»   » ಎರಡು ಸಂಭ್ರಮಗಳ ಮೂಲಕ ಮತ್ತೆ ಸುದ್ದಿಕೇಂದ್ರದಲ್ಲಿದ್ದಾರೆ

ಎರಡು ಸಂಭ್ರಮಗಳ ಮೂಲಕ ಮತ್ತೆ ಸುದ್ದಿಕೇಂದ್ರದಲ್ಲಿದ್ದಾರೆ

Posted By: Super
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಒಂದೆಡೆ ಸಿನಿಮಾ ಸಂಭ್ರಮ, ಇನ್ನೊಂದೆಡೆ ಪುಸ್ತಕ ಪ್ರಸವದ ಪುಳಕ! ಸಿನಿಮಾ ನಾಗತಿಹಳ್ಳಿಯವರಲ್ಲಿ ಮತ್ತೆ ಮೊಳೆತಿದೆ. ಎಂದಿನಂತೆ ಈ ಬಾರಿಯೂ ಅವರು ವಿಮಾನ ಹತ್ತಲಿದ್ದಾರೆ. ಫಾರ್‌ ಎ ಚೇಂಜ್‌ ಅಮೆರಿಕಾದ ಬದಲಿಗೆ ಯುರೋಪ್‌! ಫ್ರಾನ್ಸ್‌ , ಇಟಲಿ, ಸ್ಪೇನ್‌ನಲ್ಲಿ ಚಿತ್ರೀಕರಣವಾಗಲಿರುವ ಸಿನಿಮಾದ ಹೆಸರು 'ಪ್ಯಾರಿಸ್‌ ಪ್ರಣಯ". ಸೆಪ್ಟಂಬರ್‌ ತಿಂಗಳ ಮೊದಲ ವಾರದಿಂದ ಶೂಟಿಂಗ್‌ ಶುರು.

  ನಾಗತಿಹಳ್ಳಿ ಅವರ ಎರಡನೇ ಸಂಭ್ರಮದ ಅಭಿವ್ಯಕ್ತಿ 'ನನ್ನ ಪ್ರೀತಿಯ ಹುಡುಗಿ". ಇದು ಸಿನಿಮಾ ಅಲ್ಲ - ಪುಸ್ತಕ ! ರವಿ ಬೆಳಗೆರೆ ಸಾರಥ್ಯದ 'ಹಾಯ್‌ ಬೆಂಗಳೂರ್‌" ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ 'ನನ್ನ ಪ್ರೀತಿಯ ಹುಡುಗಿ" ಅಂಕಣದ ನಾಗತಿಹಳ್ಳಿ ಬರಹಗಳು ಈಗ ಅದೇ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಓದುಗರ ಮುಂದೆ. ಆಗಸ್ಟ್‌ 15 ರ ಸ್ವಾತಂತ್ರ್ಯೋತ್ಸವದ ದಿನ ಜೆಎಸ್‌ಎಸ್‌ ಶಾಲೆ ಸಭಾಂಗಣದಲ್ಲಿ ಈ ಪುಸ್ತಕದ ಬಿಡುಗಡೆ. ನನ್ನ ಪ್ರೀತಿಯ ಹುಡುಗಿ ಪುಸ್ತಕವನ್ನು 'ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ" ಪ್ರಕಟಿಸಿದೆ. ಅಂದಹಾಗೆ, ನಾಗತಿಹಳ್ಳಿ ಹುಟ್ಟಿದಹಬ್ಬ ಕೂಡ ಆಗಸ್ಟ್‌ 15ರಂದೇ. ಕಾಕತಾಳೀಯ ಅನ್ನುವಂತೆ ಅವರ ಮದುವೆಯಾದ ದಿನವೂ ಅಂದೇ. ಆಗಸ್ಟ್‌ 15 ನಾಗತಿಹಳ್ಳಿ ಪಾಲಿಗೆ ಖುಷಿಯ ಹ್ಯಾಟ್ರಿಕ್‌.

  ಪ್ಯಾರಿಸ್‌ ಪ್ರಣಯದಲ್ಲಿ ಅಮರ್‌ನಾಥ್‌ ಗೌಡ
  'ಅಮೆರಿಕ ಕನ್ನಡ ಸಂಘಗಳ ಆಗರ" ಅರ್ಥಾತ್‌ 'ಅಕ್ಕ"ದ ಅಧ್ಯಕ್ಷ ಅಮರ್‌ನಾಥ್‌ ಗೌಡ ಪ್ಯಾರಿಸ್‌ ಪ್ರಣಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ ; ನಿರ್ಮಾಪಕರ ರೂಪದಲ್ಲಿ . ತುಮಕೂರು ದಯಾನಂದ್‌ ಹಾಗೂ ಹರನಾಥ್‌ ಪಾಲಿಚೆರ್ಲ ಇತರ ಪಾಲುದಾರ ನಿರ್ಮಾಪಕರು. ದಯಾನಂದ್‌ ಹೊರತುಪಡಿಸಿದರೆ ಉಳಿದಿಬ್ಬರು ಸ್ಯಾಂಡಲ್‌ವುಡ್‌ಗೆ ಹೊಸಬರು, ನಾಗತಿಹಳ್ಳಿ ಚಂದ್ರಶೇಖರ್‌ಗೆ ಹಳಬರು!

  ಆಗಸ್ಟ್‌ 30 ರಿಂದ ಡೆಟ್ರಾಯಿಟ್‌ನಲ್ಲಿ ಪ್ರಾರಂಭವಾಗುವ 'ವಿಶ್ವ ಕನ್ನಡ ಸಮ್ಮೇಳನ"ದಲ್ಲೂ ನಾಗತಿಹಳ್ಳಿ ಭಾಗವಹಿಸುವರು. ಸಮ್ಮೇಳನದ ದೃಶ್ಯಗಳನ್ನು ನಾಗತಿಹಳ್ಳಿ ಚಿತ್ರೀಕರಿಸಲಿದ್ದು , ಉದಯ ಟೀವಿಯಲ್ಲಿ ಆ ಕೆಸೆಟ್‌ ಪ್ರಸಾರವಾಗಲಿದೆ. ಸಮ್ಮೇಳನದ ನಂತರ ಪ್ರಣಯ ಆರಂಭ.

  ಟ್ವೆಂಟಿಫಸ್ಟ್‌ ಸೆಂಚುರಿ ಲಯನ್ಸ್‌ ಸಿನಿಮಾ ಪ್ರೆೃ.ಲಿ. ಲಾಂಛನದಲ್ಲಿ ತಯಾರಾಗುತ್ತಿರುವ 'ಪ್ಯಾರಿಸ್‌ ಪ್ರಣಯ"ದ ಚಿತ್ರೀಕರಣ ಇಟಲಿಯ ಇತಿಹಾಸ ಪ್ರಸಿದ್ಧ ಸ್ಥಳಗಳಾದ ರೋಮ್‌ ಹಾಗೂ ಫ್ಲಾರೆನ್ಸ್‌ , ಸ್ಪೇನ್‌ನ ಮ್ಯಾಡ್ರಿಡ್‌, ಫ್ರಾನ್ಸ್‌ನ ಪ್ಯಾರಿಸ್‌, ಬೇಯೋನ್‌, ಬಾರಿಟ್ಜ್‌, ಆಂಗ್ಲೆಟ್‌ಗಳಲ್ಲಿ ನಡೆಯಲಿದೆ. ಈ ಕಾರಣದಿಂದಾಗಿ ನಾಗತಿಹಳ್ಳಿಯ ಹಿಂದಿನ ಚಿತ್ರಗಳ ದೃಶ್ಯ ವೈಭವವನ್ನು ಪ್ಯಾರಿಸ್‌ ಪ್ರಣಯ ಹತ್ತಿಕ್ಕುವುದರಲ್ಲಿ ಸಂಶಯವಿಲ್ಲ . ಚಿತ್ರದಲ್ಲಿ ಏಳು ಹಾಡುಗಳಿವೆ. ಹಿರಿಯ ಕವಿ ಜಿ.ಎಸ್‌.ಶಿವರುದ್ರಪ್ಪನವರ ಜನಪ್ರಿಯ ಕವಿತೆ, ಸುಗಮ ಸಂಗೀತಗಾರರ ಸುಪ್ರಭಾತ ಎನಿಸಿದ 'ಎದೆ ತುಂಬಿ ಹಾಡಿದೆನು.." ಗೀತೆಯನ್ನು ನಾಗತಿಹಳ್ಳಿ ಚಿತ್ರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

  ಹೊಸತು ಹೊಸತು ಹೊಸಬರು !
  ಕಥೆ, ಚಿತ್ರಕಥೆ, ಹಾಡುಗಳು, ಸಂಭಾಷಣೆ ಹಾಗೂ ನಿರ್ದೇಶನ ಎನ್ನುವ ಚಿತ್ರದ ಪಂಚಭೂತಗಳ ನಿರ್ವಹಣೆಯನ್ನು ನಾಗತಿಹಳ್ಳಿಯೇ ಹೊತ್ತಿದ್ದಾರೆ. ನಾಗತಿಹಳ್ಳಿಯ ಖಾಯಂ ಸಂಗೀತ ನಿರ್ದೇಶಕ ಮನೋಮೂರ್ತಿಗೆ ಈ ಬಾರಿ ಅವಕಾಶವಿಲ್ಲ . ಪ್ರಯೋಗ್‌ ಎನ್ನುವ ಹೊಸ ಸಂಗೀತ ಪ್ರತಿಭೆಯನ್ನು ಪ್ಯಾರಿಸ್‌ ಪ್ರಣಯದ ಮೂಲಕ ನಾಗತಿಹಳ್ಳಿ ಪರಿಚಯಿಸುತ್ತಿದ್ದಾರೆ. ಪ್ರಯೋಗ ಇಲ್ಲಿಗೇ ನಿಂತಿಲ್ಲ : ಕನ್ನಡದಲ್ಲಿ ಮೊದಲಬಾರಿಗೆ ಸುಖ್ವಿಂದರ್‌ ಸಿಂಗ್‌ ಹಾಡಲಿದ್ದಾರೆ. ಸೋನು ನಿಗಂ, ಅಲ್ಕ ಯಾಜ್ಞಿಕ್‌, ಹರಿಹರನ್‌ ಹಾಗೂ ರಾಮ್‌ಪ್ರಸಾದ್‌ ಕೂಡ ಹಾಡುವ ಸಾಧ್ಯತೆಯಿದೆ.

  ಯಥಾಪ್ರಕಾರ 'ಪ್ಯಾರಿಸ್‌ ಪ್ರಣಯ"ದಲ್ಲೂ ಹೊಸ ಮುಖಗಳದ್ದೇ ಮೇಲುಗೈ. ನಟ ನಟಿಯರ ಪ್ರತಿಭಾನ್ವೇಷಣೆ ನಡೆಸಿರುವ ನಾಗತಿಹಳ್ಳಿ ಕಳೆದ 6 ತಿಂಗಳಲ್ಲಿ ಕಡಿಮೆಯೆಂದರೂ 6 ಸಾವಿರ ಅರ್ಜಿ ಸ್ವೀಕರಿಸಿದ್ದಾರೆ. 'ಅದೊಂದು ಪ್ರತಿಭಾ ಖಜಾನೆ. ಹೊಸ ಮುಖಗಳ ಬೇಟೆಯಲ್ಲಿರುವ ಬೇರೆ ನಿರ್ಮಾಪಕರೂ ಈ ಪ್ರತಿಭೆಗಳನ್ನು ಬಳಸಿಕೊಳ್ಳಬಹುದು" ಎನ್ನುತ್ತಾರೆ ನಾಗತಿಹಳ್ಳಿ.
  ಇದಿಷ್ಟೂ ಪ್ಯಾರಿಸ್‌ ಪ್ರಣಯ ಕಥಾನಕ !

  ಪುಸ್ತಕ ಪ್ರೀತಿ ಹಾಗೂ ಸಿನಿಮಾ ಸಹವಾಸದ ಸುಖ ನಾಗತಿಹಳ್ಳಿ ಅವರಿಗೆ ಒಮ್ಮೆಗೇ ದಕ್ಕಿದೆ. ಅದೇ ಸುಖ ಓದುಗರದೂ ನೋಡುಗರದೂ ಆಗಲಿ.

  English summary
  Nagathihalli is in Paris Love !

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more