twitter
    For Quick Alerts
    ALLOW NOTIFICATIONS  
    For Daily Alerts

    ಅಮಿತಾಬ್‌ ಕಣ್ಣಲ್ಲಿ ಹಾಲಿವುಡ್‌....

    By Staff
    |
    • ದಟ್ಸ್‌ಕನ್ನಡ ಡೆಸ್ಕ್‌
    ‘ಹಾಲಿವುಡ್‌ನಲ್ಲಿ ತಮ್ಮ ಇರುವಿಕೆ ತೋರಿಸಿಕೊಳ್ಳಲು ಈ ಬಾಲಿವುಡ್‌ ಮಂದಿ ಯಾಕಿಷ್ಟು ಹಾತೊರೆಯುತ್ತಾರೆ? ’

    ಬಾಲಿವುಡ್‌ನ ಶತಮಾನದ ಜನಪ್ರಿಯ ನಟ, 70ರ ಹರೆಯದ ‘ ಆ್ಯಂಗ್ರಿ ಯ್ಯಾಂಗ್‌ಮ್ಯಾನ್‌’ ಅಮಿತಾಬ್‌ ಬಚ್ಚನ್‌ ರೋಷಪೂರಿತ ಮಾತುಗಳಿವು.

    ಹೌದು! ಬಾಲಿವುಡ್‌ ಮಂದಿಯ ಸದ್ಯದ ಗೀಳು ಇದೇ. ಐಶ್‌ ಹಾಲಿವುಡ್‌ನಲ್ಲಿ ನಟಿಸುತ್ತೇನೆಂದು ಹಾರಾಡಿದ್ದಾಳೆ. ಪಾಪ! ಅಮೀರ್‌ ಒಂದೇ ಒಂದು ಆಸ್ಕರ್‌ಗಾಗಿ ಅಮೆರಿಕಾ ತುಂಬಾ ಅಲೆದಾಡಿದ್ದಾನೆ. ಹೃತಿಕ್‌, ಇಂಗ್ಲಿಷ್‌ ಚಿತ್ರಗಳಿಗೆ ಹೋಗುತ್ತೇನೆ... ಎಂದು ಸಿನಿಮಂದಿಯನ್ನು ಹೆದರಿಸಿದ್ದಾನೆ.

    ಯಾಕೆ ಈ ಎಲ್ಲಾ ಅವಾಂತರ ? ಅನುಭವ ಅಂದ್ರೆ ಅಮಿತಾಬ್‌ ತರಾ ಇರಬೇಕು. ‘ನೆನೆವುದೆನ್ನ ಮನಂ ಬಾಲಿವುಡ್‌ ದೇಶಮಂ’ ಅಂದಂತೆ.

    ‘ಹಾಲಿವುಡ್‌ಗೆ ಹೋಗುವುದು ಎಂದ್ರೆ ಬಾಂದ್ರಾಗೆ(ಮುಂಬಯಿಯ ಪ್ರದೇಶ) ಹೋದಂತಲ್ಲ , ನಾನು ಪಶ್ಚಿಮದಲ್ಲಿ ಒಂದು ಚಿತ್ರ ಮಾಡಿದ್ರೆ, ಅದು ನನ್ನ ವೃತ್ತಿಯ ನಿರ್ಧಾರ ಮಾತ್ರ. ಯಾರಾದರು ನನಗೆ ಒಪ್ಪಿಗೆಯಾಗುವಂತಹ ಚಿತ್ರಕತೆ ಹಿಡಿದುಕೊಂಡು ಬಂದ್ರೆ, ಅದು ನನ್ನ ಇನ್ನೊಂದು ಚಿತ್ರ ಎಂದು ಒಪ್ಪಿಕೊಳ್ಳುತ್ತೇನೆ. ಅದೇನು ದೊಡ್ಡ ವಿಷಯ ಅಲ್ಲ. ನಂಗೆ ಅವಕಾಶ ಬಂತು ಅಂತ ನಾನು ಅಲ್ಲಿಗೆ ಓಡ್‌ಬೇಕಾಗಿಲ್ಲ’ ಎಂದು ಹೇಳುವಾಗ ಆತನ ಧ್ವನಿ ಗಡಸು ಪೆಡಸು. ಕಣ್ಣುಗಳು ಹಾಲಿವುಡ್‌ ಬಯಸುವವರನ್ನು ಸುಡುವಂತೆ ಕೆಂಪು.

    ಹಾಲಿವುಡ್‌ ಎಂದಾಕ್ಷಣ ಕಣ್‌ಕಣ್‌ ಬಿಡುವ, ಹಾತೊರೆಯುವ ಮಂದಿಯನ್ನು ಕುರಿತು ‘ ಜಂಜೀರ್‌ ಚಿತ್ರದ ‘ಯುವರುದ್ರ ನಾಯಕ’ ತನ್ನ ಕೋಪ ವ್ಯಕ್ತಪಡಿಸಿಕೊಂಡದ್ದು ಹೀಗೆ.

    ‘ಹಾಲಿವುಡ್‌ನಲ್ಲಿ ಒಬ್ಬ ಭಾರತೀಯ ಏನು ಮಾಡುತ್ತಾನೆ? ಅಲ್ಲಿನ್ನು ವರ್ಣಾಂಧತೆ ಉಸಿರಾಡುತ್ತಿದೆ. ಇನ್ನು ಅಲ್ಲಿಯ ಹಳೇ ಸಂಪ್ರದಾಯದ ಚಿತ್ರದಲ್ಲಿ ನಟಿಸಲು ಸುತಾರಾಂ ನನಗಿಷ್ಟವಿಲ್ಲ. ಅಲ್ಲಿ ಭಾರತೀಯರನ್ನು ಪತ್ರಿಕೆ ಹುಡುಗ, ಚಾಲಕ, ಡಬ್ಬಿ ಅಂಗಡಿಯಾತ, ಮಾರುವವನೇ, ಹಳೇ ಮಾದರಿ ಮನುಷ್ಯ, ಕೈಯಲ್ಲಿ ಕತ್ತಿ ಹಿಡಿದ ಕಾಮುಕ ಮಹಾರಾಜ ಎಂದೆಲ್ಲಾ ಚಿತ್ರಿಸುತ್ತಾರೆ. ಕ್ಷಮಿಸಿ! ನಂಗೆ ಇಂತದರಲ್ಲಿ ಆಸಕ್ತಿಯಿಲ್ಲ. ’

    ‘ನಿಮಗೇನಾದರೂ ನಮ್ಮ ಶ್ರೇಷ್ಠನಟ ದಿಲೀಪ್‌ಕುಮಾರ್‌ ತನ್ನ ಶ್ರೇಷ್ಠತೆ ತೋರಿಸಲು ಹಾಲಿವುಡ್‌ಗೆ ಹಾರಿದ ನೆನಪಿದೆಯಾ? ನನಗೂ ನಿರಂತರ ಒತ್ತಡವಿತ್ತು......... ಬೇಡ! ನಾನು ಯಾವತ್ತಾದರು ಹಾಲಿವುಡ್‌ನಲ್ಲಿ ನಟಿಸಿದರೆ, ಅದು ನನ್ನ ಇನ್ನೊಂದು ಚಿತ್ರವಷ್ಟೆ. ಏನೋ ರಾಕೆಟ್‌...... ಕಂಡು ಹಿಡಿದಂತೆ ಅಲ್ಲ. ’

    ಇಷ್ಟೊಂದು ಹಾಲಿವುಡ್‌ ವಿರುದ್ಧ ಹರಿಹಾಯ್ದರೂ. ಅಮಿತಾಬ್‌ ಪೂರ್ವಾಗ್ರಹ ಪೀಡಿತರಲ್ಲ. ಅವರ ಮನಸ್ಸು ಅನುಭವದ ವೈಶಾಲ್ಯತೆಯಿಂದ ತುಂಬಿ ತುಳುಕುತ್ತಿದೆ. ಅವರು ಹಾಲಿವುಡ್‌ ಬಗ್ಗೆ ಗೌರವವನ್ನೂ ಹೊಂದಿದ್ದಾರೆ.

    ‘ಯಾವುದೇ ದೇಶ ತನ್ನ ಅಪೇಕ್ಷೆಯಂತೆ ಮುಂದುವರಿದರೆ ಇತರರಿಗೆ ಉತ್ತಮ ಎನ್ನಿಸುತ್ತದೆ. ಈಗ ಭಾರತ ಆರ್ಥಿಕವಾಗಿ ಮುಕ್ತವಾಗಿದೆ. ಇದರಿಂದ ಪಾಶ್ಚಾತ್ಯರಿಗೆ ನಮ್ಮಲ್ಲಿ ಆಸಕ್ತಿ ಹುಟ್ಟಿದೆ. ಲಂಡನ್‌ನಲ್ಲಿ ಭಾರತೀಯ ಚಲನ ಚಿತ್ರೋತ್ಸವವನ್ನು ಆಚರಿಸಲು ಆರಂಭಿಸಿದ್ದಾರಲ್ಲ! ’

    ಅವರ ಮಾತಿನಲ್ಲಿ ಪಾಶ್ಚಿಮಾತ್ಯರ ಜಾಗತೀಕರಣದ ಷಡ್ಯಂತರದ ಒಳಸುಳಿಗಳು ಧ್ವನಿಸುತಿತ್ತು. ಇದೊಂದು ಅಪಸವ್ಯ ಎನ್ನುವಂತೆ ಭಾಸವಾಗುತ್ತಿತ್ತು.

    ‘ 70 ವರ್ಷಗಳ ಗುದ್ದಾಟದ ಬಳಿಕ ಪಾಶ್ಚಾತ್ಯರು ನಮ್ಮ ಚಿತ್ರವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅದೆಲ್ಲ... ನಾವು ಸಿನಿಮಾ ಮಾಡುವ ವಿಧಾನದಲ್ಲಿ ದೆ. ಇದನ್ನು ಮೊದಲು ಒಪ್ಪಿಕೊಳ್ಳಿ. ಆವರಿಗೆ ಹೊಸ ಹೊಸ ಅವಿಷ್ಕಾರಗಳ ಬೆಂಬಲವಿದೆ. ನಮಗೆ? ವಿಶ್ವಕ್ಕೆ ಯೋಗ ಮತ್ತು ಶೂನ್ಯವನ್ನು ನೀಡಿದವರು ಯಾರು?... ಈಗೀಗ ಆಂಗ್ಲ ಚಿತ್ರಗಳ ಶಬ್ದಕೋಶದಲ್ಲಿ ಹಿಂದಿ ಶಬ್ದಗಳು ಬರುತ್ತಿವೆ. ಕಾರಣ ತಿಳಿದುಕೊಳ್ಳಿ... ’

    ಹಿಂದಿ ಚಿತ್ರರಂಗವನ್ನು ‘ ಬಾಲಿವುಡ್‌’ ಎಂದು ಕರೆಯಲು ನಿರಾಕರಿಸಿದ ಬಚ್ಚನ್‌ ಬೇಸರದಲ್ಲಿಯೇ ಇದನ್ನು ಒಪ್ಪಿಕೊಂಡಿದ್ದಾರೆ.

    ‘ಬಾಲಿವುಡ್‌ ಈಗ ‘ ಆಕ್ಸ್‌ಫರ್ಡ್‌ ಶಬ್ದಕೋಶ ’ ಪ್ರವೇಶಿಸಿದೆ. ಯಾಕೆಂದರೆ ನಾವೀಗ ಅವರ ವಲಯದೊಳಗಿದ್ದೇವೆ. ಅದನ್ನು ಒಪ್ಪಿಕೊಳ್ಳದೆ ನಮಗೆ ಬೇರೆ ದಾರಿ ಇಲ್ಲ. ನಮಗೆ ಅವರು ಕೊಟ್ಟಿರುವ ಬಹಳ ಸಣ್ಣ ಆದರವಾಗಿದೆ.

    ಹಾಗಾದ್ರೆ ನಮ್ಮ ನಟರಿಗೆ ಅಲ್ಲಿ ಸ್ಥಾನವಿಲ್ಲವೇ ಎಂದು ನಿಮಗೆ ಅನಿಸಬಹುದು.

    ‘ಸಾಮಾಜಿಕ ಮನ್ನಣೆ ಪಡೆಯದೆ ಯಾವ ಭಾರತೀಯನೂ ಅವರ ಯಾವುದೇ ಚಿತ್ರರಂಗ ದಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲ. ಅಂತೆಯೇ ಅವರೂ ಸಹ ನಮ್ಮ ಚಿತ್ರರಂಗದಲ್ಲಿ ಸ್ಥಾನ ಪಡೆಯಲಾರರು. ವಸಾಹತುಶಾಹಿ ವ್ಯವಸ್ಥೆಯ ಕರಾಳ ಇತಿಹಾಸದಿಂದ ನಮ್ಮ ಚಿತ್ರದಲ್ಲಿ ಬಿಳಿಯರು ವಿಲನ್‌ಗಳು. ಲಗಾನ್‌ ಚಿತ್ರವೇ ಸದ್ಯದ ಉತ್ತಮ ಉದಾಹರಣೆ. ಸುಮ್ಮಗೆ ಅದನ್ನೆಲ್ಲ ಮರೆತು ಏನೇನೋ ಅನ್ನಬೇಡಿ... ಅವರ ವೃತ್ತಿಪರತೆ ಮತ್ತು ತಂತ್ರಜ್ಞಾನ ಬಯಕೆಯನ್ನು ಗೌರವಿಸಿ. ’

    ಈ ಮಾತಿನ ಮಲ್ಲನಿಗೆ ಭಾರತೀಯರು ಆಸ್ಕರ್‌ಗೆ ಹಾತೊರೆಯುವ ಕುರಿತು ತೀವ್ರ ವಿಷಾದ. ‘ಪತ್ರಕರ್ತರು ಯಾವಾಗಲೂ ‘ ಆಪ್‌ ಕಬ್‌ ಆಸ್ಕರ್‌ ಜೀತೇಂಗೇ? ’ ಎಂದು ನನ್ನನ್ನು ಕೇಳುತ್ತಿದ್ದರು. ಸ್ಟುಪಿಡ್‌ ಪ್ರಶ್ನೆ. ನಾವೇನು ಇಂಗ್ಲೀಷ್‌ನಲ್ಲಿ ಚಿತ್ರ ಮಾಡುತ್ತಿದ್ದೇವಾ. ಅವರ ಮುಖ್ಯವಾಹಿನಿಗೆ ನಾವು ಹೇಗೆ ಬರಲು ಸಾಧ್ಯ? ಅವರು ಇಲ್ಲಿ ಬಂದು ಹಿಂದಿ ಚಿತ್ರ ಮಾಡಲಿ?’

    ‘ಛೆ! ...ಯಾಕೆ ಈ ಭಾರತೀಯ ನಟರುಗಳಿಗೆ ಪಾಶ್ಚಾತ್ಯ ಆಕರ್ಷಣೆ ಎಂದು ನನಗೆ ಅರ್ಥವಾಗುತ್ತಿಲ್ಲ? ನನಗೆ ನಮ್ಮ ವ್ಯವಸ್ಥೆ ನೀಡಿದ ಗೌರವ ಸಾಕು. ಪ್ರಪಂಚದ ಪ್ರತಿ ಆರನೇ ವ್ಯಕ್ತಿ ಭಾರತೀಯ. ನನಗೆ ಪ್ರಪಂಚದ ಆರನೇ ಒಂದು ಪಾಲಿನ ಜನ ಗುರುತಿಸುತ್ತಾರೆ ಎಂಬ ಹೆಮ್ಮೆಯಿದೆ’ ಎನ್ನುವಾಗ ಅಮಿತಾಬ್‌ ಧ್ವನಿಯಲ್ಲಿ ಧನ್ಯತಾಭಾವ.

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 18, 2024, 20:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X