twitter
    For Quick Alerts
    ALLOW NOTIFICATIONS  
    For Daily Alerts

    ಉಮಾಶ್ರೀ: ಸಾಕವ್ವನ ಒಡಲಾಳ

    By Staff
    |

    ಆವತ್ತು ಶಾಸಕರ ಭವನದ ತಮ್ಮ ಕೊಠಡಿಯಲ್ಲಿ ಉಮಾಶ್ರೀ ಚೂಡಿದಾರ್ ಧರಿಸಿದ್ದರು. ಅವರ ಸಂದರ್ಶನಕ್ಕೆಂದು ಹೋದಾಗ ಸುಡುಧಗೆ. ಮೊದಲಿಗೆ ಅವರು ಬಹಳ ಹಿಂದೆ ತಮಗೆ ಚೂಡಿದಾರ್ ತೊಡುವುದೂ ಎಷ್ಟು ಕಷ್ಟವಾಗಿತ್ತು ಅಂತ ಬಣ್ಣಿಸಿದರು. "ಈಗ ಚೂಡಿದಾರ್ ಹಾಕಿಕೊಂಡರೆ ವಯಸ್ಸು ಕಡಿಮೆ ಮಾಡಿಕೊಳ್ಳಲು ಹಾಗೆ ಮಾಡುತ್ತೇನೆ ಅಂತ ಕೆಲವರು ಕಿಚಾಯಿಸುವುದೂ ಉಂಟು"ಎಂದು ಸಿನಿಮಾ ಶೈಲಿಯಲ್ಲೇ ನಕ್ಕರು. ನನಗೆ ನಗಲು ಆಗಲಿಲ್ಲ.

    *ಜಯಂತಿ

    "ಊಟ ಮಾಡಿ" ಎಂಬ ಆಹ್ವಾನ ಅವರಿಂದ ಬಂತು. ನನ್ನ ಊಟವಾಗಿದ್ದರಿಂದ ನೀವು ಮಾಡಿ ಅಂದು ಸುಮ್ಮನಾದೆ. ಅವರು ಕೋಣೆಯ ಒಳಭಾಗದಲ್ಲಿದ್ದ ಇನ್ನೊಂದು ಸಣ್ಣ ಕೋಣೆಯಲ್ಲಿ ಊಟ ಮಾಡಿ ತೇಗುತ್ತಾ ಬಂದರು. "ತಪ್ಪು ತಿಳೀಬೇಡಿ. ನನಗೆ ಹಸಿವು ತಡೆಯೋಕೆ ಆಗೋಲ್ಲ. ಜೀವನದಲ್ಲಿ ಹಸಿದು ಹಸಿದು ಸಾಕಾಗಿಹೋಗಿತ್ತು. ಈಗಲೂ ಅದಕ್ಕೇ ಊಟದ ಮೇಲೆ ಪ್ರೀತಿ. ನಿಮ್ಮ ಎದುರು ಕೂತು ನಾನು ಊಟ ಮಾಡಿದರೆ ಹೇಗೋ ಎಂಬ ಸಂಕೋಚ. ಅದಕ್ಕೇ ಒಳಗೆ ಉಂಡು ಬಂದೆ" ಎನ್ನುವಷ್ಟರಲ್ಲಿ ಇನ್ನೊಂದು ತೇಗು. ಅವರು ಆಗ ನಕ್ಕರು. ನನಗೂ ನಗದೇ ಇರಲು ಆಗಲಿಲ್ಲ. ಯಾಕೆಂದರೆ, ಈ ಸಲ ಉಮಾಶ್ರೀ ನಗು ಸಿನಿಮಾ ಶೈಲಿಯಲ್ಲಿ ಇದೆ ಅಂತ ಅನ್ನಿಸಲಿಲ್ಲ.

    ಕೇವಲ ಹದಿನೈದು ನಿಮಿಷದಲ್ಲಿ ಊಟ ಹಾಗೂ ಬಟ್ಟೆಗೆ ಬದುಕಿನಲ್ಲಿ ಅವರು ಪಟ್ಟ ಪಾಡನ್ನು ನನಗೆ ಅವರು ಪ್ರಾತ್ಯಕ್ಷಿಕೆಯ ರೀತಿ ಹೀಗೆ ದಾಟಿಸಿದ್ದರು. ಮಾತಿಗೆ ಕೂತಾಗ ಅವರು ಅನುಭವಿಸಿದ್ದ ಕಷ್ಟಗಳು ಒಂದಾದ ಮೇಲೊಂದರಂತೆ ಬಿಚ್ಚಿಕೊಂಡವು. ಬಹುತೇಕವು "ಆಫ್ ದಿ ರೆಕಾರ್ಡ್". ಹಾಗಾಗಿ ಅವನ್ನು ಬರೆಯುವುದು ನೈತಿಕವಾಗಿ ತಪ್ಪು.

    ಉಮಾಶ್ರೀ ನಾಟಕದ ರಿಹರ್ಸಲ್‌ಗೆ ಬರುತ್ತಿದ್ದದ್ದೇ ತಿನ್ನಲು ಚಿತ್ರಾನ್ನ ಸಿಗುತ್ತದೆ ಎಂಬ ಕಾರಣಕ್ಕೆ. ಹಸಿವಿನಲ್ಲಿ ಮಾಡುವ ಕೆಲಸ- ಹಸಿವು ನೀಗುತ್ತದೆ ಎಂಬ ಖಾತರಿಯಿದ್ದಾಗ- ತುಂಬಾ ತೀವ್ರವಾಗಿರುತ್ತದಂತೆ. ಈ ಮಾತಿಗೆ ಉಮಾಶ್ರೀ ಸ್ಪಷ್ಟ ಉದಾಹರಣೆ. ಚಿತ್ರರಂಗಕ್ಕೆ ಬಂದಮೇಲೆ ಕೂಡ ಈ ತೀವ್ರತೆ ಕಡಿಮೆಯಾಗಲಿಲ್ಲ. ರಂಗಭೂಮಿಯಲ್ಲಿ ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡಿ ಮಾಡಿ, ಪ್ರಶಸ್ತಿಗಳ ಹೊಳಪು ನೋಡಿ ಪಳಗಿದ ಮೇಲೆಯೇ ಉಮಾಶ್ರೀ ಚಿತ್ರರಂಗಕ್ಕೆ ಬಂದಿದ್ದು.

    ಅವರು ಸಿನಿಮಾ ಪಾತ್ರಗಳಲ್ಲಿ ಕೂಡ ನಾಟಕದ ವರಸೆಯನ್ನು ಬಿಟ್ಟುಕೊಡಲಿಲ್ಲ ಎಂಬುದು ವಿಶೇಷ. ಸಟೈಲ್, ಸೋಬರ್ ಎಂಬುದು ಅವರಿಗೆ ಮೊದಮೊದಲು ಮುಖ್ಯವಾಗಲೇ ಇಲ್ಲ. ಅಂಥ ಗುಣಲಕ್ಷಣ ಬೇಡುವ ಪಾತ್ರಗಳು ಕೂಡ ಅವರಿಗೆ ಸಿಗಲಿಲ್ಲ. ಕಾಮಿಡಿ ಹಾಗೂ ಡಬ್ಬಲ್ ಮೀನಿಂಗ್ ಟ್ರ್ಯಾಕ್‌ಗಳಲ್ಲಿ ಉಮಾಶ್ರೀಗೆ ಕಾಯಂ ಸ್ಥಾನವನ್ನು ಕನ್ನಡ ಚಿತ್ರರಂಗ ಕಲ್ಪಿಸಿಕೊಟ್ಟಿತು. ದಿನೇಶ್, ಎನ್.ಎಸ್.ರಾವ್, ಮೈಸೂರು ಲೋಕೇಶ್ ಮೊದಲಾದವರ ಜೊತೆ ಡಬ್ಬಲ್ ಮೀನಿಂಗ್ ಸಂಭಾಷಣೆ ಹೇಳುವ ಪಾತ್ರಗಳಲ್ಲಿಯೂ ಉಮಾಶ್ರೀ ಮಿಂಚಿದರು. ರಂಗಾಭಿನಯದ ತೀವ್ರತೆ ಆಗಲೂ ಕಡಿಮೆಯಾಗಲಿಲ್ಲ.

    ರವಿಚಂದ್ರನ್‌ಗೆ ಉಮಾಶ್ರೀ ಕಲಾವಂತಿಕೆಯ ಮೇಲೆ ಇಡಿ ಪ್ರೀತಿ ಹೆಚ್ಚು. ಅದಕ್ಕೇ ಅವರು ಪುಟ್ಮಲ್ಲಿಯಾಗಿ ಉಮಾಶ್ರೀಗೆ ಬಡ್ತಿ ಕೊಟ್ಟರು. "ಒಡಲಾಳ" ನಾಟಕದಲ್ಲಿ ಸಾಕವ್ವನಾಗಿ ನೂರಾರು ಪ್ರದರ್ಶನಗಳನ್ನು ಕೊಟ್ಟಿದ್ದ ಉಮಾಶ್ರೀಗೆ ಆ ಪಾತ್ರ ಕಿಂಚಿತ್ತೂ ಸವಾಲಾಗಲೇ ಇಲ್ಲವಂತೆ. "ಎಲ್ಲರೂ ಆ ಪಾತ್ರ ನೋಡಿ ಅಷ್ಟು ಚೆನ್ನಾಗಿ ಮಾಡಿದೀರಿ. ಇಷ್ಟು ಚೆನ್ನಾಗಿ ಮಾಡಿದೀರಿ ಅಂದರು. ಆದರೆ, ನಾಟಕಗಳಲ್ಲಿ ಅದಕ್ಕೂ ಮೊದಲು ನಾವು ಆಕ್ಟಿಂಗ್ ಮಾಡಿದ್ದರ ಮುಂದೆ ಅದೇನೂ ಅಲ್ಲ ಎಂಬುದು ನನಗೆ ಹಾಗೂ ನನ್ನನ್ನು ನಾಟಕಗಳಲ್ಲಿ ಕಂಡವರಿಗೆ ಗೊತ್ತು. ಎಷ್ಟೇ ಆದರೂ ಸಿನಿಮಾ ಜನಪ್ರಿ ಅಲ್ವೇ?" ಉಮಾಶ್ರೀ ಉತ್ತರದಲ್ಲೇ ಪ್ರಶ್ನೆ ಹಾಕಿದರು.

    ಉಮಾಶ್ರೀ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಲ್ಲಿಯವರೆಗೆ ಶ್ರೇಷ್ಠ ನಟಿ ಪ್ರಶಸ್ತಿ ಅವರಿಗೆ ಸಿಕ್ಕಿರಲಿಲ್ಲ. ಗುಲಾಬಿ ಎರಡೆರಡು ಶ್ರೇಷ್ಠ ನಟಿ ಪ್ರಶಸ್ತಿಗಳನ್ನು- ಒಂದು ರಾಷ್ಟ್ರ, ಇನ್ನೊಂದು ರಾಜ್ಯ- ಮೊಗೆದು ಕೊಟ್ಟಿದೆ. ಕೊರತೆ ತುಂಬಿಕೊಂಡ ನಿರಾಳ ಭಾವ ಅವರದ್ದು. ಇವಕ್ಕೆ ಪೂರಕ ಎನ್ನುವಂತೆ ಓಸಿಯಾನ್ ಚಿತ್ರೋತ್ಸವದ ಪುರಸ್ಕಾರವೂ ದೊರೆತಿದೆ. ಅದು ಅಂತರರಾಷ್ಟ್ರೀಯ ಪ್ರಶಸ್ತಿ.

    ಇಷ್ಟಕ್ಕೂ ಉಮಾಶ್ರೀ ಪ್ರಶಸ್ತಿಯ ಕ್ರೆಡಿಟ್ ಸಲ್ಲಬೇಕಿರುವುದು ಗಿರೀಶ್ ಕಾಸರವಳ್ಳಿಯವರಿಗೆ. ಕಮರ್ಷಿಯಲ್ ಚಹರೆಗಳನ್ನು ತಮ್ಮ ಕಲಾತ್ಮಕ ಚಿತ್ರಗಳಿಗೆ ಅವರು ಒಗ್ಗಿಸಿಕೊಳ್ಳುವ ಪರಿ ಬೆರಗು ಮೂಡಿಸುವಂಥದ್ದು. ತಾರಾ, ಸೌಂದರ್ಯ, ಜಯಮಾಲಾ, ಪವಿತ್ರಾ ಲೋಕೇಶ್ ಹೀಗೆ ಕಮರ್ಷಿಯಲ್ ಚಿತ್ರಗಳ ಗ್ಲಾಮರ್ ತಾರೆಯರಿಗೆ ದೀರ್ಘ ಕಾಲಾವಧೀಯ ನಂತರ ಅವರು ಬೇರೆ ಕುಲಾವಿ ತೊಡಿಸಿರುವುದು ಅಚ್ಚರಿಯ ನಿರ್ಧಾರ. ಹಾಗೆ ಅವರು ತೊಡಿಸಿದ ಕುಲಾವಿಗಳೆಲ್ಲಾ ಒಂದಲ್ಲ ಒಂದು ಪ್ರಶಸ್ತಿಗಳನ್ನು ಈ ನಟಿಯರಿಗೆ ಕೊಡಿಸಿವೆ.

    ಅವರ ಮುಂದಿನ ಚಿತ್ರದಲ್ಲೂ ಉಮಾಶ್ರೀ ಅಭಿನಯ ಇರುವುದು ಇನ್ನೊಂದು ವಿಶೇಷ. ಯಾಕೆಂದರೆ, ಗಿರೀಶ್ ಎರಡು ಸಲ ಒಬ್ಬೇ ನಟ/ನಟಿಗೆ ಅವಕಾಶ ಕೊಡುವುದೇ ಅಪರೂಪ. ಮಗ್ಗ ನೇಯುವ ಸದ್ದಿನ ನಡುವೆ ಗೆಜ್ಜೆ ಸದ್ದನ್ನು ಕನವರಿಸುತ್ತಿದ್ದ ಉಮಾಶ್ರೀ ಈಗ ರಾಜಕೀಯ ಮೊಗಸಾಲೆಯಲ್ಲಿ ಓಡಾಡುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರನಟಿ ಎಂಬುದೇ ಒಂಥರಾ ಫ್ಯಾಂಟಸಿ!

    Tuesday, September 8, 2009, 12:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X