ಕನಸಿನ ರಾಣಿ ಮಾಲಾಶ್ರೀ ಕಡೆಗೂ ಡಬ್ಬಿಂಗ್ ಹೇಳಿದರು
ಕನಸಿನ ರಾಣಿ ಮಾಲಾಶ್ರೀ ತಮ್ಮ ಅಭಿನಯದ ಚಿತ್ರಗಳಿಗೆ ಇದುವರೆಗೂ ಡಬ್ಬಿಂಗ್ ಹೇಳಿರಲಿಲ್ಲ. ಆದರೆ ಈ ಕನಸು ಈಗ ನೆರವೇರಿದೆ. ಅದೂ 'ಶಕ್ತಿ' ಚಿತ್ರದ ಮೂಲಕ. 'ನಂಜುಂಡಿ ಕಲ್ಯಾಣ' ಚಿತ್ರದಿಂದ ಹಿಡಿದು 'ಕನ್ನಡದ ಕಿರಣ್ ಬೇಡಿ' ತನಕ ಇದುವರೆಗೂ ಮಾಲಾಶ್ರೀ ಡಬ್ಬಿಂಗ್ ಹೇಳಿರಲಿಲ್ಲ.
ಇದೇ ಮೊದಲ ಬಾರಿಗೆ ಡಬ್ಬಿಂಗ್ ಹೇಳಿರುವ ಮಾಲಾಶ್ರೀ ಅವರು ಸಖತ್ ಖುಷಿಯಾಗಿದ್ದರು. "ತಮ್ಮ ಪತಿ ರಾಮು ಅವರು ತುಂಬಿದ ಸ್ಫೂರ್ತಿ, ಆತ್ಮವಿಶ್ವಾಸದ ಫಲ ಇದು. ಹಾಗಾಗಿ 'ಶಕ್ತಿ' ಚಿತ್ರದಲ್ಲಿ ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಹೇಳಿದ್ದೇನೆ" ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.
ಇಷ್ಟು ದಿನಗಳ ಕಾಲ ಮಾಲಾಶ್ರೀ ಅವರಿಗೆ ಸರ್ವಮಂಗಳ ಡಬ್ಬಿಂಗ್ ಹೇಳುತ್ತಿದ್ದರು. ಕೆಲವರ್ಷಗಳ ಹಿಂದೆ ಅವರು ನಿಧನರಾದ ಹಿನ್ನೆಲೆಯಲ್ಲಿ ಮಾಲಾಶ್ರೀ ಅವರ ಧ್ವನಿಗೆ ಧ್ವನಿ ಇಲ್ಲದಂತಾಗಿತ್ತು. ಈಗ ಸರ್ವಮಂಗಳ ಅವರನ್ನೇ ನೆನಪಿಸಿಕೊಳ್ಳುತ್ತಾ ಅದೇ ಧಾಟಿಯಲ್ಲಿ ಡಬ್ಬಿಂಗ್ ಹೇಳಿ ಸಕ್ಸಸ್ ಆಗಿದ್ದಾರೆ!
"ಸರ್ವೂ ಪ್ಲೀಸ್ ನನಗೆ ಸಹಾಯ ಮಾಡು ಎಂದು ಆಕಾಶ್ ಆಡಿಯೋ ಡಬ್ಬಿಂಗ್ ರೂಮಿನಲ್ಲಿ ಮಾಲಾಶ್ರೀ ಒಮ್ಮೆ ಆಕಾಶದ ಕಡೆಗೆ ನೋಡಿ ಡಬ್ಬಿಂಗ್ ಹೇಳಿದ್ದಾರೆ. ಅವರ ನಿರೀಕ್ಷೆಯಂತೆ ಡಬ್ಬಿಂಗ್ ಕೂಡ ಸೊಗಸಾಗಿ ಮೂಡಿಬಂದಿದೆಯಂತೆ. ಡಬ್ಬಿಂಗ್ ಹೇಳುವುದು ಒಂಥರಾ ಚಾಲೆಂಜಿಂಗ್ ಜಾಬ್ ರೀ ಎಂದಿದ್ದಾರೆ ಮಾಲಾಶ್ರೀ.
ರಾಮೂ ಎಂಟರ್‌ಪ್ರೈಸಸ್‌ನ 32ನೇ ಕಾಣಿಕೆಯಾದ ಈ ಚಿತ್ರ ಡಿಸೆಂಬರ್ 16ರಂದು ತೆರೆಕಾಣಲಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ, ಹೊಡೆದಾಡುವ ಪಾತ್ರ ಮಾಲಾಶ್ರೀ ಅವರದು. ರವಿಶಂಕರ್, ಸಯ್ಯಾಜಿ ರಾವ್ ಶಿಂಧೆ, ವಿನಯಾ ಪ್ರಸಾದ್, ಅವಿನಾಶ್, ಶರತ್ ಲೋಹಿತಾಶ್ವ, ಸಾಧುಕೋಕಿಲ ಮುಂತಾದವರು ಚಿತ್ರದಲ್ಲಿದ್ದಾರೆ. (ಒನ್‍ಇಂಡಿಯಾ ಕನ್ನಡ)


Click it and Unblock the Notifications











