ನಮ್ಮ ತಾಯಾಣೇಗು ಅತಿ ಶೀಘ್ರದಲ್ಲೆ ಯೋಗರಾಜ್!
ಯಶಸ್ವಿ ನಿರ್ದೇಶಕ ಕಮ್ ಗೀತ ಸಾಹಿತಿ ಯೋಗರಾಜ್ ಭಟ್‌ರ ಹೆಸರಿಟ್ಟುಕೊಂಡು ಸಿನಿಮಾ ಮಾಡೋದು ಅಂದ್ರೆ ತಮಾಷೆ ಮಾತಲ್ಲ. ಇದನ್ನು ಸೀರಿಯಸ್ಸಾಗೇ ಮಾಡಿದ್ದಾರೆ ಮತ್ತೊಬ್ಬ ನಿರ್ದೇಶಕ ಪದ್ಮನಾಭನ್. ಸಾಕಷ್ಟು 'ಸರ್ಕಸ್' ಆಡಿ 'ಶ್ರೀಹರಿಕಥೆ' ಮಾಡಿದರೂ ಪದ್ಮನಾಭನ್ ಪ್ರಯತ್ನಗಳು ಫಲಿಸಿರಲಿಲ್ಲ.
ಈಗ ಅವರು 'ಯೋಗರಾಜ್ But' ಎಂದು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಬಾರಿ ಅವರ ಪ್ರಯತ್ನ ಫಲ ಕೊಡುವ ನಿರೀಕ್ಷೆಯಲ್ಲಿದೆ. ಇದೊಂದು ನೈಜ ಘಟನೆಗಳನ್ನು ಆಧರಿಸಿದ ಚಿತ್ರವಂತೆ. ನವೀನ್ ಕೃಷ್ಣ ಹಾಗೂ ನೀತೂ ಚಿತ್ರದ ಮುಖ್ಯ ಪಾತ್ರಧಾರಿಗಳು.
ನವೀನ್ ಕೃಷ್ಣ ಅವರ ತಂದೆ ಹಾಗೂ ಖ್ಯಾತ ಪೋಷಕ ನಟ ಶ್ರೀನಿವಾಸಮೂರ್ತಿ ಅವರು ಓರ್ವ ಅವಧೂತನಾಗಿ ಚಿತ್ರದಲ್ಲಿ ಕಾಣಿಸಲಿದ್ದಾರೆ. ರಾಕೇಶ್ ಛಾಯಾಗ್ರಹಣ, ಮಿಲಿಂದ್ ಧರ್ಮಸೇನ ಸಂಗೀತವಿರುವ ಚಿತ್ರದಲ್ಲಿ ಅಜಿತ್, ಪವನ್ ಕುಮಾರ್, ಎ.ಆರ್. ಬಾಬು, ತರುಣ್ ಸುಧೀರ್, ಸಿಹಿಕಹಿ ಚಂದ್ರು, ಪ್ರತಾಪ್ ಅಭಿನಯಿಸಿದ್ದಾರೆ.
ಈ ಚಿತ್ರದ ಚಿತ್ರೀಕರಣದಿಂದಲೂ ಒಳ್ಳೆಯ ಮಾತುಗಳು ಕೇಳಿಬಂದಿವೆ. ಅವು ಎಷ್ಟರ ಮಟ್ಟಿಗೆ ನಿಜವಾಗಲಿವೆ ಎಂಬುದನ್ನು ಕಾದುನೋಡಬೇಕು. ಅಂದಹಾಗೆ ಚಿತ್ರ ಬಿಡುಗಡೆ ಯಾವಾಗ ಎಂದಿರಾ! ಚಿತ್ರತಂಡವೇ ಹೇಳುವಂತೆ ನಮ್ಮ ತಾಯಾಣೇಗು ಶೀಘ್ರದಲ್ಲೇ ರಿಲೀಸ್! (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











