»   » ಅಗ್ನಿ ಶ್ರೀಧರ್ ಬತ್ತಳಿಕೆಯಲ್ಲಿನ ಹೊಸ ಅಸ್ತ್ರ!

ಅಗ್ನಿ ಶ್ರೀಧರ್ ಬತ್ತಳಿಕೆಯಲ್ಲಿನ ಹೊಸ ಅಸ್ತ್ರ!

Subscribe to Filmibeat Kannada

'ಆ ದಿನಗಳು' ಯಶಸ್ವಿಯ ನಂತರ 'ದಾದಾಗಿರಿಯ ದಿನಗಳ' ಜಾಡಿನಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ 'ಸ್ಲಂ ಬಾಲ'. ಎರಡೇ ಎರಡು ಹಾಡುಗಳನ್ನು ಹೊಂದಿರುವ ಈ ಚಿತ್ರದ ಧ್ವನಿ ಸುರುಳಿ ಇತ್ತೀಚೆಗಷ್ಟೆ ಹೊಟೇಲ್ ಏಟ್ರಿಯಾದಲ್ಲಿ ಹಲವು ಚಿತ್ರೋದ್ಯಮದ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಪತ್ರಕರ್ತೆಯರಾದ ಸಂಯುಕ್ತ ಕರ್ನಾಟಕದ ಕೆ.ಎಚ್.ಸಾವಿತ್ರಿ ಹಾಗೂ ಸಿನಿಮಾ ಮಾಸಿಕ 'ಚಿತ್ರಾ'ದ ತುಂಗರೇಣುಕ ಮತ್ತು ಸರಸ್ವತಿ ಜಾಹಗೀರ್ ದಾರ್ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು. ಸ್ಲಂ ಬಾಲನ ನಿರ್ದೇಶನದ ಜವಾಬ್ದಾರಿ ಹೊತ್ತಿರುವ 'ಅಗ್ನಿ' ವಾರಪತ್ರಿಕೆ ಪತ್ರಕರ್ತೆ ಡಿ.ಸುಮನಾ ಕಿತ್ತೂರು ಈ ಎರಡು ಹಾಡುಗಳನ್ನು ರಚಿಸಿದ್ದಾರೆ.

ಬರಹಗಾರ ಹಾಗೂ 'ಅಗ್ನಿ ' ವಾರಪತ್ರಿಕೆಯ ಸಂಪಾದಕ ಶ್ರೀಧರ್ ಮಾತನಾಡುತ್ತಾ, ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ, ಜವಾಬ್ದಾರಿಯುತವಾದ ಚಿತ್ರಗಳನ್ನು ನಿರ್ಮಿಸಬೇಕಾಗಿದೆ ಎಂದರು. ಸುಮನಾ ಕಿತ್ತೂರು ಅವರು ಈ ಚಿತ್ರವನ್ನು ಮಾಡಲು ಬಹಳಷ್ಟು ಹೆಣಗಿದ್ದಾರೆ. ಪ್ರತಿ ಫ್ರೇಂನಲ್ಲೂ ಅವರ ಪ್ರತಿಭೆ ಎದ್ದು ಕಾಣುತ್ತದೆ. ಸ್ಲಂ ಬಾಲನ ಪಾತ್ರದಲ್ಲಿ ಕಾಣಿಸುವ ವಿಜಯ್ ಸಹ ಈ ಪಾತ್ರಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ. ನನ್ನ ಪುಸ್ತಕದಲ್ಲಿನ ಮತ್ತೊಂದು ಪಾತ್ರವಾದ ರಜ್ಜುವಿನ ಪಾತ್ರ ನಿರೂಪಣೆ ಅದ್ಭುತವಾಗಿ ಮೂಡಿಬಂದಿದೆ ಎಂದು ಶ್ರೀಧರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶ್ರೀಧರ್ ಮತ್ತೊಂದು ವಿಷಯವನ್ನ್ನು ತಿಳಿಸಿದರು. ಮಲಯಾಳಂ ನಟ ಮೋಹನ್ ಲಾಲ್ ಅವರೊಂದಿಗೆ ಚಿತ್ರವನ್ನು ನಿರ್ದೇಶಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ಮುಂದಿನ ವರ್ಷಮೋಹನ್ ಲಾಲ್ ಕಾಲ್ ಷೀಟ್ ಸಿಗುವ ಸಾಧ್ಯತೆಗಳಿವೆ.ತಮ್ಮ ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳನ್ನು ಇಟ್ಟುಕೊಂಡಿರುವ ಅಗ್ನಿ ಶ್ರೀಧರ್, ಮುಂದಿನ ದಿನಗಳಲ್ಲಿ ಅವುಗಳನ್ನು ಒಂದಾಗಿ ಪ್ರಯೋಗಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸುವ ದಿನಗಳು ದೂರವಿಲ್ಲ.

ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಕವಿ ಸಿದ್ಧಲಿಂಗಯ್ಯ, ಇಂದುಧರ ಹೊನ್ನಾಪುರ, ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಚ್.ಡಿ.ಗಂಗರಾಜು, ನಿರ್ಮಾಪಕ ಕನಕಪುರ ಶ್ರೀನಿವಾಸ್, ನಾಯಕ ನಟ ವಿಜಯ್ ಹಾಗೂ ನಾಯಕಿ ಶುಭಾ ಪುಂಜಾ ಉಪಸ್ಥಿತರಿದ್ದರು. ಇಂದುಧರ ಹೊನ್ನಾಪುರ ಮಾತನಾಡುತ್ತಾ, ಸ್ಲಂ ಬಾಲ ಎಲ್ಲ ಚಿತ್ರಗಳಂತಲ್ಲದ ಉತ್ತಮ ಗುಣಮಟ್ಟದಿಂದ ಕೂಡಿದ ಚಿತ್ರ ಎಂದರು. ಈ ರೀತಿಯ ಚಿತ್ರ ಕನ್ನಡದಲ್ಲಿ ಮಾತ್ರ ಮಾಡಲು ಸಾಧ್ಯ. ಜೀವನದ ಪ್ರತಿ ಹೆಜ್ಜೆಯಲ್ಲೂ ಭೂಗತ ಜಗತ್ತು ಹೇಗೆ ತನ್ನ ಕರಾಳ ಹಸ್ತಗಳನ್ನು ಚಾಚಿದೆ ಎಂಬುದು ಈ ಚಿತ್ರ ನೋಡಿದ ನಂತರ ತಿಳಿಯುತ್ತದೆ ಎಂದು 'ಸ್ಲಂ ಬಾಲ'ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

(ದಟ್ಸ್ ಕನ್ನಡಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada