»   » ‘ರೌಡಿ ಅಳಿಯ’ನಿಗೆ ಗಿರಿಕನ್ಯೆ ಅತ್ತೆ

‘ರೌಡಿ ಅಳಿಯ’ನಿಗೆ ಗಿರಿಕನ್ಯೆ ಅತ್ತೆ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಅರ್ಜೆಂಟಾಗಿ ಶಿವರಾಜ್‌ಕುಮಾರ್‌ಗೆ ಒಂದು ಬ್ರೇಕ್‌ ಬೇಕಾಗಿದೆ. ಇದು ಅವರಿಗೂ ಗೊತ್ತು. ಸೀತಾರಾಂ ಕಾರಂತರ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷೆ ‘ಸ್ಮೈಲ್‌’ ಚಿತ್ರದಲ್ಲಿ ಹುಸಿಯಾಗಿ, ಚಿತ್ರ ಸೋತಿದೆ. ಜನುಮದ ಜೋಡಿಯನ್ನು ನೆನಪಿಸುವ ‘ನಂಜುಂಡಿ’ ಕಟೌಟ್‌ಗಳು ಶಿವರಾಜ್‌ ಅಭಿಮಾನಿಗಳ ನಿರೀಕ್ಷೆಗೆ ಗರಿ ಮೂಡಿಸಿವೆ. ಈಗ ಹೊಸದೊಂದು ನಿರೀಕ್ಷೆ.

ಇದು ನಿರ್ದೇಶಕ ಓಂ ಸಾಯಿಪ್ರಕಾಶ್‌ ಬೆಟ್‌- ಚಿತ್ರದ ಹೆಸರು ರೌಡಿ ಅಳಿಯ. ಈ ಹಿಂದೆ ಗಡಿಬಿಡಿ ಅಳಿಯ ಚಿತ್ರವನ್ನು ಇದೇ ಸಾಯಿಪ್ರಕಾಶ್‌ ಗೆಲ್ಲಿಸಿದ್ದರು. ಭರ್ತಿ ಮನರಂಜನೆ ಇದ್ದ ಆ ಚಿತ್ರದಲ್ಲಿ ಜಯಮಾಲ ಅಭಿನಯ ದೊಡ್ಡ ಸೆಳಕಾಗಿತ್ತು. ಈಗ ರೌಡಿ ಅಳಿಯ ಚಿತ್ರದಲ್ಲೂ ಇದೇ ಕಾಂಬಿನೇಷನ್‌. ಶಿವರಾಜ್‌ ಅತ್ತೆಯಾಗಿ ಗಿರಿಕನ್ಯೆ ಜಯಮಾಲ. ಅಲ್ಲಿ ಗಡಿಬಿಡಿಯಾಗಿದ್ದ ಶಿವರಾಜ್‌ ಇಲ್ಲಿ ರೌಡಿ ಅಳಿಯ.

ನಗೆ ನಮ್ಮ ಕುಲ ಅಂತ ಫಿಲಾಸಫಿ ಹೊಡೆಯುವ ಸಾಯಿಪ್ರಕಾಶ್‌ ಪ್ರೇಕ್ಷಕರಿಗೆ ಸಖತ್ತಾಗಿ ಕಚಗುಳಿ ಇಡುವ ಉಮೇದಿ ಹೊತ್ತಿದ್ದಾರೆ. ಹಾಡು, ಡುಶುಂ ಡುಶುಂ ಒಗ್ಗರಣೆಯಲ್ಲಿ ನಗೆಯ ಪಾಕ- ಇದು ರೈಡಿ ಅಳಿಯ ಒನ್‌ ಲೈನರ್ರು. ಬೆಂಗಳೂರು ಅರಮನೆಯಲ್ಲಿ ಒಂದು ಸುತ್ತಿನ ಶೂಟಿಂಗ್‌ ಮುಗಿಸಿದ ನಂತರ ರಾಕ್‌ಲೈನ್‌ ಸ್ಟುಡಿಯೋದಲ್ಲಿ ಈಗ ಚಿತ್ರೀಕರಣ ನಡೆಯುತ್ತಿದೆ.

ಕೋಮಲ್‌ ಎಂಟರ್‌ಪ್ರೆೃಸಸ್‌ ಬ್ಯಾನರಿನ ಈ ಚಿತ್ರಕ್ಕೆ ಬಿಡುವಿಲ್ಲದ ಚಿತ್ರಗೀತ ಸಾಹಿತಿ ಕೆ.ಕಲ್ಯಾಣ್‌ ಮೂರು ಹಾಡುಗಳನ್ನು ಬರೆದಿದ್ದಾರೆ. ಈ ಪೈಕಿ ಒಂದು ಶಿವರಾಜ್‌ಕುಮಾರ್‌ ಅವರನ್ನು ಹಗಲು ರಾತ್ರಿ ಕಾಡುತ್ತಿದೆಯಂತೆ. ಹಾಡಿನಲ್ಲಿ ಒಳ್ಳೆಯ ಅರ್ಥದ ಜೊತೆಗೆ ಕುಣಿಸುವ ಲಯವೂ ಇದೆ ಅಂತ ಶಿವರಾಜ್‌ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ.

ಆನಂದ್‌ ಆಡಿಯೋದ ಎಂ.ಸಿ.ನೇಹ ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರಿಯಾಂಕ, ಛಾಯಾಸಿಂಗ್‌, ದೊಡ್ಡಣ್ಣ, ಧರ್ಮ, ಶರಣ್‌, ರಮೇಶ್‌ ಭಟ್‌, ಟೆನ್ನಿಸ್‌ ಕೃಷ್ಣ, ಆಶಾಲತ, ಶಿವರಾಂ, ಉಮೇಶ್‌, ಸಾಧುಕೋಕಿಲಾ, ರಾಜೇಶ್‌, ಬಿರಾದರ್‌ ಮೊದಲಾದವರು ಅಭಿನಯಿಸಿದ್ದಾರೆ. ಬಿ.ಎ.ಮಧು ಸಂಭಾಷಣೆ ಬರೆದಿದ್ದು, ಅಂಜಲಿ ನಾಗರಾಜ್‌ ಕ್ಯಾಮರಾ ಹಿಡಿದು ನಿಂತಿದ್ದಾರೆ. ರಾಜೇಶ್‌ ರಾಮನಾಥ್‌ ಹಾಗೂ ಶ್ರೀಶೈಲ ಹಾಡುಗಳಿಗೆ ಮಟ್ಟು ಹಾಕಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada