ಆರ್ಥಿಕ ಮುಗ್ಗಟ್ಟಿನಿಂದ ಅರ್ಧಕ್ಕೆ ನಿಂತ ಶಿವಣ್ಣನ 'ಲಕ್ಷ್ಮೀ'
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೆಟ್ಟೇರಿರುವ ಚಿತ್ರದ ಶೂಟಿಂಗ್ ಅರ್ಧಕ್ಕೇ ನಿಂತುಹೋಗಿದೆ. ಅದೂ ಯಾವುದೇ ಹೊಸ ನಿರ್ಮಾಪಕರ ಚಿತ್ರವಲ್ಲ. ಕೋ ಕೋ ಚಿತ್ರವನ್ನು ನಿರ್ಮಿಸಿ ಕೈಸುಟ್ಟುಕೊಂಡಿರುವ ಭಾಸ್ಕರ್ ನಿರ್ಮಾಣದ 'ಲಕ್ಷ್ಮೀ' ಚಿತ್ರ. ಶಿವಣ್ಣ ಹಾಗೂ ಪ್ರಿಯಾಮಣಿಯಂತಹ ಘಟಾನುಘಟಿಗಳ ಚಿತ್ರವೇ ನಿಂತುಹೋಗಿದೆ ಎಂದರೆ ಸ್ಯಾಂಡಲ್ ವುಡ್ 'ಶಾಕ್' ಗೆ ಒಳಗಾಗಲೇಬೇಕು.
ಹೌದು, ಶಿವಣ್ಣನ ಬಹುನಿರೀಕ್ಷಿತ ಚಿತ್ರ 'ಶಿವ' ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಮಾರ್ಚ್ 12ರಂದು ಶಿವಣ್ಣ ನಟಿಸಲಿರುವ ಹೊಸ ಚಿತ್ರ 'ಅಂದರ್ ಬಾಹರ್' ಮುಹೂರ್ತವೂ ಫಿಕ್ಸ್ ಆಗಿದೆ. ಆದರೆ ಸಾಕಷ್ಟು ಹಿಂದೆಯೇ ಸೆಟ್ಟೇರಿದ್ದ ಲಕ್ಷ್ಮೀ ಚಿತ್ರದ ಬಗ್ಗೆ ಸುದ್ದಿ, ಸುಳಿವು ಎರಡೂ ಇಲ್ಲ. ವಿಚಾರಿಸಿಲಾಗಿ, ಲಕ್ಷ್ಮೀ ಚಿತ್ರಕ್ಕೆ ಲಕ್ಷ್ಮೀ ಕೃಪೆ ದೊರೆತಿಲ್ಲ; ಆರ್ಥಿಕ ಮುಗ್ಗಟ್ಟಿನಿಂದ ಚಿತ್ರ ಅರ್ಧಕ್ಕೇ ನಿಂತುಹೋಗಿದೆ.
ಪಾತ್ರ ಚೆನ್ನಾಗಿಲ್ಲದಿದ್ದರೆ ಚಿತ್ರವನ್ನೇ ಒಪ್ಪಿಕೊಳ್ಳದ ಪ್ರಿಯಾಮಣಿ ಶಿವಣ್ಣನಿಗೆ ನಾಯಕಿಯಾದಾಗ ಸಹಜವಾಗಿಯೇ ಲಕ್ಷ್ಮೀ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿತ್ತು. ಕೋ ಕೋ ಚಿತ್ರ ಒಂದರಹಿಂದೊಂದರಂತೆ ಸಂತೋಷಕೂಟ ಆಚರಿಸಿಕೊಂಡಾಗಲೇ ಗಾಂಧಿನಗರಕ್ಕೆ ಸಂದೇಹ ಮೂಡಿತ್ತು. ಚಿತ್ರಮಂದಿರ ಖಾಲಿ ಇದ್ದರೂ ಯಶಸ್ವಿಯಾಗಿದೆ ಎಂಬ ಹೇಳಿಕೆ ಯಾಕೆ ಎಂದು ಎಲ್ಲರೂ ಕೇಳುವಂತಾಗಿತ್ತು. ಇದೀಗ ಎಲ್ಲವೂ ಠುಸ್ ಆಗಿದೆ. ನಿರ್ಮಾಪಕರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆಂಬ ಸುದ್ದಿ ಬಂದಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











