»   » 'ಮಿಂಚಿನ ಓಟ' ಜೊತೆಗೆ ಮತ್ತೆರಡು ಈ ವಾರ ತೆರೆಗೆ

'ಮಿಂಚಿನ ಓಟ' ಜೊತೆಗೆ ಮತ್ತೆರಡು ಈ ವಾರ ತೆರೆಗೆ

Posted By:
Subscribe to Filmibeat Kannada

ಕಳೆದ ಶುಕ್ರವಾರ ( ಜು.4) ಕನ್ನಡದ ಯಾವೊಂದು ಚಿತ್ರವೂ ಬಿಡುಗಡೆಯಾಗಲಿಲ್ಲ. ಚಿತ್ರಮಂದಿರಗಳು ಖಾಲಿ ಖಾಲಿ. ಆದರೆ ಈ ವಾರ ಮಾತ್ರ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಅದರಲ್ಲೂ 'ಮಿಂಚಿನ ಓಟ' ಚಿತ್ರವಂತೂ ಮುಂಚಿತವಾಗಿಯೇ ಬಿಡುಗಡೆಯಾಗುತ್ತಿದ್ದರೆ, 'ಸಿಟಿಜನ್' ಮತ್ತು 'ಅಪಹರಣ'ಗಳು ಶುಕ್ರವಾರ ತೆರೆಕಾಣಲಿವೆ.

'ಮಿಂಚಿನ ಓಟ' ಚಿತ್ರಕ್ಕೆ ಸೆನ್ಸಾರ್ ಮಂಡಳಿ U ಪ್ರಮಾಣ ಪತ್ರ ಕೊಟ್ಟಿದೆ. ಈ ಕಾರಣಕ್ಕೆ ಸಾ.ರಾ.ಗೋವಿಂದು ಹಾಗೂ ನಿರ್ದೇಶಕ ಎ.ಎಂ.ಆರ್. ರಮೇಶ್ ಖುಷಿಯಾಗಿದ್ದಾರೆ. ನಿರ್ದೇಶಕ ರಮೇಶ್ ಈ ಹಿಂದೆ 'ಸೈನೈಡ್' ಚಿತ್ರವನ್ನು ನಿರ್ದೇಶಿಸಿದ್ದರು. ಸಹೋದರರಾದ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ, ಲಕ್ಷ್ಮಿ ರೈ ಒಟ್ಟಿಗೆ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೈನವಿರೇಳಿಸುವ ಸಾಹಸ ದೃಶ್ಯಗಳು ಚಿತ್ರದ ಪ್ರಧಾನ ಆಕರ್ಷಣೆ ಎನ್ನುತ್ತಾರೆ ರಮೇಶ್.

ಸಾಯಿಪ್ರಕಾಶ್ ನಿರ್ದೇಶನದ 'ಸಿಟಿಜನ್' ಚಿತ್ರವೂ ಸಾಕಷ್ಟು ಸುದ್ದಿ ಮಾಡಿತ್ತು. ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಬಹಳ ದಿನಗಳ ನಂತರ ಪೊಲೀಸ್ ಗೆಟಪ್ಪಿನಲ್ಲಿ ಸಾಯಿಕುಮಾರ್ ಕಾಣಿಸುತ್ತಿರುವುದು ಮತ್ತೊಂದು ವಿಶೇಷ. ಬಳ್ಳಾರಿಯಲ್ಲಿ ಹೆಲಿಕಾಪ್ಟರ್ ಬಳಸಿ ಚಿತ್ರಿಸಿರುವ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರ ರಸಿಕರನ್ನು ಕುರ್ಚಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ ಎನ್ನುತ್ತಾರೆ ನಿರ್ದೇಶಕರು.

ಬಿ.ಆರ್.ಕೇಶವ ನಿರ್ದೇಶಿಸಿ ಮೊಬೈಲ್ ಕುಮಾರ್ ನಿರ್ಮಿಸಿರುವ 'ಅಪಹರಣ' ಚಿತ್ರ ಈ ವಾರ ಬಿಡುಗಡೆಯಾಗುತ್ತಿರುವ ಮತ್ತೊಂದು ಚಿತ್ರ. ಹೆಸರೇ ಹೇಳುವಂತೆ ಇದೊಂದು ಅಪಹರಣಕ್ಕೆ ಸಂಬಂಧಿಸಿದ ಚಿತ್ರಕಥೆಯನ್ನು ಹೊಂದಿದೆ. 'ಭಗತ್ ಸಿಂಗ್' ಎಂಬ ನಾಟಕವನ್ನು ನಿಲ್ಲಿಸುವ ಉದ್ದೇಶದಿಂದ ಅಪಹರಣ ನಡೆಯುತ್ತದೆ. ಆ ಮೂಲಕ ರಂಗಭೂಮಿ ನಟಿಯೊಬ್ಬಳನ್ನು ಅಪಹರಿಸಲಾಗುತ್ತದೆ. ಬಹಳ ದಿನಗಳ ನಂತರ ಥ್ರಿಲ್ಲರ್ ಮಂಜು ಅವರ ದರ್ಶನ ಭಾಗ್ಯ ಕನ್ನಡಿಗರಿಗೆ ಸಿಗಲಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada