twitter
    For Quick Alerts
    ALLOW NOTIFICATIONS  
    For Daily Alerts

    ಒಲವೇ ಮಂದಾರಕ್ಕೂ ರಾಜ್ ಗೂ ಏನು ಸಂಬಂಧ?

    By * ಮಲೆನಾಡಿಗ
    |

    ಒಲವೇ ಮಂದಾರ ಇನ್ನೇನು 50 ದಿನಗಳ ಸಂಭ್ರಮ ಆಚರಿಸಲು ಸಜ್ಜಾಗುತ್ತಿದೆ. ಏಕ ಕಾಲಕ್ಕೆ ಎಲ್ಲಾ ಮಾಧ್ಯಮಗಳಿಂದ ಹೊಗಳಲ್ಪಟ್ಟ ಸದಭಿರುಚಿ ಚಿತ್ರ ಒಲವೇ ಮಂದಾರ ತಂಡಕ್ಕೆ ಮೊದಲಿಗೆ ಶುಭ ಹಾರೈಕೆಗಳು. ಒಲವೇ ಮಂದಾರ ಚಿತ್ರ ಗೆಲ್ಲಲು ಏನು ಕಾರಣ ಎಂದು ಹುಡುಕುತ್ತಾ ಹೊರಟಾಗ, ಹೊಸತನ, ಚಿತ್ರಕಥೆ, ನಿರ್ದೇಶನ, ಛಾಯಾಗ್ರಹಣ, ಅಭಿನಯ, ನಿರ್ಮಾಪಕ, ಸಂಗೀತ, ನಿರ್ಮಾಪಕ ಧೈರ್ಯ ಇತ್ಯಾದಿ ಅಂಶಗಳು ಎದ್ದು ಕಾಣುತ್ತವೆ.

    ಆದರೆ, ನನಗೆ ಇತ್ತೀಚೆಗೆ ತಿಳಿದ ಮಾಹಿತಿ ಪ್ರಕಾರ, ಚಿತ್ರದ ಈ ಪಾಟಿ ಯಶಸ್ಸಿಗೆ ಮೂಲ ಕಾರಣ ಡಾ. ರಾಜ್ ಕುಮಾರ್. ಹೌದು, ಚಿತ್ರದ ರಿಯಲ್ ಹೀರೋ ಎಂದು ಗುರುತಿಸಲ್ಪಟ್ಟ ಛಾಯಾಗ್ರಾಹಕ ರವಿಕುಮಾರ್ ಸಾನಾ ಅವರೊಡನೆ ಮಾತನಾಡುತ್ತಿದ್ದಾಗ ಹೊಳೆದ ಅಂಶ ಇದು. ಮೇರು ನಟ ಡಾ. ರಾಜ್ ಗೂ ಒಲವೇ ಮಂದಾರಕ್ಕೂ ನೇರ ಸಂಬಂಧ ಇಲ್ಲದೆ ಇರಬಹುದು. ಆದರೆ, ಇಬ್ಬರು ಪ್ರತಿಭಾವಂತ ಯುವಕರು ಒಂದೆಡೆ ಸೇರಿ ಒಂದು ಸದಭಿರುಚಿಯ ಸಾತ್ವಿಕ ಚಿತ್ರವನ್ನು ರೂಪಿಸುವುದಕ್ಕೆ ಡಾ. ರಾಜ್ ಕಾರಣರಾಗಿದ್ದಾರೆ.

    ನಾಟಕ ರಂಗದಿಂದ ಬಂದ ನಿರ್ದೇಶಕ ಜಯತೀರ್ಥ ಹಾಗೂ ಸ್ವತಂತ್ರವಾಗಿ ಛಾಯಾಗ್ರಹಣ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದ ರವಿಕುಮಾರ್ ಸಾನಾ ಅವರಿಬ್ಬರು ಡಾ. ರಾಜ್ ಅವರ ಕಟ್ಟಾ ಅಭಿಮಾನಿಗಳು. ಈ ಇಬ್ಬರನ್ನು ಹತ್ತಿರಕ್ಕೆ ತಂದಿದ್ದು, ಚಿತ್ರದ ಪ್ರತಿಯೊಂದು ಹಂತದಲ್ಲೂ ಮಾತನಾಡಬಲ್ಲಂತ ದೃಶ್ಯಗಳನ್ನು ಅಳವಡಿಸಲು ಸಾಧ್ಯವಾದದ್ದು ರಾಜ್ ಮೇಲಿನ ಅಭಿಮಾನ.

    ರಾಜ್ ಪ್ರಭಾವ ಎಷ್ಟರಮಟ್ಟಿಗೆ ಚಿತ್ರದಲ್ಲಿ ಬಳಸಲಾಗಿದೆ ಎಂಬುದನ್ನು ಕಾಣಬೇಕಾದರೆ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದರೆ ತಿಳಿಯುತ್ತದೆ. ಚಿತ್ರದ ನಾಯಕ ಶ್ರೀಮಂತ ಕುಟುಂಬದಿಂದ ಬಂದರೂ ಸಾತ್ವಿಕನಾಗಿ ತೋರಿಸಲಾಗಿದೆ. ಸಿಗರೇಟ್ ಸೇವನೆ, ಮದ್ಯಪಾನ, ನಾಯಕಿಯ ಅಂಗಾಂಗ ಪ್ರದರ್ಶನ, ಅವಾಚ್ಯ ಪದ ಬಳಕೆ ಯಾವುದೂ ಇಲ್ಲ. ಅದು ಕಮರ್ಷಿಯಲ್ ಚಿತ್ರದಲ್ಲಿ ಈ ಕಾಲದಲ್ಲಿ ಹೇಗೆ ಸಾಧ್ಯವಾಯಿತು ಎಂದರೆ, ಎಲ್ಲಾ ರಾಜ್ ಅವರ ಮೇಲಿನ ಅಭಿಮಾನ. ಮೊದಲ ಚಿತ್ರದಲ್ಲಿ ಎಲ್ಲವೂ ಸರಳ, ಸ್ವಚ್ಛ, ಸುಂದರವಾಗಿರಬೇಕು. ರಾಜ್ ಅವರ ಚಿತ್ರವನ್ನು ಇಡೀ ಕುಟುಂಬ ಹೇಗೆ ಆನಂದಿಸುತ್ತಿತ್ತೋ ಅದೇ ರೀತಿ ನಮ್ಮ ಚಿತ್ರವು ನಿಲ್ಲಬೇಕು ಎಂಬ ಬಯಕೆ ನಮ್ಮಿಬ್ಬರಲ್ಲೂ ಇತ್ತು. ಅದೇ ರೀತಿ ಚಿತ್ರ ಕೂಡಾ ಜನ ಮೆಚ್ಚುಗೆ ಗಳಿಸಿರುವುದು ಸಂತೋಷ ಎನ್ನುತ್ತಾರೆ ರವಿ.

    ಕಲಹ ಸಂಹಾರ ರಾಜ್:
    ನಮ್ಮದು ಸಮಾನ ಮನಸ್ಕರ ಗುಂಪಾದರೂ, ಆಗಾಗ ಬಿಸಿ ಬಿಸಿ ಚರ್ಚೆಗಳು ನಡೆಯುವುದುಂಟು. ಯಾವುದಾದರೂ ಸೀನ್ ನಲ್ಲಿ ರಾಜಿಯಾಗದೆ ಗುಣಮಟ್ಟ ಕಾಯ್ದುಕೊಳ್ಳಲು ವಾಗ್ಯುದ್ಧಗಳು ಮಾಮೂಲಿ. ಆ ರೀತಿ ನಮ್ಮಲ್ಲಿ ವಾತಾವರಣ ಬಿಸಿಗೊಂಡಾಗ, ತಿಳಿಗೊಳಿಸಲು ಕೋಪಗೊಂಡ ಗೆಳೆಯರ ಮುಖದಲ್ಲಿ ಮಂದಹಾಸ ಮೂಡಿಸಲು ಡಾ.ರಾಜ್ ಅವರ ಗೀತೆ, ಡೈಲಾಗ್ ಗಳನ್ನು ನಮ್ಮ ಕಲಹ ಸಂಹಾರ ಮಾಡಲು ಉಪಯೋಗಿಸುತ್ತೇವೆ. ಇದು ಎಷ್ಟೋ ಟೈಮ್ ವರ್ಕ್ ಔಟ್ ಆಗಿದೆ.

    ನಿಮಗೆ ಸ್ಪೂರ್ತಿ ಅಥವಾ ಮರೆಯಲಾಗದ ವ್ಯಕ್ತಿಗಳು, ಕ್ಷಣಗಳು: ಬಿ.ಸುರೇಶ- ಮನಸ್ಥೈರ್ಯ ಕಳೆದುಕೊಂಡು ವೃತ್ತಿ ಜೀವನ ಡೋಲಾಯಮಾನವಾದ ಸ್ಥಿತಿಯಲ್ಲಿ ಕೈ ಹಿಡಿದು ಆಶ್ರಯ ಕೊಟ್ಟು ಬೆಳೆಸಿದರು. ಚಿತ್ರರಂಗದ ಒಳ ಹೊರಗು ಪರಿಚಯ ಕೂಡಾ ಆಯ್ತು. ಓದಿನ ಗೀಳಿಗೂ ಆಹಾರ ಸಿಕ್ಕಿತು. ಎಸ್ ರಾಮಚಂದ್ರ-ವೃತ್ತಿ ಬದುಕಿನಲ್ಲಿ ಶಿಸ್ತು, ಸಂಯಮ, ಸಂಘಟನೆ, ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾದರು. ಕನ್ನಡದಲ್ಲಿ ನನಗೆ ಆಸಕ್ತಿ ಹೆಚ್ಚುವಂತೆ ಮಾಡಿದವರು ಜಯಂತ್ ಕಾಯ್ಕಿಣಿ. ತಮ್ಮಲ್ಲಿದ್ದ ಅನೇಕ ಪುಸ್ತಕಗಳನ್ನು ನೀಡಿ ಕನ್ನಡ ಸಾಹಿತ್ಯದ ಅಪೂರ್ವ ಜಗತ್ತನ್ನು ಪರಿಚಯಿಸಿದರು.

    ಅದಕ್ಕೂ ಮುಂಚೆ ನಾನು ಓದಿದ್ದೆಲ್ಲಾ ಸಿನಿಮಾ ಸಂಬಂಧಿ ಪುಸ್ತಕಗಳು ಮಾತ್ರ. ಪೂರ್ಣಚಂದ್ರ ತೇಜಸ್ವಿ ಅವರನ್ನು ಕಾಣುವ ಯೋಗ ಸಿಗಲಿಲ್ಲ. ಅವರ ಕಾದಂಬರಿಗಳನ್ನು ಓದಿದರೆ ನನಗೆ ಹೊಸ ಕಥೆಗಳು, ಹೊಸ ಆಲೋಚನೆಗಳು ಹುಟ್ಟುತ್ತವೆ. ಇನ್ನೊಂದು ವಿಷ್ಯ ಕುವೆಂಪು ಅವರು ಕೂಡುತ್ತಿದ್ದ ಹಳೆ ಕಾಲದ ಕುರ್ಚಿ ನನ್ನನ್ನು ಬಹುವಾಗಿ ಆಕರ್ಷಿಸಿತ್ತು. ಆದರೆ ಅದನ್ನು ಕೇಳುವಂತಿಲ್ಲ. ಕೊನೆಗೆ ಅದರ ವಿಡಿಯೋ, ಫೋಟೊ ತೆಗೆದುಕೊಂಡು ಬಂದು ವಿಶಿಷ್ಟವಾದ ಆರಾಮದಾಯಕ ಮರದ ಕುರ್ಚಿಯ ಪ್ರತಿರೂಪವನ್ನು ಈಗ ನನ್ನ ರೂಮಿನಲ್ಲಿ ಮಾಡಿಸಿಟ್ಟುಕೊಂಡಿದ್ದೇನೆ.

    ಇತ್ತೀಚೆಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಭಿಮಾನಿಗಳಿಗೆ ಹಸ್ತಾಕ್ಷರ ಹಾಕುತ್ತಾ ನಿಂತಿದ್ದ ಕಾಯ್ಕಿಣಿಯವರು ದೂರದಲ್ಲಿ ನಿಂತಿದ್ದ ನನ್ನನ್ನು ಗುರುತಿಸಿ, ಓಡಿ ಬಂದು ಅಪ್ಪಿಕೊಟ್ಟು ಅಲ್ಲಿದ್ದವರಿಗೆ ಪರಿಚಯಿಸಿದ್ದು, ನಿಜವಾದ ಕನ್ನಡ ಪ್ರೇಮಿ ಎಂದಿದ್ದು ಕಣ್ಣಲ್ಲಿ ತರಿಸಿಬಿಟ್ಟಿತು. ಅವರ ಪ್ರೀತಿಗೆ ನಾನು ಚಿರಋಣಿ. ರವಿಕುಮಾರ್ ಸಾನಾ ಕೆಲ ವರ್ಷಗಳ ಹಿಂದೆ ಆಂಧ್ರದ ನೆಲ್ಲೂರಿನಿಂದ ಕೆಲಸದ ಹುಡುಕಾಟದಲ್ಲಿ ಬೆಂಗಳೂರು ಸೇರಿದ ವಲಸೆ ಹಕ್ಕಿ. ಆದರೆ, ಇಂದು ರವಿ ಬಾಯ್ಬಿಟ್ಟರೆ ಹೊರಡುವುದು ಜೇನಿನಂತ ಕನ್ನಡ ನುಡಿ. ಅಪ್ಪಟ್ಟ ಕನ್ನಡ ಪ್ರೇಮಿಯಾಗಿರುವ ರವಿ, ಮೊದಲಿಗೆ ನೋಡಿದ್ದು ರಾಜ್ ಅವರ ಮಹೋನ್ನತ ಚಿತ್ರ ಬಂಗಾರದ ಮನುಷ್ಯ. ಮೊದಲಿಗೆ ಗಾಂಧಿನಗರಕ್ಕೆ ಕಾಲಿಟ್ಟಿದ್ದು ಅಪ್ಪು ಚಿತ್ರದ ಮೂಲಕ. ಹಾಗಾಗಿ ಚಿತ್ರರಂಗಕ್ಕೆ ರವಿ ತೀರಾ ಹೊಸಬರೇನಲ್ಲ. ಆದರೆ, ಅವರ ನಿಜ ಪ್ರತಿಭೆಗೆ ಹೆಚ್ಚು ಮನ್ನಣೆ ಸಿಕ್ಕು, ಜನಪ್ರಿಯತೆ ಸಿಕ್ಕಿದ್ದು ಒಲವೇ ಮಂದಾರ ಚಿತ್ರದಿಂದ ಎಂದರೆ ತಪ್ಪಾಗಲಾರದು.

    English summary
    A Chit Chat with Cinematographer Ravi kumar Sana about making and success formula of Olave Mandara Kannada Movie. He said Olave Mandara has high influence of thespian Dr. Raj Kumar and Hoe Raj inspired him and director, how Dr.Raj values adopted in movie.
    Tuesday, March 8, 2011, 19:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X