»   » ಹುಬ್ಬೇರಿಸುವ ನಾಗತಿಹಳ್ಳಿಯ ಸಂಸ್ಕೃತಿ ಹಬ್ಬ

ಹುಬ್ಬೇರಿಸುವ ನಾಗತಿಹಳ್ಳಿಯ ಸಂಸ್ಕೃತಿ ಹಬ್ಬ

Posted By:
Subscribe to Filmibeat Kannada

''...ನಿಜವಾದ ಸ್ವಾತಂತ್ರ್ಯ ತಳಮಟ್ಟದಿಂದ ಆರಂಭವಾಗಬೇಕು. ಹಾಗೆ ಆರಂಭವಾದಾಗ ಪ್ರತಿಯೊಂದು ಹಳ್ಳಿಯು ಪ್ರಜಾಪ್ರಭುತ್ವದ ವಾಹಕವಾಗುತ್ತದೆ. ತಮ್ಮ ವ್ಯವಹಾರಗಳನ್ನು ತಾವೇ ನಿರ್ವಹಿಸಿಕೊಳ್ಳುವ ಸಾಮರ್ಥ್ಯ ಮತ್ತು ಸ್ವಾವಲಂಬನೆಯನ್ನು ನಮ್ಮ ಹಳ್ಳಿಗಳು ಪಡೆಯುವಂತಾಗಬೇಕು. ಹಳ್ಳಿಗಳು ಸಾಂಸ್ಕೃತಿಕ ಕೇಂದ್ರಗಳಾಗಬೇಕು.'' ಎಂಬ ಮಹಾತ್ಮ ಗಾಂಧೀಜಿ ಅವರ ಕನಸು ಎಷ್ಟು ಹಳ್ಳಿಗಳಲ್ಲಿ ನನಸಾಗಿದೆಯೋ ಗೊತ್ತಿಲ್ಲ. ಆದರೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರಲ್ಲಿ ಬೆಂಗಳೂರಿನಿಂದ ನೆಲಮಂಗಲ, ಕುಣಿಗಲ್ ಮಾರ್ಗವಾಗಿ ಬರೋಬ್ಬರಿ110 ಕಿ.ಮೀನ ಒಂದು ಹಳ್ಳಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕನ್ನಡಿ ಹಿಡಿಯಿತು.

ಅದು ಎ.ನಾಗತಿಹಳ್ಳಿ ಗ್ರಾಮ. ಏ.4,5,6 ಮತ್ತು 7ರಂದು ಅಲ್ಲಿ ನಾಲ್ಕು ದಿನಗಳ ಸಾಂಸ್ಕೃತಿಕ ಹಬ್ಬದ ಸಡಗರ. ನಮ್ಮೂರ ಹಬ್ಬಕ್ಕೆ ಬನ್ನಿ ಎಂದು ನಾಗತಿಹಳ್ಳಿಯ ಅಭಿವ್ಯಕ್ತಿ ಮಹಿಳಾ ಸಂಘ, ಅಭಿವ್ಯಕ್ತಿ ಯುವಕರ ಸಂಘ, ಶ್ರೀ ಸ್ವಾಮಿ ವಿವೇಕಾನಂದ ಯುವಕ ರೈತ ಸಂಘ, ಸ್ತ್ರೀಶಕ್ತಿ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ನಾಗತಿಹಳ್ಳಿಯ ಸುತ್ತಣ ಹತ್ತೂರು ಗ್ರಾಮಸ್ಥರು ಸ್ವಾಗತಕೋರಿದರು. ನಾಲ್ಕು ದಿನಗಳ ಕಾಲ ಉಚಿತ ವೈದ್ಯಕೀಯ ಶಿಬಿರ, ಮಕ್ಕಳ ಕಲಾ ಶಿಬಿರ, ಗ್ರಾಮೀಣ ಕ್ರೀಡೆಗಳು, ರಾಸುಗಳ ಪ್ರದರ್ಶನ, ಶ್ರಮದಾನ, ಗ್ರಾಮ ನೈರ್ಮಲ್ಯ, ಕೃಷಿ ಚಿಂತನೆ, ಜನಪದ ಮೇಳ, ಭಾವಗೀತೆ, ಯಕ್ಷಗಾನ, ನಾಟಕ ಹೀಗೆ ಹತ್ತು ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ 'ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ-2008' ವೇದಿಕೆ ಒದಗಿಸಿತು.

ಏ.4ರಂದು ಬೆಳಗ್ಗೆ 9.30ಕ್ಕೆ ಶುರುವಾದ ನಾಗತಿಹಳ್ಳಿ ಹಬ್ಬ 'ದಕ್ಷಾಧ್ವರ' ಕಥಾಭಾಗದ ಯಕ್ಷಗಾನ ಬಯಲಾಟದೊಂದಿಗೆ ಸಾಂಸ್ಕೃತಿಕ ಉತ್ತುಂಗಕ್ಕೆ ಕೊಂಡೊಯ್ಯಿತು. ಅಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕವಿ ಜಯಂತ ಕಾಯ್ಕಿಣಿ, ನಟ ಶ್ರೀನಗರ ಕಿಟ್ಟಿ, ರಮಣಶ್ರೀ ಗ್ರೂಪ್‌ನ ಷಡಕ್ಷರಿ ಮುಖ್ಯ ಅತಿಥಿಗಳಾಗಿದ್ದರು. ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ 'ದಕ್ಷಾಧ್ವರ' ದಲ್ಲಿ ದಕ್ಷನಾಗಿ ಕಟ್ಟಿಕೊಟ್ಟ ಪಾತ್ರ ಗಮನ ಸೆಳೆಯಿತು.

ಬಣ್ಣದ ಲೋಕದ ನಿರ್ಮಾಣ, ನಿರ್ದೇಶನ ಜೊತೆಗೆ ಆಗಾಗ ಅತಿಥಿ ಪಾತ್ರಗಳಲ್ಲಿ ದರ್ಶನ ಕೊಡುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಯಕ್ಷಗಾನ ಬಯಲಾಟದಲ್ಲಿ ಈ ಪಾಟಿ ಪ್ರದರ್ಶನ ನೀಡುತ್ತಾರೆ ಎಂದು ಗೊತ್ತಿರಲಿಲ್ಲಚಂದ್ರು ಅವರಿಗೆ ಯಕ್ಷಗಾನ ಗೊತ್ತು ಎಂದು ಅವರ ಆಪ್ತರಿಗಷ್ಟೇ ಗೊತ್ತಿದ್ದ ವಿಚಾರ. ನಾಗತಿಹಳ್ಳಿಯಲ್ಲಿ ಅಂದಿನ ಯಕ್ಷಗಾನ ಬಯಲಾಟದಲ್ಲಿ ಅವರ ಮತ್ತೊಂದು ಪ್ರತಿಭೆ ಬಯಲಾಯಿತು!ಹಾಗೆಯೇ ಎಲ್ಲ ಹಳ್ಳಿಗಳಲ್ಲಿ ಈ ರೀತಿಯ ಸಾಂಸ್ಕೃತಿಕ ಹಬ್ಬಗಳು ನಡೆದರೆ ಎಷ್ಟು ಚೆನ್ನ ಅನ್ನಿಸುತ್ತದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada