ಜೋಗಯ್ಯ ಯಶಸ್ಸಿಗೆ ಶಿವರಾಜ್ ಕುಮಾರ್ ವಿಶೇಷ ಪೂಜೆ
ತಮ್ಮ ಮಹತ್ವಾಕಾಂಕ್ಷಿ ಚಿತ್ರ ಜೋಗಯ್ಯ ಯಶಸ್ವಿಯಾಗಲಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಶಿವನ ಸಮುದ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಾರಮ್ಮ ದೇವಿ ಹಾಗೂ ಸೋಮನಾಥೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಜೋಗಯ್ಯ ಯಶಸ್ವಿಯಾಗಲಿ ಎಂದು ಬೇಡಿಕೊಂಡರು.
ತಮ್ಮ ಯಾವುದೇ ಚಿತ್ರ ಬಿಡುಗಡೆಯಾದಾಗಲೂ ಚಿತ್ರ ಯಶಸ್ವಿಯಾಗಲಿ ಎಂದು ದೇವರಿಗೆ ಪೂಜೆ ಸಲ್ಲಿಸುವುದು ಪರಿಪಾಠ ಎಂದು ಈ ಸಂದರ್ಭದಲಿ ಶಿವಣ್ಣ ತಿಳಿಸಿದರು. ಶಿವರಾಜ್ ಕುಮಾರ್ ಆಗಮಿಸುತ್ತಾರೆ ಎಂದು ಮೊದಲೆ ತಿಳಿದಿದ್ದ ಕಾರಣ ಅವರ ಅಪಾರ ಅಭಿಮಾನಿಗಳು ಕಾದು ಕುಳಿತಿದ್ದರು.
ಶಿವನಸಮುದ್ರಕ್ಕೆ ಶಿವಣ್ಣ ಆಗಮಿಸುತ್ತಿದ್ದಂತೆ ತಮ್ಮ ನೆಚ್ಚಿನ ನಟನನ್ನು ಕಂಡು ಖುಷಿಪಟ್ಟರು. ಆಗಸ್ಟ್ 19ರಂದು ಚಿತ್ರ ಬಿಡುಗಡೆಯಾಗುತ್ತಿದೆ. ತಾವೆಲ್ಲರೂ ತಪ್ಪದೆ ಚಿತ್ರವನ್ನು ನೋಡಬೇಕು ಎಂದು ಶಿವಣ್ಣ ಅಭಿಮಾನಿಗಳಲ್ಲಿ ವಿನಂತಿಸಿಕೊಂಡರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಪ್ರೇಮ್ ಸೇರಿದಂತೆ ಸಾಯಿಪ್ರಕಾಶ್, ಶಿವಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷ ಪ್ರಭು ಮುಂತಾದವರು ಉಪಸ್ಥಿತರಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











