»   » ಪ್ರಚಂಡ ರಾವಣನಾಗಿ ದೇವರಾಜ್‌!

ಪ್ರಚಂಡ ರಾವಣನಾಗಿ ದೇವರಾಜ್‌!

Subscribe to Filmibeat Kannada


‘ಪ್ರಚಂಡ ರಾವಣ’ ಕಣಗಾಲ್‌ ಪ್ರಭಾಕರಶಾಸ್ತ್ರಿ ವಿರಚಿತ ನಾಟಕ. ಆ ಕಾಲದಲ್ಲಿ ನಾಡಿನಾದ್ಯಂತ ಅತ್ಯಂತ ಜನಪ್ರಿಯತೆ ಪಡೆದಿದ್ದ ಈ ನಾಟಕದಲ್ಲಿ ರಾವಣನಾಗಿ ವಜ್ರಮುನಿ ನಟಿಸಿದ್ದರು.

ಕನ್ನಡ ಚಿತ್ರರಂಗದ ಅಜಾತಶತ್ರು, ಪ್ರತಿಭಾವಂತ ನಟ ದೇವರಾಜ್‌ ಪ್ರಚಂಡ ರಾವಣನಾಗಿ ಅಭಿನಯಿಸಲಿದ್ದಾರೆ. ಎಲ್ಲ ಬಗೆಯ ಕಲಾನೈಪುಣ್ಯ ಬಳಸಿಕೊಂಡು ಚಿತ್ರವನ್ನು ಅದ್ಧೂರಿಯಾಗಿ ತಯಾರಿಸುವ ಭರದ ಸಿದ್ಧತೆಗಳು ಆರಂಭಗೊಂಡಿವೆ. ತಂತ್ರಜ್ಞರ ಗುಂಪೊಂದು ಈ ಚಿತ್ರ ನಿರ್ಮಿಸಲು ಮುಂದಾಗಿದೆ.

‘ಪ್ರಚಂಡ ರಾವಣ ’ ಕಣಗಾಲ್‌ ಪ್ರಭಾಕರಶಾಸ್ತ್ರಿ ವಿರಚಿತ ನಾಟಕ. ಇದು ಆ ಕಾಲದಲ್ಲಿ ನಾಡಿನಾದ್ಯಂತ ಅತ್ಯಂತ ಜನಪ್ರಿಯತೆ ಪಡೆದಿತ್ತು. ಈ ನಾಟಕದಲ್ಲಿ ರಾವಣನಾಗಿ ನಟಿಸಿದ ವಜ್ರಮುನಿ ಮುಂದೆ ಕನ್ನಡ ಚಿತ್ರರಂಗದ ಖಳನಾಯಕನಾಗಿ ಮೆರೆದದ್ದು ಇತಿಹಾಸ. ರಾವಣನ ಪಾತ್ರ ಹಲವು ಮಂದಿ ಮಾಡಿದ್ದರೂ, ವಜ್ರಮುನಿಯವರಂತೆ ಜನಪ್ರಿಯತೆ ಯಾರೂ ಪಡೆಯಲಿಲ್ಲ. ರಂಗದ ಮೇಲೆ ವಜ್ರಮುನಿ ಬಂದರೆ ಸಾಕ್ಷಾತ್‌ ರಾವಣನೇ ಬಂದನೇನೋ ಎನ್ನುವಂತಹ ಗತ್ತು. ಹಾಗಾಗಿಯೇ ಈಗಲೂ ರಾವಣ ಎಂದ ತಕ್ಷಣ ವಜ್ರಮುನಿ ನೆನಪಾಗುತ್ತಾರೆ.

ಮುಂದೆ ಕಣಗಾಲ್‌ ಪ್ರಭಾಕರಶಾಸ್ತ್ರಿ ಅವರ ಸೋದರ ಪುಟ್ಟಣ್ಣ ಕಣಗಾಲ್‌ ‘ಸಾವಿರ ಮೆಟ್ಟಿಲು’ ಚಿತ್ರದ ಮೂಲಕ ವಜ್ರಮುನಿ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಆನಂತರ ವೃತ್ತಿ ಜೀವನದಲ್ಲಿ ವಜ್ರಮುನಿ ಹಿಂದೆ ನೋಡಲಿಲ್ಲ. ವಿಶಿಷ್ಟ ಅಭಿನಯ ಶೈಲಿಯಿಂದ ಖಳನಾಯಕ ಪಾತ್ರಗಳಿಗೆ ತಮ್ಮ ಛಾಪನ್ನೊತ್ತಿದರು.

ಪ್ರಚಂಡ ರಾವಣ ಚಿತ್ರ ನಾಟಕದ ಯಥಾರೂಪ ಆಗಿರುವುದಿಲ್ಲ. ಆದರೆ ನಾಟಕದ ಪ್ರಮುಖ ಸಂಭಾಷಣೆಗಳು ಮಾತ್ರ ಇದ್ದೇ ಇರುತ್ತವೆ. ಚಿತ್ರದ ಒಟ್ಟು ಅವಧಿ 150 ನಿಮಿಷ. ವಜ್ರಮುನಿ ಅವರಿಗೆ ಭಾರೀ ಜನಪ್ರಿಯತೆ ನೀಡಿದ್ದ ಪ್ರಚಂಡ ರಾವಣ ನಾಟಕ, ಬೆಳ್ಳಿತೆರೆ ಏರಿದ ನಂತರ ದೇವರಾಜ್‌ ಅವರಿಗೆ ಜನಪ್ರಿಯತೆ ತಂದೀತೇ ಎಂಬುದು ಚಿತ್ರರಸಿಕರ ಕುತೂಹಲ ಹಾಗೂ ಪ್ರಶ್ನೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada