ದರ್ಶನ್ ಬಿಡುಗಡೆ ನಂತರ ವಿಜಯಲಕ್ಷ್ಮಿ ಹೇಳುವುದೇನು!?

"ನನಗೆ ಹೇಳಲಾರದ ಸಂತೋಷವಾಯಿತು. ನಾನು ಕೋರ್ಟ್ ತೀರ್ಪನ್ನು ನಿರೀಕ್ಷಿಸುತ್ತಾ ಕಾರಿನಲ್ಲೇ ಕುಳಿತಿದ್ದೆ. ದರ್ಶನ್ ಅವರಿಗೆ ಜಾಮೀನು ಸಿಕ್ಕಿ ಹೊರಬರುತ್ತಾರೆಂದು ಗೊತ್ತಾದ ಬಳಿಕ ಸಂತೋಷದಿಂದ ನನಗೆ ಕಣ್ಣೀರು ಹರಿಯಿತು. ಯಾವಾಗ ನಾವಿಬ್ಬರೂ ಮತ್ತೆ ಮನೆಯಲ್ಲಿ ಒಟ್ಟಾಗುತ್ತೇವೆ ಎಂದು ಚಿಂತಿಸುತ್ತಿದ್ದ ನನಗೆ ಅದು ಇಂದೇ ಎಂದು ಗೊತ್ತಾದ ಬಳಿಕ ಮಾತೇ ಹೊರಡುತ್ತಿರಲಿಲ್ಲ.
ಆಗಲೇ ನಾನು ಯೋಚಿಸಿದ್ದು, ದರ್ಶನ್ ರನ್ನು ಆರತಿ ಎತ್ತಿ ಬರಮಾಡಿಕೊಳ್ಳಬೇಕೆಂದು. ಕೋರ್ಟ್ ಔಪಚಾರಿಕತೆಯೆಲ್ಲಾ ಮುಗಿದು ಅವರು ರಾಜರಾಜೇಶ್ವರಿ ದೇವಿಯ ದರ್ಶನ ಪಡೆದು ಮನೆಗೆ ಬಂದಾಗ ಅವರನ್ನು ಆರತಿ ಎತ್ತಿ ಬರಮಾಡಿಕೊಂಡೆ. ನಂತರ ಪರಸ್ಪರ ಸಿಹಿ ಹಂಚಿಕೊಂಡಿ ತಿಂದೆವು.
ನಡೆದ ಕೆಟ್ಟ ಘಟನೆಯ ನಂತರ ನನಗಿಬ್ಬರಿಗೂ ಪಶ್ಚಾತ್ತಾಪವಾಗಿದೆ. ಸಂಸಾರದಲ್ಲಿ ಸರಿಗಮ ಕಾಯ್ದುಕೊಳ್ಳಲು ನಿರ್ಧರಿಸಿ ಶಪಥ ಮಾಡಿದ್ದೇವೆ. ಹಾಗೇ, ಈ ಘಟನೆಯ ನಂತರ ನಮ್ಮ ಕುಟುಂಬದ ಆಪ್ತರು, ಹಲವಾರು ಹಿರಿಯರು ಹಾಗೂ ಚಿತ್ರರಂಗದ ಪ್ರಮುಖರು ನಮಗೆ ಮುಂದೆ ಹೇಗಿರಬೇಕೆಂದು ಮಾರ್ಗದರ್ಶನ ಮಾಡಿದ್ದಾರೆ. ಅಂತೆಯೇ ಇರುತ್ತೇವೆ ಕೂಡ.
ಈ ಘಟನೆಯ ನಂತರ ಬಹಳಷ್ಟು ಮಂದಿ ಹೇಳಿದ್ದಾರೆ, "ಎಲ್ಲರ ಸಂಸಾರಲ್ಲೂ ಜಗಳ, ಕೋಪ-ತಾಪ, ವೈಮನಸ್ಯ ಸಹಜ. ಅದನ್ನು ಅತಿರೇಕಕ್ಕೆ ಕೊಂಡೊಯ್ದು ಯಾರದೋ ಮಾತು ಕೇಳಿ ಸಂಸಾರವನ್ನು ಬೀದಿಗೋ, ಪೊಲೀಸ್ ಸ್ಟೇಷನ್ನಿಗೋ ಕೊಂಡೊಯ್ಯಬಾರದು. ಸಂಸಾರವು ಮನೆಯ ಗೋಡೆಯ ನಡುವೆ ಇರಬೇಕೇ ಹೊರತೂ ಬೀದಿಯಲ್ಲೋ, ಸಮಾಜದ ಮಧ್ಯದಲ್ಲೋ ಅಲ್ಲ"
ಅವರೆರಲ್ಲರ ಮಾತಿನ ಅರ್ಥ ಈಗ ನಮಗೆ ಚೆನ್ನಾಗಿ ಆಗಿದೆ. ಮುಂದೆ ಆದರ್ಶ ದಂಪತಿಗಳಾಗಿ ಕೊನೆಯವೆರಗೂ ಚೆನ್ನಾಗಿ ಬದುಕಿ ತೋರಿಸ್ತೀವಿ" ಎಂದರು ಭಾವುಕರಾಗಿ ಕಣ್ಣೀರು ಸುರಿಸುತ್ತಾ. ಅವರ ಧ್ವನಿಯಲ್ಲಿ ಇರುವ ಖಚಿತತೆ ಹೇಳಿದ ಮಾತಿಗೆ ಸಾಕ್ಷಿ ನೀಡವಂತಿತ್ತು.
ವಿಜಯಲಕ್ಷ್ಮಿ ಹೇಳಿದಂತೆ ನಡೆದುಕೊಳ್ಳಲಿ, ಕ್ಷಮೆ ಕೇಳಿ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಿರುವ ದರ್ಶನ್ ಹಾಗೇ ಮಾಡಲಿ. ಒಟ್ಟಿನಲ್ಲಿ ಇಡೀ ಸಂಸಾರ ಚೆನ್ನಾಗಿರಲಿ. ಕರ್ನಾಟಕದ ಕಲಾವಿದರ ಕುಟುಂಬವೊಂದು ದುರಂತಕ್ಕೆ ಬಲಿಯಾಗದಿರಲಿ ಎಂಬುದು ಎಲ್ಲರ ಆಶಯ ಕೂಡ...


Click it and Unblock the Notifications











