»   » ಕುರುಕ್ಷೇತ್ರದ ‘ಸಿನಿಮಾ ಕಾಂಡ’

ಕುರುಕ್ಷೇತ್ರದ ‘ಸಿನಿಮಾ ಕಾಂಡ’

By Super
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಈ ಬಾರಿಯ ಚುನಾವಣೆಗಳು ಸಿನಿಮಾ ಮಂದಿಯ ಭಾಗವಹಿಸುವಿಕೆಯ ಮಟ್ಟಿಗಂತೂ ಒಂದು ಅಪರೂಪದ ದಾಖಲೆಯೇ. ಹಿಂದೆಂದೂ ಸಿನಿಮಾ ಮಂದಿ ರಾಜಕೀಯಕ್ಕೆ ಈ ಪಾಟಿ ಮುಗಿಬಿದ್ದಿರಲಿಲ್ಲ . ರಾಜಕೀಯ ಪಕ್ಷಗಳು ಸಿನಿಮಾ ಚಿಟ್ಟೆಗಳಿಗಾಗಿ ಇಷ್ಟೊಂದು ತಹತಹಿಸಿರಲಿಲ್ಲ . ಈ ಬಾರಿ ಸಿನಿಮಾ ಮಂದಿಗೆ ಇನ್ನಿಲ್ಲದ ಬೇಡಿಕೆ. ಮಾಜಿ, ಹಾಲಿ ತಾರೆಗಳಿಗೆಲ್ಲ ಕೈತುಂಬ ಉದ್ಯೋಗ- ರಾಜಕೀಯದಲ್ಲಿ !

  ಕನ್ನಡ ಚಿತ್ರರಂಗ ಕೂಡ ರಾಜಕಾರಣದಲ್ಲಿ ಪಾಲು ಪಡೆಯುವ ಮಟ್ಟಿಗೆ ಹಿಂದೆ ಬಿದ್ದಿಲ್ಲ . ಒಮ್ಮೆ ಸುಮ್ಮನೇ ಕಣ್ಣಾಡಿಸಿ- ಐದು ಲೋಕಸಭಾ ಕ್ಷೇತ್ರಗಳು ಸೇರಿದಂತೆ ಸರಿಸುಮಾರು ಹದಿನೈದಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಕನ್ನಡ ಸಿನಿಮಾ ಕರ್ಮಿಗಳು ತಮ್ಮ ಚುನಾವಣಾ ಅದೃಷ್ಟ ವನ್ನು ಈ ಬಾರಿ ಪರೀಕ್ಷೆಗೆ ಪರೀಕ್ಷಿಸುತ್ತಿದ್ದಾರೆ.

  ಈ ಚುನಾವಣೆಯಲ್ಲಿ ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳ ಪೈಕಿ- ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರು ಸ್ಪರ್ಧಿಸುತ್ತಿರುವ ಚಾಮರಾಜಪೇಟೆ ಕ್ಷೇತ್ರಕ್ಕೆ ಪ್ರತಿಷ್ಠೆಯ ಪೈಕಿ ಮೊದಲ ಮಣೆ. ಮಾರ್ಕೆಟ್‌ ದೇವಿ ಎಂದೇ ಮನೆಮನೆ ಮಾತಾದ ಆರ್‌.ವಿ.ದೇವರಾಜ್‌ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರ ರಾಷ್ಟ್ರದ ಗಮನ ಸೆಳೆದದ್ದು ಇಬ್ಬರು 'ಮುಖ್ಯಮಂತ್ರಿ"ಗಳು ನೇರವಾಗಿ ಪ್ರತಿಸ್ಪರ್ಧಿಸಲು ಅಖಾಡಕ್ಕೆ ಇಳಿದಾಗ. ಇಲ್ಲಿಂದ ರಾಜ್ಯದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಕಾಂಗೈಯಿಂದ ನಾಮಪತ್ರ ಸಲ್ಲಿಸಿದ್ದರು. ಅವರ ಎದುರಾಳಿಯಾಗಿ ಚಲನಚಿತ್ರದ 'ಮುಖ್ಯಮಂತ್ರಿ" ಚಂದ್ರು ಬಿಜೆಪಿಯಿಂದ ಆಯ್ಕೆ ಬಯಸಿ ಅಖಾಡಕ್ಕೆ ಇಳಿದಿದ್ದಾರೆ.

  ಅಂದಹಾಗೆ, ಅಪ್ಪಟ ಕನ್ನಡ ಹಾಗೂ ಬೆಂಗಳೂರಿನ ಕೊಳೆಗೇರಿಗಳ ತವರು ಚಾಮರಾಜಪೇಟೆಯಲ್ಲಿ ನೇರಸ್ಪರ್ಧೆ ಏರ್ಪಟ್ಟಿಲ್ಲ . ್ಫಇಬ್ಬರು ಮುಖ್ಯಮಂತ್ರಿಗಳೊಂದಿಗೆ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಮಾಜಿ ಎಂಎಲ್‌ಎ ( ಮಲ್ಲೇಶ್ವರಂ) ಅನಂತನಾಗ್‌ ಕಣದಲ್ಲಿದ್ದಾರೆ. ಅನಂತನಾಗ್‌ ಕೂಡಾ ಒಳ್ಳೆಯ ನಟರು. ಒಳ್ಳೆಯ ರಾಜಕಾರಣಿ ಕೂಡ. ಪಟೇಲ್‌ ಸಂಪುಟದಲ್ಲಿ ಸಚಿವರಾಗಿ, ಪಟೇಲರಿಗೆ ಪರಮಾಪ್ತರಾಗಿ, ಸಂಜೆಯ ಕೂಟಗಳ ಜೊತೆಗಾರರಾಗಿದ್ದ ಅನಂತನಾಗ್‌ ಸದ್ಯಕ್ಕೆ ದೇವೇಗೌಡರ ಪಾಳಯದಲ್ಲಿದ್ದಾರೆ. ಇದೇ ಅನಂತನಾಗ್‌ ಹಿಂದೊಮ್ಮೆ ರಾಮಕೃಷ್ಣ ಹೆಗಡೆ ಅವರ ಪರಮಾಪ್ತರಾಗಿದ್ದರು. ಸದ್ಯಕ್ಕೆ ಹೆಗಡೆ ಕುರಿತು ಅನಂತ್‌ ಒಳ್ಳೆಯ ಮಾತಾಡುವುದಿಲ್ಲ ; ದೇವಗೌಡರಿಗೂ ಹೆಗಡೆ ಎಂದರೆ ನೆಗಡೆ.

  ಹ್ಯಾಟ್ರಿಕ್‌ನತ್ತ ಅಂಬರೀಷ್‌

  ಗೆಲ್ಲುವ ಕುದುರೆ ಎಂದೇ ಹೇಳಲಾಗುತ್ತಿರುವ ಅಂಬರೀಷ್‌ ಮಂಡ್ಯದಿಂದ ಮರು ಆಯ್ಕೆ ಪಡೆಯುವ ಸಿದ್ಧತೆಯಲ್ಲಿದ್ದಾರೆ. ಅಂಬರೀಷ್‌ಗೆ ಮಂಡ್ಯದಲ್ಲಿ ಪ್ರಬಲ ಎದುರಾಳಿ ಸದ್ಯಕ್ಕಂತೂ ಯಾರೂ ಕಾಣುತ್ತಿಲ್ಲ . ಕಾವೇರಿ ಗಲಾಟೆಯಲ್ಲಿ ಅಂಬಿ ಮಾತು ತಪ್ಪಿದರೂ, ಜನ ಮುನಿದಿಲ್ಲ . ಅದಕ್ಕೆ ಸಾಕ್ಷಿ , ಮೊನ್ನೆ ಅಂಬಿ ನಾಮಪತ್ರ ಸಲ್ಲಿಸುವಾಗ ಸೇರಿದ್ದ ಜನ ಸಾಗರ.

  ಶಶಿಕುಮಾರ್‌ ಅವರದು ಒಂಥರಾ ಅಲೆಮಾರಿ ಪರಿಸ್ಥಿತಿ. ಮಾಜಿ ಸಂಸದನಾದರೂ ಪಕ್ಷ ಮತ್ತು ಕ್ಷೇತ್ರ ಎರಡನ್ನೂ ಬದಲಾಯಿಸಿದ ದುರಂತ ಅವರದು. ಕೆಲವು ವರಸೆಗಳಲ್ಲಿ ಮರಿ ಅನಂತನಾಗ್‌ ಎನ್ನಿಸುವ ಶಶಿಕುಮಾರ್‌, ಸದ್ಯಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ( ಜಾತ್ಯತೀತ ಜನತಾದಳ) ತಮ್ಮ ಗೆಲುವಿಗಾಗಿ ಶತಾಯಗತಾಯ ಪ್ರಯತ್ನ ಮಾಡಬೇಕಾಗಿದೆ. ಕಾಂಗ್ರೆಸ್ಸಿನ ಜಾಲಪ್ಪ ಅಲ್ಲಿ ಬಲಿಷ್ಠರು.

  ಜೇಡರಬಲೆಯಲ್ಲಿ ಜಯಂತಿ

  ಬಿಜೆಪಿ ರಾಜ್ಯಾಧ್ಯಕ್ಷ ಅನಂತ್‌ ಕುಮಾರ್‌ ವಿರುದ್ಧ ಜಾತ್ಯತೀತ ಜನತಾದಳ ನಟಿ 'ಜೇಡರಬಲೆ " ಜಯಂತಿಯನ್ನ್ನು ಕಣಕ್ಕಿಳಿಸಿದೆ. ಜಯಂತಿ ಮನೆಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ರಂಗು ಹಾಗೂ ನಗು ಎರಡೂ ಮಾಸದಿರುವ ಜಯಂತಿಯನ್ನು ನೋಡಲು ಹೆಣ್ಣುಮಕ್ಕಳು ಮುಗಿಬೀಳುತ್ತಿದ್ದಾರೆ. ಜಯಂತಿಯಾಂದಿಗೆ ಸೊಸೆ ಅನು ಪ್ರಭಾಕರ್‌ ಕೂಡ ಬೀದಿಗಿಳಿದರೆ ಗಂಡಸರ ಗುಂಪೂ ಸೇರಬಹುದು.

  ಕರಾವಳಿ ಲೋಕಸಭಾ ಕ್ಷೇತ್ರಗಳ ಪೈಕಿ ಕೆನರಾದಿಂದ ನಟ ರಾಮಕೃಷ್ಣ ಜನತಾ ಪಕ್ಷದ ಟಿಕೆಟ್‌ನಿಂದ ಸ್ಪರ್ಧೆಗಿಳಿದಿದ್ದಾರೆ. ನಿರ್ದೇಶಕ ಜೋಸೈಮೆನ್‌ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕನ್ನಡ ನಾಡು ಪಕ್ಷದ ಅಭ್ಯರ್ಥಿ. ಇವರಿಬ್ಬರೂ ಮಿಂಚುತ್ತಾರಾ ?

  ಪಾಪ ದೊಡ್ಡಣ್ಣ !

  ಶಿವಮೊಗ್ಗದ 'ತದ್ವಿರುದ್ಧ " ಆಭ್ಯರ್ಥಿಗಳ ವಿರುದ್ಧ ಅಖಾಡಕ್ಕಿಳಿದವರು ಜನತಾಪಕ್ಷದ ದೊಡ್ಡಣ್ಣ. ಮದ್ಯೋದ್ಯಮಿ ವಿಜಯಮಲ್ಯರ 'ಡಾರ್ಕ್‌ ಹಾರ್ಸ್‌" ದೊಡ್ಡಣ್ಣ ಗೆಲ್ಲುತ್ತಾರಾ ? ಹೂ ಎನ್ನುತ್ತಾರೆ ಮಲ್ಯ. ಬಂಗಾರಪ್ಪ ಹಾಗೂ ಆಯನೂರು ಜಗಳದಲ್ಲಿ ತಮ್ಮ ಅಭ್ಯರ್ಥಿಗೆ ಲಾಭವಾಗುವ ಲೆಕ್ಕಾಚಾರ ಅವರದು.

  ಮಲ್ಯ ಲೆಕ್ಕಾಚಾರ ನಿಜವಾಗುವುದು ಅಷ್ಟು ಸುಲಭವಲ್ಲ . ನಾಮ ಪತ್ರ ಸಲ್ಲಿಸುವ ಸಂದರ್ಭದಲ್ಲೇ ದೊಡ್ಡಣ್ಣ ಹೈರಾಣಾಗಿದ್ದರು. ಮಧ್ಯಾಹ್ನ 12ಕ್ಕೆ ಬರುತ್ತೇನೆಂದಿದ್ದ ಮಲ್ಯ ಒಂದಾದರೂ ಬರಲಿಲ್ಲ . ಕಾದೂಕಾದೂ ಬೆವರೆಲ್ಲ ಖಾಲಿಯಾದ ದೊಡ್ಡಣ್ಣ , ಕೊನೆಗೆ ತಮ್ಮ ಬೆಂಬಲಿಗರೊಂದಿಗೆ ಹೋಗಿ ನಾಮಪತ್ರ ಸಲ್ಲಿಸಿಯೇ ಬಿಟ್ಟರು. ಕೊನೆಗೂ ಬಂದರು ಮಲ್ಯ, ಆಗಿದ್ದದ್ದು ಸ್ವಲ್ಪೇ ಸ್ವಲ್ಪ ಜನ. ಸದ್ಯಕ್ಕೆ, ಚಿತ್ರೀಕರಣಕ್ಕೆ ರಜೆ ಹಾಕಿರುವ ದೊಡ್ಡಣ್ಣ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಅವರ ಪ್ರಚಾರವೇನೂ ಜನರ ಗಮನವನ್ನು ದೊಡ್ಡದಾಗಿ ಸೆಳೆಯುತ್ತಿಲ್ಲ .

  ಇನ್ನು ಸೊರಬದ ಸಮಾಚಾರ. ಶಿವಮೊಗ್ಗ ಜಿಲ್ಲೆ ಯ ಸೊರಬ ಸೋಲಿಲ್ಲದ ಸರದಾರ ಬಂಗಾರಪ್ಪನವರ ಆಡೊಂಬೊಲ. ಈ ಕ್ಷೇತ್ರವು ಬಂಗಾರಪ್ಪ ನವರ ಪುತ್ರದ್ವಯರ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದೆ. ಕ್ಯಾಸೆಟ್‌ ಲೋಕದ ಮಧು ಬಂಗಾರಪ್ಪ ಮತ್ತು ನಟ- ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಸೊರಬದಲ್ಲಿ ಜಿದ್ದಾಜಿದ್ದಿ. ಚಿತ್ರರಂಗ ಹಿನ್ನೆಲೆಯ ಇಬ್ಬರು ಎಲ್ಲ ಪಟ್ಟುಗಳನ್ನು ಬಳಸುತ್ತಿದ್ದಾರೆ. ಯಾರು ಗೆದ್ದರೂ ಸಿನಿಮಾಕ್ಕೆ ಲಾಭ!

  ದ್ವಾರಕೀಶ್‌, ಜಗ್ಗೇಶು, ಪಾಟೀಲು....

  ಉಳಿದಂತೆ ವಿಧಾನ ಸಭಾ ಕ್ಷೇತ್ರಗಳ ಪೈಕಿ ನಟರಾದ ದ್ವಾರಕೀಶ್‌ -ಹುಣಸೂರು, ಜಗ್ಗೇಶ್‌ -ತುರುವೇಕೆರೆ , ಸಿ.ಪಿ.ಯೋಗೇಶ್ವರ್‌-ಚೆನ್ನಪಟ್ಟಣ, ನಿರ್ಮಾಪಕ ಸಂದೇಶ್‌ ನಾಗರಾಜ್‌, ನಟ-ನಿರ್ಮಾಪಕ ಬಿ.ಸಿ.ಪಾಟೀಲ್‌-ಹಿರೇಕೆರೂರು, ಭಾ.ಮಾ. ಹರೀಶ್‌, ನೆ.ಲ.ನರೇಂದ್ರಬಾಬು -ರಾಜಾಜಿ ನಗರ ಮತ್ತು ದೇವೇಗೌಡರ ಪುತ್ರರತ್ನ, ನಿರ್ಮಾಪಕ ಎಚ್‌.ಡಿ. ಕುಮಾರಸ್ವಾಮಿ- ರಾಮನಗರದಿಂದ ಕಣಕ್ಕಿಳಿದು ಸಿನಿಮಾರಂಗು ಮೂಡಿಸಿದ್ದಾರೆ.


  ನಯ ಭಯಂಕರ ಸಾಯಿಕುಮಾರ್‌ ಕೂಡಾ ಚುನಾವಣಾ ಸ್ಪರ್ಧೆಗೆ ಮುಂದಾಗಿದ್ದರು. ಬಾಗೇಪಲ್ಲಿಯಲ್ಲಿ ಅವರಿಗೆ ಬಿಜೆಪಿಯ ಟಿಕೆಟ್‌ ಕೂಡ ಪಕ್ಕಾ ಆಗಿತ್ತು . ಆದರೆ ಕೊನೆಯ ಕ್ಷಣಗಳ ಬದಲಾವಣೆಯಿಂದಾಗಿ, ಸಾಯಿಕುಮಾರ್‌ ಬದಲಾಗಿ ನರಸಾರೆಡ್ಡಿ ಎನ್ನುವವರಿಗೆ ಟಿಕೆಟ್‌ ಸಿಕ್ಕಿದೆ. ಪೊಲೀಸ್‌ಸ್ಟೋರಿ ಶೈಲಿಯಲ್ಲಿ ಸಾಯಿಕುಮಾರ್‌ ಗುರ್‌ ಎಂದದ್ದು ಇನ್ನೂ ವರದಿಯಾಗಿಲ್ಲ .

  ನಟಿ ಶ್ರುತಿಯ ಪತಿ ಎಸ್‌. ಮಹೇಂದರ್‌ ಸೇರಿದಂತೆ ಕೆಲವು ಸಿನಿ ನಟ ನಟಿಯರು ಟಿಕೆಟ್‌ ಸಿಗದೆ ನಿರಾಶರಾಗಿದ್ದಾರೆ. ಯಾವ ಪಕ್ಷವಾದರೂ ಸೈ ಎನ್ನುತ್ತಿದ್ದಾರೆ.

  ಅಖಾಡಕ್ಕಿಳಿಯದೆ ಚುನಾವಣಾ ರಾಜಕೀಯದಲ್ಲಿ ಪ್ರಭಾವ ಬೀರುತ್ತಿರುವವರ ಪಟ್ಟಿಯಲ್ಲಿ ದೇವರಾಜ್‌, ಕೆ.ಪಿ.ನಂಜುಂಡಿ, ಚರಣ್‌ರಾಜ್‌, ವಿನಯಾ ಪ್ರಸಾದ್‌ ಮುಂತಾದವರ ಹೆಸರುಗಳು ಎದ್ದು ಕಾಣುತ್ತಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೊನೆಯ ಕ್ಷಣದವರೆಗೂ ಹೆಸರು ಕೇಳಿಬರುತ್ತಿದ್ದ ನಟ ವಿಷ್ಣುವರ್ಧನ್‌ ರಾಜಕೀಯ ಪ್ರವೇಶ ಮತ್ತೆ ಮುಂದೆಹೋಗಿದೆ. ಆದರೆ ಅವರು ಅಂಬರೀಷ್‌ ಹಾಗೂ ದ್ವಾರಕೀಶ್‌ಗೆ ಬೆಂಬಲ ಸೂಚಿಸಿದ್ದಾರೆ.

  ಈ ಪರಿಯಾಗಿ- ಅಂಬರೀಷ್‌, ದ್ವಾರಕೀಶ್‌, ಜಯಂತಿ, ದೊಡ್ಡಣ್ಣ, ಸಾಯಿಕುಮಾರ್‌, ಮಧು-ಕುಮಾರ್‌, ಜಗ್ಗೇಶು, ಪಾಟೀಲು, ಶಶಿಕುಮಾರ್‌, ಅನಂತನಾಗ್‌- ಮುಂತಾದವರಿಂದಾಗಿ ಈ ಬಾರಿಯ ಚುನಾವಣೆಯ ರಂಗು ಗುಲಗಂಜಿಯಷ್ಟು ಹೆಚ್ಚಿದೆ. ಆದರೂ ಜನರಿಗೆ ಸಮಾಧಾನವಿಲ್ಲ . ನಿವೃತ್ತಿಯ ಅಂಚಿಗೆ ಬಂದ ಇವರ ಬದಲು- ಉಪ್ಪಿ , ಶಿವಣ್ಣ, ರವಿಚಂದ್ರನ್ನು, ರಕ್ಷಿತಾರಂಥ ಯುವಮುಖಗಳು ಬೀದಿಗಿಳಿದಿದ್ದರೆ ಜನರ ಕಣ್ಣುಗಳಾದರೂ ತುಂಬುತ್ತಿದ್ದವು.

  ಅದೇನಾದರೂ ಇರಲಿ, ಸಿನಿಮಾ ಬಿಟ್ಟರೆ ಬೇರೇನಿಲ್ಲಿ ಎನ್ನುವ ಮನೋಭಾವದವರೇ ಹೆಚ್ಚಾಗಿರುವ ಚಿತ್ರರಂಗದ ಮಂದಿಯಲ್ಲಿ ಸಿನಿಮಾದ ಕುರಿತು ಜಾಗೃತಿ ಮೂಡುತ್ತಿರುವುದು ಒಳ್ಳೆಯ ವಿಷಯವೇ. ಆದರೆ ರಾಜಕಾರಣದಲ್ಲೂ ಈ ಮಂದಿ ನಟಿಸದಿದ್ದರೆ ಸಾಕು !

  English summary
  Kannada filmwalas in election arena
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more