»   » ಜೋಡಿಯಾದ ಉಪೇಂದ್ರ-ಜಿತೇಂದ್ರ

ಜೋಡಿಯಾದ ಉಪೇಂದ್ರ-ಜಿತೇಂದ್ರ

Posted By: Super
Subscribe to Filmibeat Kannada
Jaggesh, Upendra
'ಇಲ್ಲಿ ಸ್ನೇಹವೂ ಶಾಶ್ವತವಲ್ಲ , ದ್ವೇಷವೂ ಶಾಶ್ವತವಲ್ಲ ; ಪ್ರತಿಯಾಂದೂ ಸಂದರ್ಭಕ್ಕನುಗುಣವಾಗಿ ರೂಪುಗೊಳ್ಳುತ್ತದೆ" !

ರಾಜಕಾರಣಕ್ಕೆ ಅನ್ವಯಿಸಬಹುದಾದ ಮೇಲಿನ ಮಾತು ಈಗ ಸಿನಿಮಾಕ್ಕೂ ಹೇಳಿಮಾಡಿಸಿದಂತಿದೆ. ಉದಾಹರಣೆಗೆ ಜಗ್ಗೇಶ್‌ರನ್ನೇ ನೋಡಿ ; ಉಪೇಂದ್ರರ ಕಂಡರೆ ಮೂಗು ಮುರಿಯುತ್ತಿದ್ದ ಜಗ್ಗೇಶ್‌ ಈಗ ರಾಜಿಯಾಗಿದ್ದಾರೆ. ಅಷ್ಟೇಅಲ್ಲ , ಉಪೇಂದ್ರರೊಂದಿಗೆ ನಟಿಸುತ್ತಿದ್ದಾರೆ.

ನಿಮಗೆ ನೆನಪಿರಬೇಕು. ಉಪೇಂದ್ರ ನಿರ್ದೇಶನದ 'ತರ್ಲೆ ನನ್ಮಗ" ಚಿತ್ರದ ಮೂಲಕ ಜಗ್ಗೇಶ್‌ ನಾಯಕರಾಗಿ ಬಡ್ತಿ ಹೊಂದಿದ್ದರು. 'ತರ್ಲೆ ನನ್ಮಗ" ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿತು. ಗೆಲುವಿನ ಯಶಸ್ಸು ದೊರಕಿದ್ದು ಮಾತ್ರ ಜಗ್ಗೇಶ್‌ಗೆ. ಆನಂತರ ಜಗ್ಗೇಶ್‌ ಮುಟ್ಟಿದ್ದೆಲ್ಲ ಚಿನ್ನ . ಉಪೇಂದ್ರ ಮಾತ್ರ 'ಶ್‌" ಚಿತ್ರದವರೆಗೂ ಕಾಯಬೇಕಾಯಿತು. ಆನಂತರದ್ದು ತಿರುಗಾಮುರುಗಾ ಕಥೆ.

ತಮ್ಮ ಪಾಡಿಗೆ ತಾವಿದ್ದರೆ ಪರವಾಗಿರಲಿಲ್ಲ . ಅದೇಕೋ ಉಪೇಂದ್ರ ಹಾಗೂ ಜಗ್ಗೇಶ್‌ ಒಬ್ಬರನ್ನ ಕಂಡರೊಬ್ಬರು ಭುಸ್‌ ಅನ್ನತೊಡಗಿದ್ದರು. ಉಪೇಂದ್ರ ತಮ್ಮದೇ ಹೆಸರಿನ 'ಉಪೇಂದ್ರ" ಎನ್ನುವ ಚಿತ್ರದ ಮೂಲಕ ಯಶಸ್ಸಿನ ತುತ್ತತುದಿ ತಲುಪಿದರೆ, ಜಗ್ಗೇಶ್‌ 'ಜಿತೇಂದ್ರ" ಎನ್ನುವ ಚಿತ್ರದ ಮೂಲಕ ಉಪೇಂದ್ರರ ಅಣಕಿಸಲು ಪ್ರಯತ್ನಿಸಿದರು. ಜಿತರಾದದ್ದು ಮಾತ್ರ ಜಗ್ಗೇಶೇ. ಆ ವೇಳೆಗೆ ಉಪೇಂದ್ರರ ಗ್ರಾಫ್‌ ಪಾದರಸದಂತೆ ಏರಿತ್ತು .

ಕಾಲ ಈಗ ಬದಲಾಗಿದೆ. ಉಪೇಂದ್ರರ ಹಠಮಾರಿತನ ಕೊಂಚ ತಗ್ಗಿದೆ. ಮದುವೆಯಾದ ನಂತರವಂತೂ ಉಪೇಂದ್ರ ಮತ್ತಷ್ಟು ಸಾಫ್ಟ್‌ ಆಗಿದ್ದಾರೆ. ಜಗ್ಗೇಶ್‌ ಕೂಡ ತಣ್ಣಗಾಗಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ತುರುವೇಕೆರೆಯಲ್ಲಿ ಸೋಲುಂಡ ನಂತರವಂತೂ ಜಗ್ಗೇಶ್‌ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಾತ್ರ ಇಂಥದ್ದೇ ಬೇಕು ಎಂದು ಹಠ ಕೂಡ ಹಿಡಿಯುತ್ತಿಲ್ಲ . ಅವರಿಗೆ ಬೇಕಾಗಿರುವುದು ಯಶಸ್ಸು ಮಾತ್ರ ! ಹಾಗಾಗಿ ಉಪೇಂದ್ರ ಜೊತೆಯಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಉಪೇಂದ್ರ ಹಾಗೂ ಜಗ್ಗೇಶ್‌ ಜೊತೆಯಾಗಿ ನಟಿಸುತ್ತಿರುವ ಚಿತ್ರದ ಹೆಸರು 'ಉಪ್ಪಿ ದಾದ ಎಂಬಿಬಿಎಸ್‌". ಹಿಂದಿಯ 'ಮುನ್ನಾಭಾಯಿ ಎಂಬಿಬಿಎಸ್‌"ನ ಕನ್ನಡ ನಕಲಿನ ಈ ಚಿತ್ರದ ನಿರ್ದೇಶಕರು ಡಿ.ರಾಜೇಂದ್ರಬಾಬು. ಚಿತ್ರ ಗೆಲ್ಲುವ ಕುರಿತು ಗಾಂಧಿನಗರಕ್ಕೆ ವಿಶ್ವಾಸವಿದೆ. ಏಕೆಂದರೆ, ಡಿರಾಬಾಬು ರಿಮೇಕ್‌ ಕಿಂಗ್‌! ಜೊತೆಗೆ ಉಪ್ಪಿ-ಜಗ್ಗಿ ಜೋಡಿಯಿರುವಾಗ ಯಶಸ್ಸಿನ ನಿರೀಕ್ಷೆ ಇಟ್ಟುಕೊಳ್ಳುವುದರಲ್ಲೇನು ತಪ್ಪು ?

ಅಂದಹಾಗೆ, ಜಗ್ಗೇಶ್‌ರ ಮತ್ತೊಂದು ರಾಜಿ ಪ್ರಕರಣದ ಫಲವಾದ 'ರಾಮಕೃಷ್ಣ" ಚಿತ್ರ ಗೆದ್ದಿದೆ. ಈ ಚಿತ್ರದಲ್ಲಿ ರವಿಚಂದ್ರನ್‌ರೊಂದಿಗೆ ಜಗ್ಗೇಶ್‌ ನಟಿಸಿದ್ದರು.

English summary
Kannada Film News: Navarasa Nayaka Jaggesh and Real Star Upendra join hands in 'Uppi Daada MBBS'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada