ಈಗ ಅಂಥವರು ಕಾಣುತ್ತಿಲ್ಲ.

ಮೆತ್ತಗಿನ ಧ್ವನಿಯಲ್ಲಿ ಎಲ್ಲವನ್ನೂ ಅಳೆದು ತೂಗಿ ಮಾತಾಡುತ್ತಿದ್ದ ಶಿವರುದ್ರಪ್ಪನವರು ಕೆಲ ವಿಷಯವನ್ನು ಉದ್ದೇಶಪೂರ್ವಕವಾಗಿ ಮರೆ ಮಾಚಿದರು. ಆದರೆ ಸಿನಿಮಾ ನೋಡಲು ಮುಕ್ತ ಮನಸು ಅಗತ್ಯ ಎನ್ನುವುದಕ್ಕೆ ಹಿಂದೆ ಮುಂದೆ ನೋಡಲಿಲ್ಲ. ಜತೆಗೆ ಇತ್ತೀಚೆಗೆ ಗ್ರೇಟ್‌ ಅನುಭವ ನೀಡುವ ಚಿತ್ರ ನೋಡಿಲ್ಲ ಎನ್ನುವುದಕ್ಕೂ ಮುಜುಗರ ಪಡಲಿಲ್ಲ. ಪೂರ್ವ ಗ್ರಹದಿಂದ ಮುಕ್ತರಾದಾಗಲೇ ಸಿನಿಮಾ ಎಂಜಾಯ್‌ ಮಾಡಲು ಸಾಧ್ಯ ಎಂಬುದನ್ನು ದಾಟಿಸಲಿಲ್ಲ. ‘ಹಾಡು ಹಳೆಯದಾದರೇನು ಭಾವ ನವ ನವೀನ...’ ಎನ್ನುವ ತಮ್ಮ ಪದ್ಯದ ಸಾಲಿನಂತೆ ಅವರ ಮಾತುಗಳು ಯಜಮಾನನ ಸಲಹೆಯಂತೆ ಕೇಳಿಸುತ್ತಿದ್ದವು. ‘ಪ್ರೀತಿ ಇಲ್ಲದೆ ಮೇಲೆ ಮೋಡ ಕಟ್ಟೀತು ಹೇಗೆ...’ ಗೀತೆ ಬರೆದ ಅವರ ಮಾತು. ಅದಿಲ್ಲದೆ ಏನೂ ಇಲ್ಲ ಎನ್ನಿಸುವ ಭಾವ ಮೂಡಿಸುತ್ತಿತ್ತು...

(ಸ್ನೇಹ ಸೇತು : ವಿಜಯ ಕರ್ನಾಟಕ )

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada