»   » ಕಸ್ತೂರಿ ಚಾನಲ್ಲಿನ ಜನಪ್ರಿಯ ಕಾರ್ಯಕ್ರಮ ಬರಖಾಸ್ತ್

ಕಸ್ತೂರಿ ಚಾನಲ್ಲಿನ ಜನಪ್ರಿಯ ಕಾರ್ಯಕ್ರಮ ಬರಖಾಸ್ತ್

Subscribe to Filmibeat Kannada

ಜಗ್ಗೇಶ್ ಇನ್ನು ಮುಂದೆ ಕಾಗೆ ಹಾರಿಸುವುದಿಲ್ಲವಂತೆ ಎಂದು ಕನ್ನಡಪ್ರಭ ವರದಿಮಾಡಿದೆ. ಇದ್ಯಾವುದು ಹೊಸ ಕಾಗೆ. ನೀವು ಹೇಳೋದು ನಿಜಾನಾ? ನೀವು ಕಾಗೆ ಹಾರಿಸುತ್ತಿಲ್ಲ ತಾನೆ ಎಂದು ನಮ್ಮನ್ನು ಕೇಳಬೇಡಿ. ಖಂಡಿತ ಸ್ವಾಮಿ, ಹಾಗಂತ ಪೇಪರ್ ನಲ್ಲೇ ಬಂದಿದೆ. ನಾನು ಇನ್ನುಂದೆ ಕಾಗೆ ಹಾರಿಸಲ್ಲ ಎಂದು ಸ್ವತಃ ಜಗ್ಗೇಶ್ ಅವರೇ ಹೇಳಿಕೊಂಡಿದ್ದಾರೆ.

ಪ್ರತಿ ಭಾನುವಾರ ಕಸ್ತೂರಿ ವಾಹಿನಿಯಲ್ಲಿ ಜಗ್ಗೇಶ್ ನಡೆಸಿಕೊಡುತ್ತಿದ್ದ ಹಾಸ್ಯ ಪ್ರಧಾನ ಕಾರ್ಯಕ್ರಮ 'ಕಾಗೆ ಹಾರಿಸುವುದು' ಜನಪ್ರಿಯತೆ ಗಳಿಸಿತ್ತು. ಚಿತ್ರರಂಗಕ್ಕೆ ಸಂಬಂಧಿಸಿದ ಹಲವಾರು ಮಂದಿಗೆ, ಪ್ರೇಕ್ಷಕರಿಗೆ ಈ ಕಾರ್ಯಕ್ರಮದ ಮೂಲಕ ಜಗ್ಗೇಶ್ ಫೋನಾಯಿಸಿ ತಮ್ಮ ಧ್ವನಿಯನ್ನು ಬದಲಾಯಿಸಿ ಗುರುತು ಸಿಗದಂತೆ ಅವರ ಕಿವಿಗೆ ಹೂ ಮುಡಿಸುತ್ತಿದ್ದರು. ಮೊದಲೇ ಹಾಸ್ಯ ನಟ, ಕೇಳಬೇಕೆ ಕಾರ್ಯಕ್ರಮ ಯಶಸ್ವಿಯಾಯಿತು. ಪ್ರೇಕ್ಷಕರು ಪ್ರತೀ ಭಾನುವಾರ ನಿರೀಕ್ಷಿಸುವಂತಾಯಿತು. ಎಲ್ಲಾ ಚೆನ್ನಾಗಿರುವಾಗಲೇ ಜಗ್ಗೇಶ್ ಪ್ರೇಕ್ಷಕರಿಗೆ ಜರ್ಕ್ ಕೊಟ್ಟಿದ್ದಾರೆ.

ಕಾಗೆ ಚೆನ್ನಾಗೇ ಹಾರ್ತಾ ಇತ್ತಲ್ಲ ಎಂದರೆ, ನಾವು ಏನ್ಮಾಡುದ್ರೂ ಜನ ನೋಡ್ತಾರೆ ಅಂತಾ ಹೀಗೆ ಎಷ್ಟು ದಿನ ಮಾಡುವುದು. ಎಲ್ಲಾ ಚೆನ್ನಾಗಿದ್ದಾಗಲೇ ಕಳಚಿಕೊಳ್ಳುವುದು ಉತ್ತಮ ಅಲ್ಲಾ ಗುರು? ಎಂದು ಮರು ಪ್ರಶ್ನಿಸುತ್ತಾರೆ ಜಗ್ಗೇಶ್. ಅದೂ ಸರಿ ಬಿಡಿ, ಹಾಸ್ಯ ಅನ್ನುವುದು ಊಟದಲ್ಲಿನ ಉಪ್ಪಿನಕಾಯಿ ತರಹ ಇರಬೇಕೆ ಹೊರತು ಬರೀ ಉಪ್ಪಿನಕಾಯಿ ನೆಕ್ಕಿದಂಗೆ ಆಗಬಾರದಲ್ವ. ಜಗ್ಗೇಶ್ ನಿರ್ಣಯವೇನೋ ಚೆನ್ನಾಗಿದೆ. ಆದರೆ ಪ್ರೇಕ್ಷಕ ಪ್ರಭು ಒಪ್ಪಬೇಕಲ್ಲಾ?

ಕಾಗೆ ಹಾರಿಸುವ 'ಟಾಕ್ ಆಫ್ ದಿ ಟೌನ್' ಕಾರ್ಯಕ್ರಮಕ್ಕೆ ಜಗ್ಗೇಶ್ ಪಡೆಯುತ್ತಿದ್ದ ಸಂಭಾವನೆ ತಿಂಗಳಿಗೆ 5 ಲಕ್ಷ ರೂ. ಕಾಗೆ ಹಾರಿಸಲು ಅವರು ವೆಚ್ಚಿಸುತ್ತಿದ್ದ ಸಮಯ ಕೇವಲ ಒಂದು ಗಂಟೆ. ಹಾಗಿದ್ರೂ ಯಾಕೆ ಬಿಟ್ರಿ? ಎಂದರೆ ಮತ್ತದೇ ಉತ್ತರ ಅವರಿಂದ ಮರುಕಳಿಸುತ್ತದೆ. ಸ್ವಲ್ಪ ದಿನ ಸೈಲೆಂಟಾಗಿದ್ದು ಮತ್ತೆ ರೀ ಎಂಟ್ರಿ ಕೊಡ್ತೀನಿ ಎಂದು ಅಂತ ಅಭಯ ನೀಡುತ್ತಾರೆ ಜಗ್ಗೇಶ್. ಇರಲಿ, ಒಟ್ಟಿನಲ್ಲಿ ಜಗ್ಗೇಶ್ ಅವರು ಕಾಗೆನೋ, ಗೂಬೇನೋ ಹಾರಿಸುವುದರ ಮೂಲಕ ಈ ರೀತಿಯ ಕಾರ್ಯಕ್ರಮಗಳಲ್ಲಿ ನಕ್ಕು ನಗಿಸುತ್ತಿರಲಿ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada