»   » ನಾಗಾಭರಣ ನಿರ್ದೇಶನದಲ್ಲಿ ವಿಷ್ಣುರ ಹೊಸ ಚಿತ್ರ

ನಾಗಾಭರಣ ನಿರ್ದೇಶನದಲ್ಲಿ ವಿಷ್ಣುರ ಹೊಸ ಚಿತ್ರ

Subscribe to Filmibeat Kannada

ಸಾಹಸ ಸಿಂಹ ವಿಷ್ಣುವರ್ಧನ್‌ರ ಹೊಸ ಚಿತ್ರ ಏ.18ರಂದು ಸೆಟ್ಟೇರಲಿದೆ. 'ಈ ಬಂಧನ'ದ ನಂತರ ಸ್ವಲ್ಪ ಬ್ರೇಕ್ ತಗೊಂಡ ವಿಷ್ಣು ಈಗ ಹೊಸ ಚಿತ್ರದಲ್ಲಿ ನಟಿಸಲು ಅಣಿಯಾಗಿದ್ದಾರೆ. ಇತ್ತೀಚೆಗೆ ವಿಷ್ಣು ಅಧ್ಯಾತ್ಮ, ತತ್ವಶಾಸ್ತ್ರ ಕಡೆಗೆಹೆಚ್ಚು ವಾಲುತ್ತಿದ್ದಾರೆ. ಅವರ ಮಾತು ಎಲ್ಲಿಂದಲೋ ಆರಂಭವಾಗಿ ಕೊನೆಗೆ ಅಧ್ಯಾತ್ಮದಲ್ಲಿ ಅಂತ್ಯವಾಗುತ್ತದೆ. ವಿಷ್ಣುರ ಬದಲಾದ ಮನಸ್ಥಿತಿಗೆ ತಕ್ಕಂತೆ ನಿರ್ದೇಶಕ ಟಿ.ಎಸ್.ನಾಗಾಭರಣ ಕಥೆಯೊಂದನ್ನು ಹೆಣೆದಿದ್ದಾರೆ. ವಿಷ್ಣುರ ಹೊಸ ಚಿತ್ರದ ಕಥೆ-ಚಿತ್ರಕಥೆ, ಪಾತ್ರಗಳ ಕುರಿತು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.

ಸದ್ಯಕ್ಕೆ ತಿಳಿದಿರುವ ಸ್ಯಾಂಡಲ್‌ವುಡ್ ಮಾಹಿತಿ ಪ್ರಕಾರ ನಿರ್ದೇಶನದ ಜವಾಬ್ದಾರಿ ನಾಗಾಭರಣ ಅವರೇ ಹೊತ್ತಿದ್ದಾರೆ. ನಾಗಾಭರಣರೊಂದಿಗೆ ಹಲವಾರು ಮಂದಿ ಕೂತು ಚಿತ್ರಕಥೆಯನ್ನು ಸಿದ್ಧಪಡಿಸಿದ್ದಾರಂತೆ. ನಟ ವಿಜಯರಾಘವೇಂದ್ರ ಸಹ ವಿಷ್ಣುರ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರದು ಬಹುಮುಖ್ಯವಾದ ಪಾತ್ರವಂತೆ. ಈ ಚಿತ್ರವನ್ನು ರಾಜಶೇಖರ್ ನಿರ್ಮಿಸುತ್ತಿದ್ದಾರೆ.

ಚಿತ್ರವನ್ನು ನಾಗಾಭರಣ ನಿರ್ದೇಶಿಸುತ್ತಿದ್ದಾರೆ ಎಂದರೆ ಇದೊಂದು ಕಲಾತ್ಮಕ ಸರಕು ಎನ್ನುವುದು ಮೋಲ್ನೋಟಕ್ಕೆ ಭಾಸವಾಗುತ್ತದೆ. ಆದರೆ ಇದು ಕುಟುಂಬ ಪ್ರಧಾನ ಅಥವಾ ಸಾಮಾಜಿಕ ಕಾಳಜಿ ಉಳ್ಳ ಚಿತ್ರವೋ ಎಂದು ತಿಳಿದುಕೊಳ್ಳಬೇಕಾದರೆ ಸ್ವಲ್ಪ ದಿನ ಕಾಯಲೇ ಬೇಕು. 'ಬಂಗಾರದ ಜಿಂಕೆ ' ಚಿತ್ರದಿಂದ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಹೊರಹೊಮ್ಮಿದ ನಾಗಾಭರಣ ಇದುವರೆಗೂ 30ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 'ಬಂಗಾರದ ಜಿಂಕೆ' ವಿಷ್ಣು ಹಾಗೂ ನಾಗಾಭರಣ ಇಬ್ಬರಿಗೂ ಒಂದು ರೀತಿಯಲ್ಲಿ ಒಳ್ಳೆಯ ಹೆಸರು ತಂದ ಚಿತ್ರ. ಈಗ ವಿಷ್ಣು ಮತ್ತು ನಾಗಾಭರಣ ಜೋಡಿ ಮತ್ತೊಮ್ಮೆ ಮೋಡಿ ಮಾಡಲಿದೆಯೇ? ಎಲ್ಲದಕ್ಕೂ ಕಾಲವೇ ಉತ್ತರ ಹೇಳಲಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada