»   » ಏನು? ಹೇಗೆ?: ಸ್ಯಾಂಡಲ್ ವುಡ್ ಸಮಗ್ರ ಸಮಾಚಾರ

ಏನು? ಹೇಗೆ?: ಸ್ಯಾಂಡಲ್ ವುಡ್ ಸಮಗ್ರ ಸಮಾಚಾರ

Subscribe to Filmibeat Kannada


'ಅಂಕುಶ' ಮತ್ತು 'ಪ್ರೀತಿಯ ಹುಚ್ಚ'ಎಂಬ ಎರಡು ಚಿತ್ರಗಳು ಶುಕ್ರವಾರ(ಡಿ.7)ತೆರೆಕಂಡಿವೆ. ಈ ಎರಡೂ ಸಿನಿಮಾದಲ್ಲಿ ಹೊಸಬರದೇ ಕಾರುಬಾರು. ಸ್ಯಾಂಡಲ್ ವುಡ್ ನ ಇನ್ನಿತರೆ ಸಮಾಚಾರಗಳ ತುಣುಕುಗಳು ಇಲ್ಲಿವೆ.

ಅಗ್ನಿ ಶ್ರೀಧರ್ ಕಾದಂಬರಿಯಾಧಾರಿತ 'ಆ ದಿನಗಳು' ಚಿತ್ರ 50ದಿನ ಪೂರೈಸಿದೆ. ಮತ್ತೆ ಒಳ್ಳೆ ಅವಕಾಶ ಸಿಕ್ಕರೇ ಮಾತ್ರ ಕನ್ನಡಕ್ಕೆ ಬರುತ್ತೇನೆ ಎಂದಿದ್ದಾರೆ; ಚಿತ್ರದ ನಾಯಕಿ ಅರ್ಚನಾ.

***

ಗಣೇಶ್ ಮತ್ತು ಅಮೂಲ್ಯ ಅಭಿನಯದ 'ಚೆಲುವಿನ ಚಿತ್ತಾರ' 25ನೇ ವಾರದಲ್ಲಿ ಮುನ್ನುಗಿದೆ. ಗಣೇಶ್ ಅಭಿನಯದ ಇನ್ನೊಂದು ಚಿತ್ರ 'ಕೃಷ್ಣ' 10ನೇ ವಾರ ತಲುಪೋಹೊತ್ತಿಗೆ ಸುಸ್ತಾಗಿದ್ದಾನೆ.

***

ದುನಿಯಾ ವಿಜಯ್ ಅವರ 'ಯುಗ' 6ನೇ ವಾರದಲ್ಲಿ, 'ಚಂಡ' 4ನೇ ವಾರದಲ್ಲಿ ಮುನ್ನುಗಿದೆ. ಈ ಚಿತ್ರಗಳು ನಿರೀಕ್ಷೆಯಷ್ಟು ಗೆಲ್ಲಲಿಲ್ಲ ಅಂತ ಯೋಚನೆ ಮಾಡೋದಕ್ಕೆ ವಿಜಿಗೆ ಟೈಮಿಲ್ಲ. ಅವರೀಗ 'ಮುಖ್ಯಮಂತ್ರಿ ಐ ಲವ್ ಯೂ' ಚಿತ್ರದಲ್ಲಿ ಬಿಜಿ. ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮುಂದುವರೆದಿದೆ.

***

ಮುಖ್ಯಮಂತ್ರಿ ಐ ಲವ್ ಯೂ ಚಿತ್ರದಲ್ಲಿ ಬೆಳಗೆರೆ, ದೇವೇಗೌಡರ ಕುಟುಂಬದವರ ಮರ್ಯಾದೆ ತೆಗೆಯಲಿದ್ದಾರೆ ಎಂಬ ಗುಮಾನಿ ಕೆಲವರಿಗೆ ಬಂದಿದೆ. ಕುಮಾರಸ್ವಾಮಿ ಅಭಿಮಾನಿಗಳು, ಇತ್ತೀಚೆಗೆ ಬೆಳಗೆರೆ ಅವರನ್ನು ಭೇಟಿ ಮಾಡಿ.. ಆ ರೀತಿ ದಯವಿಟ್ಟು ಮಾಡಬೇಡಿ ಎಂದು ಮನವಿ ಸಲ್ಲಿಸಿದ್ದಾರೆ ಎಂದು ಗಾಂಧಿನಗರದ ಹುಡುಗರು ತಿಳಿಸಿದ್ದಾರೆ.

***

ಉಪ್ಪಿ ಮತ್ತು ಶಿವು ಜೋಡಿಯಾಗಿರುವ'ಲವಕುಶ'ತೆರೆಗೆ ಬರಲು ನಿಂತಿದೆ. ದರ್ಶನ್ ಅಭಿನಯದ 'ಗಜ' ಸಹಾ ರೆಡಿ. ಆದರೆ ಟಾಕೀಸ್ ಎಲ್ಲಿದೆ?

***

ಮಾತಾಡ್ ಮಾತಾಡು ಮಲ್ಲಿಗೆ ಚಿತ್ರದಲ್ಲಿ ವಿಷ್ಣು ಜೊತೆ ಸುಹಾಸಿನಿ ಅವರನ್ನು ಕಂಡವರು, ಖುಷಿ ಪಟ್ಟಿದ್ದರು. ಈಗ ಇನ್ನೊಬ್ಬ ಹಿರಿಯ ತಾರೆ ಜಯಪ್ರದಾ ವಿಷ್ಣು ಜೊತೆ ಕಾಣಿಸಲಿದ್ದಾರೆ. ಇವರಿಬ್ಬರ ಅಭಿನಯದ 'ಈ ಬಂಧನ' ಡಿ. 21ರಂದು ತೆರೆಗೆ ಬರಲಿದೆ. ವಿಜಯ ಲಕ್ಷ್ಮಿ ಸಿಂಗ್ ಚಿತ್ರದ ನಿರ್ದೇಶಕಿ.

***

ಪುನೀತ್ ಅಭಿನಯದ 'ಮಿಲನ'85ನೇ ದಿನದಿಂದ ಶತದಿನದತ್ತ ಸಾಗಿದೆ.

***

ದೇವರ ಚಿತ್ರವೆಂದೇ ಗಾಂಧಿನಗರದ ಪಡ್ಡೆಗಳು ಊಹಿಸಿರುವ 'ಕರೆಂಟ್'ಎಂಬ ಚಿತ್ರ ತೆರೆಗೆ ಬರಲು ಸಿದ್ಧತೆ ನಡೆಸಿದೆ. ದೆಹಲಿಯ 'ಟ್ರಿಬುನಲ್ ಸೆನ್ಸಾರ್'ನಲ್ಲಿ ಗೆದ್ದ ಚಿತ್ರ ನಮ್ಮದು ಎಂದು ಚಿತ್ರದ ಜಾಹೀರಾತು ಹೇಳುತ್ತಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada