For Quick Alerts
  ALLOW NOTIFICATIONS  
  For Daily Alerts

  ಪರ್ಯಾಯ ಸಿನಿಮಾ ಕುರಿತ ಅರ್ಥಪೂರ್ಣ ಸಂವಾದ

  By ವರದಿ : ರಾಮಸ್ವಾಮಿ ಡಿಎಸ್, ಅರಸೀಕೆರೆ
  |
  ನವೆಂಬರ್ 29 ಮತ್ತು 30ರಂದು ತುಮಕೂರು ಸಮೀಪದ ದೇವರಾಯನ ದುರ್ಗದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಗೌರವಾರ್ಥ ಪರ್ಯಾಯ ಸಿನಿಮಾ ಕುರಿತಂತೆ ಚರ್ಚೆ, ಸಂವಾದ ಮತ್ತು ಚಲನಚಿತ್ರ ಪ್ರದರ್ಶನಗಳನ್ನು ಸಂವಾದ.ಕಾಂ ಗೆಳೆಯರು ಆಯೋಜಿಸಿದ್ದರು. ಬಿಡುವು ಮತ್ತು ಆಲೋಚನೆಗಳಿಗೆ ಅವಕಾಶವೇ ಇಲ್ಲದ ಅನುದಿನದ ಒತ್ತಡಗಳ ನಡುವೆಯೇ ಇಂಥ ವಿಚಾರಗಳನ್ನು ವಿಸ್ತರಿಸಿ ಆಸಕ್ತರ ಗುಂಪೊಂದನ್ನು ಕಟ್ಟಿರುವ ಕತೆಗಾರ ಮತ್ತು ಪತ್ರಕರ್ತ ಶೇಖರ್ ಪೂರ್ಣ ಅವರನ್ನು ಮೊದಲು ಅಭಿನಂದಿಸಬೇಕು.

  ಚರ್ಚೆ ಮತ್ತು ಚಿಂತನ ಸಭೆಗಳೆಂದು ಮೊದಲೇ ಪ್ರಕಟಿಸಿದ್ದರೂ ಇಂಥ ಸಭೆಗಳು ಸಾಮಾನ್ಯವಾಗಿ ಕೆಲವೇ ಜನರ ಅಭಿಪ್ರಾಯ ಮತ್ತು ಅವರಿಗಂಟಿಕೊಂಡ ಸಿದ್ಧಾಂತಗಳ ಮಂಡನೆಗಷ್ಟೇ ಅವಕಾಶ ಕೊಟ್ಟು, ಉಳಿದವರನ್ನೂ ಆ ದಿಕ್ಕಿಗೆ ಸೆಳೆಯುತ್ತವೆ. ಸಮಯದ ಅರಿವು ಇರದೇ ಮಾತನಾಡುವ ಪ್ರಬಂಧಕಾರರು, ಚರ್ಚೆಯ ನೆಪದಲ್ಲಿ ತಮ್ಮ ಬೌದ್ಧಿಕ ಜ್ಞಾನವನ್ನು ಪ್ರದರ್ಶಿಸಬಯಸುವ ಚರ್ಚಾಪಟುಗಳು, ಬೇಕೋ ಬೇಡವೋ ಎಲ್ಲ ವಿಚಾರಗಳಿಗೂ ಧರ್ಮ ಮತ್ತು ಜಾಗತೀಕರಣದ ಕಾರಣ ಕೊಡುತ್ತ ನುಣುಚಿಕೊಳ್ಳುವ ವಾಕ್ಪಟುಗಳೂ- ಈ ಯಾರ ತರಲೆ ತಾಪತ್ರಯಗಳು ಇಲ್ಲದೆ ಎಲ್ಲ ಬಗೆಯ ವಿಚಾರ ಪ್ರಭೇದಗಳನ್ನೂ ಏಕಪ್ರಕಾರವಾಗಿ ಗೌರವಿಸುತ್ತ ಪ್ರಶ್ನೆ ಕೇಳಿದವರೇ ಸ್ವತಃ ತಮ್ಮ ಪ್ರಶ್ನೆಯ ಆಳ ಅಗಲಗಳನ್ನು ಅರಿತು ಉತ್ತರ ತಾವೇ ಕಂಡುಕೊಳ್ಳುವಂತೆ ಮಾಡಿದ್ದು ಈ ಸಭೆಯ ವಿಶೇಷ. ಖ್ಯಾತರೆಂದರೆ ಸಿಟ್ಟು, ಸೆಡವು ಮತ್ತು ಅಹಂಕಾರಗಳ ಒಟ್ಟು ಮೊತ್ತದಂತೆ ಕಾಣಿಸಿಕೊಳ್ಳುವ ಹೊತ್ತಲ್ಲೂ ಗಿರೀಶ್ ಕಾಸರವಳ್ಳಿ ತಮ್ಮ ಅಷ್ಟೆಲ್ಲ ಖ್ಯಾತಿ ಮತ್ತು ಅಪಾರ ಬೌದ್ಧಿಕ ಪ್ರಭುತ್ವವನ್ನಿಟ್ಟುಕೊಂಡಿದ್ದರೂ ಅವರು ಶಿಬಿರಾರ್ಥಿಗಳೊಂದಿಗೆ ನಡೆದುಕೊಂಡ ರೀತಿ ಅನ್ಯರೂ ಅನುಸರಿಸುವಂಥದು. ಪ್ರಶ್ನೋತ್ತರದ ಸಂದರ್ಭದಲ್ಲಿ ಪ್ರಾಯಶಃ ಅವರನ್ನು ಘಾಸಿಗೊಳಿಸುವಂಥ ಪ್ರಶ್ನೆಗಳೆದ್ದರೂ ಅವರ ನಿಲುವು ಮತ್ತು ಸಿದ್ಧಾಂತಗಳನ್ನು ಅವರು ಪ್ರಕಟಿಸಿದ ಪರಿ ಅದ್ಭುತ.

  ತುಮಕೂರು ವಿ.ವಿ ಯ ಕುಲಪತಿ ಅನಂತರಾಮಯ್ಯನವರು ಉದ್ಘಾಟಿಸಿದ ಸಮಾರಂಭಕ್ಕೆ ಜಿಲ್ಲಾಧಿಕಾರಿ ಸಿ.ಸೋಮಶೇಖರ ಸೇರಿಕೊಂಡರು. ಶೇಖರಪೂರ್ಣರ ಪ್ರಸ್ತಾವನೆಯಲ್ಲೇ ಶಿಬಿರ ಯೋಚಿಸಬಹುದಾದ ದಾರಿ ನಿಚ್ಚಳವಾಗಿ ಕಂಡಿತ್ತು. ನಂತರ ಅನಂತಮೂರ್ತಿಯವರ ಕಥಾ ಆಧಾರಿತ 'ಘಟಶ್ರಾದ್ಧ' ಚಲನಚಿತ್ರ ಪ್ರದರ್ಶನ. 70ರ ದಶಕದ ಆಸುಪಾಸಿನಲ್ಲಿ ತಾಂತ್ರಿಕವಾಗಿ ಶ್ರೀಮಂತಿಕೆ ಮತ್ತು ಹಣಕಾಸಿನ ಧಾರಾಳತನವಿಲ್ಲದೆಯೂ ನಿರ್ಮಿಸಿದ್ದ ಮತ್ತು ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಹೊಸ ಬೆಳವಣಿಗೆಯನ್ನು ತೋರಿಸಿದ ಈ ಚಿತ್ರದ ಪ್ರದರ್ಶನದ ನಂತರ ನಡೆದ ಪ್ರಶ್ನೋತ್ತರಗಳು ಸ್ವತಃ ಕಾಸರವಳ್ಳಿಯವರ ಅಂತರಾಳವನ್ನು ಕೆದಕಿ ಉತ್ತರ ಒಸರಿಸಿದವು. ಮುಂದುವರೆದವರೆಂದು ಹೇಳಿಕೊಳ್ಳುತ್ತಲೇ ಪರಂಪರೆಯ ಹೆಸರಲ್ಲಿ ಅನುಸರಿಸಿಕೊಂಡು ಹೋಗುತ್ತಿರುವ ಸಂಪ್ರದಾಯ ಮತ್ತು ಆಚರಣೆಗಳು ಹೇಗೆ ಹೆಣ್ಣನ್ನು ಅವಳ ಇಷ್ಟಾರ್ಥಗಳಾಚೆ ಇಡುತ್ತಿದೆ ಎಂದು ಮನದಟ್ಟಾಯಿತು.

  ಭೈರಪ್ಪನವರ 'ನಾಯಿ ನೆರಳು' ಕೃತಿಯ ಕುರಿತಂತೆ ಎದ್ದ ಮಾತುಗಳಿಗೆ ಗಿರೀಶ್ ಕೊಟ್ಟ ಉತ್ತರ - ನಾನು ಪುನರ್ಜನ್ಮ ಮತ್ತು ಆಚರಣೆಗಳಲ್ಲಿ ನಂಬಿಕೆಯಿಲ್ಲದವನು. ಹೆಣ್ಣೊಬ್ಬಳು ತನ್ನ ಸುತ್ತಲಿನ ವಿಧಿವಿಧಾನವನ್ನೇ ತನ್ನ ಆಶಯಗಳನ್ನು ಈಡೇರಿಸಿಕೊಳ್ಳಲು ಬಳಸಿಕೊಳ್ಳುವಂತೆ ಚಿತ್ರಕತೆಯನ್ನು ಬದಲಿಸಿದ್ದರಿಂದ ನಾಯಿನೆರಳು ಸಮರ್ಥ ಅಭಿವ್ಯಕ್ತಿಯಾಗಿ ಸೆಲುಲಾಯ್ಡಲ್ಲಿ ಮೂಡಿತು. ಮೂಲ ಹೆಸರು ಬಿಟ್ಟು ಉಳಿದಂತೆ ಎಲ್ಲ ಬದಲಾವಣೆ ಆಗಿರುವುದರಿಂದ ಇಲ್ಲಿ ಸಿದ್ಧಾಂತವೊಂದರ ಮಂಡನೆಗೆ ಇಬ್ಬರು ಸಮರ್ಥರೂ ಬಳಸಿಕೊಳ್ಳುವ ವಿಧಾನವನ್ನು ಬಿಡಿಸಿಟ್ಟಿತು. ಎದ್ದೇಳು ಮಂಜುನಾಥ ಚಿತ್ರತಂಡ ನಿರ್ದೇಶಕ ಗುರುಪ್ರಸಾದ್ ಜೊತೆ ಬಂದು 'ಮಠ'ದ ಖ್ಯಾತಿ ಮೀರಿಸುವಂತೆ ಹೊಸ ಚಿತ್ರ ರೂಪಿಸಿರುವುದಾಗಿ ಪ್ರಾಮಿಸ್ ಮಾಡಿತು. ಗುರುಪ್ರಸಾದ್ ಮಾತು ಕೂಡ ಹಿತವೆನ್ನಿಸಿದವು.

  ಆದ್ರೆ ಸಿನಿ ಪತ್ರಕರ್ತೆ ಸಾವಿತ್ರಿಯವರು ತಮ್ಮ ಮಾತಲ್ಲಿ ಗಿರೀಶ್ ಹೆಣ್ಣನ್ನು ಚಿತ್ರೀಕರಿಸಿದ ವಿಧಾನವನ್ನು ಪರಾಮರ್ಶಿಸುತ್ತಲೇ ಎತ್ತಿದ ಪ್ರಶ್ನೆಗಳು ಅವರ ನಿಲುವಿನ ಸಮರ್ಥನೆಯಾದುವೇ ವಿನಾ ಹೊಸ ಚಿಂತನೆಗೆ ದಾರಿಯನ್ನೇನೂ ತೋರಲಿಲ್ಲ. ತಾರಕೇಶ್ವರ್ ಘಟಶ್ರಾದ್ಧ ಕುರಿತಂತೆ ಮಾತನಾಡಿದ್ದು ಹಾಗು ಚಿತ್ರವನ್ನು ನೋಡುವಾಗ ಪ್ರೇಕ್ಷಕ ತನ್ನ ರುಚಿಯನ್ನು ಬದಿಗಿರಿಸಿ ಅದನ್ನು ಒಂದು ಚಿತ್ರವನ್ನಾಗಿ ಮಾತ್ರ ನೋಡಬೇಕೆಂದ ಮಾತುಗಳೂ ಒಪ್ಪತಕ್ಕವಗಿದ್ದವು. ಚರ್ಚೆಯ ಬಿಸಿಯಲ್ಲಿ ತಾರಕೇಶ್ವರರು ಹೇಳಬೇಕೆಂದಿದ್ದ ಮಾತುಗಳು ಕರಗಿಹೋದವು. ತೇಜಸ್ವಿ ಕುರಿತ ಕಿರುಚಿತ್ರ 'ಮಾಯಾಲೋಕ' ಸೃಷ್ಟಿಸಿದ್ದು ಮತ್ತೊಂದು ಮಾಯಾಲೋಕವನ್ನೇ!

  ಸಂತ ತುಕರಾಂ ಮರಾಠಿಯಲ್ಲಿ 1935ರಲ್ಲಿ ಬಂದಿದ್ದ ಚಿತ್ರ. ಆ ಕಾಲದಲ್ಲಿ ವಿಶ್ವ ಸಿನಿಮಾರಂಗದಲ್ಲಿ ದಾಖಲೆಗಳನ್ನು ನಿರ್ಮಿಸಿದ್ದ ಆ ಚಿತ್ರದ ಪ್ರದರ್ಶನ ಭೂತದ ಕುರುಹುಗಳಲ್ಲಿ ವರ್ತಮಾನವನ್ನು ಅರಿಯುವಂತೆ ಮಾಡಿತು. ಮಾರನೇ ಬೆಳಗು ಡೇವಿಡ್ ಬಾಂಡ್ ಮತ್ತು ಮಮತಾ ಜಿ. ಸಾಗರ ತಮ್ಮ ವಾಕ್ಚಾತುರ್ಯ ಮತ್ತು ಸಿನಿಮಾವನ್ನು ತಾವರಿತ ಬಗೆಯನ್ನು ದಾಖಲಿಸಿದವು. ಮಮತಾ ಕಾಸರವಳ್ಳಿಯವರ ಚಿತ್ರಗಳನ್ನು ತಮ್ಮ ಅನುಕೂಲಕ್ಕೆ ವಿಭಾಗಿಸಿಕೊಂಡು ಮಾತನಾಡಿದರಾದರೂ ಅವರ ಮಾತುಗಳು ನಾಯಿನೆರಳು, ದ್ವೀಪ, ಘಟಶ್ರಾಧ್ದ ಮತ್ತು ತಾಯಿಸಾಹೇಬ ಚಿತ್ರಗಳಾಚೆ ದಾಟದೇ ಇದ್ದುದು ಮತ್ತು ಫೆಮಿನಿಸ್ಟ್ ಆಲೋಚನೆಯಾಚೆ ಜಿಗಿಯುವುದನ್ನೂ ನಿರ್ಬಂಧಿಸಿತು. ಮಧ್ಯಾಹ್ನ ಪ್ರದರ್ಶಿತವಾದ ಲಾಸ್ಟ್ ಅಂಡ್ ಫೌಂಡ್ ತುಂಬ ಚೆನ್ನಾಗಿ ಚಿತ್ರಿತವಾದ ಕಿರುಚಿತ್ರ. ಅದು ನನ್ನಲ್ಲಿ ಎಬ್ಬಿಸಿದ ಅಲೆಗಳನ್ನೇರಿ ಊರಿಗೆ ವಾಪಸಾದೆ.

  ಸಂವಾದ.ಕಾಂ ಗೆಳೆಯರು ಊಟ ತಿಂಡಿ ವಸತಿಯನ್ನು ದೇವರಾಯನದುರ್ಗದಂಥ ಗ್ರಾಮೀಣ ಪ್ರದೇಶದಲ್ಲೂ ನಿರ್ವಹಿಸಿದ್ದ ರೀತಿಗೆ ವಂದನೆ. ಅರೆಹಳ್ಳಿ ರವಿ ಮತ್ತವರ ಗೆಳೆಯರು, ಜೊತೆಗೇ ಘಟಶ್ರಾದ್ಧದಿಂದ ಪ್ರೇರಿತರಾಗಿದ್ದ ಕಲಾವಿದರಾದ ಪ್ರಮೋದ್ ಮತ್ತು ಶಿವರಾಜ್‍ರವರ ಚಿತ್ರ ಪ್ರದರ್ಶನ ಚಿರಕಾಲ ನೆನಪಲ್ಲಿ ಉಳಿಯುವುದು.

  ದೇವರಾಯನದುರ್ಗದಲ್ಲಿ ನಡೆದ ಸಂವಾದದ ಚಿತ್ರಪುಟ
  ತುಮಕೂರು ಬಳಿಯ ದೇವರಾಯನದುರ್ಗದ ಚಿತ್ರಸಂಪುಟ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X