»   » ಕತೆ ಹೇಳಲು ನೀವು ರೆಡಿಯಾ? ಆದರೊಂದು ಮಾತು ನಿಮಗೆ ನೆನಪಿರಲಿ

ಕತೆ ಹೇಳಲು ನೀವು ರೆಡಿಯಾ? ಆದರೊಂದು ಮಾತು ನಿಮಗೆ ನೆನಪಿರಲಿ

Posted By: Staff
Subscribe to Filmibeat Kannada

'ನಂಗೊಬ್ಬ ಒಳ್ಳೆ ಪ್ರೊಡ್ಯೂಸರ್‌ ಸಿಕ್ಕಿದ್ದಾರೆ. ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾಗಳಲ್ಲಿ ಶೂಟ್‌ ಮಾಡಬೇಕು ಅಂದುಕೊಂಡಿದ್ದೀನಿ. ಚೆನ್ನಾಗಿರುವ ಕತೆ ಇದ್ದರೆ ಹೇಳಿ.."

ಪತ್ರಕರ್ತರ ಮುಂದೆ ಕೋಡ್ಲು ರಾಮಕೃಷ್ಣ ನೇರವಾಗಿ ಈ ಪ್ರಶ್ನೆ ಇಟ್ಟಿದ್ದೇ ತಡ ಗುಸುಗುಸು ಶುರುವಾಯಿತು. ಪ್ರೊಡ್ಯೂಸರ್‌ ಮೊದಲೇ ಸಿಕ್ಕಿಬಿಟ್ಟಿದ್ದಾರೆ. ಕತೆ ಸಿಗೋಕೆ ಮುಂಚೇನೇ ಶೂಟಿಂಗ್‌ ಲೊಕೇಷನ್ನನ್ನೂ ಫಿಕ್ಸ್‌ ಮಾಡಿಕೊಂಡು ಕೋಡ್ಲು ನಿಂತಿದ್ದಾರೆ. ಅರ್ಥಾತ್‌, ಅವರಿಗೆ ಯಾರೇ ಕತೆ ಹೇಳಬೇಕಿದ್ದರೂ ಅದು ನ್ಯೂಜಿಲೆಂಡು ಮತ್ತು ಆಸ್ಟ್ರೇಲಿಯಾಗಳಲ್ಲಿ ಚಿತ್ರಿತವಾಗಬೇಕು ಎಂಬುದನ್ನು ಮನದಲ್ಲಿಟ್ಟುಕೊಂಡಿರಬೇಕು. ಒಟ್ಟಿನಲ್ಲಿ ಬಡ ಪತ್ರಕರ್ತರು ಶ್ರೀಮಂತ ಕತೆಯನ್ನು ಹೊಸೆದುಕೊಡಬೇಕು ಅಥವಾ ಹುಡಕಿ ಕೊಡಬೇಕು.

ಕೋಡ್ಲು ಪತ್ರಕರ್ತರ ಮುಂದಿಟ್ಟುರುವುದು ಕಳಕಳಿಯ ಕೋರಿಕೆಯನ್ನೋ ಅಥವಾ ಸವಾಲನ್ನೋ ಅನ್ನುವುದು ಚಿಂತಕರ ಚಾವಡಿಯಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ವಿಷಯ. ಯಾಕೆಂದರೆ, 'ಜುಗಾರಿ ಕ್ರಾಸ್‌" ಚಿತ್ರದ ವಿಷಯದಲ್ಲಿ ಶಿವರಾಜ್‌ಕುಮಾರ್‌ ಜೊತೆ ಕಿರಿಕ್ಕಾದಾಗಿನಿಂದ ಮಾಧ್ಯಮಗಳು ಕೋಡ್ಲು ಪಾಲಿಗೆ ಮುಳ್ಳಾಗಿ ಚುಚ್ಚಿದವು. ಇದು ದಿಟವೋ ಅಲ್ಲವೋ; ಕೋಡ್ಲು ಪ್ರಕಾರವಂತೂ ಹೀಗಾಗಿರುವುದು ನಿಜ. ಅದಕ್ಕೇ ಈಗ ಕೋಡ್ಲು ಪತ್ರಕರ್ತರನ್ನೇ ಕಿಚಾಯಿಸಲು ಶುರುವಿಟ್ಟುಕೊಂಡಿರುವುದು.

'ನನ್ನನ್ನು ನೀವೇ ಬೆಳೆಸಿದಿರಿ. ಈಗ ಯಾಕೆ ಕಾಲೆಳಿತಿದೀರಿ" ಅಂತ ತಮ್ಮದೇ ಆದ ರೀತಿಯಲ್ಲಿ ಕೋಡ್ಲು ಕೇಳಿಯೂಬಿಟ್ಟರು. ಇದನ್ನು ಕೇಳುವ ಪ್ರಮುಖ ಕಾರಣಕ್ಕೇ ಸುದ್ದಿಗೋಷ್ಠಿ ಕರೆದಿದರೋ ಏನೋ ಎಂಬ ಅನುಮಾನ ಶುರುವಾದದ್ದೇ ಆಗ.

ಆದರೆ ಗೋಷ್ಠಿ ಕರೆದ ಉದ್ದೇಶ- ಕೋಡ್ಲು ನಿರ್ದೇಶನದ 'ಹಲೋ" ಚಿತ್ರದ ಬಗ್ಗೆ ಒಂದಿಷ್ಟು ಹೇಳುವುದು. ಇದು ಸಾಂಸಾರಿಕ ಚಿತ್ರ. ಕನಿಷ್ಠ ಐದು ಸೆಂಟರ್‌ಗಳಲ್ಲಿ ನೂರು ದಿನ ಓಡೋದು ಗ್ಯಾರಂಟಿ ಅಂತ ಕೋಡ್ಲು ಖುದ್ದು ಹೇಳಿಕೊಂಡರು. ಅಂದಹಾಗೆ, ನವೆಂಬರ್‌ ತಿಂಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

'ಹಲೋ" ಚಿತ್ರದ ಕುರಿತ ಸಂಕ್ಷಿಪ್ತ ಮಾತಿನ ನಂತರ ತಮ್ಮ ಬಳಿ ಇನ್ನೊಂದು ಕತೆ ಇರುವುದಾಗಿಯೂ ಕೋಡ್ಲು ಹೇಳಿದರು. ಅದು ಹಿಂದೂ- ಮುಸ್ಲಿಂ ಕತೆ. ಸೆಟ್ಟೇರಿಸಲೇ ಎಂದು ಪತ್ರಕರ್ತರಿಗೇ ಸವಾಲೆಸೆದರು. ಸದ್ಯಕ್ಕೆ ಬೇಡ ಎಂಬ ಉತ್ತರಕ್ಕೇ ಮೆಜಾರಿಟಿ ಸಿಕ್ಕಿದ್ದರಿಂದ ಕೋಡ್ಲು ಸುಮ್ಮನಾದರು. ಪಕ್ಕದಲ್ಲಿ 'ಹಲೋ" ನಿರ್ಮಾಪಕರ ಪೈಕಿ ಒಬ್ಬರಾದ ಡಾ। ಲಕ್ಷ್ಮಿಪತಿ ಬಾಬು ಹ್ಯಾಪ್‌ಮೋರೆ ಹಾಕಿಕೊಂಡು ನಿಂತಿದ್ದರು !

English summary
Kodlu Ramakrishna is confident of starting Jugari Cross

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada