»   » ಪ್ರೀತಿ ಪ್ರೇಮ ಪ್ರಣಯದ ಗುಂಗಿನಲ್ಲಿ ಪ್ರಶಸ್ತಿಯ ಧ್ಯಾನ

ಪ್ರೀತಿ ಪ್ರೇಮ ಪ್ರಣಯದ ಗುಂಗಿನಲ್ಲಿ ಪ್ರಶಸ್ತಿಯ ಧ್ಯಾನ

Subscribe to Filmibeat Kannada

*ಪಾವನಿ

ಭಾವನಾ ಬಳುಕುವ ಗಿಡದಂತಾಗಿರುವುದನ್ನು ಬರಗೂರು ನಿರ್ದೇಶನದ ‘ಕ್ಷಾಮ’ ಚಿತ್ರದಲ್ಲಿ ನಟಿಸಿದ ಪರಿಣಾಮ ಅನ್ನುವಂತಿಲ್ಲ . ಅಥವಾ ಐಟಂ ಸಾಂಗ್‌ಗಳಲ್ಲಿ ಯದ್ವಾತದ್ವಾ ಕುಣಿದಿದ್ದರಿಂದಲೂ ಭಾವನಾ ಸಣ್ಣಗಾಗಿಲ್ಲ . ಹಾಗಿದ್ದಲ್ಲಿ ಭಾವನಾ ತೂಕ ಕಳಕೊಂಡಿರುವುದಕ್ಕೆ ಕಾರಣವಾದರೂ ಏನು ?
- ಇದೆಲ್ಲಾ ಫ್ಲೂ ಮಹಿಮೆ ಎಂದು ಭಾವನಾ ನಗುತ್ತಾರೆ.

ಭಾವನಾ ಈಗಷ್ಟೇ ಪ್ಲೂನಿಂದ ಚೇತರಿಸಿಕೊಂಡು ಚಿತ್ರರಂಗದ ಚಟುವಟಿಕೆಗಳಿಗೆ ಮರಳಿದ್ದಾರೆ. ‘ಬಿಂಬ’ ಚಿತ್ರದ ಡಬ್ಬಿಂಗ್‌ನಲ್ಲಿ ಮಾತಿಗೆ ಸಿಕ್ಕಿದ ಭಾವನಾ- ತೂಕ ಇಳಿಯಲು ನೆರವಾದ ಫ್ಲೂಗೆ ಥ್ಯಾಂಕ್ಸ್‌ ಅಂದರು.

‘ಬಿಂಬ’ ಚಿತ್ರದ ಕುರಿತು ಭಾವನಾಗೆ ಒಂಥರಾ ಸೆಂಟಿಮೆಂಟು. ಏಕೆಂದರೆ, ಭಾವನಾ ನೆಚ್ಚಿನ ಗೆಳತಿ ಕವಿತಾ ಲಂಕೇಶ್‌ ‘ಬಿಂಬ’ ಚಿತ್ರದ ನಿರ್ದೇಶಕಿ. ‘ಕವಿತಾ ಹಾಗೂ ನನ್ನ ಸಂಬಂಧ ಗೆಳೆತನಕ್ಕಿಂಥ ಹೆಚ್ಚಿನದು’ ಎಂದು ಭಾವನಾ ಬಣ್ಣಿಸುತ್ತಾರೆ.

ಕವಿತಾ ಅವರ ಈವರೆಗಿನ ಎಲ್ಲಾ ಚಿತ್ರಗಳಲ್ಲೂ ಭಾವನಾ ನಟಿಸಿದ್ದಾರೆ. ಕವಿತಾರ ಮೊದಲ ಚಿತ್ರ‘ದೇವೀರಿ’, ಆನಂತರದ ‘ಅಲೆಮಾರಿ’, ಇನ್ನೂ ತೆರೆ ಕಾಣದ ‘ಬಿಂಬ’, ಮುಹೂರ್ತ ಮುಗಿಸಿರುವ ‘ಪ್ರೀತಿ ಪ್ರೇಮ ಪ್ರಣಯ’ ನಾಲ್ಕರಲ್ಲೂ ಭಾವನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿವಿಧ ವಯೋಮಾನದವರ ಕಥೆ ಹೇಳುವ ‘ಪ್ರೀತಿ ಪ್ರೇಮ ಪ್ರಣಯ’ದಲ್ಲಿ ಭಾವನಾಗೆ ಪ್ರಮಖ ಪಾತ್ರವಿದೆ. ಹೊಸ ಪೀಳಿಗೆಯ ವಿವಾಹಿತ ಉದ್ಯೋಗಸ್ಥ ಮಹಿಳೆಯ ಪಾತ್ರ ಸವಾಲಿನದು ಎಂದು ತಮ್ಮ ಪಾತ್ರವನ್ನು ಭಾವನಾ ಬಣ್ಣಿಸುತ್ತಾರೆ. ಅಂದಹಾಗೆ, ಭಾವನಾ ಅಭಿನಯದ ‘ಹಲೋ’ ಹಾಗೂ ‘ರಾಂಗ್‌ ನಂಬರ್‌’ ಇನ್ನೂ ತೆರೆ ಕಾಣಬೇಕಿದೆ.

ಅಭಿನಯವಷ್ಟೇ ಅಲ್ಲ - ನೃತ್ಯ, ವಸ್ತ್ರ ವಿನ್ಯಾಸ, ಮಾಡೆಲಿಂಗ್‌ನಲ್ಲೂ ಭಾವನಾ ವ್ಯಸ್ತರು. 2003 ನೇ ವರ್ಷದಲ್ಲಿ ಅಮೆರಿಕಾದ ವಿವಿಧ ನಗರಿಗಳಿಗೆ ಭೇಟಿ ಕೊಡುವ ಯೋಜನೆಯೂ ಅವರ ಡೈರಿಯಲ್ಲಿದೆ.

ಕೊನೆಯದಾಗಿ-

ಬರಗೂರರ ‘ಕ್ಷಾಮ’ ಚಿತ್ರದ ಬಗ್ಗೆ ಭಾವನಾಗೆ ಅಪಾರ ವಿಶ್ವಾಸವಿದೆ. ಭಾವನಾಗೆ ಪ್ರಶಸ್ತಿ ಗ್ಯಾರಂಟಿ ಎಂದು ಗಾಂಧಿನಗರ ಮಾತಾಡಿಕೊಳ್ಳುತ್ತಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada