»   » ಸ್ವಮೇಕ್ ಮುದುಡುತ್ತಿದೆ ರೀಮೇಕ್ ಅರಳುತ್ತಿದೆ

ಸ್ವಮೇಕ್ ಮುದುಡುತ್ತಿದೆ ರೀಮೇಕ್ ಅರಳುತ್ತಿದೆ

Posted By:
Subscribe to Filmibeat Kannada

ಬೆಂಗಳೂರು, ಆ.8: ರಾಜ್ಯ ಸರ್ಕಾರ ರಿಮೇಕ್ ಚಿತ್ರಗಳಿಗೆ ಶೇ.100ರಷ್ಟು ತೆರಿಗೆ ವಿನಾಯಿತಿ ಘೋಷಿಸಿರುವ ಹಿನ್ನೆಲೆಯಲ್ಲಿ ಚೆನ್ನೈ ಹಾಗೂ ಹೈದರಾಬಾದ್ ಮೂಲದ ನಿರ್ಮಾಪಕರು ತಮ್ಮ ಯಶಸ್ವಿ ಚಿತ್ರಕಥೆಗಳ ಸರಕನ್ನು ಹಿಡಿದು ಸ್ಯಾಂಡಲ್‌ವುಡ್‍ನತ್ತ ಹೆಜ್ಜೆ ಹಾಕಿದ್ದಾರೆ. ತಮಿಳು, ತೆಲುಗು ಹಾಗೂ ಮಲಯಾಳಂ ನಿರ್ಮಾಪಕರ ದಂಡು ರೀಮೇಕ್ ಹಕ್ಕುಗಳನ್ನು ಯಾರಿಗೂ ಮಾರಾಟ ಮಾಡದೆ ತಾವೇ ಸ್ವತಃ ರೀಮೇಕ್ ಚಿತ್ರಗಳನ್ನು ನಿರ್ಮಿಸಲು ಗಂಟು ಮೂಟೆ ಕಟ್ಟಿಕೊಂಡು ಗಾಂಧಿನಗರಕ್ಕೆ ಬಂದಿಳಿದಿದ್ದಾರೆ.

ಕನ್ನಡೇತರ ನಿರ್ಮಾಪಕರು ಸ್ವತಃ ತಾವೇ ರೀಮೇಕ್ ಚಿತ್ರಗಳನ್ನು ನಿರ್ಮಿಸಲು ಮುಂದಾಗಿರುವ ಕಾರಣ ರೀಮೇಕ್ ಹಕ್ಕುಗಳನ್ನು ಖರೀದಿಸಿ ಚಿತ್ರ ನಿರ್ಮಿಸಬೇಕೆಂದು ಕನಸು ಕಾಣುತ್ತಿದ್ದ ನಿರ್ಮಾಪಕ ಮುಖ ಇಂಗು ತಿಂದ ಮಂಗನಂತಾಗಿದೆ. ಮತ್ತ್ತೊಂದು ಕಡೆ ಚಿತ್ರದ ರೀಮೇಕ್ ಹಕ್ಕುಗಳ ಖರೀದಿಗೆ ಭಾರಿ ಲಾಬಿ ನಡೆಯುತ್ತಿದ್ದು, ರೀಮೇಕ್ ಹಕ್ಕುಗಳನ್ನು ಖರೀದಿಸಿದವರು ಚಿತ್ರ ನಿರ್ಮಾಣದಲ್ಲಿ ಮುಳುಗಿಹೋಗಿದ್ದಾರೆ.

ರಾಜ್ಯ ಸರ್ಕಾರ ರೀಮೇಕ್ ಚಿತ್ರಗಳಿಗೆ ತೆರಿಗೆ ವಿನಾಯಿತಿ ಪ್ರಕಟಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಮತ್ತೊಮ್ಮೆ ಯೋಚಿಸುವುದಾಗಿ ವಿಧಾನ ಪರಿಷತ್‍ನಲ್ಲಿ ಸರ್ಕಾರ ಪ್ರಕಟಿಸಿತು. ಆದರೆ ಆ.1ರಿಂದ ಜಾರಿಯಾಗುವಂತೆ ರೀಮೇಕ್ ಚಿತ್ರಗಳಿಗೆ ಶೇ.100ರಷ್ಟು ತೆರಿಗೆ ವಿನಾಯಿತಿಯನ್ನು ಮುಂದುವರಿಸಲು ತೀರ್ಮಾನ ಕೈಗೊಂಡಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ಕೆಎಫ್ ಸಿಸಿ)ಯ ಅಧ್ಯಕ್ಷೆ ಜಯಮಾಲಾ ಸಹ ಈ ಬಗ್ಗೆ ಚಕಾರ ಎತ್ತಲಿಲ್ಲ. ಸ್ವ್ವಮೇಕನ್ನೇ ನೆಚ್ಚಿಕೊಂಡಿದ್ದ ನಿರ್ದೇಶಕ, ನಿರ್ಮಾಪಕರು ಈಗ ರೀಮೇಕ್ ಚಿತ್ರಗಳ ಭರಾಟೆಯಿಂದ ಕಂಗೆಟ್ಟಿದ್ದಾರೆ.

ಮೇಲ್ಮನೆಯಲ್ಲಿ ಸ್ವಮೇಕ್ ಗೆ ಸಹಕಾರ
ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಕಂಬಾರ, ದೊಡ್ಡರಂಗೇಗೌಡ, ಎಂ.ಸಿ.ನಾಣಯ್ಯ ಮತ್ತು ವೈ.ಎಸ್.ವಿ.ದತ್ತ ರೀಮೇಕ್ ಚಿತ್ರಗಳಿಗೆ ತೆರಿಗೆ ವಿನಾಯಿತಿ ಪ್ರಕಟಿಸಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರೀಮೇಕ್ ಚಿತ್ರಗಳಿಗೆ ಶೇ.100 ತೆರಿಗೆ ವಿನಾಯಿತಿ ಪ್ರಕಟಿಸಿರುವ ಕಾರಣ ಕನ್ನಡದ ಅಪ್ಪಟ ಪ್ರತಿಭೆಗಳನ್ನು ಕೊಲೆ ಮಾಡಿದಂತಾಗುತ್ತದೆ. ಸರ್ಕಾರ ಹಾಗೂ ಸಾರ್ವಜನಿಕರನ್ನು ರೀಮೇಕ್ ಲಾಬಿ ದಿಕ್ಕು ತಪ್ಪಿಸುತ್ತದೆ ಎಂದು ಎಚ್ಚರಿಸಿದ್ದರು. ಆದರೆ ಸರ್ಕಾರ ಇದನ್ನು ಕಿವಿಮೇಲೆ ಹಾಕಿಕೊಳ್ಳಲಿಲ್ಲ.ಈಗ ರೀಮೇಕ್ ಲಾಬಿ ಎಗ್ಗಿಲ್ಲದಂತೆ ಸಾಗುತ್ತ್ತಿದ್ದು ಪರಭಾಷಾ ನಿರ್ಮಾಪಕರು ತಮ್ಮ ಹಳಸಲು ಸರಕನ್ನು ಬಿಸಿಬಿಸಿ ದೋಸೆಯಂತೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ.

(ದಟ್ಸ್‌ಕನ್ನಡಸಿನಿ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada